26/11 hero Arrest: ಗಾಂಜಾದೊಂದಿಗೆ ಸಿಕ್ಕಿಬಿದ್ದ 26/11ರ ಹೀರೋ, ಮಾಜಿ ಎನ್‌ಎಸ್‌ಜಿ ಕಮಾಂಡೋ
ಮುಂಬೈ ತಾಜ್ ಹೊಟೇಲ್ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ಯಾರೂ ಮರೆಯಲು ಸಾಧ್ಯವಿಲ್ಲ. ಈ ದಾಳಿಯ ವೇಳೆ ಸಿಲುಕಿದ್ದ ಜನ ಸಾಮಾನ್ಯರನ್ನು ರಕ್ಷಿಸಿ ಕೆಲವರು ಹೀರೋ ಎಂದೆನಿಸಿಕೊಂಡರು. ಅಂತವರಲ್ಲಿ ಒಬ್ಬರು ಬಜರಂಗ್ ಸಿಂಗ್. ಆದರೆ ಇವರು ಈಗ, ರಾಜಸ್ಥಾನದಲ್ಲಿ 200 ಕೆಜಿ ಗಾಂಜಾದೊಂದಿಗೆ ಸಿಕ್ಕಿಬಿದ್ದಿದ್ದು, ಇದು ಮಾದಕ ಜಗತ್ತಿನ ಹೊಸ ಮುಖವನ್ನು ಬಹಿರಂಗಪಡಿಸಿದೆ.

-

ಜೈಪುರ: ಮುಂಬೈಯ (Mumbai) ತಾಜ್ ಹೊಟೇಲ್ (Taj Hotel) ಮೇಲೆ ನಡೆದ 26/11 ದಾಳಿಯಲ್ಲಿ (26/11 attack) ಭಯೋತ್ಪಾದಕರ (Terror Attack) ವಿರುದ್ಧ ಹೋರಾಡಿ ಹೀರೋ ಎಂದೆನಿಸಿಕೊಂಡ ಮಾಜಿ ಎನ್‌ಎಸ್‌ಜಿ ಕಮಾಂಡೋ ಬಜರಂಗ್ ಸಿಂಗ್ (Ex-NSG commando) ಅವರನ್ನು 200 ಕೆಜಿ ಗಾಂಜಾದೊಂದಿಗೆ ಬುಧವಾರ ರಾತ್ರಿ ರಾಜಸ್ಥಾನ ಭಯೋತ್ಪಾದನಾ ನಿಗ್ರಹ ದಳ (Rajasthan Anti-Terrorism Squad) ಮತ್ತು ಮಾದಕವಸ್ತು ನಿಗ್ರಹ ಕಾರ್ಯಪಡೆ (Anti-Narcotics Task Force) ಬಂಧಿಸಿದೆ. ಸಿಂಗ್ ಅವರನ್ನು ಗಾಂಜಾ ಕಳ್ಳಸಾಗಣೆ ಜಾಲದ ಮುಖ್ಯ ನಾಯಕ ಎಂದು ಘೋಷಿಸಲಾಗಿದೆ.
ಬಜರಂಗ್ ಸಿಂಗ್ ಬಂಧನಕ್ಕೆ 25,000 ರೂ. ಬಹುಮಾನ ಘೋಷಿಸಲಾಗಿತ್ತು. ಒಡಿಶಾ ಮತ್ತು ತೆಲಂಗಾಣದಿಂದ ಗಾಂಜಾವನ್ನು ರಾಜಸ್ಥಾನದಿಂದ ಹೊರಗೆ ಸಾಗಿಸುತ್ತಿದ್ದ ಮಾಹಿತಿ ಮೇರೆಗೆ ಬುಧವಾರ ರಾತ್ರಿ ಕಾರ್ಯಾಚರಣೆ ನಡೆಸಿದ ರಾಜಸ್ಥಾನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ಮಾದಕವಸ್ತು ನಿಗ್ರಹ ಕಾರ್ಯಪಡೆ (ಎಎನ್‌ಟಿಎಫ್) ಚುರುವಿನಲ್ಲಿ ಸುಮಾರು 200 ಕೆಜಿ ನಿಷೇಧಿತ ವಸ್ತುವಿನೊಂದಿಗೆ ಅವರನ್ನು ಬಂಧಿಸಿದೆ.
