ಬೆಂಗಳೂರು: ಬಾಕ್ಸ್ ಆಫೀಸ್‌ನಲ್ಲಿ ಸ್ಯಾಂಡಲ್‌ವುಡ್‌ನ ʼಸು ಫ್ರಮ್ ಸೋʼ ಸಿನಿಮಾ (Su From So Movie) ಹೊಸದೊಂದು ಇತಿಹಾಸ ಬರೆದಿದೆ. ಸ್ಟಾರ್‌ಗಳಿಲ್ಲದೆ, ಅಬ್ಬರದ ಪ್ರಚಾರವಿಲ್ಲದೆ ಜುಲೈ 25ರಂದು ತೆರೆಗೆ ಬಂದ ಈ ಹಾರರ್ ಕಾಮಿಡಿ ಚಿತ್ರ ರಜನಿಕಾಂತ್, ಹೃತಿಕ್ ರೋಷನ್, ಜೂ, ಎನ್‌ಟಿಆರ್‌ನಂತಹ ಸ್ಟಾರ್ ಸಿನಿಮಾಗಳಿಗೆ ಸೆಡ್ಡು ಹೊಡೆದು ನಿಂತಿದೆ. ಈಗಲೂ ರಾಜ್ಯದ ಹಲವೆಡೆ ಹೌಸ್‌ಪುಲ್ ಪ್ರದರ್ಶನ ಕಾಣುತ್ತಿದ್ದು, ರಿಲೀಸ್ ಆಗಿ 22 ದಿನ ಕಳೆದಿದ್ದರೂ ಕೋಟಿ ಕೋಟಿ ರೂ. ದೋಚುತ್ತಿದೆ (Su From So Collection). ಆ ಮೂಲಕ ರಾಷ್ಟ್ರ ಮಟ್ಟದಲ್ಲಿ ಮತ್ತೊಮ್ಮೆ ಸ್ಯಾಂಡಲ್‌ವುಡ್ ಚಿತ್ರ ಗಮನ ಸೆಳೆದಿದೆ.
ಬಹುನಿರೀಕ್ಷಿತ, ಅದ್ಧೂರಿ ಬಜೆಟ್‌ನ ರಜನಿಕಾಂತ್ ಅಭಿನಯದ ತಮಿಳು ಚಿತ್ರ ʼಕೂಲಿʼ (Coolie) ಮತ್ತು ಹೃತಿಕ್ ರೋಷನ್ ಹಾಗೂ ಜೂ. ಎನ್‌ಟಿಆರ್ ನಟನೆಯ ಹಿಂದಿ ಸಿನಿಮಾ 'ವಾರ್ 2' (War 2) ಆಗಸ್ಟ್ 14ರಂದು ತೆರೆಕಂಡಿದೆ. ಸ್ಟಾರ್‌ಗಳ ಚಿತ್ರವಾಗಿರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ಕುತೂಹಲ ಹೆಚ್ಚಿರುತ್ತದೆ. ಜತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳಿರುವುದಿಂದ ಆರಂಭಿಕ ದಿನಗಲಲ್ಲಿ ಥಿಯೇಟರ್‌ಗಳಿಗೆ ಜನ ಪ್ರವಾಹವೇ ಹರಿದು ಬರುತ್ತಿದೆ. ಇದರಿಂದ ಸಹಜವಾಗಿ ಇತರ ಚಿತ್ರಗಳಿಗೆ ಕಡಿಮೆ ವೀಕ್ಷಕರಿರುತ್ತಾರೆ. ಹೀಗಾಗಿ ಸಾಮಾನ್ಯವಾಗಿ ದೊಡ್ಡ ಚಿತ್ರಗಳು ಬಿಡುಗಡೆಯಾಗುವಾಗ ಸಣ್ಣ ಸಿನಿಮಾಗಳನ್ನು ಬಿಡುಗಡೆ ಮಾಡುವುದಿಲ್ಲ. ಆದರೆ ಅಚ್ಚರಿ ಎಂದರೆ ಈ ಸವಾಲನ್ನು ʼಸು ಫ್ರಮ್ ಸೋʼ ಪ್ರಬಲವಾಗಿಯೇ ಎದುರಿಸಿದೆ. ದೊಡ್ಡ ಚಿತ್ರಗಳ ಬಿರುಗಾಳಿಯನ್ನು ತಡೆದು ದೃಢವಾಗಿ ನಿಂತಿದೆ. ರಿಲೀಸ್ ಆಗಿ 22 ದಿನ ದಿನ ಕಳೆದಿದ್ದು, ಕಲೆಕ್ಷನ್ ಕೋಟಿ ರೂ.ಯಿಂದ ಕೆಳಗೆ ಇಳಿದೇ ಇಲ್ಲ.
ಈ ಸುದ್ದಿಯನ್ನೂ ಓದಿ: Su From So Movie: ಸ್ಯಾಂಡಲ್‌ವುಡ್‌ನಲ್ಲಿ ʼಸು ಫ್ರಮ್ ಸೋʼ ಮ್ಯಾಜಿಕ್; ಗೆಲುವಿಗೆ ಕಾರಣವೇನು?
22ನೇ ದಿನ ಗಳಿಕೆ ಎಷ್ಟು?
ಆರಂಭದಲ್ಲಿ ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿದ್ದ ʼಸು ಫ್ರಮ್ ಸೋʼ ಇದೀಗ ತೆಲುಗು ಮತ್ತು ಮಲಯಾಳಂನಲ್ಲೂ ಪ್ರದರ್ಶನಗೊಳ್ಳುತ್ತಿದೆ. ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಮೂಲವೊಂದರ ಪ್ರಕಾರ 22ನೇ ದಿನ ಜೆ.ಪಿ. ತುಮಿನಾಡ್ ನಿರ್ದೇಶನದ ʼಸುಲೋಚನಾ ಫ್ರಮ್ ಸೋಮೇಶ್ವರʼ ಅರ್ಥಾತ್ ʼಸು ಫ್ರಮ್ ಸೋʼ ಬರೋಬ್ಬರಿ 2.55 ಕೋಟಿ ರೂ. ಕಲೆಕ್ಷನ್ ಮಾಡಿದೆ. ಕೇವಲ ಕನ್ನಡದಿಂದಲೇ 2.44 ಕೋಟಿ ರೂಪಾಯಿ ಗಳಿಸಿದ್ದರೆ, ಮಲಯಾಳಂನಿಂದ 14 ಲಕ್ಷ ರೂ., ತೆಲುಗಿನಿಂದ 1 ಲಕ್ಷ ರೂ. ಹರಿದು ಬಂದಿದೆ. ಆ ಮೂಲಕ ಒಟ್ಟು 73.10 ಕೋಟಿ ರೂ. ಳಿಸಿದೆ ಎಂದು ವರದಿಯೊಂದು ತಿಳಿಸಿದೆ.
ವಿಶೇಷ ಎಂದರೆ ಬಿಡುಗಡೆಯಾದ ದಿನ ಹೊರತು ಪಡಿಸಿದರೆ ಉಳಿದ 21 ದಿನವೂ ಕೋಟಿ ರೂ. ಲೆಕ್ಕದಲ್ಲೇ ಈ ಚಿತ್ರ ಬಾಚಿಕೊಂಡಿದೆ. ಸ್ಟಾರ್ ನಟರಿಲ್ಲದ ಹಿನ್ನೆಲೆಯಲ್ಲಿ ಮೊದಲ ದಿನ 78 ಲಕ್ಷ ರೂ. ಕಲೆಕ್ಷನ್ ಆಗಿತ್ತು. ಚಿತ್ರ ವೀಕ್ಷಿಸಿದವರೆಲ್ಲ ಪಾಸಿಟಿವ್ ಆಗಿ ಪ್ರತಿಕ್ರಿಯಿಸಿದ್ದರಿಂದ ಮೌತ್ ಪಬ್ಲಿಸಿಟಿ ಸಿಕ್ಕಿ 2ನೇ ದಿನದಿಂದ ಥಿಯೇಟರ್‌ಗಳಿಗೆ ಜನ ನುಗ್ಗತೊಡಗಿದರು.
ಗೆದ್ದಿದ್ದು ಹೇಗೆ?
ಕರಾವಳಿಯ ಮರ್ಲೂರು ಎನ್ನುವ ಕಾಲ್ಪನಿಕ ಊರಿನಲ್ಲಿ ನಡೆಯುವ ಕಥೆಯೇ ʼಸು ಫ್ರಮ್ ಸೋʼ. ಯಾವುದೇ ಗಿಮಿಕ್ ಇಲ್ಲದೆ, ಕೃತಕತೆ ಇಲ್ಲದೆ ಸಾಮಾನ್ಯವಾಗಿ ಊರೊಂದರಲ್ಲಿ ನಡೆಯುವ ಕಥೆಯನ್ನೇ ಸರಳವಾಗಿ ಜೆ.ಪಿ. ತುಮಿನಾಡ್ ತೆರೆಮೆಲೆ ತಂದಿದ್ದು ಪ್ರೇಕ್ಷಕರಿಗೆ ಇಷ್ಟವಾಗಿದೆ. ನಮ್ಮ ನಡುವಲ್ಲೇ ನಡೆಯುವ ಕಥೆ ಎನ್ನುವ ಆಪ್ತ ಭಾವನೆಯೇ ಈ ಸಿನಿಮಾದ ಪ್ರಬಲ ಶಕ್ತಿ. ಜೆ.ಪಿ. ತುಮಿನಾಡ್ ನಿರ್ದೇಶಿಸುವ ಜತೆಗೆ ನಾಯಕನಾಗಿ ನಟಿಸಿದ್ದಾರೆ. ಅವರೊಂದಿಗೆ ರಾಜ್ ಬಿ. ಶೆಟ್ಟಿ, ಪ್ರಕಾಶ್ ತುಮಿನಾಡ್, ಶನೀಲ್ ಗೌತಮ್, ದೀಪಕ್ ರೈ ಪಾಣಾಜೆ, ಮೈಮ್ ರಾಮದಾಸ್, ಸಂಧ್ಯಾ ಅರೆಕರೆ ಸೇರಿದಂತೆ ಬಹುತೇಕ ಕರಾವಳಿ ಕಲಾವಿದರೇ ಬಣ್ಣ ಹಚ್ಚಿದ್ದಾರೆ. ಯಾವುದೇ ಅಬ್ಬರವಿಲ್ಲದೆ, ಕಡಿಮೆ ಬಜೆಟ್‌ನಲ್ಲಿ ಚಿತ್ರ ತಯಾರಾದರೂ ಗಟ್ಟಿ ಕಥೆ, ಬಿಗಿಯಾದ ಚಿತ್ರಕಥೆಯಿಂದ ಗಮನ ಸೆಳೆಯಬಹುದು ಎನ್ನುವುದನ್ನು ಇದು ಸಾಬೀತುಪಡಿಸಿದೆ.