ಭೋಪಾಲ್, ಅ. 19: ಮಧ್ಯ ಪ್ರದೇಶದ ಹಿಂದು ಪರ ಸಂಘಟನೆಯ ನಾಯಕಿ, ಮಾಜಿ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ (Pragya Singh Thakur) ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಹೆತ್ತವರು ತಮ್ಮ ಹೆಣ್ಣು ಮಕ್ಕಳನ್ನು ಹಿಂದುಯೇತರರ ಮನೆಗೆ ಹೋಗದಂತೆ ತಡೆಯಬೇಕು. ಒಂದುವೇಳೆ ಮಾತನ್ನು ಮೀರಿಯೂ ಹೋದರೆ ಅವರ ಕಾಲನ್ನು ಮುರಿಯಬೇಕು ಎಂದು ಕರೆ ನೀಡಿದ್ದಾರೆ. ಸದ್ಯ ಈ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಕಾಂಗ್ರೆಸ್ ಪ್ರಜ್ಞಾ ಠಾಕೂರ್ ವಿರುದ್ಧ ಕಿಡಿ ಕಾರಿದ್ದು, ಬಿಜೆಪಿ ದ್ವೇಷದ ಹೇಳಿಕೆ ನೀಡಿ ಸಮಾಜವನ್ನು ಒಡೆಯಲು ಶ್ರಮಿಸುತ್ತಿದೆ ಎಂದಿದ್ದಾರೆ.
ಭೋಪಾಲ್‌ನಲ್ಲಿ ನಡೆದ ಧಾರ್ಮಿಕ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಹೆತ್ತವರ ಮಾತು ಕೇಳದ ಹೆಣ್ಣು ಮಕ್ಕಳ ಮೇಲೆ ದೈಹಿಕವಾಗಿ ಹಲ್ಲೆ ನಡೆಸಬೇಕು ಎಂದು ಹೇಳಿದರು. ಸದ್ಯ ಅವರ ಈ ಭಾಷಣ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಸುದ್ದಿಯನ್ನೂ ಓದಿ: Sadhvi Pragya Singh: 'ಅವಮಾನ ಸಹಿಸಿಕೊಂಡೆ'; ಮಾಲೆಗಾಂವ್ ತೀರ್ಪಿನ ಸಂದರ್ಭದಲ್ಲಿ ಭಾವುಕರಾದ ಪ್ರಜ್ಞಾ ಸಿಂಗ್
ಪ್ರಜ್ಞಾ ಸಿಂಗ್ ಠಾಕೂರ್ ಹೇಳಿದ್ದೇನು?
"ನಿಮ್ಮ ಮನಸ್ಸನ್ನು ಗಟ್ಟಿಯಾಗಿಸಿಕೊಳ್ಳಿ. ನಿಮ್ಮ ಮಗಳು ಮಾತನ್ನು ಕೇಳದಿದ್ದರೆ, ಅವಳು ಹಿಂದುಯೇತರ ಮನೆಗೆ ಹೋದರೆ, ಅವಳ ಕಾಲುಗಳನ್ನು ಮುರಿಯಲೂ ಹಿಂಜರಿಯಬೇಡಿ. ಮೌಲ್ಯಗಳನ್ನು ಪಾಲಿಸದ ಮತ್ತು ಪೋಷಕರ ಮಾತನ್ನು ಕೇಳದವರಿಗೆ ಶಿಕ್ಷೆಯಾಗಬೇಕು. ನೀವು ನಿಮ್ಮ ಮಕ್ಕಳ ಯೋಗಕ್ಷೇಮಕ್ಕಾಗಿ ಹೊಡೆಯುವುದು ತಪ್ಪಲ್ಲ. ಪೋಷಕರು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಅವರು ಹೇಳಿದರು.
