Movie Ticket Price: 200 ರೂ. ಸಿನಿಮಾ ಟಿಕೆಟ್ ದರದ ವಿರುದ್ಧ ಕಾನೂನು ಸಮರಕ್ಕೆ ಮುಂದಾದ ಮಲ್ಟಿಪ್ಲೆಕ್ಸ್ ಒಕ್ಕೂಟ; ಹೈಕೋರ್ಟ್‌ಗೆ ಅರ್ಜಿ
ರಾಜ್ಯ ಸರ್ಕಾರ ಏಕರೂಪ ಟಿಕೆಟ್ ದರದ ವಿರುದ್ಧ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳಾದ ಹೊಂಬಾಳೆ ಫಿಲ್ಮ್ಸ್, ವಿಕೆ ಫಿಲ್ಮ್ಸ್ ಮತ್ತು ಮಲ್ಟಿಪ್ಲೆಕ್ಸ್ ಒಕ್ಕೂಟ ಹೈಕೋರ್ಟ್ ಮೆಟ್ಟಿಲೇರಿವೆ. ಮಂಗಳವಾರ (ಸೆಪ್ಟೆಂಬರ್ 16) ಹೈಕೋರ್ಟ್ ಈ ಬಗ್ಗೆ ವಾದ ಆಲಿಸಲಿದೆ. ಏಕರೂಪ ಟಿಕೆಟ್ ದರದ ನಿಯಮ ಪ್ರಕಾರ ಏಕಪರದೆ ಹಾಗೂ ಮಲ್ಟಿಪ್ಲೆಕ್ಸ್ನಲ್ಲಿ ಟಿಕೆಟ್ನ ಮೂಲ ಬೆಲೆ 200 ರೂಪಾಯಿ ದಾಟುವಂತಿಲ್ಲ.

-

ಬೆಂಗಳೂರು: ದುಬಾರಿ ಸಿನಿಮಾ ಟಿಕೆಟ್ ದರಕ್ಕೆ (Movie Ticket Price) ಕಡಿವಾಣ ಹಾಕಲು ರಾಜ್ಯ ಸರ್ಕಾರ ಏಕರೂಪ ಟಿಕೆಟ್ ದರ ಪರಿಚಯಿಸಿದೆ. ಸೆಪ್ಟೆಂಬರ್ 12ರಂದು ಈ ನಿಯಮ ಜಾರಿಗೆ ಬಂದಿದೆ. ಇದರಿಂದ ಏಕಪರದೆ ಹಾಗೂ ಮಲ್ಟಿಪ್ಲೆಕ್ಸ್ನಲ್ಲಿ ಟಿಕೆಟ್ನ ಮೂಲ ಬೆಲೆ 200 ರೂಪಾಯಿ ದಾಟುವಂತಿಲ್ಲ. ಶೇ. 18 ತೆರಿಗೆಯೂ ಸೇರಿದರೆ ಸಿನಿಮಾದ ಟಿಕೆಟ್ ದರ 236 ರೂಪಾಯಿ ಆಗಲಿದೆ. ಇದೀಗ ಈ ನಿಯಮದ ವಿರುದ್ಧ ಮಲ್ಟಿಪ್ಲೆಕ್ಸ್ ಒಕ್ಕೂಟ ಜತೆಗೆ ಹೊಂಬಾಳೆ ಫಿಲ್ಮ್ಸ್ (Hombale Films), ವಿಕೆ ಫಿಲ್ಮ್ಸ್ (VK Films) ಮತ್ತಿತರ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳು ಕೋರ್ಟ್ ಮೆಟ್ಟಿಲೇರಿವೆ.
ಕರ್ನಾಟಕ ಸರ್ಕಾರದ 200 ರೂಪಾಯಿ ಟಿಕೆಟ್ ದರದ ವಿರುದ್ಧ ಮಲ್ಟಿಪ್ಲೆಕ್ಸ್ ಒಕ್ಕೂಟ ಮತ್ತು ಹೊಂಬಾಳೆ ಫಿಲ್ಮ್ಸ್, ವಿಕೆ ಫಿಲ್ಮ್ಸ್, ಕೀಸ್ಟೋನ್ ಎಂಟರ್‌ಟೈನ್‌ಮೆಂಟ್ ಮುಂತಾದ ನಿರ್ಮಾಣ ಸಂಸ್ಥೆಗಳು ಹೈಕೋರ್ಟ್ ಕದ ತಟ್ಟಿವೆ. ಮಂಗಳವಾರ (ಸೆಪ್ಟೆಂಬರ್ 16) ಹೈಕೋರ್ಟ್ ಈ ಬಗ್ಗೆ ವಾದ ಆಲಿಸಲಿದೆ.
