ಬೆಂಗಳೂರು: ಕೆಲ ದಿನಗಳಿಂದ ಸ್ಯಾಂಡಲ್‌ವುಡ್‌ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ (Actor Darshan) ಫ್ಯಾನ್ಸ್ ಹಾಗೂ ನಟಿ ರಮ್ಯಾ, ಪ್ರಥಮ್ ಅವರ ನಡುವಿನ (Vijaya Lakshmi Vs Pavitra Gowda) ವಾರ್ ತಾರಕ್ಕೇರಿದೆ. ಹಲವರು ರಮ್ಯಾ ಪರ ಬ್ಯಾಟ್ ಬೀಸಿದ್ದರೆ, ಇನ್ನೂ ಕೆಲ ಸ್ಟಾರ್‌ಗಳು ದರ್ಶನ್ ಫ್ಯಾನ್ಸ್ ಪರ ಪೋಸ್ಟ್ ಹಾಕುತ್ತಿದ್ದಾರೆ. ಈ ಮಧ್ಯೆ ದರ್ಶನ್ ಪತ್ನಿ ವಿಜಯ ಲಕ್ಷ್ಮಿ ಮತ್ತು ಪವಿತ್ರಾ ಗೌಡ ನಡುವಿನ ಶೀತಲ ಸಮರ ಮತ್ತೊಮ್ಮೆ ಭುಗಿಲೆದ್ದಿದೆ. ಒಂದೆಡೆ ದರ್ಶನ್ ಪತ್ನಿ ವಿಜಯ ಲಕ್ಷ್ಮಿ ದರ್ಶನ ಅವರ ಜೊತೆಗೆ ಕಾಮಾಕ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ಫೋಟೋವನ್ನು ಹಾಕಿ ದೇವರಿದ್ದಾನೆ ಎಂದು ಬರೆದುಕೊಂಡರೆ, ಇದರ ಬೆನ್ನಲ್ಲೇ ಇದೀಗ ಪವಿತ್ರಾ ಗೌಡ ಕೂಡ ಪೋಸ್ಟ್ ಒಂದನ್ನು ಮಾಡಿದ್ದಾರೆ. ಇನ್ಸ್ಟಾಗ್ರಾಮ್ ಸ್ಟೋರಿ ಹಾಕಿದ ಪವಿತ್ರ, ಮನುಷ್ಯರು ಬಣ್ಣ ಬದಲಾಯಿಸಿದರೇನು? ರಾಯರು ನಮ್ಮ ಜೀವನವನ್ನೇ ಬದಲಾಯಿಸುತ್ತಾರೆ ಎಂದು ಬರೆದಿದ್ದಾರೆ.
ಪವಿತ್ರ ಗೌಡ ಹಾಕಿದ ಪೋಸ್ಟ್ ಇದೀಗ ಚರ್ಚೆಗೆ ಕಾರಣವಾಗಿದೆ. ಬೇಕಂತಲೇ ವಿಜಯಲಕ್ಷ್ಮಿ ಅವರಿಗೆ ಟಾಂಗ್ ಕೊಡಲು ಪವಿತ್ರ ಈ ರೀತಿಯ ಪೋಸ್ಟ್ ಹಾಕಿದ್ದಾರಾ? ಎಂಬ ಪ್ರಶ್ನೆ ಮೂಡಿದೆ. ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ಜಾಮೀನಿನ ಮೇಲೆ ಹೊರಗಿರುವ ಪವಿತ್ರಾ ಹಲವು ದೇವಸ್ಥಾನಗಳಿಗೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದ್ದಾರೆ. ಇತ್ತೀಚೆಗೆ ಮಂತ್ರಾಲಯಕ್ಕೂ ತೆರಳಿದ್ದರು. ವಿಜಯ ಲಕ್ಷ್ಮೀ ಕೂಡ ಗಂಡನ ಬಿಡುಗಡೆಗಾಗಿ ಹಲವು ಹರಕೆ ಹೊತ್ತಿದ್ದರು.
ಮೊನ್ನೆಯಷ್ಟೇ ಕಾಮಾಕ್ಯ ದೇವಾಲಯಕ್ಕೆ ದರ್ಶನ್ ಕುಟುಂಬ ಸಮೇತ ಭೇಟಿ ನೀಡಿದ್ದರು. ಆ ಫೋಟೋ ಶೇರ್ ಮಾಡಿದ ದರ್ಶನ್ ಪತ್ನಿ ಹೆಚ್ಚು ಜನರು ನಿಮ್ಮನ್ನು ಕೆಳಕ್ಕೆ ತಳ್ಳಲು ಪ್ರಯತ್ನಿಸಿದರೆ, ದೇವರು ನಿಮ್ಮನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯುತ್ತಾನೆ. ದೇವರು ನಿಮ್ಮೆಲ್ಲರನ್ನು ಆಶೀರ್ವದಿಸಲಿ’’ ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ದರ್ಶನ್‌ರನ್ನ ತುಳಿಯಲು ಯತ್ನಿಸುತ್ತಿರುವವರಿಗೆ ಮಾರ್ಮಿಕವಾಗಿ ಉತ್ತರ ನೀಡಿದ್ದರು.
