ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಈ ಆತ್ಮಹತ್ಯೆಗಳಿಗೆ ಕಾರಣವೇನು?

ಶಾಲಾ ಹಂತದ ಶಿಕ್ಷಣವನ್ನು ಮುಗಿಸಿ ಆಗಷ್ಟೇ ವಿಭಿನ್ನ ಪ್ರಪಂಚಕ್ಕೆ ತೆರೆದುಕೊಳ್ಳುತ್ತಿರುವ ಯುವ ಹೃದಯಗಳು, ಯಾರೋ ಕುಹಕಿಗಳು/ಕಿಡಿಗೇಡಿಗಳಿಂದ ಒದಗುವ ಇಂಥ ಕಿರಿಕಿರಿಯನ್ನು ತಡೆದುಕೊಳ್ಳ ಲಾಗದಷ್ಟು ಸೂಕ್ಷ್ಮ ಮನಸ್ಥಿತಿಯವರಾಗಿರುತ್ತಾರೆ. ರ‍್ಯಾಗಿಂಗ್‌ನಿಂದಾಗಿ ತಮಗಾಗುತ್ತಿರುವ ತೊಂದರೆ ಯನ್ನು ಮತ್ತೊಬ್ಬರಲ್ಲಿ ಹೇಳಿಕೊಳ್ಳಲಾಗದ ಅಸಹಾಯಕತೆಯೂ ಅವರನ್ನು ಕಾಡುತ್ತಿರುತ್ತದೆ ಎಂಬುದನ್ನು ಮನಗಂಡು ಇಂಥ ಯುವ ಪ್ರತಿಭೆಗಳನ್ನು ಸಂರಕ್ಷಿಸಬೇಕಾದ ಹಾಗೂ ತಪ್ಪಿತಸ್ಥರ ಹೆಡೆಮುರಿ ಕಟ್ಟಬೇಕಾದ ಅನಿವಾರ್ಯತೆ ಹಿಂದೆಂದಿಗಿಂತ ಈಗ ಹೆಚ್ಚಾಗಿದೆ.

ಇದು ನಿಜಕ್ಕೂ ಆಘಾತಕಾರಿ ಬೆಳವಣಿಗೆಯೇ ಸರಿ. ಪಶ್ಚಿಮ ಬಂಗಾಳದ ಐಐಟಿ ಖರಗ್‌ಪುರ ವಿದ್ಯಾರ್ಥಿ ನಿಲಯದ ಕೊಠಡಿಯೊಂದರಲ್ಲಿ 21ರ ಹರೆಯದ ವಿದ್ಯಾರ್ಥಿಯೊಬ್ಬ ರ‍್ಯಾಗಿಂಗ್ ಕಿರಿಕಿರಿಗೆ ಭಯಪಟ್ಟು ಆತ್ಮಹತ್ಯೆ ಮಾಡಿಕೊಂಡ ಸುದ್ದಿಯನ್ನು ಇತ್ತೀಚೆಗಷ್ಟೇ ಓದಿದ್ದೆವು. ಅದಿನ್ನೂ ಮನದಂಗಳದಲ್ಲಿ ಹಸಿಹಸಿಯಾಗಿ ಇರುವಾಗಲೇ ಕರ್ನಾಟಕದ ಎರಡು ಕಡೆ ವಿದ್ಯಾರ್ಥಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ವರದಿ ಬಂದಿದೆ.

ಕಾಲೇಜಿನಲ್ಲಿ ತನಗಾಗುತ್ತಿದ್ದ ರ‍್ಯಾಗಿಂಗ್‌ನಿಂದ ರೋಸಿಹೋದ 22ರ ಹರೆಯದ ಆರ್ಕಿಟೆಕ್ಚರ್ ವಿದ್ಯಾರ್ಥಿಯೊಬ್ಬ ನೆಲಮಂಗಲದ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾನೆ. ಇನ್ನು ಓದಿನ ಬಗ್ಗೆ ಆಸಕ್ತಿ ಕಳೆದುಕೊಂಡಿದ್ದ ವೈದ್ಯಕೀಯ ವಿದ್ಯಾರ್ಥಿಯೊಬ್ಬ ತನ್ನ ಹಾಸ್ಟೆಲ್ ಕೊಠಡಿಯಲ್ಲಿ ನೇಣಿಗೆ ಶರಣಾಗಿರುವ ಮತ್ತೊಂದು ಘಟನೆ ಮಂಡ್ಯ ಜಿಲ್ಲೆಯಿಂದ ವರದಿಯಾಗಿದೆ.

