ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ravi Mohan: ನಟ ರವಿ ಮೋಹನ್‌ ಈಗ ನಿರ್ದೇಶಕ, ನಿರ್ಮಾಪಕ; ಹೊಸ ಸಾಹಸಕ್ಕೆ ಸಜ್ಜು

Ravi Mohan Studios: ಕಾಲಿವುಡ್‌ ನಟ ರವಿ ಮೋಹನ್‌ ಈಗ ನಿರ್ದೇಶಕ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ. ರವಿ ಮೋಹನ್‌ ಸ್ಟುಡಿಯೋಸ್‌ ಚಿತ್ರ ನಿರ್ಮಾಣ ಸಂಸ್ಥೆ ಹುಟ್ಟುಹಾಕಿರುವ ಅವರು ಒಟ್ಟು 10 ಸಿನಿಮಾ ನಿರ್ಮಿಸುತ್ತಿರುವುದಾಗಿ ಘೋಷಿಸಿದರು. ರವಿ ಮೋಹನ್‌ ನಿರ್ದೇಶನದ ಮೊದಲ ಚಿತ್ರದಲ್ಲಿ ಯೋಗಿ ಬಾಬು ನಾಯಕನಾಗಿ ನಟಿಸುತ್ತಿದ್ದಾರೆ.

ರವಿ ಮೋಹನ್‌

ಚೆನ್ನೈ: ರವಿ ಮೋಹನ್‌ (Ravi Mohan) ಆಗಿ ಹೆಸರು ಬದಲಾಯಿಸಿಕೊಂಡಿರುವ ತಮಿಳು ನಟ ಜಯಂ ರವಿ ಇದೀಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಇಷ್ಟರ ತನಕ ನಾಯಕನಾಗಿ ತೆರೆಮೇಲೆ ಮಿಂಚಿದ ಅವರು ಇದೀಗ ತೆರೆ ಹಿಂದೆಯೂ ಛಾಪು ಮೂಡಿಸಲು ಸಜ್ಜಾಗಿದ್ದಾರೆ. ಹೌದು, ಪ್ರೊಡಕ್ಷನ್‌ ಬ್ಯಾನರ್‌ ಸ್ಥಾಪಿಸಿರುವ ಅವರು ಚಿತ್ರ ನಿರ್ಮಾಣದ ಜತೆಗೆ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದಾರೆ. ಆಗಸ್ಟ್‌ 26ರಂದು ರವಿ ಮೋಹನ್‌ ಸ್ಟುಡಿಯೋಸ್‌ (Ravi Mohan Studios) ಪ್ರೊಡಕ್ಷನ್‌ ಬ್ಯಾನರ್‌ಗೆ ಚಾಲನೆ ನೀಡಿರುವ ಅವರು ಇದೇ ವೇಳೆ ತಾವು ಆಕ್ಷನ್‌ ಕಟ್‌ ಹೇಳಲಿರುವ ಹೊಸ ಸಿನಿಮಾವನ್ನೂ ಆರಂಭಿಸಿದರು. 2 ವರ್ಷಗಳಲ್ಲಿ ಒಟ್ಟು 10 ಸಿನಿಮಾ ನಿರ್ಮಿಸುತ್ತಿರುವುದಾಗಿ ಘೋಷಿಸಿದರು.

ರವಿ ಮೋಹನ್‌ ನಿರ್ಮಾಣದ ಮೊದಲ ಚಿತ್ರ ʼಬ್ರೋ ಕೋಡ್‌ʼ (Bro Code). ಇದನ್ನು ಕಾರ್ತಿಕ್‌ ಯೋಗಿ ನಿರ್ದೇಶಿಸಲಿದ್ದು, ಎಸ್‌.ಜೆ. ಸೂರ್ಯ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರೊಂದಿಗೆ ಕನ್ನಡತಿ ಶ್ರದ್ಧಾ ಶ್ರೀನಾಥ್‌, ಅರ್ಜುನ್‌ ಅಶೋಕನ್‌ ಮತ್ತು ಮಾಳವಿಕಾ ಮನೋಜ್‌ ಮತ್ತಿತರರು ಅಭಿನಯಿಸುತ್ತಿದ್ದಾರೆ.



ಈ ಸುದ್ದಿಯನ್ನೂ ಓದಿ: Actor Ravi Mohan: ನಟ ರವಿ ಮೋಹನ್‌ ಗೆಳತಿ ಕೆನಿಶಾ ಗರ್ಭಿಣಿ? ಪತ್ನಿ ಜೊತೆ ಡಿವೋರ್ಸ್‌ ವಾರ್‌ ನಡೀತಿರೋವಾಗ ಏನಿದು ರೂಮರ್ಸ್‌?

