ಇಂಫಾಲ್: ಪ್ರಧಾನಿ ಮೋದಿ (Narendra Modi) ಅವರು ಸೆಪ್ಟೆಂಬರ್ 13 ರಂದು ಮಣಿಪುರಕ್ಕೆ ತೆರಳಲಿದ್ದಾರೆ. ಇಷ್ಟು ದಿನ ಹೊತ್ತಿ ಉರಿಯುತ್ತಿದ್ದ ಮಣಿಪುರ ಇದೀಗ ಸಹಜ ಸ್ಥಿತಿಗೆ ಮರಳುತ್ತಿದೆ. ಒಂದು ಪ್ರಮುಖ ಬೆಳವಣಿಗೆಯಂತೆ, ಕುಕಿ-ಝೋ ಕೌನ್ಸಿಲ್, ಯಾಣಿಕರು ಮತ್ತು ಅಗತ್ಯ (Manipur Violence) ವಸ್ತುಗಳ ಮುಕ್ತ ಸಂಚಾರಕ್ಕಾಗಿ ರಾಷ್ಟ್ರೀಯ ಹೆದ್ದಾರಿ -02 ಅನ್ನು ತೆರೆಯಲು ಒಪ್ಪಿಕೊಂಡಿದೆ ಎಂದು ಕೇಂದ್ರ ಗೃಹ ಸಚಿವಾಲಯ (ಎಂಎಚ್‌ಎ) ಗುರುವಾರ ಪ್ರಕಟಿಸಿದೆ. ಕಳೆದ ಕೆಲವು ದಿನಗಳಿಂದ ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವಾಲಯದ (MHA) ಅಧಿಕಾರಿಗಳು ಮತ್ತು KZC ನಿಯೋಗದ ನಡುವೆ ನಡೆದ ಸರಣಿ ಸಭೆಗಳ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ರಾಜ್ಯಕ್ಕೆ ಜೀವನಾಡಿಯಾಗಿರುವ ಪ್ರಮುಖ ಹೆದ್ದಾರಿಯಲ್ಲಿ ಶಾಂತಿ ಕಾಪಾಡಲು ಕೇಂದ್ರ ಸರ್ಕಾರ ನಿಯೋಜಿಸಿರುವ ಭದ್ರತಾ ಪಡೆಗಳೊಂದಿಗೆ ಸಂಪೂರ್ಣ ಸಹಕಾರವನ್ನು ಮಂಡಳಿ ಭರವಸೆ ನೀಡಿದೆ ಎಂದು MHA ತಿಳಿಸಿದೆ. "ರಾಷ್ಟ್ರೀಯ ಹೆದ್ದಾರಿ 2 ರ ಉದ್ದಕ್ಕೂ ಶಾಂತಿ ಕಾಪಾಡಲು ಭಾರತ ಸರ್ಕಾರ ನಿಯೋಜಿಸಿರುವ ಭದ್ರತಾ ಪಡೆಗಳೊಂದಿಗೆ ಸಹಕರಿಸಲು ಕುಕಿ-ಝೋ ಕೌನ್ಸಿಲ್ ಬದ್ಧವಾಗಿದೆ" ಎಂದು ಗೃಹ ಸಚಿವಾಲಯ ಹೇಳಿದೆ.
ಮಣಿಪುರವನ್ನು ನಾಗಾಲ್ಯಾಂಡ್ ಮತ್ತು ಈಶಾನ್ಯದ ಇತರ ಭಾಗಗಳೊಂದಿಗೆ ಸಂಪರ್ಕಿಸುವ ನಿರ್ಣಾಯಕ ಜೀವನಾಡಿಯಾದ NH-2, ಮೇ 2023 ರಲ್ಲಿ ರಾಜ್ಯದಲ್ಲಿ ಭುಗಿಲೆದ್ದ ಜನಾಂಗೀಯ ಉದ್ವಿಗ್ನತೆಯ ನಡುವೆ ನಿರ್ಬಂಧಿಸಲಾಗಿತ್ತು. ಮೈತೇಯಿ ಮತ್ತು ಕುಕಿ-ಝೋ ಸಮುದಾಯಗಳ ನಡುವಿನ ಸಂಘರ್ಷವು, ಕಳೆದ ಕೆಲ ವರ್ಷಗಳಿಂದ ನಡೆಯುತ್ತಲೇ ಇದೆ. ಹಿಂಸಾಚಾರ ಪೀಡಿತ ರಾಜ್ಯದಲ್ಲಿ ಸಹಜತೆಯನ್ನು ಪುನಃಸ್ಥಾಪಿಲು ಈ ಕ್ರಮ ಪ್ರಮುಖ ಮೈಲುಗಲ್ಲಾಗಿದೆ. ಕುಕಿ ರಾಷ್ಟ್ರೀಯ ಸಂಘಟನೆ ಮತ್ತು ಯುನೈಟೆಡ್ ಪೀಪಲ್ಸ್ ಫ್ರಂಟ್ ಸಹ ಏಳು ಗೊತ್ತುಪಡಿಸಿದ ಶಿಬಿರಗಳನ್ನು ಸಂಘರ್ಷಕ್ಕೆ ಗುರಿಯಾಗುವ ಪ್ರದೇಶಗಳಿಂದ ಸ್ಥಳಾಂತರಿಸಲು, ಗೊತ್ತುಪಡಿಸಿದ ಶಿಬಿರಗಳ ಸಂಖ್ಯೆಯನ್ನು ಕಡಿಮೆ ಮಾಡಲು, ಶಸ್ತ್ರಾಸ್ತ್ರಗಳನ್ನು ಹತ್ತಿರದ ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಮತ್ತು ಗಡಿ ಭದ್ರತಾ ಪಡೆ (BSF) ಶಿಬಿರಗಳಿಗೆ ಸ್ಥಳಾಂತರಿಸಲು ಮತ್ತು ವಿದೇಶಿ ಪ್ರಜೆಗಳನ್ನು ಪಟ್ಟಿಯಿಂದ ತೆಗೆದುಹಾಕಲು ಭದ್ರತಾ ಪಡೆಗಳಿಂದ ಕಟ್ಟುನಿಟ್ಟಾದ ಭೌತಿಕ ಪರಿಶೀಲನೆಗೆ ಒಪ್ಪಿಕೊಂಡಿವೆ.
ಈ ಸುದ್ದಿಯನ್ನೂ ಓದಿ: Modi-Putin: ತೈಲ ಒಪ್ಪಂದದ ಮಾತುಕತೆ; ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಸೆಪ್ಟೆಂಬರ್ 13 ರಂದು ಮೋದಿ ಭೇಟಿ ಹಿನ್ನೆಲೆಯಲ್ಲಿ ಮಿಜೋರಾಂ ಮುಖ್ಯ ಕಾರ್ಯದರ್ಶಿ ಖಿಲ್ಲಿ ರಾಮ್ ಮೀನಾ ಅವರು, ಭದ್ರತೆ, ಸಂಚಾರ ನಿಯಂತ್ರಣ ಮತ್ತು ಸಾರ್ವಜನಿಕ ಭಾಗವಹಿಸುವಿಕೆ ಸೇರಿದಂತೆ ಸಿದ್ಧತೆಗಳನ್ನು ಪರಿಶೀಲಿಸಲು ಸೋಮವಾರ ಉನ್ನತ ಮಟ್ಟದ ಸಭೆ ನಡೆಸಿದ್ದರು. ಅದಾದ ಬಳಿಕ ಈ ಬೆಳವಣಿಗೆ ನಡೆದಿದೆ.