ಇದನ್ನೂ ಓದಿ:Vishwavani Editorial: ರ‍್ಯಾಗಿಂಗ್ ಎಂಬ ಪೆಡಂಭೂತ

ಈತನಿಗೆ ತಾನು ಆಯ್ದುಕೊಂಡಿದ್ದ ಶಿಕ್ಷಣ ಕ್ರಮ ಅಪಥ್ಯವಾಗಿದ್ದೇಕೆ? ಇದರ ಹಿಂದೆ ಬೇರೇನಾದರೂ ಕಾರಣಗಳಿವೆಯೇ? ಎಂಬೆಲ್ಲಾ ಸಂಗತಿಗಳನ್ನು ಕೂಲಂಕಷ ತನಿಖೆ ಮಾತ್ರವೇ ಹೊರಗೆಡಹಬಲ್ಲದು. ರ‍್ಯಾಗಿಂಗ್ ಕಾರಣಕ್ಕೆ ಯುವಹೃದಯವೊಂದು ಆತ್ಮಹತ್ಯೆ ಮಾಡಿಕೊಂಡಿತು ಎಂದರೆ, ರ‍್ಯಾಗಿಂಗ್ ಎಂಬುದು ಅದೆಂಥಾ ಹೇಯಕೃತ್ಯ ಎಂಬುದನ್ನು ಜನರಕ್ಷಕರು, ಆಳುಗರು, ಶಾಲಾ-ಕಾಲೇಜುಗಳ ಆಡಳಿತ ಮಂಡಳಿಯವರು ಇನ್ನಾದರೂ ಅರ್ಥಮಾಡಿಕೊಳ್ಳಬೇಕು ಮತ್ತು ಅದನ್ನು ದಮನಿಸಲು ಶತಾಯಗತಾಯ ಕಟಿಬದ್ಧರಾಗಬೇಕು.

ಇಲ್ಲವಾದಲ್ಲಿ ಇಂಥ ಮತ್ತಷ್ಟು ಸಾವಿನ ಸುದ್ದಿಗಳನ್ನು ಕೇಳಬೇಕಾಗಿ ಬಂದೀತು. ಶಾಲಾ ಹಂತದ ಶಿಕ್ಷಣವನ್ನು ಮುಗಿಸಿ ಆಗಷ್ಟೇ ವಿಭಿನ್ನ ಪ್ರಪಂಚಕ್ಕೆ ತೆರೆದುಕೊಳ್ಳುತ್ತಿರುವ ಯುವಹೃದಯಗಳು, ಯಾರೋ ಕುಹಕಿಗಳು/ಕಿಡಿಗೇಡಿಗಳಿಂದ ಒದಗುವ ಇಂಥ ಕಿರಿಕಿರಿಯನ್ನು ತಡೆದುಕೊಳ್ಳಲಾಗದಷ್ಟು ಸೂಕ್ಷ್ಮ ಮನಸ್ಥಿತಿಯವರಾಗಿರುತ್ತಾರೆ. ರ‍್ಯಾಗಿಂಗ್‌ನಿಂದಾಗಿ ತಮಗಾಗುತ್ತಿರುವ ತೊಂದರೆಯನ್ನು ಮತ್ತೊಬ್ಬರಲ್ಲಿ ಹೇಳಿಕೊಳ್ಳಲಾಗದ ಅಸಹಾಯಕತೆಯೂ ಅವರನ್ನು ಕಾಡುತ್ತಿರುತ್ತದೆ ಎಂಬುದನ್ನು ಮನಗಂಡು ಇಂಥ ಯುವ ಪ್ರತಿಭೆಗಳನ್ನು ಸಂರಕ್ಷಿಸಬೇಕಾದ ಹಾಗೂ ತಪ್ಪಿತಸ್ಥರ ಹೆಡೆಮುರಿ ಕಟ್ಟಬೇಕಾದ ಅನಿವಾರ್ಯತೆ ಹಿಂದೆಂದಿಗಿಂತ ಈಗ ಹೆಚ್ಚಾಗಿದೆ.