ಬಜರಂಗ್ ಸಿಂಗ್ ಅವರ ಬಂಧನಕ್ಕೆ ರಾಜಸ್ಥಾನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ಮಾದಕವಸ್ತು ನಿಗ್ರಹ ಕಾರ್ಯಪಡೆ (ಎಎನ್‌ಟಿಎಫ್) 'ಆಪರೇಷನ್ ಗಂಜನೆ' ಕಾರ್ಯಾಚರಣೆಯನ್ನು ಆರಂಭಿಸಿತ್ತು. ಸುಮಾರು ಎರಡು ತಿಂಗಳುಗಳ ಕಾಲ ನಡೆದ ಈ ಕಾರ್ಯಾಚರಣೆ ವೇಳೆಯಲ್ಲಿ ತಾಂತ್ರಿಕ ಕಣ್ಗಾವಲು ಮತ್ತು ಮಾಹಿತಿದಾರರನ್ನು ಬಳಸಿಕೊಂಡು ವಿವಿಧ ಅಡಗುತಾಣಗಳ ಮೂಲಕ ಬಜರಂಗ್ ಸಾಗುತ್ತಿದ್ದ ದಾರಿಯನ್ನು ಪತ್ತೆ ಹಚ್ಚಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಿರಿಯ ಪೊಲೀಸ್ ಅಧಿಕಾರಿ ವಿಕಾಸ್ ಕುಮಾರ್, ಬಜರಂಗ್‌ನ ಬಂಧನದಿಂದ ರಾಜಸ್ಥಾನದಲ್ಲಿ ಭಯೋತ್ಪಾದನೆ ಮತ್ತು ಮಾದಕ ವಸ್ತುಗಳ ಸಂಬಂಧಿತ ಕಾರ್ಯಾಚರಣೆಗಳನ್ನು ಬಹುತೇಕ ತಟಸ್ಥಗೊಳಿಸುವಲ್ಲಿ ರಾಜಸ್ಥಾನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ಮಾದಕವಸ್ತು ನಿಗ್ರಹ ಕಾರ್ಯಪಡೆ (ಎಎನ್‌ಟಿಎಫ್) ಯಶಸ್ವಿಯಾಗಿದೆ. ರಾಷ್ಟ್ರೀಯ ನಾಯಕನಾಗಿದ್ದ ಬಜರಂಗ್ ಅವರ ಈ ಕೃತ್ಯದ ಹಿಂದೆ ದುರಾಸೆಯಿತ್ತು ಎನ್ನಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸಿಕಾರ್ ಜಿಲ್ಲೆಯ ಕರಂಗಾ ಗ್ರಾಮದ ಬಜರಂಗ್ ಅವರು ಗಡಿ ಭದ್ರತಾ ಪಡೆಯನ್ನು ಸೇರುವ ಸಲುವಾಗಿ ಅಧ್ಯಯನವನ್ನು ಬಿಟ್ಟಿದ್ದರು. ಕುಸ್ತಿ ಮತ್ತು ಸೇವಾ ಕಾರ್ಯಾಚರಣೆಯ ಕಾರಣದಿಂದ ಎನ್ ಎಸ್ ಜಿ ಗೆ ಆಯ್ಕೆಯಾದ ಅವರು 2008ರ ಮುಂಬೈ ದಾಳಿ ಸೇರಿದಂತೆ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳಲ್ಲಿ ಸುಮಾರು ಏಳು ವರ್ಷ ದುಡಿದಿದ್ದರು. 2021ರಲ್ಲಿ ನಿವೃತ್ತರಾದ ಬಳಿಕ ರಾಜಕೀಯಕ್ಕೆ ಸೇರಿ ವಿಫಲರಾಗಿದ್ದು, ಬಳಿಕ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.
ಇದನ್ನೂ ಓದಿ: POK protest: ಪಿಒಕೆಯಲ್ಲಿ ಪ್ರತಿಭಟನಾಕಾರರ ವಿರುದ್ಧದ ಕ್ರಮವನ್ನು ಮಾಟಗಾತಿಯ ಬೇಟೆಗೆ ಹೋಲಿಸಿದ ಎಎಸಿ ನಾಯಕ ಶೌಕತ್ ನವಾಜ್ ಮಿರ್
ಅಪಾರ ಪ್ರಮಾಣದ ಗಾಂಜಾ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದ ಬಜರಂಗ್ ಬಂಧನದಿಂದ ತಪ್ಪಿಸಿಕೊಳ್ಳಲು ಮೊಬೈಲ್ ಫೋನ್‌ಗಳನ್ನು ಅತ್ಯಂತ ವಿರಳವಾಗಿ ಬಳಸುತ್ತಿದ್ದರು. ಬಜರಂಗ್ ತನ್ನ ಕಾನೂನುಬಾಹಿರ ಚಟುವಟಿಕೆಗಳಿಗಾಗಿ ಬಹು ರಾಜ್ಯಗಳಲ್ಲಿನ ಕ್ರಿಮಿನಲ್ ತಂಡಗಳೊಂದಿಗೆ ಸಂಬಂಧ ಬೆಳೆಸಿಕೊಂಡಿದ್ದನು ಎನ್ನಲಾಗಿದೆ.