ಮುಂಬೈ: ಗಣೇಶ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದ್ದು ಬಾಲಿವುಡ್ ಕಲಾವಿದರು ಅದ್ಧೂರಿಯಾಗಿ ಆಚರಿಸಿದ್ದಾರೆ. ಸ್ಟಾರ್ ದಂಪತಿ ದೀಪಿಕಾ ಪಡುಕೋಣೆ (Deepika Padukone) ಮತ್ತು ರಣವೀರ್ ಸಿಂಗ್ (Ranveer Singh) ಗಣೇಶ ಚತುರ್ಥಿಯನ್ನು ವಿಜೃಂಭಣೆಯಿಂದ ಕೊಂಡಾಡಿದ್ದಾರೆ. ಬಾಲಿವುಡ್‌ನ ಕ್ಯೂಟ್ ಕಪಲ್‌ಗಳಲ್ಲಿ ದೀಪಿಕಾ ಪಡುಕೋಣೆ-ರಣವೀರ್ ಸಿಂಗ್ ಕೂಡ ಒಬ್ಬರು. ಸಿನಿಮಾ ಅಲ್ಲದೆ ವೈಯಕ್ತಿಕ ವಿಚಾರವಾಗಿಯೂ ಸುದ್ದಿಯಲ್ಲಿರುವ ಇವರು ಸದ್ಯ ಹಬ್ಬದ ಖುಷಿಯಲ್ಲಿದ್ದಾರೆ. ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಮುಂಬೈಯಲ್ಲಿ ಅಂಬಾನಿ ಕುಟುಂಬದ ಗಣೇಶೋತ್ಸವದಲ್ಲಿ ಭಾಗವಹಿಸಿದ್ದು ಈ ವಿಡಿಯೊ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಂಬಾನಿ ಕುಟುಂಬವು ತಮ್ಮ ಅಂಟಿಲಿಯಾ ನಿವಾಸದಲ್ಲಿ ಆಯೋಜಿಸಿದ್ದ ಗಣೇಶೋತ್ಸವದಲ್ಲಿ ಈ ದಂಪತಿ ಭಾಗವಹಿಸಿದ್ದು ಗ್ರ್ಯಾಂಡ್ ಆಗಿ ರೆಡಿಯಾಗಿದ್ದಾರೆ. ಅಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಸಹಿತ ಅನೇಕ ಗಣ್ಯರು ಪಾಲ್ಗೊಂಡಿದ್ದರು. ವಿಡಿಯೊದಲ್ಲಿ ಮೊದಲು ದೀಪಿಕಾ ಪಡುಕೋಣೆ, ನಂತರ ರಣವೀರ್ ಸಿಂಗ್ ಗಣಪತಿ ಪೂಜೆ ಮಾಡಿದ್ದಾರೆ. ಸಾಂಪ್ರದಾಯಿಕ ಉಡುಗೆಯನ್ನು ಧರಿಸಿ ಗಣೇಶ ಹಬ್ಬದ ಸಮಾರಂಭದಲ್ಲಿ ಇವರಿಬ್ಬರು ಭಾಗವಹಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ದೀಪಿಕಾ ಸುಂದರ ಎಂಬ್ರಾಯ್ಡರಿ ಇರುವ ಗೋಲ್ಡನ್ ಬ್ರೌನ್ ಅನಾರ್ಕಲಿ ಡ್ರೆಸ್ ಧರಿಸಿದ್ದರೆ, ರಣವೀರ್ ಸಿಂಗ್ ಇದಕ್ಕೆ ಹೊಂದಿಕೆಯಾಗುವಂತ ಕುರ್ತಾ ಸೆಟ್‌ನಲ್ಲಿ ಮಿಂಚಿದ್ದಾರೆ.
ಅದರಲ್ಲೂ ರಣವೀರ್ ಅವರ ಲುಕ್ ವಿಶೇಷವಾಗಿ ಗಮನ ಸೆಳೆಯಿತು. ತಮ್ಮ ಮುಂಬರುವ ಚಿತ್ರ ʼಧುರಂದರ್ʼಗಾಗಿ ಗಡ್ಡ ಮತ್ತು ಉದ್ದನೆಯ ಕೂದಲು ಬಿಟ್ಟಿದ್ದ ರಣವೀರ್ ಪೂಜೆ ವೇಳೆ ಕ್ಲೀನ್ ಶೇವ್ ಲುಕ್‌ನಲ್ಲಿ ಕಾಣಿಸಿಕೊಂಡರು. ಅವರ ಈ ಹೊಸ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಇವರಿಬ್ಬರ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ನೆಟ್ಟಿಗರಿಬ್ಬರು ರಣವೀರ್ ಹೊಸ ಲುಕ್ ಫರ್ಪೆಕ್ಟ್ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಬಾಲಿವುಡ್‌ನ ಕ್ಯೂಟ್ ಆ್ಯಂಡ್ ಸ್ವೀಟ್ ಕಪಲ್ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ರಣವೀರ್ ಮುಂಬರುವ ಆದಿತ್ಯ ಧರ್ ನಿರ್ದೇಶನದ ಥ್ರಿಲ್ಲರ್ ಚಿತ್ರ ʼಧುರಂಧರ್ʼನಲ್ಲಿ ನಟಿಸಲಿದ್ದು, ಇದರಲ್ಲಿ ಸಂಜಯ್ ದತ್, ಆರ್.ಮಾಧವನ್ ಮತ್ತು ಸಾರಾ ಅರ್ಜುನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಡಿಸೆಂಬರ್ 5ರಂದು ಬಿಡುಗಡೆಯಾಗಲಿದೆ. ನಟಿ ದೀಪಿಕಾ ಸದ್ಯ ಅಲ್ಲು ಅರ್ಜುನ್–ಅಟ್ಲೀ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಸದ್ಯ ಇವರಿಬ್ಬರ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿದೆ.