ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಫ್ಯಾನ್ಸ್‌ಗೆ ಇದೀಗ ಸಿಹಿ ಸುದ್ದಿಯೊಂದು ಹೊರ ಬಿದ್ದಿದೆ. 2023ರಲ್ಲಿ ರಿಲೀಸ್ ಆಗಿ ಹಿಟ್ ಆಗಿದ್ದ ʼಜೈಲರ್ʼ ಚಿತ್ರದ ಸೀಕ್ವೆಲ್ ಇದೀಗ ಬಿಡುಗಡೆಗೆ ಸಿದ್ಧವಾಗಿದೆ. 'ಜೈಲರ್’ ಸಿನಿಮಾದಲ್ಲಿ ರಜನಿಕಾಂತ್ ಜತೆಗೆ ಶಿವರಾಜ್ ಕುಮಾರ್, ಮೋಹನ್ಲಾಲ್, ಜಾಕಿಶ್ರಾಫ್ ಅತಿಥಿ ಪಾತ್ರಗಳಲ್ಲಿ ನಟಿಸಿದ್ದು ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಸತತ ಸೋಲು ಕಂಡಿದ್ದ ರಜನೀಕಾಂತ್ ಅವರಿಗೆ ಭಾರಿ ದೊಡ್ಡ ಯಶಸ್ಸನ್ನು ತಂದು ಕೊಟ್ಟ ಸಿನಿಮಾ ಇದಾಗಿತ್ತು. ಇದೀಗ ರಜನಿಕಾಂತ್ ಅವರ 'ಜೈಲರ್' ಮುಂದುವರಿದ ಭಾಗ 'ಜೈಲರ್ 2' ಸಿನಿಮಾದ ಬಿಡುಗಡೆ ದಿನಾಂಕ ಕೊನೆಗೂ ಹೊರಬಿದ್ದಿದೆ. ಸ್ವತಃ ರಜನಿಕಾಂತ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಕೇರಳದಲ್ಲಿ ಚಿತ್ರದ ಶೂಟಿಂಗ್ ಮುಗಿಸಿ ಚೆನ್ನೈಗೆ ಹೋಗುತ್ತಿದ್ದ ಸಂದರ್ಭದಲ್ಲಿ ಮಾಧ್ಯಮ ಗಳೊಂದಿಗೆ ಮಾತನಾಡಿದ ತಲೈವಾ, ʼಜೈಲರ್ 2ʼ ಚಿತ್ರದ ಬಿಡುಗಡೆ ದಿನಾಂಕವನ್ನು ಬಹಿರಂಗ ಪಡಿಸಿದ್ದಾರೆ. ಸಿನಿಮಾವು 2026ರ ಜೂನ್ 12ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಘೋಷಿಸಿದ್ದಾರೆ. 'ಜೈಲರ್ 2' ಚಿತ್ರದ ಭರ್ಜರಿ ಕ್ಲೈಮ್ಯಾಕ್ಸ್ ದೃಶ್ಯಗಳನ್ನು ಇತ್ತೀಚೆಗೆ ಕೇರಳದ ಪಾಲಕ್ಕಾಡ್ ಬಳಿ ಚಿತ್ರೀಕರಿಸಲಾಗಿದೆ. ಶೂಟಿಂಗ್ ಸ್ಥಳದಲ್ಲಿ ನಟ ರಜನಿಕಾಂತ್ ಅಭಿಮಾನಿಗಳನ್ನು ಭೇಟಿಯಾದ ವಿಡಿಯೊ ಇತ್ತೀಚೆಗೆ ವೈರಲ್ ಆಗಿತ್ತು. ಇದೀಗ ರಿಲೀಸ್ ಡೇಟ್ ಅನೌನ್ಸ್ ಬೆನ್ನಲ್ಲೇ ಸಿನಿಮಾ ಮೇಲಿನ ನಿರೀಕ್ಷೆಯನ್ನ ಹೆಚ್ಚಾಗಿದೆ.
ʼಜೈಲರ್ʼ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ರಜನಿಕಾಂತ್ ಅವರ ವೃತ್ತಿ ಜೀವನದಲ್ಲಿ 2ನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಇದಾಗಿತ್ತು. ʼಜೈಲರ್ 2' ಚಿತ್ರದಲ್ಲಿ ರಜನಿಕಾಂತ್ ನಾಯಕನಾಗಿ ಮುಂದುವರಿದಿದ್ದಾರೆ. ಅಲ್ಲದೆ ಮೊದಲ ಭಾಗದ ಕಲಾವಿದರಾದ ರಮ್ಯಾ ಕೃಷ್ಣನ್, ಯೋಗಿ ಬಾಬು, ಮಿರ್ನಾ ಮತ್ತು ಶಿವ ರಾಜ್‌ಕುಮಾರ್ ತಮ್ಮ ಪಾತ್ರಗಳಲ್ಲಿ ಮುಂದುವರಿಯಲಿದ್ದಾರೆ. ಇವರ ಜತೆಗೆ ಮೋಹನ್ಲಾಲ್, ಜಾಕಿ ಶ್ರಾಫ್ ಕೂಡ ಅಭಿನಯಿಸಲಿದ್ದಾರೆ.