ಬೆಂಗಳೂರು, ಅಕ್ಟೋಬರ್ 12: ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶಿಸಿರುವ, ಹೊಂಬಾಳೆ ಫಿಲ್ಮ್ಸ್ (Hombale Films) ನಿರ್ಮಾಣದ ʼಕಾಂತಾರ ಚಾಪ್ಟರ್ 1' (Kantara Chapter 1) ಚಿತ್ರ ಸ್ಯಾಂಡಲ್‌ವುಡ್‌ನ ಹಿರಿಮೆಯನ್ನು ಮತ್ತೊಮ್ಮ ಎತ್ತಿ ಹಿಡಿದಿದೆ. ಬಾಕ್ಸ್ ಆಫೀಸ್‌ನಲ್ಲಿ ಸಂಚಲನ ಸೃಷ್ಟಿಸಿರುವ ಇದು ಈಗಾಗಲೇ 500 ಕೋಟಿ ರೂ.ಗಿಂತ ಅಧಿಕ ಗಳಿಸಿ ಮುನ್ನುಗ್ಗುತ್ತಿದೆ. ರಿಲೀಸ್ ಆಗಿ 10 ದಿನ ಆಗಿದ್ದು ಇನ್ನೂ ಕಲೆಕ್ಷನ್ ತಗ್ಗಿಲ್ಲ ಎನ್ನುವುದು ವಿಶೇಷ. ವಾರದ ದಿನಗಳಲ್ಲೂ ಕೋಟಿ ಕೋಟಿ ರೂ. ಕಮಾಯಿ ಮಾಡುತ್ತಿದೆ. ಕನ್ನಡ ಜತೆ ಹಿಂದಿಯಲ್ಲೂ 100 ಕೋಟಿ ರೂ. ಕ್ಲಬ್ ಸೇರಿದ್ದು, ವಿವಿಧ ಭಾಷೆಗಳಲ್ಲೂ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಈಗಾಗಲೇ ಚಿತ್ರದ ʼಬ್ರಹ್ಮಕಲಶʼ ವಿಡಿಯೊ ಸಾಂಗ್ (Brahmakalasha Kannada Video Song) ರಿಲೀಸ್ ಆಗಿದ್ದು, ಲಕ್ಷಗಟ್ಟಲೆ ವೀಕ್ಷಣೆ ಕಂಡಿದೆ. ಈ ಮಧ್ಯೆ ಚಿತ್ರತಂಡ ಮಾಡಿರುವ ಸಣ್ಣದೊಂದು ಎಡವಟ್ಟು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
2022ರಲ್ಲಿ ತೆರೆಕಂಡ ʼಕಾಂತಾರʼ ಚಿತ್ರದ ಪ್ರೀಕ್ವೆಲ್ ಇದಾಗಿದ್ದು, ರಿಷಬ್ ಶೆಟ್ಟಿ 4ನೇ ಶತಮಾನದ ಕಥೆ ಹೇಳಿದ್ದಾರೆ. ಕದಂಬ ರಾಜ ಮನೆತನದ ಕಾಲಘಟ್ಟದಲ್ಲಿ ಕರಾವಳಿಯಲ್ಲಿ ನಡೆಯುವ ಕಾಲ್ಪನಿಕ ಕಥೆಯನ್ನು ತೆರೆಮೇಲೆ ತರಲಾಗಿದೆ. ಬಹುತೇಕರು ಚಿತ್ರದ ಪ್ರತಿ ದೃಶ್ಯ, ಸಿನಿಮಾಟೋಗ್ರಫಿ, ಸಂಗೀತ, ಹಿನ್ನೆಲೆ ಸಂಗೀತ, ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ. ಈ ಮಧ್ಯೆ ʼಬ್ರಹ್ಮಕಲಶʼ ಹಾಡಿನಲ್ಲಿ ಚಿಕ್ಕದೊಂದು ಪ್ರಮಾದ ನಡೆದಿದ್ದು, ಕೆಲವರು ಇದನ್ನೇ ಟ್ರೋಲ್ ಮಾಡುತ್ತಿದ್ದಾರೆ.
ವೈರಲ್ ವಿಡಿಯೊ ಇಲ್ಲಿದೆ:
ಈ ಸುದ್ದಿಯನ್ನೂ ಓದಿ: Kantara: Chapter 1: ಕಾಂತಾರ ಚಾಪ್ಟರ್ 1 ಯಶಸ್ಸಿನ ಬೆನ್ನಲ್ಲೆ ಮುಂಬೈ ಸಿದ್ಧಿ ವಿನಾಯಕ ದೇಗುಲಕ್ಕೆ ಭೇಟಿ ನೀಡಿದ ನಟ ರಿಷಬ್ ಶೆಟ್ಟಿ!
