ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Gotmar Fair: ಮಧ್ಯ ಪ್ರದೇಶದಲ್ಲಿ 2 ಗ್ರಾಮಗಳ ಜನರ ನಡುವೆ ಪರಸ್ಪರ ಕಲ್ಲೆಸೆಯುವ ಅಪಾಯಕಾರಿ ಗೋಟ್‌ಮಾರ್‌ ಜಾತ್ರೆ; 934 ಮಂದಿಗೆ ಗಾಯ

4 ಶತಮಾನಗಳ ಇತಿಹಾಸ ಹೊಂದಿರುವ ಮಧ್ಯ ಪ್ರದೇಶದ ಛಿಂಡ್ವಾರಾ ಜಿಲ್ಲೆಯಲ್ಲಿ ನಡೆಯುವ ಕಲ್ಲೆಸೆಯುವ ಗೋಟ್‌ಮಾರ್‌ ಜಾತ್ರೆಯಲ್ಲಿ ಸುಮಾರು 934 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಗಸ್ಟ್‌ 23ರಂದು ನಡೆದ ಈ ವಿಶಿಷ್ಟ ಜಾತ್ರೆಯ ವೇಳೆ ಎರಡೂ ಗ್ರಾಮಸ್ಥರು ಮುಖಾಮುಖಿಯಾಗಿ ಪರಸ್ಪರ ಕಲ್ಲುಗಳನ್ನು ಎಸೆಯುವ ಧಾರ್ಮಿಕ ಯುದ್ಧದಲ್ಲಿ ಭಾಗವಹಿಸಿದವು.

ಅಪಾಯಕಾರಿ ಗೋಟ್‌ಮಾರ್‌ ಜಾತ್ರೆ; 934  ಮಂದಿಗೆ ಗಾಯ

Ramesh B Ramesh B Aug 23, 2025 9:45 PM

ಭೋಪಾಲ್:‌ ಶತಮಾನಗಳ ಇತಿಹಾಸ ಹೊಂದಿರುವ ಮಧ್ಯ ಪ್ರದೇಶದ ಛಿಂಡ್ವಾರಾ ಜಿಲ್ಲೆಯಲ್ಲಿ ನಡೆಯುವ ಕಲ್ಲೆಸೆಯುವ ಗೋಟ್‌ಮಾರ್‌ ಜಾತ್ರೆಯಲ್ಲಿ (Gotmar Fair) ಸುಮಾರು 934 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 400 ವರ್ಷಗಳಿಂದಲೂ ಚಾಲ್ತಿಯಲ್ಲಿರುವ ಈ ಹಬ್ಬವನ್ನು ಪಂದುರ್ನಾ ಮತ್ತು ಸಾವರ್‌ಗಾಂವ್‌ ಗ್ರಾಮಸ್ಥರು ಪ್ರತಿವರ್ಷ ಆಚರಿಸುತ್ತಾರೆ. ಆಗಸ್ಟ್‌ 23ರಂದು ನಡೆದ ಈ ವಿಶಿಷ್ಟ ಜಾತ್ರೆಯ ವೇಳೆ ಎರಡೂ ಗ್ರಾಮಸ್ಥರು ಮುಖಾಮುಖಿಯಾಗಿ ಪರಸ್ಪರ ಕಲ್ಲುಗಳನ್ನು ಎಸೆಯುವ ಧಾರ್ಮಿಕ ಯುದ್ಧದಲ್ಲಿ ಭಾಗವಹಿಸಿದವು. ಪ್ರತಿ ವರ್ಷ ನಿರ್ದಿಷ್ಟ ದಿನದಂದು ಈ 2 ಗ್ರಾಮಗಳ ಜನರು ಪರಸ್ಪರ ಕಲ್ಲುಗಳನ್ನು ಎಸೆಯುವುದು ಗೋಟ್‌ಮಾರ್‌ ಜಾತ್ರೆಯ ಸಂಪ್ರದಾಯ.

ಜಾತ್ರೆಯ ಹಿನ್ನೆಲೆಯಲ್ಲಿ ಸ್ಥಳೀಯಾಡಳಿತವು 58 ವೈದ್ಯರು ಮತ್ತು 200 ವೈದ್ಯಕೀಯ ಸಿಬ್ಬಂದಿಯನ್ನು ಒಳಗೊಂಡ 6 ತಾತ್ಕಾಲಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿತು. ಸ್ಥಳದಲ್ಲಿ 600 ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಜತೆಗೆ ಜನಸಂದಣಿಯನ್ನು ನಿಯಂತ್ರಿಸಲು ಸೆಕ್ಷನ್ 144 ಅನ್ನು ಜಾರಿಗೊಳಿಸಲಾಗಿತ್ತು.



ಈ ಸುದ್ದಿಯನ್ನೂ ಓದಿ: Mumbai Flood: ಉಕ್ಕಿ ಹರಿಯುತ್ತಿದ್ದ ನದಿಯಲ್ಲಿ ಕೊಚ್ಚಿ ಹೋದ ವ್ಯಕ್ತಿ; ದೀರ್ಘ ಪ್ರಯತ್ನದ ನಂತರ ರಕ್ಷಣೆ, ಇಲ್ಲಿದೆ ವೈರಲ್ ವಿಡಿಯೊ

ಏನಿದು ಆಚರಣೆ?