"ಪೋಷಕರ ಮಾತನ್ನು ಕೇಳದ, ಹಿರಿಯರ ಮಾತನ್ನು ಗೌರವಿಸದ ಮತ್ತು ಮನೆಯಿಂದ ಓಡಿಹೋಗಲು ಸಿದ್ಧರಾಗಿರುವ ಹುಡುಗಿಯರ ಬಗ್ಗೆ ಹೆಚ್ಚು ಜಾಗರೂಕರಾಗಿರಿ. ಅವರನ್ನು ನಿಮ್ಮ ಮನೆಗಳಿಂದ ಹೊರಗೆ ಬಿಡಬೇಡಿ. ಹೊಡೆಯುವ, ಅವರಿಗೆ ವಿವರಿಸುವ, ಅವರನ್ನು ಸಮಾಧಾನಪಡಿಸುವ, ಪ್ರೀತಿಸುವ ಅಥವಾ ಬೈಯುವ ಮೂಲಕ ಅವರನ್ನು ತಡೆಯಿರಿ" ಎಂದು ಅವರು ಕರೆ ನೀಡಿದರು.
ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ವಕ್ತಾರ ಭೂಪೇಂದ್ರ ಗುಪ್ತಾ ಇದನ್ನು ಸಮಾಜದ ಮಧ್ಯೆ ದ್ವೇಷ ಬಿತ್ತುವ ಕೆಲಸ ಎಂದು ಕರೆದಿದ್ದಾರೆ. "ಮಧ್ಯ ಪ್ರದೇಶದಲ್ಲಿ ಮತಾಂತರ ನಡಯುತ್ತಿಲ್ಲ. ಕೇವಲ ಏಳು ಧಾರ್ಮಿಕ ಮತಾಂತರ ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ. ಇಂತಹ ಇಷ್ಟೊಂದು ಗದ್ದಲ ಮತ್ತು ದ್ವೇಷ ಏಕೆ ಹರಡಲಾಗುತ್ತದೆ?ʼʼ ಎಂದು ಕೇಳಿದ್ದಾರೆ.
ದೇವಾಲಯದ ಹೊರಗೆ ಹಿಂದುಯೇತರರು ಪ್ರಸಾದ ಮಾರಾಟ ಮಾಡುವುದು ಕಂಡರೆ ಹೊಡೆಯಿರಿ ಎಂದಿದ್ದ ಠಾಕೂರ್
ಕೆಲವು ದಿನಗಳ ಹಿಂದೆಯಷ್ಟೇ ಪ್ರಜ್ಞಾ ಸಿಂಗ್ ಠಾಕೂರ್ ದೇವಾಲಯದ ಹೊರಗೆ ಹಿಂದುಯೇತರರು ಪ್ರಸಾದ ಮಾರಾಟ ಮಾಡುವುದು ಕಂಡರೆ ಹೊಡೆಯಿರಿ ಎಂದು ಹೇಳಿಕೆ ನೀಡುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದರು. ದುರ್ಗಾ ವಾಹಿನಿ ಕಾರ್ಯಕ್ರಮದಲ್ಲಿ ಅವರು ಈ ಹೇಳಿಕೆ ನೀಡಿದ್ದರು. ʼʼಹಿಂದುಯೇತರರು ದೇವಾಲಯಗಳ ಹೊರಗೆ ಪ್ರಸಾದ ಮಾರಾಟ ಮಾಡುತ್ತಿರುವುದು ಕಂಡುಬಂದರೆ ಅವರಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸುವ ಮೂಲಕ ಪಾಠ ಕಲಿಸಬೇಕುʼʼ ಎಂದು ಕರೆ ನೀಡಿದ್ದರು. ಇದಲ್ಲದೆ ಅಗತ್ಯವಿದ್ದರೆ ಬಳಸಬಹುದಾದ ರೀತಿಯಲ್ಲಿ ಪ್ರತಿ ಮನೆಯಲ್ಲೂ ಹರಿತವಾದ ಆಯುಧಗಳನ್ನು ಇಟ್ಟುಕೊಳ್ಳುವಂತೆ ಸೂಚಿಸಿದ್ದರು.