ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CBSE: 2 ಬಾರಿ 10ನೇ ತರಗತಿ ಬೋರ್ಡ್‌ ಪರೀಕ್ಷೆ ನಡೆಸಲು ಸಿಬಿಎಸ್‌ಇ ಅನುಮೋದನೆ; ಮುಂದಿನ ವರ್ಷದಿಂದಲೇ ಹೊಸ ನಿಯಮ ಜಾರಿ

CBSE Double Board Exams: ವಿದ್ಯಾರ್ಥಿಗಳ ಒತ್ತಡವನ್ನು ಕಡಿಮೆ ಮಾಡಲು ಸಿಬಿಎಸ್‌ಇ ಮುಂದಾಗಿದ್ದು, ಇನ್ನುಮುಂದೆ ವರ್ಷಕ್ಕೆ 2 ಬಾರಿ 10ನೇ ತರಗತಿಯ ಬೋರ್ಡ್‌ ಪರೀಕ್ಷೆ ನಡೆಯಲಿದೆ. ಮುಂದಿನ ವರ್ಷವೇ ಇದು ಜಾರಿಗೆ ಬರಲಿದೆ. ಅದಾಗ್ಯೂ 2ನೇ ಹಂತದ ಪರೀಕ್ಷೆ ಐಚ್ಛಕ.

ಮುಂದಿನ ವರ್ಷದಿಂದ 2 ಬಾರಿ ಸಿಬಿಎಸ್‌ಇ 10ನೇ ತರಗತಿ ಬೋರ್ಡ್‌ ಪರೀಕ್ಷೆ

ಸಾಂದರ್ಭಿಕ ಚಿತ್ರ.

Profile Ramesh B Jun 25, 2025 6:10 PM

ಹೊಸದಿಲ್ಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಪರೀಕ್ಷಾ ಮಾದರಿಯಲ್ಲಿ ಬದಲಾವಣೆ ತರಲು ಸಿಬಿಎಸ್‌ಇ (CBSE) ಮುಂದಾಗಿದೆ. 2026ರಿಂದಲೇ ಈ ಬದಲಾವಣೆ ಜಾರಿಗೆ ಬರಲಿದೆ. ಹೌದು, ಮುಂದಿನ ವರ್ಷದಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ 2 ಬಾರಿ ಬೋರ್ಡ್‌ ಪರೀಕ್ಷೆ ನಡೆಯಲಿದೆ. ಈ ಬದಲಾವಣೆಗೆ ಮಂಡಳಿ ಇದೀಗ ಅನುಮೋದನೆ ನೀಡಿದೆ (CBSE double board exams). ಫೆಬ್ರವರಿಯಲ್ಲಿ ನಡೆಯುವ ಮೊದಲ ಹಂತದ ಪರೀಕ್ಷೆ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿದ್ದು, ಮೇಯಲ್ಲಿ ಆಯೋಜಿಸುವ 2ನೇ ಹಂತದ ಪರೀಕ್ಷೆ ಐಚ್ಛಿಕ ಎಂದು ಮೂಲಗಳು ತಿಳಿಸಿವೆ.

ಮೊದಲ ಹಂತದ ಬೋರ್ಡ್‌ ಪರೀಕ್ಷೆಯ ಫಲಿತಾಂಶ ಏಪ್ರಿಲ್‌ನಲ್ಲಿ ಮತ್ತು ದ್ವಿತೀಯ ಹಂತದ ಪರೀಕ್ಷೆಯ ರಿಸಲ್ಟ್‌ ಜೂನ್‌ನಲ್ಲಿ ಹೊರ ಬೀಳಲಿದೆ. ಅದಾಗ್ಯೂ ಆಂತರಿಕ ಮೌಲ್ಯಮಾಪನ ಒಮ್ಮೆ ಮಾತ್ರ ನಡೆಸಲಾಗುತ್ತದೆ.



ಈ ಸುದ್ದಿಯನ್ನೂ ಓದಿ: ಬಿಎಸ್‌ಎಸ್ ಮೈಕ್ರೋಫೈನಾನ್ಸ್ ವತಿಯಿಂದ ಜಿಲ್ಲೆಯ ಸರ್ಕಾರಿ ಶಾಲಾ ಕಾಲೇಜಿನ 250 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ

''ಮೊದಲ ಹಂತದ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳಿಂದ ತೃಪ್ತರಾಗದವರು 2ನೇ ಹಂತದ ಪರೀಕ್ಷೆಗೆ ಹಾಜರಾಗಬಹುದು'' ಎಂದು ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕ ಸಂಯಮ್ ಭಾರದ್ವಾಜ್ ತಿಳಿಸಿದ್ದಾರೆ. ʼʼದ್ವಿತೀಯ ಹಂತದ ಪರೀಕ್ಷೆ ಮೂಲಕ ವಿದ್ಯಾರ್ಥಿಗಳು ವಿಜ್ಞಾನ, ಗಣಿತ, ಸೋಶಿಯಲ್‌ ಸೈನ್ಸ್‌ ವಿಷಯಗಳ ಅಂಕವನ್ನು ಹೆಚ್ಚಿಸಬಹುದುʼʼ ಎಂದು ಅವರು ವಿವರಿಸಿದ್ದಾರೆ.

ಚಳಿಗಾಲದ ಶಾಲೆಯ ವಿದ್ಯಾರ್ಥಿಗಳು ಮತ್ತು ಕ್ರೀಡೆಯಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳು ಯಾವ ಹಂತದ ಪರೀಕ್ಷೆಗೆ ಹಾಜರಾಗಬೇಕೆಂಬುದನ್ನು ಆಯ್ಕೆ ಮಾಡಬಹುದು. ʼʼರಾಷ್ಟ್ರೀಯ ಶಿಕ್ಷಣ ನೀತಿ (NEP) ಆಧರಿಸಿ ಸಿಬಿಎಸ್‌ಇ ಹೊಸ ನಿಯಮಕ್ಕೆ ಅನುಮೋದನೆ ನೀಡಿದೆ. ಇದು ವಿದ್ಯಾರ್ಥಿಗಳಿಗೆ ವರ್ಷದಲ್ಲಿ 2 ಅವಕಾಶಗಳನ್ನು ನೀಡುವ ಮೂಲಕ ಬೋರ್ಡ್ ಪರೀಕ್ಷೆಗಳ ಒತ್ತಡವನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆʼʼ ಎಂದು ಸಂಯಮ್ ಭಾರದ್ವಾಜ್ ವಿವರಿಸಿದ್ದಾರೆ.

2026ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಹೊಸ 2 ಪರೀಕ್ಷಾ ನೀತಿ ಜಾರಿಗೆ ಬರಲಿದೆ. ಭವಿಷ್ಯದಲ್ಲಿ 12ನೇ ತರಗತಿಗೂ ಇದೇ ರೀತಿಯ ವ್ಯವಸ್ಥೆ ಅಳವಡಿಸುವ ಬಗ್ಗೆ ಸಿಬಿಎಸ್‌ಇ ಸೂಚನೆ ನೀಡಿದೆ.