ಮುಂಬೈ: ಬಾಲಿವುಡ್ ಸ್ಟಾರ್ ಕಪಲ್ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾಗೆ(Kiara Advani-Sidharth) ಹೆಣ್ಣು ಮಗುವಾಗಿದೆ. ಫೆಬ್ರವರಿ 2023 ರಲ್ಲಿ ರಾಜಸ್ಥಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ದಂಪತಿ ಇದೀಗ ಪೋಷಕರಾಗಿ ಬಡ್ತಿ ಪಡೆದಿದ್ದಾರೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಫ್ಯಾನ್ಸ್ ಫುಲ್ ಖುಷಿ ಆಗಿದ್ದಾರೆ.
ಬಾಲಿವುಡ್‌ನ ಛಾಯಾಗ್ರಾಹಕ ಮಾನವ್ ಮಂಗ್ಲಾನಿ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕಿಯಾರಾ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ದಂಪತಿಗೆ ಹೆಣ್ಣು ಮಗು ಜನಿಸಿದ ವಿಷಯವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಇಬ್ಬರ ಅಭಿಮಾನಿಗಳು ಕೂಡ ಅಭಿನಂದನೆಗಳನ್ನು ಸಲ್ಲಿಸುವುದಕ್ಕೆ ಶುರುವಿಟ್ಟುಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ: Toxic Movie: ಗರ್ಭಿಣಿ ಕಿಯಾರಾಗಾಗಿ ʼಟಾಕ್ಸಿಕ್ʼ ಚಿತ್ರೀಕರಣವನ್ನು ಬೆಂಗಳೂರಿನಿಂದ ಮುಂಬೈಗೆ ಸ್ಥಳಾಂತರಿಸಿದ್ದ ಯಶ್
ಕಿಯಾರಾ ಅಡ್ವಾಣಿ ಫೆಬ್ರವರಿ 2025ರಲ್ಲಿ ತಾವು ಗರ್ಭಿಣಿಯಾಗಿರುವ ಬಗ್ಗೆ ಸಾಮಾಜಿಕ ಮಾಧ್ಯಮದ ಮೂಲಕ ಒಂದು ಭಾವನಾತ್ಮಕ ಪೋಸ್ಟ್‌ನಲ್ಲಿ ಘೋಷಿಸಿದ್ದರು. ಈ ಪೋಸ್ಟ್‌ನಲ್ಲಿ, ಕಿಯಾರಾ ಮತ್ತು ಸಿದ್ಧಾರ್ಥ್ ಒಂದು ಚಿಕ್ಕ ಮಗುವಿನ ಸಾಕ್ಸ್‌ಗಳನ್ನು ಹಿಡಿದಿರುವ ಚಿತ್ರವನ್ನು ಹಂಚಿಕೊಂಡಿದ್ದರು, ಇದು ಅವರ ಜೀವನದ ಹೊಸ ಅಧ್ಯಾಯದ ಸಂಕೇತವಾಗಿದೆ. “ನಮ್ಮ ಜೀವನದ ಅತಿದೊಡ್ಡ ಉಡುಗೊರೆ. ಶೀಘ್ರದಲ್ಲೇ ಬರಲಿದೆ,” ಎಂದು ಕಿಯಾರಾ ಈ ಚಿತ್ರಕ್ಕೆ ಶೀರ್ಷಿಕೆ ನೀಡಿದ್ದರು. ಇದರ ಬೆನ್ನಲ್ಲೇ ಬಾಲಿವುಡ್ ತಾರೆಯರು ಕಿಯಾರಾ ಅಡ್ವಾಣಿ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾಗೆ ಅಭಿನಂದನೆಗಳನ್ನು ಸಲ್ಲಿಸಿದ್ದರು. ಆಲಿಯಾ ಭಟ್, ಸಾರಾ ಅಲಿ ಖಾನ್, ಏಕ್ತಾ ಕಪೂರ್, ರಶ್ಮಿಕಾ ಮಂದಣ್ಣ, ಶಿಲ್ಪಾ ಶೆಟ್ಟಿ ಸೇರಿದಂತೆ ಹಲವು ಮಂದಿ ಅಭಿನಂದನೆಗಳನ್ನು ಸಲ್ಲಿಸಿದ್ದರು.
ಶೇರ್ಶಾ ಚಿತ್ರದಲ್ಲಿ ಸಿದ್ಧಾರ್ಥ್ ಮತ್ತು ಕಿಯಾರಾ ಮೊತ್ತ ಮೊದಲ ಬಾರಿಗೆ ಜೊತೆಯಾಗಿ ಅಭಿನಯಿಸಿದ್ದರು. ಇವರಿಬ್ಬರ ಕೆಮಿಸ್ಟ್ರಿ ಪ್ರೇಕ್ಷಕರನ್ನು ಬಹಳ ರಂಜಿಸಿತ್ತು. ಯಶ್ ನಟನೆಯ ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರದಲ್ಲಿ ಕಿಯಾರಾ ನಾಯಕ ನಟಿಯಾಗಿ ನಟಿಸಿದ್ದಾರೆ.