ನವದೆಹಲಿ: ಕಲ್ಯಾಣಿ ಪ್ರಿಯದರ್ಶನ್ ನಟನೆಯ ‘ಲೋಕಃ ಚಾಪ್ಟರ್ 1’ (Lokah Chapter 1) ಸಿನಿಮಾ ನೋಡಿ ಅಭಿಮಾನಿಗಳು ಬಹಳಷ್ಟು ಥ್ರಿಲ್ ಆಗಿದ್ದಾರೆ. ಈ ಚಿತ್ರಕ್ಕೆ ಕರ್ನಾಟಕದಲ್ಲಿ ಯಾವುದೇ ರೀತಿಯ ದೊಡ್ಡಮಟ್ಟದ ಪ್ರಚಾರ ಮಾಡಿಲ್ಲವಾದರೂ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಅದೇ ರೀತಿ ಮಲಯಾಳಂ ಚಿತ್ರರಂಗದಲ್ಲಿ ಅತೀ ಹೆಚ್ಚು ಗಳಿಕೆ ಮಾಡಿದ ಎರಡನೇ ಸಿನಿಮಾ ಎಂಬ ಖ್ಯಾತಿಗೆ ಈ ಚಿತ್ರ ಪಾತ್ರವಾಗಿದ್ದು ಸಿನಿಮಾತಂಡ ಈ ಬಗ್ಗೆ ಖುಷಿ ಪಟ್ಟಿದೆ.
ಡಾರ್ಕ್ ಫ್ಯಾಂಟಸಿ ಸೂಪರ್ ಹೀರೋ ಕಾನ್ಸೆಪ್ಟ್‌ನ ಈ ಸಿನಿಮಾವನ್ನು ಡಾಮಿನೊಕ್ ಅರುಣ್ ನಿರ್ದೇಶನ ಮಾಡಿದ್ದು ಸಿನಿಮಾ ಸಾಕಷ್ಟು ಆಸಕ್ತಿಕರವಾಗಿದೆ. ಈ ಸಿನಿಮಾವು ವಿಶ್ವಾದ್ಯಂತ ಸುಮಾರು 249 ಕೋಟಿ ಗಳಿಸಿದ್ದು, ಶೀಘ್ರದಲ್ಲೇ 250 ಕೋಟಿ ಗಡಿ ದಾಟುವ ನಿರೀಕ್ಷೆಯಿದೆ. ಸದ್ಯ ಈ ಸಿನಿಮಾವು ಬಿಡುಗಡೆಯಾದ ಮೂರು ವಾರಗಳ ನಂತರವೂ ಉತ್ತಮ ಪ್ರದರ್ಶನ ಕಾಣುತ್ತಿದ್ದು ಸಿನಿಪ್ರಿಯರು ಕೂಡ ಈ ವರ್ಷದ ಅತ್ಯುತ್ತಮ ಸಿನಿಮಾಗಳಲ್ಲಿ ಇದು ಕೂಡ ಒಂದು ಎನ್ನುವ ಪ್ರತಿಕ್ರಿಯೆ ನೀಡುತ್ತಿದ್ದಾರೆ.
ಈಗಾಗಲೇ ವಿದೇಶಿ ಮಾರುಕಟ್ಟೆಯಲ್ಲಿ ಈ ಸಿನಿಮಾ ರೂ 109.4 ಕೋಟಿ ಹೆಚ್ಚು ಗಳಿಕೆ ಮಾಡಿದ್ದು, ಮಲಯಾಳಂ ಸಿನಿಮಾದ ಹೊಸ ದಾಖಲೆಗೆ ಕಾರಣವಾಗಿದೆ. ಭಾರತದಲ್ಲಿ ಈಗಾಗಲೇ ಒಟ್ಟು 122 ಕೋಟಿ ನಿವ್ವಳ ಗಳಿಕೆ ಮಾಡಿದೆ. ಹಲವು ಪ್ರಮುಖ ಮಲಯಾಳಂ ಚಿತ್ರಗಳ ದಾಖಲೆ ಮುರಿದ 'ಲೋಕಃ ಚಾಪ್ಟರ್ 1’ ಸಿನಿಮಾ ಮೋಹನ್‌ಲಾಲ್ ಅವರ 'ತುಡರುಂ', ಪೃಥ್ವಿರಾಜ್ ಸುಕುಮಾರನ್ ಅವರ 'ದಿ ಗೋಟ್ ಲೈಫ್' ಫಹಾದ್ ಫಾಸಿಲ್ ಅವರ 'ಆವೇಶಂ' ಇದಲ್ಲದೆ, ಇತ್ತೀಚೆಗೆ ಬಿಡುಗಡೆ ಯಾದ 'ಮಂಜುಮ್ಮೆಲ್ ಬಾಯ್ಸ್' ಚಿತ್ರದ ಗಳಿಕೆಯನ್ನೂ ದಾಟಿ, ಎರಡನೇ ಅತೀ ಹೆಚ್ಚು ಗಳಿಕೆ ಮಾಡಿದ ಸ್ಥಾನ ಪಡೆದುಕೊಂಡಿದೆ.
ಸದ್ಯಕ್ಕೆ, ಮೋಹನ್‌ಲಾಲ್ ಅವರ ' L2: ಎಂಪುರಾನ್' ಮಾತ್ರ 'ಲೋಕಃ' ಚಿತ್ರಕ್ಕಿಂತ ಮುಂದಿದೆ. ಮುಂದಿನ ವಾರದಲ್ಲಿ 'ಎಂಪುರಾನ್' ದಾಖಲೆಯನ್ನು ಹಿಂದಿಕ್ಕುವ ಸಾಧ್ಯತೆ ಕೂಡ ಇದೆ. ದುಲ್ಕರ್ ಸಲ್ಮಾನ್ ಅವರ ವೇಫೇರರ್ ಫಿಲ್ಮ್ಸ್ ನಿರ್ಮಿಸಿದ ಈ ಚಿತ್ರವು ಆಗಸ್ಟ್ 28, 2025 ರಂದು ಬಿಡುಗಡೆ ಯಾಗಿದ್ದು ಸದ್ಯ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.