ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actor Pankaj Dheer: ‘ಮಹಾಭಾರತ’ದ ಕರ್ಣ ಪಾತ್ರಧಾರಿ ಪಂಕಜ್ ಧೀರ್ ಇನ್ನಿಲ್ಲ

1988–1990ರಲ್ಲಿ ಪ್ರಸಾರವಾದ ಭಾರತದ ಬಲು ಜನಪ್ರಿಯ ಧಾರಾವಾಹಿ ‘ಮಹಾಭಾರತ’ದ ಕರ್ಣನ ಪಾತ್ರದ ಮೂಲಕ ಜನಪ್ರಿಯರಾದ ನಟ ಪಂಕಜ್ ಧೀರ್ ಬುಧವಾರ (ಅಕ್ಟೋಬರ್ 15) ಮುಂಬೈಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರಿಗೆ 68 ವರ್ಷ ವಯಸ್ಸಾಗಿತ್ತು. ಅವರು ಕನ್ನಡ ಚಿತ್ರಗಳಲ್ಲಿಯೂ ನಟಿಸಿದ್ದಾರೆ.

ಮುಂಬೈ, ಅ. 15: ಭಾರತದ ಬಲು ಜನಪ್ರಿಯ ಧಾರಾವಾಹಿ ‘ಮಹಾಭಾರತ’ದ (Mahabharat) ಕರ್ಣನ ಪಾತ್ರದ ಮೂಲಕ ಜನಪ್ರಿಯರಾದ ನಟ ಪಂಕಜ್ ಧೀರ್ (Actor Pankaj Dheer) ಬುಧವಾರ (ಅಕ್ಟೋಬರ್ 15) ಮುಂಬೈಯ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರಿಗೆ 68 ವರ್ಷ ವಯಸ್ಸಾಗಿತ್ತು. ಪಂಕಜ್ ಧೀರ್ ಹಲವು ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಇತ್ತೀಚೆಗಷ್ಟೆ ಶಸ್ತ್ರಚಿಕಿತ್ಸೆಯನ್ನೂ ನಡೆಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಇಹಲೋಕ ತ್ಯಜಿಸಿದ್ದಾರೆ. ಬಹುಭಾಷಾ ಕಲಾವಿದರಾಗಿದ್ದ ಅವರು ಕನ್ನಡ ಚಿತ್ರಗಳಲ್ಲಿಯೂ ನಟಿಸಿದ್ದಾರೆ.

ಈ ಹಿಂದೆ ದೂರದರ್ಶನದಲ್ಲಿ ಪ್ರಸಾರವಾಗಿದ್ದ ಬಿ.ಆರ್‌. ಚೋಪ್ರಾ ಅವರ ʼಮಹಾಭಾರತʼ (1988) ಧಾರಾವಾಹಿಯ ಕರ್ಣನ ಪಾತ್ರ ನಿರ್ವಹಿಸುವ ಮೂಲಕ ಪಂಕಜ್ ಧೀರ್ ಸಾಕಷ್ಟು ಅಭಿಮಾನಿಗಳ ಗಮನ ಸೆಳೆದಿದ್ದರು. ಕರ್ಣ ಎಂದರೆ ಸಾಕು ಪಂಕಜ್ ಧೀರ್ ಅವರ ಚಿತ್ರವೇ ಕಣ್ಣಮುಂದೆ ಬರುತ್ತಿತ್ತು. ಅಷ್ಟರ ಮಟ್ಟಿಗೆ ಅವರು ಆ ಪಾತ್ರವನ್ನು ಆವರಿಸಿದ್ದರು. ಲುಕ್‌, ಡೈಲಾಗ್‌ ಡೆಲಿವರಿ ಮೂಲಕ ಮನೆ, ಮನ ತಲುಪಿದ್ದರು. ಇಂದಿಗೂ ಅವರ ಕರ್ಣನ ಪಾತ್ರವನ್ನು ಹಲವರು ನೆನಪಿಸಿಕೊಳ್ಳುತ್ತಾರೆ. ಈ ಪಾತ್ರ ಅವರಿಗೆ ಸ್ಟಾರ್‌ ಪಟ್ಟ ತಂದು ಕೊಟ್ಟಿತ್ತು.

