ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Mohanlal: ಆನೆ ದಂತ ಮಾಲೀಕತ್ವ; ಖ್ಯಾತ ನಟ ಮೋಹನ್‌ ಲಾಲ್‌ಗೆ ಭಾರೀ ಹಿನ್ನಡೆ

Ivory items: ದಂತ ವಸ್ತುಗಳಿಗೆ ಸಂಬಂಧಿಸಿ ಅರಣ್ಯ ಇಲಾಖೆಯ ಮಾಲೀಕತ್ವ ಪ್ರಮಾಣ ಪತ್ರಕ್ಕೆ ಸಂಬಂಧಿಸಿ ನಟ ಮೋಹನ್ ಲಾಲ್ ಅವರ ಅರ್ಜಿ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ಇದನ್ನು ಕಾನೂನು ಬದ್ಧವಾಗಿ ಜಾರಿಗೊಳಿಸಲಾಗುವುದಿಲ್ಲ ಎಂದು ಹೇಳಿದೆ. ಇದರಿಂದ ನಟನಿಗೆ ಭಾರಿ ಹಿನ್ನಡೆಯಾಗಿದೆ.

ತಿರುವನಂತಪುರಂ: ದಂತ ವಸ್ತುಗಳಿಗೆ (Ivory items) ಸಂಬಂಧಿಸಿ ಅರಣ್ಯ ಇಲಾಖೆಯ ( Forest Department) ಮಾಲೀಕತ್ವ ಪ್ರಮಾಣಪತ್ರಗಳನ್ನು (Ownership Certificates) ಅನೂರ್ಜಿತಗೊಳಿಸಿರುವ ಕೇರಳ ಹೈಕೋರ್ಟ್ (Kerala High Court ) ಇದನ್ನು ಕಾನೂನುಬದ್ಧವಾಗಿ ಜಾರಿಗೊಳಿಸಲಾಗುವುದಿಲ್ಲ ಎಂದು ಹೇಳಿದೆ. ಇದರಿಂದ ನಟ ಮೋಹನ್ ಲಾಲ್ (Actor Mohanlal) ಅವರಿಗೆ ಭಾರಿ ಹಿನ್ನಡೆಯಾಗಿದೆ. ನ್ಯಾಯಮೂರ್ತಿಗಳಾದ ಎ.ಕೆ. ಜಯಶಂಕರನ್ ನಂಬಿಯಾರ್ ಮತ್ತು ಜೋಬಿನ್ ಸೆಬಾಸ್ಟಿಯನ್ ಅವರ ವಿಭಾಗೀಯ ಪೀಠವು ದಂತ ವಸ್ತುಗಳನ್ನು ಉಳಿಸಿಕೊಳ್ಳಲು ನಟನಿಗೆ ಅವಕಾಶ ನೀಡಬೇಕಾದರೆ ರಾಜ್ಯ ಸರ್ಕಾರವು ವನ್ಯಜೀವಿ (ರಕ್ಷಣೆ) ಕಾಯ್ದೆ 1972 ರ ಸೆಕ್ಷನ್ 40(4) ರ ಅಡಿಯಲ್ಲಿ ಹೊಸ ಅಧಿಸೂಚನೆಯನ್ನು ಹೊರಡಿಸಬಹುದು ಎಂದು ತಿಳಿಸಿದೆ.

