Bhuvan Gowda: ʼಕೆಜಿಎಫ್ʼ ಖ್ಯಾತಿಯ ಛಾಯಾಗ್ರಾಹಕ ಭುವನ್ ಗೌಡ ಈಗ ನಿರ್ಮಾಪಕ
ʼಕೆಜಿಎಫ್ʼ ಸರಣಿ ಚಿತ್ರಗಳ ಮೂಲಕ ದೇಶದ ಗಮನ ಸೆಳೆದ ಛಾಯಾಗ್ರಾಹಕ ಭುವನ್ ಗೌಡ ಸದ್ಯ ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಕನ್ನಡ ಚಿತ್ರ ನಿರ್ಮಿಸಲು ಮುಂದಾಗಿದ್ದು, ನಿರ್ಮಾಪಕರಾಗಿಯೂ ಪರಿಚಿತರಾಗುತ್ತಿದ್ದಾರೆ. ಪ್ರಶಸ್ತಿ ವಿಜೇತ ನಿರ್ದೇಶಕ ಸಾಗರ್ ಪುರಾಣಿಕ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.


ಬೆಂಗಳೂರು: ಸ್ಯಾಂಡಲ್‌ವುಡ್‌ನ ಘಮವನ್ನು ಪ್ರಪಂಚದ ಎಲ್ಲೆಡೆ ಹರಡಿದ ಕೆಜಿಎಫ್ (KGF) ಸರಣಿ ಚಿತ್ರ ಹಲವರ ಬದುಕನ್ನು ಬದಲಾಯಿಸಿದೆ. ನಿರ್ದೇಶಕ ಪ್ರಶಾಂತ್ ನೀಲ್ (Prashanth Neel), ನಾಯಕ ಯಶ್ (Yash), ನಾಯಕಿ ಶ್ರೀನಿಧಿ ಶೆಟ್ಟಿ (Srinidhi Shetty), ಸಂಗೀತ ನಿರ್ದೇಶಕ ರವಿ ಬಸ್ರೂರು (Ravi Basrur), ಛಾಯಾಗ್ರಾಹಕ ಭುವನ್ ಗೌಡ (Bhuvan Gowda) ಆಹೋರಾತ್ರಿ ಸ್ಟಾರ್‌ಗಳಾಗಿ ಬದಲಾಗಿದ್ದಾರೆ. ಇದೀಗ ಭುವನ್ ಗೌಡ ಸ್ಯಾಂಡಲ್‌ವುಡ್ ಚಿತ್ರವೊಂದಕ್ಕೆ ಬಂಡವಾಳ ಹೂಡುವ ಮೂಲಕ ನಿರ್ಮಾಪಕರಾಗಿಯೂ ಪರಿಚಿತರಾಗುತ್ತಿದ್ದಾರೆ. ಆ ಮೂಲಕ ಮತ್ತೊಂದು ಅಧ್ಯಾಯ ಆರಂಭಿಸಲು ಮುಂದಾಗಿದ್ದಾರೆ.
ಪ್ರಶಸ್ತಿ ವಿಜೇತ ನಿರ್ದೇಶಕ ಸಾಗರ್ ಪುರಾಣಿಕ್ ಆ್ಯಕ್ಷನ್ ಕಟ್ ಹೇಳುವ ಚಿತ್ರವನ್ನು ಭುವನ್ ಗೌಡ ನಿರ್ಮಿಸಲಿದ್ದು, ಶೀರ್ಷಿಕೆ ಇನ್ನೂ ಅಂತಿಮವಾಗಿಲ್ಲ. ವಿಭಿನ್ನವಾಗಿ ಇದು ಮೂಡಿ ಬರಲಿದ್ದು, ಪಾತ್ರ ವರ್ಗಗಳ ಆಯ್ಕೆ ಇನ್ನೂ ಅಂತಿಮಗೊಂಡಿಲ್ಲ. ಸದ್ಯ ಈ ಚಿತ್ರ ಆರಂಭಿಕ ಹಂತದಲ್ಲಿದ್ದು, ಸದ್ಯದಲ್ಲೇ ಪ್ರೀ-ಪ್ರೊಡಕ್ಷನ್ ಕೆಲಸ ಆರಂಭವಾಗಲಿದೆ. ಥ್ರಿಲ್ಲರ್ ಮಾದರಿಯ ಸಿನಿಮಾ ಇದಾಗಿದ್ದು, 2026ರಲ್ಲಿ ಚಿತ್ರೀಕರಣ ಆರಂಭವಾಗಲಿದೆ.
