ಬೆಂಗಳೂರು, ಅ. 31: 90 ವರ್ಷಕ್ಕಿಂತ ಹೆಚ್ಚು ಇತಿಹಾಸ ಹೊಂದಿರುವ ಕನ್ನಡ ಚಿತ್ರರಂಗದಲ್ಲಿ ಇದುವರೆಗೆ ಯಾರೂ ಮಾಡಿರದ ಅಪರೂಪದ ಸಾಧನೆಯೊಂದನ್ನು ʼಕಾಂತಾರ ಚಾಪ್ಟರ್ 1' (Kantara Chapter 1) ಸಿನಿಮಾ ತಂಡ ಮಾಡಿದೆ. ಅಕ್ಟೋಬರ್ 2ರಂದು ತೆರೆ ಕಂಡ ಹೊಂಬಾಳೆ ಫಿಲ್ಮ್ಸ್ (Hombale Films)-ರಿಷಬ್ ಶೆಟ್ಟಿ (Rishab Shetty) ಕಾಂಬಿನೇಷನ್‌ನ ಈ ಚಿತ್ರ ಕರ್ನಾಟಕವೊಂದರಲ್ಲೇ 268 ಕೋಟಿ ರೂ. ಗಳಿಸಿದೆ (Kantara Chapter 1 Box Office Collection). ಕರ್ನಾಟಕದಲ್ಲಿ 250 ಕೋಟಿ ರೂ. ಗಡಿ ದಾಟಿದ ಮೊದಲ ಕನ್ನಡ ಚಲನಚಿತ್ರ 'ಕಾಂತಾರ ಚಾಪ್ಟರ್ 1' ಎನ್ನುವುದು ವಿಶೇಷ. ಸದ್ಯ ಈ ವಿಚಾರವನ್ನು ಸ್ವತಃ ಚಿತ್ರತಂಡವೇ ಹೆಮ್ಮೆಯಿಂದ ಹಂಚಿಕೊಂಡಿದೆ.
ʼಕಾಂತಾರ ಚಾಪ್ಟರ್ 1' ತೆರೆಕಂಡು 29 ದಿನ ಕಳೆದಿದ್ದು, ಜಾಗತಿಕವಾಗಿ 867 ಕೋಟಿ ರೂ. ಬಾಚಿಕೊಂಡು ಮುನ್ನಡೆಯುತ್ತಿದೆ. ಆ ಮೂಲಕ 2025ರಲ್ಲಿ ಅತೀ ಹೆಚ್ಚು ಗಳಿಸಿದ ಭಾರತೀಯ ಸಿನಿಮಾ ಎನಿಸಿಕೊಂಡಿದೆ. ಇನ್ನು ಭಾರತದಲ್ಲಿ ಗಳಿಕೆ 600.72 ಕೋಟಿ ರೂ. ದಾಟಿದೆ.
ಈ ಸುದ್ದಿಯನ್ನೂ ಓದಿ: OTT Entry Movie: ಕಾಂತಾರ ಸಿನಿಮಾದ ಜೊತೆಗೆ ಸಾಲು ಸಾಲು ಹಿಟ್ ಸಿನಿಮಾ ಒಟಿಟಿಗೆ ಎಂಟ್ರಿ: ಯಾವುದೆಲ್ಲ ಗೊತ್ತಾ?
ಬಾಲಿವುಡ್ ಅನ್ನೂ ಹಿಂದಿಕ್ಕಿದ ಸ್ಯಾಂಡಲ್‌ವುಡ್
ಈ ವರ್ಷ ಅತೀ ಹೆಚ್ಚು ಗಳಿಸಿದ ಚಿತ್ರ ಎನ್ನುವ ಹೆಗ್ಗಳಿಕೆಗೆ ಇದುವರೆಗೆ ಬಾಲಿವುಡ್‌ನ ʼಛಾವಾʼ ಚಿತ್ರ ಪಾತ್ರವಾಗಿತ್ತು. ಲಕ್ಷ್ಮಣ್ ಉಟೇಕರ್ ನಿರ್ದೇಶನದ, ವಿಕ್ಕಿ ಕೌಶಲ್-ರಶ್ಮಿಕಾ ಮಂದಣ್ಣ ಜೋಡಿಯ ಈ ಐತಿಹಾಸಿಕ ಚಿತ್ರ ಜಾಗತಿಕವಾಗಿ 807 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಇದೀಗ ʼಕಾಂತಾರ ಚಾಪ್ಟರ್ 1' 29 ದಿನದಲ್ಲೇ ಈ ದಾಖಲೆಯನ್ನು ಹಿಂದಿಕ್ಕಿದೆ. ಆ ಮೂಲಕ ಮತ್ತೊಮ್ಮೆ ಸ್ಯಾಂಡಲ್‌ವುಡ್‌ನ ಸಾಮರ್ಥ್ಯವನ್ನು ತೆರೆದಿಟ್ಟಿದೆ.