2 ಗ್ರಾಮಗಳ ಮಧ್ಯೆ ಹರಿಯುವ ಜಾಮ್ ನದಿಯಲ್ಲಿ ಚಂಡಿ ಮಾತೆಗೆ ಪೂಜೆ ಸಲ್ಲಿಸುವುದರೊಂದಿಗೆ ಈ ಜಾತ್ರೆ ಪ್ರಾರಂಭವಾಗುತ್ತದೆ. ಬಳಿಕ ಸಂಪ್ರದಾಯದಂತೆ ಸಾವರ್‌ಗಾಂವ್‌ನ ಜನರು ಕಾಡಿನಿಂದ ಕಡಿದು ತಂದ ಪಲಾಶ್ ಮರವನ್ನು ಹೊತ್ತುಕೊಂಡು ನದಿಯ ಮಧ್ಯದಲ್ಲಿ ನೆಟ್ಟು ಅದನ್ನು ತಮ್ಮ ಪವಿತ್ರ ಧ್ವಜವೆಂದು ಭಾವಿಸುತ್ತಾರೆ. ಸಾವರ್‌ಗಾಂವ್ ಜನರು ಆ ಮರವನ್ನು ತಮ್ಮ ಮಗಳಂತೆ ರಕ್ಷಿಸುತ್ತಾರೆ. ಇತ್ತ ಹುಡುಗನ ಕಡೆಯವರನ್ನು ಪ್ರತಿನಿಧಿಸುವ ಪಂದುರ್ನಾ ಗ್ರಾಮಸ್ಥರು ಅದನ್ನು ವಶಪಡಿಸಿಕೊಳ್ಳಲು ಕಲ್ಲುಗಳ ದಾಳಿ ನಡೆಸುತ್ತಾರೆ. ಧ್ವಜ (ಮರ) ಮುರಿಯುವವರೆಗೂ ಘರ್ಷಣೆ ಮುಂದುವರಿಯುತ್ತದೆ. ನಂತರ ಎರಡೂ ಕಡೆಯವರು ಸೇರಿ ಪೂಜೆ ನಡೆಸುತ್ತಾರೆ.

ಹಿನ್ನೆಲೆ ಏನು?

ಗೋಟ್‌ಮಾರ್‌ ಜಾತ್ರೆಯ ಹಿನ್ನೆಲೆಯನ್ನು ಹುಡುಕತ್ತ ಹೋದರೆ ಸ್ಥಳೀಯರು ಇದಕ್ಕೆ 400 ವರ್ಷಗಳ ಇತಿಹಾಸವಿದೆ ಎನ್ನುತ್ತಾರೆ. ಪಂದುರ್ನಾದ ಯುವಕನೊಬ್ಬ ಸಾವರ್‌ಗಾಂವ್‌ನ ಹುಡುಗಿಯ ಜತೆ ಓಡಿ ಹೋಗಲು ಪ್ರಯತ್ನಿಸಿದನಂತೆ. ಈ ಜೋಡಿ ಜಾಮ್ ನದಿಯ ಬಳಿ ತಲುಪಿದಾಗ ಗ್ರಾಮಸ್ಥರಿಗೆ ಈ ವಿಷಯ ತಿಳಿಯಿತು. ಅವರನ್ನು ತಡೆಯಲು ಕಲ್ಲುಗಳನ್ನು ಎಸೆಯತೊಡಗಿದರು. ಎರಡೂ ಕಡೆಯವರ ನಡುವೆ ದಾಳಿ ತೀವ್ರಗೊಂಡಿತು. ಕೊನೆಗೆ ಪ್ರೇಮಿಗಳು ಮೃತಪಟ್ಟರು. ಅಂದಿನಿಂದ ಈ ಆಚರಣೆ ಆರಂಭವಾಯಿತು. ಪ್ರತಿ ವರ್ಷವೂ ಇದು ಪುನರಾವರ್ತನೆಯಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.

ಈ ಸಂಪ್ರದಾಯದಿಂದ ಹಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. 1955ರಿಂದ ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ ಎಂದು ಅಂದಾಜಿಸಲಾಗಿದೆ. ಇನ್ನು ಅನೇಕರು ಕೈಕಾಲು ಮತ್ತು ದೃಷ್ಟಿ ಕಳೆದುಕೊಂಡಿದ್ದಾರೆ. ಅದಾಗ್ಯೂ ಈ ಜಾತ್ರೆ ಪ್ರತಿ ವರ್ಷ ನಡೆಯುತ್ತದೆ.

ಅಧಿಕಾರಿಗಳು ಹೇಳೋದೇನು?

ʼʼಹಿಂದಿನಿಂದಲೂ ಗೋಟ್‌ಮಾರ್‌ ಆಚರಣೆ ನಡೆದುಕೊಂಡು ಬಂದಿದೆ. ಜನರ ನಂಬಿಕೆಯ ಪ್ರತಿರೂಪವಾಗಿರುವ ಈ ಹಬ್ಬ ನಿಷೇಧಿಸಲು ಸಾಧ್ಯವಿಲ್ಲ. ಆದರೆ ಸ್ಥಳದಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಸೂಕ್ತ ವ್ಯವಸ್ಥೆ ಮಾಡಲಾಗುತ್ತದೆ. ಡ್ರೋನ್‌ ಮತ್ತು ಸಿಸಿಟಿವಿ ಅಳವಡಿಸಿ ನಿಗಾ ವಹಿಸಲಾಗುತ್ತದೆ. ಜತೆಗೆ ಜಾತ್ರೆಯ ವೇಳೆ ಮದ್ಯ ಸೇವನೆಯನ್ನು ನಿಷೇಧಿಸಲಾಗುತ್ತದೆʼʼ ಎಂದು ಅಧಿಕಾರಿಗಳು ತಿಳಿಸುತ್ತಾರೆ.