ಮುಂಬೈ: ಹಿರಿಯ ನಟ ಗೋವಿಂದ (Govinda) ಬಾಲಿವುಡ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. 80-90ರ ದಶಕದಲ್ಲಿ ತಮ್ಮ ಸಿನಿಮಾ ಜರ್ನಿ ಆರಂಭಿಸಿದ್ದ ಅವರು ಇದುವರೆಗೆ 165ಕ್ಕೂ ಅಧಿಕ ಬಾಲಿವುಡ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಅವರಿಗೆ ಫಿಲ್ಮ್‌ಫೇರ್ ಪ್ರಶಸ್ತಿ ಕೂಡ ಸಿಕ್ಕಿದೆ. ಇದೀಗ ಚಿತ್ರರಂಗದಲ್ಲಿ ಅಷ್ಟಾಗಿ ಸಕ್ರಿಯರಾಗಿಲ್ಲದ ಅವರು ರಾಜಕೀಯ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಸದ್ಯ ಅವರು ಸಿನಿಮಾ ಹೊರತಾಗಿ ವೈಯಕ್ತಿಕ ವಿಚಾರಕ್ಕೆ ಹೆಚ್ಚು ಸುದ್ದಿಯಲ್ಲಿದ್ದಾರೆ. ಪತ್ನಿ ಸುನೀತಾ ಅಹುಜಾ ಜತೆಗಿನ ಸುದೀರ್ಘ ದಾಂಪತ್ಯ ಜೀವನದಲಲಿ ಬಿರುಕು ಬಿಟ್ಟಿದ್ದು, ವಿಚ್ಛೇದನ ಪಡೆಯುತ್ತಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೆ ದಂಪತಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ
ಗೋವಿಂದ ಮತ್ತು ಸುನೀತಾ ಅಹುಜಾ ನಡುವಿನ ವಿಚ್ಛೇದನದ ವದಂತಿ ಮಧ್ಯೆ ಅವರಿಬ್ಬರು ಗಣೇಶ ಚತುರ್ಥಿಯಂದು ಜತೆಯಾಗಿ ಕಾಣಿಸಿಕೊಂಡಿದ್ದಾರೆ. ಜತೆಯಾಗಿ ಪೂಜೆ ಮಾಡಿದ್ದಾರೆ. ಅವರ ಈ ಕೆಲವು ಫೋಟೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಅವರಿಬ್ಬರು ಒಂದೇ ಬಣ್ಣದ ಡ್ರೆಸ್ ನಲ್ಲಿ ಕಾಣಿಸಿಕೊಂಡು ವದಂತಿಗೆ ಬ್ರೇಕ್ ಹಾಕಲು ಮುಂದಾಗಿದ್ದಾರೆ. ನಟ ಗೋವಿಂದ ಕುರ್ತಾ ಧರಿಸಿದ್ದರೆ, ಸುನೀತಾ ಸೀರೆಯಲ್ಲಿ ಸುಂದರವಾಗಿ ಕಂಡಿದ್ದಾರೆ. ಈ ಮೂಲಕ ವಿಚ್ಛೇದನದ ವದಂತಿ ಬಳಿಕ ಇವರಿಬ್ಬರು ಒಂದಾಗಿದ್ದಾರಾ ಎಂಬ ಗೊಂದಲ ಉಂಟಾಗಿದೆ.
ನಟ ಗೋವಿಂದ ಮತ್ತು ಸುನೀತಾ ಮುಂಬೈಯ ತಮ್ಮ ನಿವಾಸದಲ್ಲಿ ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ. ಬಿಗ್ ಬಾಸ್ 13 ಖ್ಯಾತಿಯ ಪರಾಸ್ ಛಬ್ರಾ ಸೇರಿದಂತೆ ಹಲವು ಸೆಲೆಬ್ರಿಟಿಗಳು ಗಣಪತಿ ದರ್ಶನಕ್ಕಾಗಿ ಗೋವಿಂದ ಮತ್ತು ಸುನೀತಾ ಅವರ ನಿವಾಸಕ್ಕೆ ಆಗಮಿಸುತ್ತಿರುವುದು ಕೂಡ ವೈರಲ್ ವಿಡಿಯೊದಲ್ಲಿ ಕಂಡುಬಂದಿದೆ. ಈ ಮೂಲಕ ಇವರಿಬ್ಬರು ಮತ್ತೆ ಒಂದಾಗಿದ್ದಾರೆ. ಅವರ ಬದುಕಲ್ಲಿ ಉಂಟಾದ ವೈಮನಸ್ಸು ದೂರಾಗಿದೆ ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.
ಸುನೀತಾ ಅಹುಜಾ ಹಾಗೂ ನಟ ಗೋವಿಂದ ಹಿಂದು ವಿವಾಹ ಕಾಯ್ದೆ ಅಡಿಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಈ ಹಿಂದೆ ವೈರಲ್ ಆಗಿತ್ತು. ಮೇ 25ರಂದು ನ್ಯಾಯಾಲಯ ಗೋವಿಂದ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಬಳಿಕ ಇಬ್ಬರೂ ಮಾತುಕತೆಯ ಮೂಲಕ ಸಮಸ್ಯೆ ಸರಿಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಯೂ ಹರಿದಾಡಿತ್ತು. ವಿಚ್ಛೇದನ ವಿಚಾರ ವೈರಲ್ ಬಳಿಕ ಗೋವಿಂದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ. ಜತೆಗೆ ಅವರಾಗಲೀ, ಸುನೀತಾವಾಗಲಿ ವದಂತಿ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. ಇದೀಗ ಸುನೀತಾ ಅವರೊಂದಿಗೆ ಗೋವಿಂದ ಗಣೇಶ ಹಬ್ಬ ಆಚರಿಸಿಕೊಂಡ ಫೋಟೊ ಹಾಗೂ ವಿಡಿಯೊ ವೈರಲ್ ಆಗಿದ್ದು, ಅವರಿಬ್ಬರು ಅನ್ಯೋನ್ಯ ವಾಗಿದ್ದರೆ ಎನ್ನಲಾಗಿದೆ.
ಗೋವಿಂದ-ಸುನೀತಾ ಅಹುಜಾ ಅವರ ವಿವಾಹ 1987ರಲ್ಲಿ ನಡೆದಿತ್ತು. ಈ ದಂಪತಿಗೆ ಟೀನಾ ಮತ್ತು ಯಶವರ್ಧನ ಎಂಬ ಇಬ್ಬರು ಮಕ್ಕಳಿದ್ದಾರೆ. ತಾವು ವಿಚ್ಛೇದನ ಪಡೆಯುತ್ತಿಲ್ಲ, ತಮ್ಮ ನಡುವಿನ ವೈಮನಸ್ಸು ದೂರವಾಗಿದೆ ಎನ್ನುವ ಬಗ್ಗೆ ಗೋವಿಂದ ಇದುವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.