ಈ ಎಡವಟ್ಟು ನಿಮ್ಮ ಗಮನಕ್ಕೂ ಬಂತಾ?
ಮೊದಲೇ ಹೇಳಿದಂತೆ ಚಿತ್ರದ ಕಥೆ 4ನೇ ಶತಮಾನದಲ್ಲಿ ಸಾಗುತ್ತದೆ. ಕಥೆಯಲ್ಲಿ ಬ್ರಹ್ಮಕಲಶ ನಡೆಯುವ ಸನ್ನಿವೇಶ ಇದೆ. ಈ ಸಂದರ್ಭವನ್ನು ʼಬ್ರಹ್ಮಕಲಶʼ ಹಾಡಿನಲ್ಲಿ ತೋರಿಸಲಾಗಿದೆ. ಸಮಾರಂಭಕ್ಕೆ ಆಗಮಿಸಿದವರು ಊಟಕ್ಕೆ ಕೂರುತ್ತಾರೆ. ಹೀಗೆ ಕೂತವರ ಹಿಂಭಾಗದಲ್ಲಿ ಪ್ಲಾಸ್ಟಿಕ್ ಕ್ಯಾನ್ ಕಂಡುಬಂದಿದೆ.
ʼಬ್ರಹ್ಮಕಲಶʼ ಹಾಡಿನ 3:06 ನಿಮಿಷದಲ್ಲಿ ಕ್ಯಾನ್ ಕಾಣಿಸಿಕೊಂಡಿದೆ. ಸದ್ಯ ಈ ವಿಚಾರವನ್ನು ಮುಂದಿಟ್ಟುಕೊಂಡು ಟ್ರೋಲ್ ಮಾಡಲಾಗುತ್ತಿದೆ. ಪ್ಲಾಸ್ಟಿಕ್ ಅನ್ನು 20ನೇ ಶತಮಾನದಲ್ಲಿ ಕಂಡುಹಿಡಿಯಲಾಗಿದೆ. ಆದರೆ ಇಲ್ಲಿ 4ನೇ ಶತಮಾನದಲ್ಲಿಯೂ ಕಂಡುಬಂದಿದೆ ಎಂದು ಹಲವರು ಟೀಕಿಸಿದ್ದಾರೆ. ಜತೆಗೆ ಈ ಪ್ರಮಾದವನ್ನು 2019ರಲ್ಲಿ ಪ್ರಸಾರವಾದ ʼಗೇಮ್ ಆಫ್ ಥ್ರೋನ್ʼ ಇಂಗ್ಲಿಷ್ ಟಿವಿ ಸೀರೀಸ್‌ನ ಎಡವಟ್ಟಿನೊಂದಿಗೆ ಹೋಲಿಸಲಾಗುತ್ತಿದೆ. ʼಗೇಮ್ ಆಫ್ ಥ್ರೋನ್ʼ ಫ್ಯಾಂಟಸಿ ಡ್ರಾಮದ ದೃಶ್ಯದಲ್ಲಿ ಸ್ಟಾರ್‌ಬಕ್ಸ್‌ನ ಕಪ್ ಕಂಡುಬಂದಿತ್ತು.
ʼಬ್ರಹ್ಮಕಲಶʼ ಹಾಡು:
ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ
ಸದ್ಯ ʼಕಾಂತಾರ ಚಾಪ್ಟರ್ 1ʼ ಚಿತ್ರದ ಪ್ರಮಾದ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ರಿಷಬ್ ಶೆಟ್ಟಿ ಚಿತ್ರರಂಗಕ್ಕೆ ಬರುವ ಮುನ್ನ ವಾಟರ್ ಕ್ಯಾನ್ ಉದ್ಯಮ ನಡೆಸುತ್ತಿದ್ದರು. ಇದರ ನೆನಪಿಗಾಗಿ ಹಾಡಿನಲ್ಲಿ ವಾಟರ್ ಕ್ಯಾನ್ ಇಡಲಾಗಿದೆ ಎಂದು ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ʼʼನಿಮ್ಗೆ ಗೊತ್ತಾ? ಕದಂಬರ ಕಾಲದಲ್ಲೇ ಪ್ಲಾಸ್ಟಿಕ್ ಕ್ಯಾನ್ ಬಳಸುತ್ತಿದ್ದರುʼʼ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ. ಇನ್ನು ಕೆಲವರು ಚಿತ್ರತಂಡದ ಬೆಂಬಲಕ್ಕೆ ಧಾವಿಸಿದ್ದು, ಇಂತಹ ಚಿಕ್ಕಪುಟ್ಟ ತಪ್ಪು ಸಾಮಾನ್ಯ. ಅದನ್ನು ದೊಡ್ಡದು ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.