ನವದೆಹಲಿ: ಬಾಲಿವುಡ್ ಚಲನಚಿತ್ರಗಳಲ್ಲಿ ಬಾಲ ಕಲಾವಿದರಾಗಿ ಗುರುತಿಸಿಕೊಂಡಿದ್ದ ನಟ ಜಿಬ್ರಾನ್ ಖಾನ್ (Jibran Khan) ಅವರಿಗೆ ಅವರದೇ ಕೆಫೆಯ ಮ್ಯಾನೇಜರ್ ಹಣದ ವಂಚನೆ ಮಾಡಿರುವ ಘಟನೆ ನಡೆದಿದೆ. ಸಿನಿಮಾ ಅಲ್ಲದೆ ಇತರ ಉದ್ಯಮದಲ್ಲಿ ತೊಡಗಿಕೊಂಡಿರುವ ಜಿಬ್ರಾನ್ ಖಾನ್ ಇತ್ತೀಚೆಗೆ 'ಗ್ರೌಂಡೆಡ್ ಕೆಫೆ' ಎಂಬ ಉದ್ಯಮ ಆರಂಭಿಸಿದ್ದರು. ಬಾಂದ್ರಾದಲ್ಲಿರುವ ಈ ಕೆಫೆಯ ಹಣಕಾಸು ವ್ಯವಹಾರ ನೋಡಿಕೊಳ್ಳಲು ಜಿಬ್ರಾನ್ ಅವರು ಅಜಯ್ ಸಿಂಗ್ ರಾವತ್ ಎಂಬುವವರನ್ನು ಮ್ಯಾನೇಜರ್ ಆಗಿ ನೇಮಿಸಿದ್ದರು. ಆದರೆ ನಂಬಿಕೆ ಇಟ್ಟು ಹಣ ವ್ಯವಹಾರ ನಡೆಸಲು ಜವಾಬ್ದಾರಿ ಕೊಟ್ಟ ಮ್ಯಾನೇಜರೆ ವಂಚನೆ ಮಾಡಿರುವ ಆರೋಪ ಇದೀಗ ಕೇಳಿ ಬಂದಿದೆ.
ಬಾಲಿವುಡ್ ನಟ ಜಿಬ್ರಾನ್ ಖಾನ್ ಸಿನಿಮಾ ಕೆಲಸ ಕಾರ್ಯದಲ್ಲಿ ಬ್ಯುಸಿ ಇರುವ ಕಾರಣ ಕೆಫೆ ನಡೆಸಲು ಅಜಯ್ ಸಿಂಗ್ ರಾವತ್ ಎಂಬವರನ್ನು ಮ್ಯಾನೇಜರ್ ಆಗಿ ಆಯ್ಕೆ ಮಾಡಿದ್ದರು. ಆದರೆ ಅವರಿಗೆ ಅವರದೇ ಕೆಫೆಯ ಮ್ಯಾನೇಜರ್ 34.99 ಲಕ್ಷ ರೂ. ವಂಚನೆ ಮಾಡಿರುವ ಘಟನೆ ನಡೆದಿದೆ. ಕೆಫೆಯ ಪ್ರತಿದಿನದ ಹಣದ ಲೆಕ್ಕವನ್ನು ಬ್ಯಾಂಕ್‌ನಲ್ಲಿ ಠೇವಣಿ ಮಾಡುವ ಜವಾಬ್ದಾರಿ ಮ್ಯಾನೇಜರ್ ರಾವತ್ ಅವರದ್ದಾಗಿತ್ತು. ಆದರೆ ದೂರಿನ ಪ್ರಕಾರ, ರಾವತ್ ಈ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದೆ, ಸುಮಾರು 34.99 ಲಕ್ಷ ರೂ. ಬ್ಯಾಂಕಿಗೆ ಜಮಾ ಮಾಡದೇ ವಂಚಿಸಿದ್ದಾರೆ ಎಂದು ನಟ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
ಇದನ್ನು ಓದಿ:Neha Shetty: ಪವನ್ ಕಲ್ಯಾಣ್ ನಟನೆ ಒಜಿ ಸಿನಿಮಾ ತಂಡದಿಂದ ಕನ್ನಡದ ನಟಿಗೆ ಅವಮಾನ! ಆಗಿದ್ದಾದರೂ ಏನು?
ಸದ್ಯ ಈ ವಿಚಾರ ತಿಳಿಯುತ್ತಿದ್ದಂತೆ ನಟ ಜಿಬ್ರಾನ್ ಖಾನ್ ಹತ್ತಿರದ ಪೊಲೀಸರನ್ನು ಸಂಪರ್ಕಿಸಿ ಮ್ಯಾನೇಜರ್ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಪೊಲೀಸರು ಮ್ಯಾನೇಜರ್ ಅಜಯ್ ಸಿಂಗ್ ರಾವತ್ ವಿರುದ್ಧ ಎಫ್‌ಐಆರ್ (FIR) ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು ಆರೋಪಿಯನ್ನು ಪತ್ತೆಹಚ್ಚಲು ಹುಡುಕಾಟ ಆರಂಭಿಸಿದ್ದಾರೆ.
'ಕಭಿ ಖುಷಿ ಕಭಿ ಗಮ್' ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ಕಾಜೋಲ್ ಅವರ ಮಗನ ಪಾತ್ರದಲ್ಲಿ ನಟಿಸಿ ಜನಪ್ರಿಯರಾಗಿದ್ದ ಜಿಬ್ರಾನ್ ಹಲವು ಸಿನಿಮಾದಲ್ಲಿ ನಟಿಸಿದ್ದಾರೆ. 2024ರಲ್ಲಿ ಬಿಡುಗಡೆಯಾದ ʼಇಷ್ಕ್ ವಿಷ್ಕ್ ರಿಬೌಂಡ್ʼ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ಕೂಡ ನಟಿಸಿದ್ದರು.