ಪಂಕಜ್ ಧೀರ್ ನಿಧನದ ಕುರಿತಾದ ಎಕ್ಸ್‌ ಪೋಸ್ಟ್‌:



ಈ ಸುದ್ದಿಯನ್ನೂ ಓದಿ: TT Jagannathan: ಪ್ರೆಶರ್ ಕುಕ್ಕರ್ ಮಾರುಕಟ್ಟೆಯ ಕ್ರಾಂತಿಕಾರ ಟಿ.ಟಿ. ಜಗನ್ನಾಥನ್ ನಿಧನ

ಪಂಕಜ್ ಧೀರ್ ಅವರ ನಿಧನವನ್ನು ಸ್ನೇಹಿತ, ನಿರ್ಮಾಪಕ ಅಶೋಕೆ ಪಂಡಿತ್‌ ಖಚಿತಪಡಿಸಿದ್ದಾರೆ. ʼʼಪಂಕಜ್ ಧೀರ್ ಕ್ಯಾನ್ಸರ್‌ ಚಿಕಿತ್ಸೆ ಫಲಿಸದೆ ಬುಧವಾರ ಮುಂಬೈ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದರು. ಅವರು ಹಲವು ದಿನಗಳಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲʼʼ ಎಂದು ತಿಳಿಸಿದ್ದಾರೆ. ಪಂಕಜ್ ಧೀರ್ ಪತ್ನಿ, ಪುತ್ರನನ್ನು ಅಗಲಿದ್ದಾರೆ.

ಪಂಜಾಬ್‌ನಲ್ಲಿ 1956ರಲ್ಲಿ ಜನಿಸಿದ ಪಂಕಜ್‌ 1981ರಲ್ಲಿ ತೆರೆಕಂಡ ʼಪೂನಂʼ ಹಿಂದಿ ಚಿತ್ರದ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟರು. 1988–1990ರಲ್ಲಿ ದೂರದರ್ಶನದಲ್ಲಿ ಪ್ರಸಾರವಾದ ʼಮಹಾಭಾರತʼ ಧಾರಾವಾಹಿ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತು. ಅದಾದ ಬಳಿಕ ಹಲವು ಸಿನಿಮಾ, ಧಾರಾವಾಹಿ, ವೆಬ್‌ ಸೀರೀಸ್‌ನಲ್ಲೂ ಬಣ್ಣ ಹಚ್ಚಿದರು. ಹಿಂದಿ ಜತೆಗೆ ಕನ್ನಡ, ಮಲಯಾಳಂ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ. 2024ರಲ್ಲಿ ಪ್ರಸಾರ ಆರಂಭಿಸಿದ್ದ ‘ಧ್ರುವ ತಾರ’ ಪಂಕಜ್ ನಟಿಸಿದ್ದ ಕೊನೆಯ ಧಾರಾವಾಹಿ.

ಕನ್ನಡ ಚಿತ್ರಗಳಲ್ಲಿ ನಟನೆ

ಪಂಕಜ್‌ ಹಲವು ಕನ್ನಡ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. 1982ರಲ್ಲಿ ಬಿಡುಗಡೆಯಾದ ರಾಷ್ಟ್ರ ಪ್ರಶಸ್ತಿ ವಿಜೇತ ʼಬರʼ ಚಿತ್ರದ ಪ್ರಮುಖ ಪಾತ್ರದಲ್ಲಿ ಅಬಿನಯಿಸುವ ಮೂಲ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ಅನಂತ್‌ ನಾಗ್‌ ನಾಯಕನಾಗಿದ್ದ ಈ ಚಿತ್ರವನ್ನು ಎಂ.ಎಸ್. ಸತ್ಯು ನಿರ್ದೇಶಿಸಿದರು. ವಿಷ್ಣುವರ್ಧನ್, ಅಕ್ಷಯ್ ಕುಮಾರ್ ನಟಿಸಿದ್ದ ‘ವಿಷ್ಣು-ವಿಜಯ’ ಸಿನಿಮಾದಲ್ಲಿಯೂ ಪಂಕಜ್ ಧೀರ್ ಕಾಣಿಸಿಕೊಂಡರು. 1993ರಲ್ಲಿ ಈ ಚಿತ್ರ ಕನ್ನಡದ ಜತೆಗೆ ಹಿಂದಿಯಲ್ಲೂ ರಿಲೀಸ್‌ ಆಗಿತ್ತು. 2005ರಲ್ಲಿ ಬಿಡುಗಡೆಯಾದ ವಿಷ್ಣುವರ್ಧನ್‌ ಅಭಿನಯದ ‘ವಿಷ್ಣುಸೇನ’ ಸಿನಿಮಾನಲ್ಲಿಯೂ ಪಂಕಜ್ ಧೀರ್ ಅಭಿನಯಿಸಿದರು. ಪಂಕಜ್‌ ಅವರ ನಿಧನಕ್ಕೆ ಚಿತ್ರರಂಗದ ಕಲಾವಿದರು, ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.