ಕೊಚ್ಚಿಯ ಎಲೂರಿನ ಪೌಲೋಸ್ ಕೆಎ ಅವರು ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಶುಕ್ರವಾರ ನ್ಯಾಯಪೀಠ ವಿಚಾರಣೆ ನಡೆಸಿದೆ. ಸೆಕ್ಷನ್ 40(4) ರ ಅಡಿಯಲ್ಲಿ ರಾಜ್ಯ ಸರ್ಕಾರ ಹೊರಡಿಸಿದ ಅಧಿಸೂಚನೆಗಳು ಮೋಹನ್ ಲಾಲ್ ಅವರಿಗೆ ಎರಡು ಜೋಡಿ ದಂತಗಳು ಮತ್ತು 13 ದಂತ ಕಲಾಕೃತಿಗಳನ್ನು ಮುಖ್ಯ ವನ್ಯಜೀವಿ ವಾರ್ಡನ್ ಮುಂದೆ ಘೋಷಿಸಲು ಮತ್ತು ಅನಂತರ ಸೆಕ್ಷನ್ 42 ರ ಅಡಿಯಲ್ಲಿ ಮಾಲೀಕತ್ವ ಪ್ರಮಾಣಪತ್ರಗಳನ್ನು ಪಡೆಯಲು ಅನುಮತಿ ನೀಡಿತ್ತು. ಆದರೆ ದಂತ ವಸ್ತುಗಳ ಕುರಿತಾದ ಕ್ರಿಮಿನಲ್ ಮೊಕದ್ದಮೆಗಳು ಈಗಾಗಲೇ ಪೆರುಂಬವೂರ್‌ನ ನ್ಯಾಯಾಂಗ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಬಾಕಿ ಇದೆ. ಆದರೂ ಅರಣ್ಯ ಇಲಾಖೆ ಪ್ರಮಾಣಪತ್ರಗಳನ್ನು ನೀಡಿದೆ ಎಂದು ಅರ್ಜಿದಾರರು ದೂರಿನಲ್ಲಿ ತಿಳಿಸಿದ್ದಾರೆ.

ಎರಡೂ ಕಡೆಯ ವಾದಗಳನ್ನು ಪರಿಗಣಿಸಿದ ನ್ಯಾಯಪೀಠ ಮೋಹನ್ ಲಾಲ್ ಅವರ ದಂತ ಆಸ್ತಿಯನ್ನು ಘೋಷಿಸಲು ಸರ್ಕಾರ ಅಧಿಸೂಚನೆಗಳನ್ನು ಹೊರಡಿಸಿದೆ. ಆದರೆ ನಟ ಅದನ್ನು ಪಾಲಿಸಿದ್ದಾರೆಯೇ ಎಂದು ಪ್ರಶ್ನಿಸಿದೆ. ರಾಜ್ಯ ಸರ್ಕಾರವು ಅಧಿಕೃತ ಗೆಜೆಟ್‌ನಲ್ಲಿ ಅಧಿಸೂಚನೆ ಪ್ರಕಟಿಸಿಲ್ಲ. ಆದರೆ ಇದು ಕಾಯ್ದೆಯಡಿ ಕಡ್ಡಾಯವಾಗಿದೆ ಎಂದು ಹೇಳಿದೆ.

ಸೆಕ್ಷನ್ 40(4) ರ ನಿಬಂಧನೆಗಳು ರಾಜ್ಯ ಸರ್ಕಾರವು ಪ್ರಾಣಿ ವಸ್ತುಗಳನ್ನು ಕಾನೂನುಬಾಹಿರವಾಗಿ ಹೊಂದಿರುವ ವ್ಯಕ್ತಿಗಳಿಗೆ ವಿನಾಯಿತಿ ನೀಡಲು ಅಧಿಕಾರ ನೀಡುವ ವಿಶೇಷ ನಿಬಂಧನೆಗಳಾಗಿವೆ. ಅಂತಹ ಅಧಿಕಾರವನ್ನು ಕಾಯಿದೆಯಡಿಯಲ್ಲಿ ಸೂಚಿಸಲಾದ ರೀತಿಯಲ್ಲೇ ನಿರ್ವಹಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.

ಅಧಿಸೂಚನೆ ಹೊರಡಿಸುವಲ್ಲಿ ಆಗುವ ಲೋಪಗಳು ಆದೇಶಗಳನ್ನು ಅಮಾನ್ಯಗೊಳಿಸುತ್ತದೆ ಎಂದಿರುವ ನ್ಯಾಯಾಲಯ, ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ನೀಡುವ ಪ್ರಕಟಣೆಯು ಗೆಜೆಟ್ ಪ್ರಕಟಣೆಯ ಶಾಸನಬದ್ಧ ಅವಶ್ಯಕತೆಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

