ಹೈದರಾಬಾದ್: ಕರ್ನಾಟಕದ ಕೈಗಾರಿಕೋದ್ಯಮಿಗಳು ರಾಜ್ಯದಲ್ಲಿ ಮೂಲಸೌಕರ್ಯ ಕೆಟ್ಟದಾಗಿದೆ, ವಿದ್ಯುತ್ ಕಡಿತವಿದೆ ಎಂದು ಹೇಳುತ್ತಾರೆ. ಕರ್ನಾಟಕ ಮೊದಲು ಆ ಸಮಸ್ಯೆಗಳನ್ನು ಸರಿಪಡಿಸಬೇಕು ಎಂದು ಹೇಳಿ (Nara Lokesh) ವಿವಾದ ಸೃಷ್ಟಿಸಿದ್ದ ಆಂಧ್ರಪ್ರದೇಶದ ಐಟಿ ಸಚಿವ ಇದೀಗ ಮತ್ತೆ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ. ತೆಲುಗು ದೇಶಂ ಪಕ್ಷದ ನಾಯಕ ಮತ್ತು ಆಂಧ್ರ ಸರ್ಕಾರದ ಸಚಿವರು ಗುರುವಾರ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರದ ವಿರುದ್ಧ "ಆಂಧ್ರ ಆಹಾರವು ಖಾರವಾಗಿದೆ ಮತ್ತು ಅವರ ಕೆಲವು ಹೂಡಿಕೆಗಳು ಸಹ ಖಾರವಾಗಿವೆ" ಎಂದು ಟೀಕಿಸಿದ್ದಾರೆ.
ಆಂಧ್ರದ ಆಹಾರವು ಖಾರವಾಗಿದೆ ಎಂದು ಅವರು ಹೇಳುತ್ತಾರೆ. ನಮ್ಮ ಕೆಲವು ಹೂಡಿಕೆಗಳು ಕೂಡ ಖಾರವಾಗಿವೆ ಎಂದು ತೋರುತ್ತದೆ. ಕೆಲವು ನೆರೆಹೊರೆಯವರು ಈಗಾಗಲೇ ಅದರ ತೀವ್ರತೆಯನ್ನು ಅನುಭವಿಸುತ್ತಿದ್ದಾರೆ" ಎಂದು ಲೋಕೇಶ್ ಎಕ್ಸ್‌ನಲ್ಲಿ ಬರೆದಿದ್ದಾರೆ. ಇಂಟರ್ನೆಟ್ ದೈತ್ಯ ಗೂಗಲ್, ಕರ್ನಾಟಕಕ್ಕಿಂತ ಆಂಧ್ರಪ್ರದೇಶವನ್ನು ಆಯ್ಕೆ ಮಾಡಿಕೊಂಡಿದೆ - ಮುಂದಿನ ಐದು ವರ್ಷಗಳಲ್ಲಿ ಡೇಟಾ ಮತ್ತು AI ಹಬ್‌ನಲ್ಲಿ $15 ಬಿಲಿಯನ್ ಹೂಡಿಕೆ ಮಾಡಲು ಎಂದು ಅವರು ಬರೆದಿದ್ದಾರೆ.
ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಂಪನಿಗಳನ್ನು ಸೆಳೆಯಲು ಅವರು ಅಸಮರ್ಥರಾಗಿದ್ದರೆ ನಾನು ಏನು ಮಾಡಲು ಸಾಧ್ಯವಿಲ್ಲ. ಗೂಗಲ್ ಜೊತೆ ಸಹಿ ಹಾಕುವ ಒಂದು ದಿನದ ಮೊದಲು ಹಲವು ರಾಜ್ಯಗಳು ತಮ್ಮ ರಾಜ್ಯಕ್ಕೆ ಬರುವಂತೆ ಪ್ರಯತ್ನ ಮಾಡಿದ್ದವು. ನಾವು ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುತ್ತೇವೆ. ವಿಶಾಖಪಟ್ಟಣದಲ್ಲಿ ಗೂಗಲ್ ಕೇಂದ್ರ ತೆರೆಯಲು ನಾವು ಹಲವಾರು ಸಭೆಗಳನ್ನು ನಡೆಸಿದ್ದೇವೆ. ಏನೇನು ಸಮಸ್ಯೆಯಾಗಿತ್ತು ಅವುಗಳನ್ನು ನಾವು ಪರಿಹರಿಸಿಕೊಟ್ಟಿದ್ದೇವೆ ಎಂದರು.
ಅದಾಗ್ಯೂ, ಮೂಲಸೌಕರ್ಯ, ಮಾನವ ಸಂಪನ್ಮೂಲ, ನವೋದ್ಯಮ, ಅನ್ವೇಷಣೆ ವಿಚಾರದಲ್ಲಿ ದೇಶದಲ್ಲಿ ಬೆಂಗಳೂರಿಗೆ ಸರಿಸಮನಾದ ನಗರ ಮತ್ತೊಂದಿಲ್ಲ. ಬೇರೆಯವರು ತಮ್ಮನ್ನು ಮಾರ್ಕೆಟಿಂಗ್ ಮಾಡಿಕೊಳ್ಳಲು ಬೆಂಗಳೂರಿನ ಬಗ್ಗೆ ಮಾತನಾಡುತ್ತಾರೆ ಎಂದು ಆಂಧ್ರ ಐಟಿ ಸಚಿವ ನಾರಾ ಲೋಕೇಶ್ ಅವರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಬೆಂಗಳೂರಿನ ವಿಚಾರವಾಗಿ ಆಂಧ್ರ ಪ್ರದೇಶ ಐಟಿ ಸಚಿವ ನಾರಾ ಲೋಕೇಶ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ನಾರಾ ಲೋಕೇಶ್ ಆಗಲಿ, ಬೇರೆಯವರಾಗಲಿ, ಯಾರ ಹೇಳಿಕೆಗೂ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಬೆಂಗಳೂರಿನಲ್ಲಿ 25 ಲಕ್ಷ ಐಟಿ ವೃತ್ತಿಪರರು, 2 ಲಕ್ಷ ವಿದೇಶಿಗರು ಕೆಲಸ ಮಾಡುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: Vande Bharat Express: ಬೆಂಗಳೂರು-ಬೆಳಗಾವಿ ನೂತನ ʼವಂದೇ ಭಾರತ್ʼ ರೈಲು; ಆ.10ಕ್ಕೆ ಪ್ರಧಾನಿ ಮೋದಿ ಹಸಿರು ನಿಶಾನೆ
ದೇಶದ ಪ್ರಗತಿಯಲ್ಲಿ ಬೆಂಗಳೂರಿನ ಕೊಡುಗೆ ಅಪಾರವಾಗಿದೆ. ಕೇಂದ್ರ ಸರ್ಕಾರಕ್ಕೆ ಸುಮಾರು 40% ತೆರಿಗೆ ಆದಾಯ ಇಲ್ಲಿಂದಲೇ ಹೋಗುತ್ತಿದೆ. ಅವರು ತಮ್ಮ ಬಗ್ಗೆ ಮಾರ್ಕೆಟಿಂಗ್ ಮಾಡಿಕೊಳ್ಳಲು ಮಾತನಾಡುತ್ತಾರೆ. ಅವರು ಏನಾದರೂ ಮಾಡಿಕೊಳ್ಳಲಿ. ಅವರಿಗೆ ಕೇಂದ್ರ ಸರ್ಕಾರವೂ ಸಹಾಯ ಮಾಡಲಿ. ಆದರೆ ಬೆಂಗಳೂರಿಗೆ ಸರಿಸಮನಾಗಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.