ನಿರ್ದೇಶನಕ್ಕೆ ಇಳಿದ ರವಿ ಮೋಹನ್‌

ಇದರೊಂದಿಗೆ ಅವರು ತಮ್ಮ ನಿರ್ದೇಶನದ ಚಿತ್ರವನ್ನೂ ಘೋಷಿಸಿದ್ದಾರೆ. ಇದಕ್ಕೆ ʼಎನ್‌ ಆರ್ಡಿನರಿ ಮ್ಯಾನ್‌ʼ (An Ordinary Man) ಎಂದು ಹೆಸರಿಡಲಾಗಿದ್ದು, ಯೋಗಿ ಬಾಬು ನಾಯಕನಾಗಿ ನಟಿಸುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರ ಬೀಳಬೇಕಿದೆ. ಹೊಸ ಚಿತ್ರದ ಬಗ್ಗೆ ಯೋಗಿ ಬಾಬು ಮಾತನಾಡಿ, ʼʼಕೋಮಾಲಿʼ ಚಿತ್ರದಲ್ಲಿ ನಟಿಸುತ್ತಿದ್ದ ವೇಳೆ ನಾನು ಮತ್ತು ರವಿ ಮೋಹನ್‌ ಸಿನಿಮಾದ ಬಗ್ಗೆ ಚರ್ಚೆ ನಡೆಸಿದ್ದೆವು. ಆ ಬಳಿಕ ನಾನು ಈ ಬಗ್ಗೆ ಮರೆತು ಬಿಟ್ಟಿದ್ದೆ. ಆದರೆ ರವಿ ಮರೆತಿರಲಿಲ್ಲ. 6 ವರ್ಷಗಳ ಬಳಿಕವೂ ಅವರು ಭರವಸೆಯನ್ನು ನೆನಪಿಟ್ಟುಕೊಂಡಿದ್ದಾರೆ. ಇದೀಗ ʼಎನ್‌ ಆರ್ಡಿನರಿ ಮ್ಯಾನ್‌ʼ ಸೆಟ್ಟೇರಿದೆʼʼ ಎಂದು ತಿಳಿಸಿದ್ದಾರೆ. ನಿರ್ದೇಶಕನಾಗಿ ನಿಮ್ಮ ಮುಂದೆ ಪರಿಚಿತನಾಗುತ್ತಿದ್ದೇನೆ ಎಂದು ರವಿ ಮೋಹನ್‌ ಸಂತಸ ವ್ಯಕ್ತಪಡಿಸಿದ್ದಾರೆ. ವಿಶೇಷ ಎಂದರೆ 2025ರಲ್ಲಿ 1, 2026ರಲ್ಲಿ 3 ಮತ್ತು 2027ರಲ್ಲಿ 4 ಸಿನಿಮಾ ಸೆಟ್ಟೇರಲಿದೆ. ಜತೆಗೆ ಅವರು ಒಟಿಟಿ ಪ್ರಾಜೆಕ್ಟ್‌ ಕೂಡ ನಿರ್ಮಿಸಲಿದ್ದಾರೆ.

ಸದ್ಯದ ಪ್ರಾಜೆಕ್ಟ್‌

ಸದ್ಯ ರವಿ ಮೋಹನ್‌ ವಿವಿಧ ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿದ್ದಾರೆ. ಅವರು ನಟಿಸಿದ ʼಜೆನಿʼ ತೆರೆ ಕಾಣಲು ಸಜ್ಜಾಗಿದ್ದು, ಅರ್ಜುನನ್‌ ಜೂನಿಯರ್‌ ನಿರ್ದೇಶನದ ಈ ಚಿತ್ರದಲ್ಲಿ ನಾಯಕಿಯರಾಗಿ ಕೃತಿ ಶೆಟ್ಟಿ, ಕಲ್ಯಾಣಿ ಪ್ರಿಯದರ್ಶನ್‌ ಮತ್ತಿತರರು ಅಭಿನಯಿಸುತ್ತಿದ್ದಾರೆ. ಇನ್ನು ಸುಧಾ ಕೊಂಗಾರ ನಿರ್ದೇಶನದ ʼಪರಾಶಕ್ತಿʼ ಸಿನಿಮಾದಲ್ಲಿ ರವಿ ಮೋಹನ್‌, ಶಿವಕಾರ್ತಿಕೇಯನ್‌, ಅಥರ್ವ, ಶ್ರೀಲೀಲಾ ಮತ್ತಿತರರು ನಟಿಸುತ್ತಿದ್ದಾರೆ. ಇದರೊಂದಿಗೆ ʼಕರಾಟೆ ಬಾಬುʼ ಚಿತ್ರದಲ್ಲಿಯೂ ರವಿ ಮೋಹನ್‌ ನಟಿಸುತ್ತಿದ್ದು, ಗಣೇಶ್‌ ಕೆ. ಬಾಬು ಆ್ಯಕ್ಷನ್‌ ಕಟ್‌ ಹೇಳುತ್ತಿದ್ದು, ಶಕ್ತಿ ವಾಸುದೇವನ್‌, ನಾಸರ್‌, ಕೆ.ಎಸ್.‌ ರವಿ ಕುಮಾರ್‌ ಮತ್ತಿತರರು ಕಾಣಿಸಿಕೊಳ್ಳುತ್ತಿದ್ದಾರೆ. 'ತನಿ ಒರುವನ್‌ 2' ಸಿನಿಮಾದಲ್ಲಿಯೂ ರವಿ ಮೋಹನ್‌ ನಟಿಸುತ್ತಿದ್ದಾರೆ.