2015ರ ಡಿಸೆಂಬರ್ 16 ಮತ್ತು 2016ರ ಫೆಬ್ರವರಿ 17ರಂದು ನೀಡಿರುವ ಸರ್ಕಾರಿ ಆದೇಶಗಳು ಆರಂಭದಲ್ಲಿಯೇ ಅಮಾನ್ಯವಾಗಿವೆ. ಇದನ್ನು ಕಾನೂನುಬದ್ಧಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ವನ್ಯಜೀವಿ (ರಕ್ಷಣೆ) ಕಾಯ್ದೆ, 1972 ರ ಸೆಕ್ಷನ್ 40(4) ರ ಅಡಿಯಲ್ಲಿ ನಿಗದಿತ ಕಾನೂನು ಕಾರ್ಯವಿಧಾನಗಳಿಗೆ ಅನುಸಾರವಾಗಿ ರಾಜ್ಯ ಸರ್ಕಾರವು ಹೊಸ ಅಧಿಸೂಚನೆಯನ್ನು ಇನ್ನು ಕೂಡ ಹೊರಡಿಸಬಹುದಾಗಿದೆ ಎಂದು ನ್ಯಾಯಪೀಠ ಹೇಳಿದೆ.

ಈ ಹಿಂದೆ ಏನಾಗಿತ್ತು?

2012ರಲ್ಲಿ ಐಟಿ ಇಲಾಖೆಯು ಮೋಹನ್ ಲಾಲ್ ಅವರ ಕೊಚ್ಚಿಯ ತೇವಾರ ಪ್ರದೇಶದಲ್ಲಿರುವ ಮನೆಯ ಮೇಲೆ ದಾಳಿ ನಡೆಸಿದ್ದು, 4 ಆನೆ ದಂತಗಳನ್ನು ವಶಕ್ಕೆ ಪಡೆದುಕೊಂಡಿತ್ತು. ಬಳಿಕ ಇದನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿತ್ತು. ಆನೆ ದಂತಗಳನ್ನು ಇಟ್ಟುಕೊಳ್ಳಲು ಮೋಹನ್ ಲಾಲ್ ಅವರಿಗೆ ಅನುಮತಿ ಇಲ್ಲದಿದ್ದರೂ ಅವರು ಬೇರೆ ಇಬ್ಬರ ಹೆಸರಿನಲ್ಲಿ ಇಟ್ಟುಕೊಂಡಿರುವುದು ತನಿಖೆ ವೇಳೆ ಬಹಿರಂಗವಾಗಿದೆ. ಇದರಿಂದ ಕೊಡನಾಡ್ ರೇಂಜ್ ಫಾರೆಸ್ಟ್ ಈ ಕುರಿತು ಪ್ರಕರಣ ದಾಖಲಿಸಿಕೊಂಡಿತ್ತು.

ಇದನ್ನೂ ಓದಿ: Buying Gold In Dubai: ದುಬೈನಿಂದ ಚಿನ್ನ ಖರೀದಿಸೋ ಪ್ಲ್ಯಾನ್‌ ಇದ್ಯಾ? ಈ ವಿಷಯ ನಿಮಗೆ ಗೊತ್ತೇ?

ಇದಾದ ಬಳಿಕ ಕಾನೂನನ್ನು ತಿದ್ದುಪಡಿ ಮಾಡಿದ ಅರಣ್ಯ ಇಲಾಖೆಯು ನಟನಿಗೆ ದಂತಗಳನ್ನು ಇಟ್ಟುಕೊಳ್ಳಲು ಅವಕಾಶ ನೀಡಿತು. ಇದಾದ ಮೇಲೂ ಮೋಹನ್ ಲಾಲ್ ವಿರುದ್ಧದ ಪ್ರಕರಣವನ್ನು ಹಿಂತೆಗೆದುಕೊಳ್ಳುವ ಸರ್ಕಾರದ ನಿರ್ಧಾರವನ್ನು ಪೆರುಂಬವೂರ್ ನ್ಯಾಯಾಲಯ ತಿರಸ್ಕರಿಸಿತ್ತು.

ವಿದ್ಯಾ ಇರ್ವತ್ತೂರು

View all posts by this author