ಹೊಂಬಾಳೆ ಫಿಲ್ಮ್ಸ್‌ನ ಎಕ್ಸ್ ಪೋಸ್ಟ್:
ಭಾರತೀಯ ಬಾಕ್ಸ್ ಆಫೀಸ್ ಕಲೆಕ್ಷನ್ ದಾಖಲೆಗೂ ಇನ್ನೊಂದೇ ಹೆಜ್ಜೆ ಬಾಕಿ
ಇತ್ತ ಈ ವರ್ಷ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಅತೀ ಹೆಚ್ಚು ಗಳಿಸಿದ ಸಿನಿಮಾ ಎನಿಸಿಕೊಳ್ಳುವ ದಾಖಲೆ ಬರೆಯುವ ಸಾಧ್ಯತೆಯೂ ಇದೆ. ʼಕಾಂತಾರ ಚಾಪ್ಟರ್ 1' ಇದುವರೆಗೆ ಭಾರತದಲ್ಲಿ 601.68 ಕೋಟಿ ರೂ. ಗಳಿಸಿದೆ. ಮೊದಲ ಸ್ಥಾನದಲ್ಲಿರುವ ʼಛಾವಾʼ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಒಟ್ಟು 615.39 ಕೋಟಿ ರೂ. ದೋಚಿಕೊಂಡಿದೆ. ಸದ್ಯ ದಾಖಲೆ ಮುರಿಯಲು ರಿಷಬ್ ಚಿತ್ರಕ್ಕೆ 13.71 ಕೋಟಿ ರೂ. ಹರಿದು ಬಂದರೆ ಸಾಕು. ಈ ಇತಿಹಾಸ ರಚನೆ ಕಷ್ಟವೇನಲ್ಲ ಎನ್ನುವುದು ಸಿನಿಪಂಡಿತರ ಭವಿಷ್ಯ. ಮತ್ತೊಂದು ವಿಶೇಷತೆ ಎಂದರೆ ದೇಶದಲ್ಲಿ ʼಕೆಜಿಎಫ್ ಚಾಪ್ಟರ್ 2ʼ ಬಳಿಕ 600 ಕೋಟಿ ರೂ. ಕಲೆಕ್ಷನ್ ಮಾಡಿದ ಮಾಡಿದ ಕನ್ನಡ ಚಿತ್ರ ʼಕಾಂತಾರ ಚಾಪ್ಟರ್ 1'. ಇನ್ನು ಹಿಂದಿ ಡಬ್ ಕಲೆಕ್ಷನ್ 213 ಕೋಟಿ ರೂ.
1 ಸಾವಿರ ಕೋಟಿ ರೂ. ಗಡಿ ಮುಟ್ಟುತ್ತಾ?
ಸದ್ಯ ಭಾರತೀಯ ಚಿತ್ರರಂಗ ಮಹತ್ವದ ಮೈಲಿಗಲ್ಲು ಎನಿಸಿಕೊಂಡಿರುವ 1 ಸಾವಿರ ಕೋಟಿ ರೂ. ಕ್ಲಬ್‌ಗೆ ಚಿತ್ರ ಎಂಟ್ರಿ ಕೊಡುತ್ತಾ ಎನ್ನುವ ಕುತೂಹಲ ಮನೆ ಮಾಡಿದೆ. ಅಕ್ಟೋಬರ್ 31ರಂದು ಚಿತ್ರ ಒಟಿಟಿಯಲ್ಲಿ ರಿಲೀಸ್ ಆಗಿದೆ. ಅಮೆಜಾನ್ ಪ್ರೈಂನಲ್ಲಿ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಸ್ಟ್ರೀಮಿಂಗ್ ಆಗುತ್ತಿದೆ. ಸದ್ಯ ಹಿಂದಿ ವರ್ಷನ್ ಒಟಿಟಿಗೆ ಬಂದಿಲ್ಲ. ಇನ್ನೂ ಥಿಯೇಟರ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಜತೆಗೆ ಅಕ್ಟೋಬರ್ 31ರಂದು ಇಂಗ್ಲಿಷ್, ಸ್ಪಾನಿಷ್ ವರ್ಷನ್ ರಿಲೀಸ್ ಆಗಿದೆ. ಹೀಗಾಗಿ ಚಿತ್ರ 1 ಸಾವಿರ ಕೋಟಿ ರೂ. ಕ್ಲಬ್ ಸೇರುವ ಸಾಧ್ಯತೆ ಇದೆ.
ಚಿತ್ರದಲ್ಲಿ ನಾಯಕಿಯಾಗಿ ರುಕ್ಮಿಣಿ ವಸಂತ್ ನಟಿಸಿದ್ದು, ಮುಖ್ಯ ಪಾತ್ರಗಳಲ್ಲಿ ಜಯರಾಮ್, ಗುಲ್ಶನ್ ದೇವಯ್ಯ, ರಾಕೇಶ್ ಪೂಜಾರಿ ಮತ್ತಿತರರು ಕಾಣಿಸಿಕೊಂಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ, ಹಿನ್ನೆಲೆ ಸಂಗೀತ ಒದಗಿಸಿದ್ದಾರೆ.