ಅಹಮದಾಬಾದ್: ಗುಜರಾತ್‌ನ (Gujarat) ಅಹಮದಾಬಾದ್‌ನಲ್ಲಿ (Ahmedabad) ಜೂನ್ 12 ರಂದು ಏರ್ ಇಂಡಿಯಾದ (Air India) ಬೋಯಿಂಗ್ 787-8 ವಿಮಾನ (AI171) ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾಗಿ 241 ಪ್ರಯಾಣಿಕರು ಸೇರಿ 260 ಜನರು ಸಾವನ್ನಪ್ಪಿದ್ದರು. ಈ ವಿಮಾನದ ಪೈಲಟ್ ಆಗಿದ್ದ ಕ್ಯಾಪ್ಟನ್ ಸುಮೀತ್ ಸಭರ್ವಾಲ್ (Sumeet Sabharwal) ಅವರ ತಂದೆ ಪುಷ್ಕರಾಜ್ ಸಭರ್ವಾಲ್ (91) ಕೇಂದ್ರ ಸರ್ಕಾರದಿಂದ ಪಾರದರ್ಶಕ ತನಿಖೆಗೆ ಒತ್ತಾಯಿಸಿದ್ದಾರೆ. ಏರ್‌ಕ್ರಾಫ್ಟ್ ಆಕ್ಸಿಡೆಂಟ್ ಇನ್ವೆಸ್ಟಿಗೇಷನ್ ಬ್ಯೂರೋ (AAIB)ನ ಆರಂಭಿಕ ವರದಿಯು ಸುಮೀತ್‌ರ ಖ್ಯಾತಿಗೆ ಕಳಂಕ ತಂದಿದೆ ಎಂದು ಆರೋಪಿಸಿದ್ದಾರೆ.
ಆಗಸ್ಟ್ 29ರಂದು ವಿಮಾನಯಾನ ಕಾರ್ಯದರ್ಶಿ ಮತ್ತು AAIBಗೆ ಬರೆದ ಪತ್ರದಲ್ಲಿ, ಪುಷ್ಕರಾಜ್, “ತನಿಖೆಯ ಕೆಲವು ಮಾಹಿತಿಗಳು ಸೋರಿಕೆಯಾಗಿ, ಸುಮೀತ್ ಮಾನಸಿಕ ಒತ್ತಡದಿಂದ ಆತ್ಮಹತ್ಯೆಗೆ ಯೋಚಿಸಿದ್ದ ಎಂಬ ಗಾಳಿ ಸುದ್ದಿಗಳು ಹರಡಿವೆ. ಇದು ನನ್ನ ಆರೋಗ್ಯ ಮತ್ತು ಕುಟುಂಬದ ಮಾನಕ್ಕೆ ಧಕ್ಕೆ ತಂದಿದೆ” ಎಂದಿದ್ದಾರೆ. ಇವು ಭಾರತದ ಸಂವಿಧಾನದ 21ನೇ ವಿಧಿಯಡಿಯ ಘನತೆಯ ಹಕ್ಕಿಗೆ ಭಂಗ ತಂದಿವೆ ಎಂದಿದ್ದಾರೆ. 2017ರ ಏರ್‌ಕ್ರಾಫ್ಟ್ ರೂಲ್ಸ್ ಕಲಂ 12ರಡಿ ಔಪಚಾರಿಕ ತನಿಖೆಗೆ ಆಗ್ರಹಿಸಿದ್ದಾರೆ.
ಸುಮೀತ್‌ಗೆ 15,638 ಗಂಟೆಗಳ ವಿಮಾನ ಚಾಲನೆಯ ಅನುಭವವಿದ್ದು, ಬೋಯಿಂಗ್ 787-8 ವಿಮಾನದಲ್ಲಿಯೇ 8,596 ಗಂಟೆಗಳ ಅನುಭವವಿದೆ. DGCAಯಿಂದ ಪೈಲಟ್ ತರಬೇತುದಾರರಾಗಿ ಪರವಾನಗಿ ಪಡೆದಿದ್ದರು. 25 ವರ್ಷಗಳ ಕಾಲ ಯಾವುದೇ ಅಪಘಾತಕ್ಕೆ ಕಾರಣರಾಗಿರಲಿಲ್ಲ. “ಸುಮೀತ್ 15 ವರ್ಷಗಳ ಹಿಂದೆ ವಿಚ್ಛೇದಿತರಾಗಿದ್ದರು, ತಾಯಿಯ ಮರಣ 3 ವರ್ಷಗಳ ಹಿಂದೆ ಆಗಿತ್ತು. ಇದಾದ ಮೇಲೂ 100ಕ್ಕೂ ಹೆಚ್ಚು ವಿಮಾನಗಳನ್ನು ಸುರಕ್ಷಿತವಾಗಿ ಚಾಲನೆ ಮಾಡಿದ್ದರು” ಎಂದು ಪುಷ್ಕರಾಜ್ ಸ್ಪಷ್ಟಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ಪೊಲೀಸರ ಮೇಲೆ ವಕೀಲರ ದಾಳಿ; ನ್ಯಾಯಾಲಯವಾಯ್ತು ರಣರಂಗ, ವಿಡಿಯೋ ವೈರಲ್
AAIBನ ಜುಲೈ 12ರ ಆರಂಭಿಕ ವರದಿಯು ದುರಂತದ ಕಾರಣವನ್ನು ಸ್ಪಷ್ಟಪಡಿಸದೆ, ಸುಮೀತ್‌ರ ಮೇಲೆ ಆರೋಪ ಮಾಡಿದೆ ಎಂದು ಪುಷ್ಕರಾಜ್ ದೂರಿದ್ದಾರೆ. ಕಾಕ್‌ಪಿಟ್ ಧ್ವನಿ ರೆಕಾರ್ಡರ್‌ನ ಮಾಹಿತಿಯನ್ನು ಸಾರ್ವಜನಿಕಗೊಳಿಸಿರುವುದು ತನಿಖೆಯ ವಿಶ್ವಾಸಾರ್ಹತೆಗೆ ಕುಂದು ತಂದಿದೆ ಎಂದಿದ್ದಾರೆ. ವಿಮಾನಯಾನ ಸಚಿವಾಲಯವು, “ನಾವು ನ್ಯಾಯಯುತ ಮತ್ತು ಸಮಗ್ರ ತನಿಖೆಗೆ ಬದ್ಧರಾಗಿದ್ದೇವೆ. ತನಿಖಾ ತಂಡಕ್ಕೆ ಪೂರ್ಣ ಸ್ವಾತಂತ್ರ್ಯವಿದೆ,” ಎಂದು ತಿಳಿಸಿದೆ. ಅಂತರರಾಷ್ಟ್ರೀಯ ಮಾನದಂಡಗಳಿಗೆ ತಕ್ಕಂತೆ ಎಲ್ಲ ಸಂಪನ್ಮೂಲ ಒದಗಿಸಲಾಗಿದೆ ಎಂದಿದೆ. ಈ ಘಟನೆಯು ವಿಮಾನ ಸುರಕ್ಷತೆ ಮತ್ತು ತನಿಖೆಯ ಪಾರದರ್ಶಕತೆಯ ಬಗ್ಗೆ ಚರ್ಚೆಗೆ ಎಡೆಮಾಡಿದೆ. ಸುಮೀತ್‌ರ ಕುಟುಂಬದ ಒತ್ತಾಯವು ತನಿಖೆಯ ಜವಾಬ್ದಾರಿಯನ್ನು ಒತ್ತಿಹೇಳಿದೆ.