ಸದ್ಯ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಬಹುನಿರೀಕ್ಷಿತ ʼಕಾಂತಾರ: ಚಾಪ್ಟರ್ 1ʼ ರಿಲೀಸ್‌ಗೆ ತಯಾರಾಗಿದ್ದು, ಅಕ್ಟೋಬರ್ 2ರಂದು ತೆರೆಗೆ ಅಪ್ಪಳಿಸಲಿದೆ. ರಾಜ್ಯ ಸರ್ಕಾರ ಜಾರಿಗೆ ತಂದ ಹೊಸ ನಿಯಮದಿಂದ ಕಲೆಕ್ಷನ್ ಮೇಲೆ ಪರಿಣಾಮ ಬೀರಬಹುದೆಂಬ ಆತಂಕ ಎದುರಾಗಿದೆ. ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ʼಕಾಂತಾರ: ಚಾಪ್ಟರ್ 1ʼ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದ್ದು, ಭಾರಿ ನಿರೀಕ್ಷೆ ಮೂಡಿಸಿದೆ. ಇದೇ ಕಾರಣಕ್ಕೆ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ರೂ. ದೋಚುವ ನಿರೀಕ್ಷೆ ಇದೆ. ಮೊದಲ ದಿನವೇ ದಾಖಲೆಯ ಕಲೆಕ್ಷನ್ ಮಾಡುವ ಸಾಧ್ಯತೆ ಇದ್ದು, ಇದೀಗ ಟಿಕೆಟ್ ಬೆಲೆ ಕಡಿತ ಪರಿಣಾಮ ಬೀರುವ ಆತಂಕ ಎದುರಾಗಿದೆ.
ಈ ಸುದ್ದಿಯನ್ನೂ ಸುದ್ದಿ: Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ; 200 ರೂ. ದಾಟುವಂತಿಲ್ಲ
ನಿಯಮ ಏನು ಹೇಳುತ್ತದೆ?
ಏಕರೂಪ ಟಿಕೆಟ್ ದರ ನಿಯಮದ ಪ್ರಕಾರ ಏಕಪರದೆ ಹಾಗೂ ಮಲ್ಟಿಪ್ಲೆಕ್ಸ್ನಲ್ಲಿ ಟಿಕೆಟ್ನ ಮೂಲ ಬೆಲೆ 200 ರೂಪಾಯಿ ದಾಟುವಂತಿಲ್ಲ. ಇನ್ನು ಕೆಲವು ಷರತ್ತುಗಳನ್ನು ಕೂಡ ಸರ್ಕಾರ ಹೇರಿದೆ. ಅನೇಕ ಮಲ್ಟಿಪ್ಲೆಕ್ಸ್ಗಳಲ್ಲಿ ಗೋಲ್ಡ್ ಕ್ಲಾಸ್ ವ್ಯವಸ್ಥೆ ಇರುತ್ತವೆ. ಇವುಗಳಿಗೆ 200 ರೂಪಾಯಿ ಟಿಕೆಟ್ ದರದ ಮಿತಿ ಇಲ್ಲ. ಆ ಆಸನಗಳಿಗೆ ಮಲ್ಟಿಪ್ಲೆಕ್ಸ್ಗಳು ತಮ್ಮಿಷ್ಟದ ದರ ನಿಗದಿ ಮಾಡಬಹುದು.
ಮಲ್ಟಿಪ್ಲೆಕ್ಸ್‌ಗಳನ್ನೂ ಒಳಗೊಂಡು ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಎಲ್ಲ ಭಾಷೆಯ ಚಲನಚಿತ್ರಗಳ ಎಲ್ಲಾ ಪ್ರದರ್ಶನಕ್ಕಾಗಿ, ಎಲ್ಲ ತೆರಿಗೆ ಹೊರತು ಪಡಿಸಿ ಟಿಕೆಟ್ ದರ ಗರಿಷ್ಠ ಮಿತಿ 200 ರೂ.ಗಳನ್ನು ನಿಗದಿಪಡಿಸಲಾಗಿದೆ. ಆದರೆ 75 ಆಸನಗಳು ಅಥವಾ ಅದಕ್ಕಿಂತ ಕಡಿಮೆ ಅಸನಗಳ ಪ್ರೀಮಿಯಂ ಸೌಲಭ್ಯವಿರುವ ಬಹುಪರದೆ ಚಿತ್ರ ಮಂದಿರಗಳನ್ನು ನಿಗದಿಪಡಿಸಿರುವ 200 ರೂ.ಗರಿಷ್ಠ ಟಿಕೆಟ್ ದರ ಮಿತಿಯಿಂದ ಹೊರತುಪಡಿಸಲಾಗಿದೆ.
ಕರ್ನಾಟಕ ಸಿನಿಮಾಗಳ (ನಿಯಂತ್ರಣ) ಕಾಯ್ದೆ, 1964ರ ಸೆಕ್ಷನ್ 19ರಲ್ಲಿ ನೀಡಲಾದ ಅಧಿಕಾರವನ್ನು ಚಲಾಯಿಸಲು ಕರ್ನಾಟಕ ಸಿನಿಮಾಗಳ (ನಿಯಂತ್ರಣ) ನಿಯಮಗಳು, 2014 ಅನ್ನು ಮತ್ತಷ್ಟು ತಿದ್ದುಪಡಿ ರಾಜ್ಯ ಸರ್ಕಾರ ಇತ್ತೀಚೆಗೆ ಕರಡು ರೂಪಿಸಿತ್ತು.