ಬೆಂಗಳೂರು: ಸ್ಯಾಂಡಲ್‌ವುಡ್ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಮತ್ತೆ ಜೈಲಿಗೆ ಸೇರಿದ್ದು ಅಭಿಮಾನಿಗಳಿಗೆ ಆಘಾತ ನೀಡಿದೆ. ಅದರ ಬೆನ್ನಲ್ಲೆ ಅವರು ನಟಿಸಿದ ʼಡೆವಿಲ್ʼ ಸಿನಿಮಾ (The Devil Movie) ಬಹುದೊಡ್ಡ ಮಟ್ಟಿಗೆ ನಿರೀಕ್ಷೆ ಹುಟ್ಟು ಹಾಕಿದೆ. ಸಿನಿಮಾದ ʼಇದ್ರೆ ನೆಮ್ದಿಯಾಗ್ ಇರ್ಬೇಕ್ʼ ಎನ್ನುವ ಹಾಡು ಆಗಸ್ಟ್ 24ರಂದು ರಿಲೀಸ್ ಆಗಿದ್ದು, ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಹಾಡಿನ ದೃಶ್ಯದಲ್ಲಿ ನಟ ದರ್ಶನ್ ಸಖತ್ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಇದೀಗ ಇದೇ ಹಾಡು ಕನ್ನಡದ ಜನಪ್ರಿಯ ಸಿನಿಮಾ ಒಂದರ ಕಾಪಿ ಎಂಬ ವದಂತಿ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ. ʼಡೆವಿಲ್ʼ ಸಿನಿಮಾದ ಈ ಹಾಡಿಗೆ ಸದ್ಯ ಕಾಪಿ ರೈಟ್ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಹಿಂದೆಲ್ಲ ಸಿನಿಮಾ ಹಾಡನ್ನು ಕಾಪಿ ಮಾಡಿದರೆ ಅದು ಅಷ್ಟೆಲ್ಲ ತಿಳಿದುಬರುತ್ತಿರಲಿಲ್ಲ. ಆದರೆ ಈಗ ಯಾವ ಹಾಡಿನ ಸ್ವಲ್ಪ ಅಂಶ ಕಾಪಿ ಮಾಡಿದರೂ ಕಾಪಿ ರೈಟ್ ಆ್ಯಕ್ಟ್ ಪ್ರಕಾರ ಕ್ರಮ ಕೈಗೊಳ್ಳ ಲಾಗುತ್ತದೆ. ʼಡೆವಿಲ್ʼ ಸಿನಿಮಾದ ʼಇದ್ರೆ ನೆಮ್ದಿಯಾಗಿ ಇರ್ಬೇಕ್ʼ ಹಾಡು ಕೂಡ ಇದೀಗ ಕೃತಿ ಚೌರ್ಯದ ಆರೋಪಕ್ಕೆ ಗುರಿಯಾಗಿದೆ. ನಟ ಸಂಚಾರಿ ವಿಜಯ್ ಅಭಿನಯದ ʼನಾನು ಅವನಲ್ಲ ಅವಳುʼ ಸಿನಿಮಾದ ಹಾಡನ್ನು ʼಡೆವಿಲ್ʼ ಚಿತ್ರತಂಡ ಕಾಪಿ ಮಾಡಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಆದರೆ ಡೆವಿಲ್ ಚಿತ್ರತಂಡ ಈ ಆರೋಪವನ್ನು ತಳ್ಳಿಹಾಕಿದೆ.
ಬಿ.ಎಸ್.ಲಿಂಗದೇವರು ನಿರ್ದೇಶನದ 'ನಾನು ಅವನಲ್ಲ ಅವಳುʼ ಸಿನಿಮಾವು 2015ತೆರೆಕಂಡು ವಿಮರ್ಶಕರ ಮನ ಗೆದ್ದಿತ್ತು. ಈ ಸಿನಿಮಾದಲ್ಲಿ ನಟ ಸಂಚಾರಿ ವಿಜಯ್ ತೃತೀಯ ಲಿಂಗಿಯ ಪಾತ್ರದಲ್ಲಿ ಅದ್ಭುತವಾಗಿ ಅಭಿನಯಿಸಿ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಕೂಡ ಪಡೆದಿದ್ದರು. ಅನೂಪ್ ಸೀಳಿನ್ ಸಂಗೀತ ನಿರ್ದೇಶನದಲ್ಲಿ ಚಿತ್ರದ ಮೂರು ಹಾಡುಗಳು ಬಹಳ ಅರ್ಥಗರ್ಭಿತವಾಗಿ ಮೂಡಿ ಬಂದಿದ್ದವು. ಇದೀಗ ಈ ಸಿನಿಮಾದ ʼವಾರೆ ವಾರೆʼ ಹಾಡಿನ ಮ್ಯೂಸಿಕ್ ಅನ್ನು ʼಡೆವಿಲ್ʼ ಸಿನಿಮಾದ ʼಇದ್ರೆ ನೆಮ್ದಿಯಾಗಿ ಇರ್ಬೇಕ್ʼ ಹಾಡಿನಲ್ಲೂ ಬಳಸಲಿಕೊಳ್ಳಲಾಗಿದೆ ಎನ್ನಲಾಗುತ್ತಿದೆ.
ಇದನ್ನು ಓದಿ:Ghaati movie: ಅನುಷ್ಕಾ ಶೆಟ್ಟಿ ʼಘಾಟಿʼ ಫಿಲಂ ಮೂಲಕ ಚಿತ್ರ ವಿತರಕಿಯಾದ ಯಶ್ ತಾಯಿ ಪುಷ್ಪಾ
ʼಡೆವಿಲ್ʼ ಸಿನಿಮಾದ ಹಾಡನ್ನು ಕಾಪಿ ಮಾಡಲಾಗಿದೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ. ಈ ಎರಡು ಹಾಡನ್ನು ಹೋಲಿಕೆ ಮಾಡಿ ಅದರ ಟ್ಯೂನ್ ಕೇಳಿ ಒಂದೆ ತರ ಇದೆ ಎಂದು ಹಲವರು ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ದರ್ಶನ್ ಫ್ಯಾನ್ಸ್ ಮಾತ್ರ ಈ ಹಾಡು ಅದಲ್ಲ ಅದಕ್ಕೂ ಇದಕ್ಕು ಸಾಕಷ್ಟು ವ್ಯತ್ಯಾಸ ಇದೆ ಎಂದು ಹೇಳಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಬಿ. ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿರುವ ʼಡೆವಿಲ್ʼ ಈ ಸಿನಿಮಾದ ಹಾಡಿಗೆ ದೀಪಕ್ ಬ್ಲೂ ಧ್ವನಿ ನೀಡಿದ್ದಾರೆ. ಈ ಹಾಡು ನಕಲಿ ಮಾಡಲಾಗಿದೆ ಎಂಬುದು ಸೋಶಿಯಲ್ ಮಿಡಿಯಾದಲ್ಲಿ ಮಾತ್ರವೇ ಹೆಚ್ಚು ಪ್ರಚಾರ ಪಡೆಯುತ್ತಿದ್ದು ಇದುವರೆಗೆ ಈ ಸಂಬಂಧಿತ ಯಾವುದೇ ನಿಖರ ಪುರಾವೆ ಹೊರಬಿದ್ದಿಲ್ಲ. ನಟ ದರ್ಶನ್ ಸದ್ಯ ಜೈಲಿನಲ್ಲಿದ್ದರೂ ಡಿ. 12ರಂದು ʼಡೆವಿಲ್ʼ ಸಿನಿಮಾ ರಿಲೀಸ್ ಆಗಲಿದೆ.