ತಿರುವನಂತಪುರಂ: ಸಾಕು ನಾಯಿಗಳಿಂದಾಗಿ ಅಕ್ಕಪಕ್ಕದ ಮನೆಯವರಲ್ಲಿ ಕೆಲವೊಮ್ಮೆ ಜಗಳ ಉಂಟಾಗುವುದು ಸಹಜ. ಆದರೆ ಇದು ಕೆಲವೊಮ್ಮೆ ಅತಿರೇಕಕ್ಕೆ ಹೋಗಿ ಹೊಡೆದಾಟವಾಗುವುದೂ ಇದೆ. ಇಂತಹ ಎಷ್ಟೋ ಪ್ರಕರಣಗಳು ಪೊಲೀಸ್ ಠಾಣೆಯ ಮೆಟ್ಟಿಲೇರಿವೆ. ಇದೇ ರೀತಿಯ ಘಟನೆಯೊಂದು ಈಗ ಕೇರಳದಲ್ಲಿ ನಡೆದಿದೆ. ಸಾಕು ನಾಯಿಯಿಂದಾಗಿ ಉಂಟಾದ ನೆರೆಹೊರೆಯವರ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಕೇರಳದ ತ್ರಿಶೂರ್ (Thrissur)ನಲ್ಲಿ ನಡೆದಿದೆ. ಪಕ್ಕದ ಮನೆಯ ನಾಯಿ ತನ್ನ ಮನೆಯ ಅಂಗಳಕ್ಕೆ ಬಂತೆಂದು ಜಗಳ ತೆಗೆದು ನಾಯಿಯ ಮಾಲೀಕನನ್ನು ವ್ಯಕ್ತಿಯೊಬ್ಬ ಕೊಲೆ (Murder case) ಮಾಡಿದ್ದಾನೆ. 42 ವರ್ಷದ ಶಿಜೋಳ ಎಂಬವರ ಕೊಲೆಯಾಗಿದ್ದು,ಈ ಕುರಿತು ತ್ರಿಶೂರ್ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಶಿಜೋಳ ಅವರ ನಾಯಿ ಪಕ್ಕದ ಮನೆಯವರ ಅಂಗಳಕ್ಕೆ ಹೋಗಿದ್ದಕ್ಕೆ ಇಬ್ಬರ ನಡುವೆ ಜಗಳವಾಗಿದೆ. ಈ ಜಗಳದಲ್ಲಿ ಪಕ್ಕದ ಮನೆಯಾತ ಶಿಜೋಳ ಅವರನ್ನು ಚಾಕುವಿನಿಂದ ಇರಿದು ಕೊಂದಿರುವುದಾಗಿ ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಇದನ್ನೂ ಓದಿ: Viral Video: ಕ್ರೂರಿಗಳ ಚಿತ್ರಹಿಂಸೆಗೆ ನರಳಿ ನರಳಿ ಪ್ರಾಣ ಬಿಟ್ಟ ಹೋರಿ- ಆಘಾತಕಾರಿ ವಿಡಿಯೊ ಇಲ್ಲಿದೆ
ಶಿಜೋಳ ಅವರ ನಾಯಿ ಜೋಸೆಫ್ (69) ಎಂಬವರ ಮನೆಯ ಅಂಗಳಕ್ಕೆ ಹೋಗುತ್ತಿತ್ತು. ಇದು ನೆರೆಹೊರೆಯವರಾದ ಶಿಜೋಳ ಮತ್ತು ಜೋಸೆಫ್ ನಡುವೆ ಆಗಾಗ್ಗೆ ಜಗಳಕ್ಕೆ ಕಾರಣವಾಗುತ್ತಿತ್ತು. ಶನಿವಾರ ರಾತ್ರಿ ಶಿಜೋಳ ಅವರ ನಾಯಿ ಜೋಸೆಫ್ ಅವರ ಮನೆಯ ಅಂಗಳಕ್ಕೆ ಹೋಗಿದ್ದಾಗ ಇವರಿಬ್ಬರ ಮಧ್ಯ ಜಗಳವಾಗಿದ್ದು, ಜೋಸೆಫ್ ಸಿಟ್ಟಿನಲ್ಲಿ ಶಿಜೋಳ ಅವರಿಗೆ ಚಾಕುವಿನಿಂದ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಶಿಜೋಳ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಜೋಸೆಫ್‌ನನ್ನು ಬಂಧಿಸಲಾಗಿದ್ದು, ಈ ಕುರಿತು ತ್ರಿಶೂರ್ ಪೊಲೀಸರು ಪ್ರಕರಣ ದಾಖಲಿಸಿ ಪ್ರಕರಣದ ವಿಚಾರಣೆ ನಡೆಸುತ್ತಿದ್ದಾರೆ.