ಪವಿತ್ರಾ ಪೋಸ್ಟ್ ವೈರಲ್
ಇನ್ನು ವಿಜಯಲಕ್ಷ್ಮಿ ಪೋಸ್ಟ್ ಬೆನ್ನಲ್ಲೇ ಇತ್ತ ಪವಿತ್ರಾ ಗೌಡ ಕೂಡ ಪೋಸ್ಟ್‌ವೊಂದನ್ನು ಮಾಡಿದ್ದಾರೆ. ರಾಯರನ್ನು ನೆನೆದು ಪೋಸ್ಟ್ ಒಂದನ್ನು ಮಾಡಿರುವ ಪವಿತ್ರಾ ಗೌಡ, ಮನುಷ್ಯರು ಬಣ್ಣ ಬದಲಾಯಿಸಿದರೇನು? ರಾಯರು ನಮ್ಮ ಜೀವನವನ್ನೇ ಬದಲಾಯಿಸುತ್ತಾರೆ. ನನ್ನ ಮೌನ ನನ್ನ ಬಲಹೀನತೆಯಲ್ಲ, ಇದು ದೇವರ ನ್ಯಾಯದ ಮೇಲೆ ಇರುವ ನಂಬಿಕೆ ಎಂದು ಹಾಕಿದ್ದಾರೆ. ಇದು ವಿಜಯ ಲಕ್ಷ್ಮಿ ಅವರಿಗಂತಲೇ ಹಾಕಿದ್ದಾರಾ.. ಇಲ್ಲ ರೆಡ್ ಕಾರ್ಪೆಟ್ ಸ್ಟುಡಿಯೋವನ್ನು ಹೊಸ ರೀತಿಯಲ್ಲಿ ಮುನ್ನಡೆಸುತ್ತಿರುವುದಕ್ಕೆ ಇಂತಹ ಪೋಸ್ಟ್‌ಗಳು ಬಂದಿವೆಯಾ ಎಂದು ಚರ್ಚೆ ನಡೆಯುತ್ತಿದೆ.

ಈ ಸುದ್ದಿಯನ್ನೂ ಓದಿ: Actor Darshan: ಮುಂದುವರಿದ ದರ್ಶನ್ ಟೆಂಪಲ್ ರನ್; ಪತ್ನಿ ವಿಜಯಲಕ್ಷ್ಮೀ ಜತೆ ಅಸ್ಸಾಂನ ಕಾಮಾಕ್ಯ ದೇಗುಲಕ್ಕೆ ಭೇಟಿ
ರಮ್ಯಾ vs ದರ್ಶನ್ ಫ್ಯಾನ್ಸ್
ರೇಣುಕಾ ಸ್ವಾಮಿಗೆ ನ್ಯಾಯ ಸಿಗಲಿ ಎಂದು ನಟಿ ರಮ್ಯಾ ಪೋಸ್ಟ್ ಮಾಡಿದ್ದು, ದರ್ಶನ್ ಅಭಿಮಾನಿಗಳನ್ನು ಕೆರಳಿಸಿತ್ತು. ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿ ಹಾಕಿದ್ದ ನಟಿ ರಮ್ಯಾ ಅವರನ್ನು ದರ್ಶನ್ ಅಭಿಮಾನಿಗಳು ಟ್ರೋಲ್ ಮಾಡಿದ್ದರು. ಕೆಟ್ಟದಾಗಿ ಕಮೆಂಟ್ ಮಾಡಿದ್ದರು. ಇದಾದ ಬಳಿಕ ದರ್ಶನ್ ಫ್ಯಾನ್ಸ್ ಪರ ನಟಿ ಸೈಬರ್ ಕ್ರೈಂಗೆ ದೂರು ಸಲ್ಲಿಸಿದ್ದಾರೆ. ಟ್ರೋಲ್ ಮಾಡೋರ ವಿರುದ್ಧ ದೂರು ದಾಖಲಾಗ್ತಿದ್ದಂತೆ ಕೆಲವರಿಂದ ಅಕೌಂಟ್ ಡಿಲೀಟ್ ಆಗಿದೆ. ಡಿಲೀಟ್ಗೂ ಮುನ್ನ ಎಲ್ಲಾ URL ID ಸಂಗ್ರಹಿಸಿದ್ದ ಪೊಲೀಸರು ಎಲ್ಲವನ್ನೂ ದಾಖಲಿಸಿಕೊಂಡಿದ್ದಾರೆ. ಸದ್ಯ ಈ ಕುರಿತು ತನಿಖೆ ನಡೆಸಲಾಗುತ್ತಿದೆ.