ಈ ಸುದ್ದಿಯನ್ನೂ ಓದಿ: NTRNeel: ಜೂ.ಎನ್‌ಟಿಆರ್-ಪ್ರಶಾಂತ್ ನೀಲ್ ಚಿತ್ರಕ್ಕಾಗಿ ಸಿದ್ಧವಾಗುತ್ತಿದೆ ಕಾರ್ಖಾನೆಯ ಬೃಹತ್ ಸೆಟ್
ಫೋಟೊಗ್ರಾಫಿ ಮೂಲಕ ಪದಾರ್ಪಣೆ
ಫೋಟೊಗ್ರಾಫಿ ಮೂಲಕ ಕನ್ನಡ ಚಿತ್ರರಂಗವನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಭುವನ್ ಗೌಡ ಸದ್ಯ ವಿವಿಧ ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ಫೋಟೊಗ್ರಾಪರ್ ಆಗಿ ವೃತ್ತಿ ಜೀವನ ಆರಂಭಿಸಿದ ಅವರು 2014ರಲ್ಲಿ ತೆರೆಕಂಡ ಪ್ರಶಾಂತ್ ನೀಲ್ ನಿರ್ದೇಶನದ, ಶ್ರೀಮುರಳಿ ನಟನೆಯ ʼಉಗ್ರಂʼ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ಅದಾದ ಬಳಿಕ ʼಲೊಡ್ಡೆʼ, ʼರಥಾವರʼ, ʼಪುಷ್ಪಕ ವಿಮಾನʼ ಮುಂತಾದ ಸಿನಿಮಾಗಳಿಗೆ ಛಾಯಾಗ್ರಾಹಕರಾಗಿ ಕೆಲಸ ನಿರ್ವಹಿಸಿದರು. ಇನ್ನು 2018ರಲ್ಲಿ ಬಿಡುಗಡೆಯಾದ ʼಕೆಜಿಎಫ್: ಚಾಪ್ಟರ್ 1ʼ ಮತ್ತು 2022ರಲ್ಲಿ ರಿಲೀಸ್ ಆದ ʼಕೆಜಿಎಫ್: ಚಾಪ್ಟರ್ 2' ಚಿತ್ರಗಳ ಮೂಲಕ ದೇಶದ ಗಮನ ಸೆಳೆದರು. 'ಕೆಜಿಎಫ್' ಸರಣಿ ಚಿತ್ರಗಳ ನಿರ್ದೇಶನ, ನಟನೆ, ಸಂಗೀತ ಜತೆಗೆ ಭುವನ್ ಅವರ ಸಿನಿಮಾಟಾಗ್ರಾಫಿಯು ಗಮನ ಸೆಳೆಯಿತು.
ತೆಲುಗಿನಲ್ಲಿ ಬ್ಯುಸಿ
ʼಕೆಜಿಎಫ್ʼ ಸರಣಿ ಚಿತ್ರಗಳ ಬಳಿಕ ಅವರು ತೆಲುಗು ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ. 2023ರಲ್ಲಿ ರಿಲೀಸ್ ಅದ ಪ್ಯಾನ್ ಇಂಡಿಯಾ ಚಿತ್ರ, ಪ್ರಭಾಸ್ ನಟನೆಯ ʼಸಲಾರ್: ಪಾರ್ಟ್ 1 ಸೀಸ್‌ಫೈರ್ʼ ಮೂಲಕ ಟಾಲಿವುಡ್‌ಗೆ ಪ್ರವೇಶಿಸಿ ಅಲ್ಲಿಯೂ ಗಮನ ಸೆಳೆದರು. ಸದ್ಯ ಬಹುನಿರೀಕ್ಷಿತ ಪ್ರಶಾಂತ್-ನೀಲ್-ಜೂ. ಎನ್‌ಟಿಆರ್ ಕಾಂಬಿನೇಷನ್‌ನ ಮೊದಲ ತೆಲುಗು ಸಿನಿಮಾದ ಛಾಯಾಗ್ರಾಹಕರಾಗಿ ಭುವನ್ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನೂ ಶೀರ್ಷಿಕೆ ಅಂತಿಮವಾಗದ ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಆರಂಭವಾಗಿದೆ. ವಿಶೇಷ ಎಂದರೆ ಇದರ ಶೂಟಿಂಗ್ ಉತ್ತರ ಕನ್ನಡ ಜಿಲ್ಲೆಯಲ್ಲೂ ನಡೆದಿದೆ. ನಾಯಕಿಯಾಗಿ ಕನ್ನಡತಿ ರುಕ್ಮಿಣಿ ವಸಂತ್ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರ ಬರಬೇಕಿದೆ. ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿದ ಎಲ್ಲ ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಭುವನ್ ಕಾರ್ಯ ನಿರ್ವಹಿಸಿದ್ದಾರೆ ಎನ್ನುವುದು ಮತ್ತೊಂದು ವಿಶೇಷ.