Elvish Yadav: ಯೂಟ್ಯೂಬರ್ ಎಲ್ವಿಶ್ ಯಾದವ್ ಮನೆ ಮೇಲೆ ದಾಳಿ ಹಿಂದಿದೆ ಈ ವ್ಯಕ್ತಿಯ ಕೈವಾಡ!
ಬಿಗ್ ಬಾಸ್ ಒಟಿಟಿ ವಿಜೇತ ಯೂಟ್ಯೂಬರ್ ಎಲ್ವಿಶ್ ಯಾದವ್ (Elvish Yadav) ಮನೆ ಮೇಲೆ ದಾಳಿಯ ಹಿಂದೆ ಹಿಮಾಂಶು ಭಾವು ಗ್ಯಾಂಗ್ (Himanshu Bhau gang) ಕೈವಾಡವಿರುವುದು ದೃಢಪಟ್ಟಿದೆ. ದಾಳಿಯಲ್ಲಿ ಭಾಗಿಯಾಗಿರುವವರು ವಿದೇಶದಲ್ಲಿ ವಾಸವಾಗಿರುವ ನೀರಜ್ ಫರೀದ್‌ಪುರಿಯಾ, ಭಾವು ರಿಟೋಲಿಯಾ ಮತ್ತು ಇಂದರ್‌ಜಿತ್ ಯಾದವ್ ಎಂದು ಗುರುತಿಸಲಾಗಿದೆ.


ನವದೆಹಲಿ: ಬಿಗ್ ಬಾಸ್ ಒಟಿಟಿ ವಿಜೇತರಾಗಿದ್ದ ( Bigg Boss OTT winner) ಯೂಟ್ಯೂಬರ್ ಎಲ್ವಿಶ್ ಯಾದವ್ (YouTuber Elvish Yadav) ಅವರ ಗುರುಗ್ರಾಮ್‌ನಲ್ಲಿರುವ ಮನೆ ಮೇಲೆ ಭಾನುವಾರ ಮುಂಜಾನೆ ಮೂವರು ದರೋಡೆಕೋರರು ಗುಂಡಿನ ದಾಳಿ ನಡೆಸಿದ್ದಾರೆ. ಹಿಮಾಂಶು ಭಾವು ಗ್ಯಾಂಗ್‌ಗೆ (Himanshu Bhau gang) ಸೇರಿರುವ ವಿದೇಶದಲ್ಲಿ ವಾಸವಾಗಿರುವ ನೀರಜ್ ಫರೀದ್‌ಪುರಿಯಾ, ಭಾವು ರಿಟೋಲಿಯಾ ಮತ್ತು ಇಂದರ್‌ಜಿತ್ ಯಾದವ್ ಎಂಬವರು ಎಲ್ವಿಶ್ ಯಾದವ್ ಮನೆ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಇದರ ದೃಶ್ಯವಾಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ವಿವಾದಾತ್ಮಕ ಯೂಟ್ಯೂಬರ್ ಗಳಲ್ಲಿ ಒಬ್ಬರಾಗಿರುವ ಎಲ್ವಿಶ್ ಯಾದವ್ ಮನೆಯ ಹೊರಗೆ ಭಾನುವಾರ ಮುಂಜಾನೆ ಗುಂಡಿನ ದಾಳಿ ನಡೆದಿದೆ. ಇದರಲ್ಲಿ ಮೂವರು ದರೋಡೆಕೋರರ ಪಾತ್ರವಿರುವುದು ಬೆಳಕಿಗೆ ಬಂದಿದೆ. ಗುಂಡು ಹಾರಿಸುವಾಗ ಮೂವರು ದರೋಡೆಕೋರರು ಮುಸುಕುಧಾರಿಗಳಾಗಿದ್ದರು. ಇವರಲ್ಲೂ ಹಿಮಾಂಶು ಭಾವು ಗ್ಯಾಂಗ್‌ನ ನೀರಜ್ ಫರೀದ್‌ಪುರಿಯಾ, ಭಾವು ರಿಟೋಲಿಯಾ ಮತ್ತು ಇಂದರ್‌ಜಿತ್ ಯಾದವ್ ಎಂದು ಗುರುತಿಸಲಾಗಿದೆ.
ಸೆಕ್ಟರ್ 56 ರಲ್ಲಿರುವ ಎಲ್ವಿಶ್ ಯಾದವ್ ಮನೆಗೆ ಮೂವರು ವ್ಯಕ್ತಿಗಳು ಆಗಮಿಸಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ. ಇವರಲ್ಲಿ ಇಬ್ಬರು ಪರಾರಿಯಾಗುವ ಮೊದಲು ಸುಮಾರು ೧೨ ಬಾರಿ ಗುಂಡು ಹಾರಿಸಿದ್ದಾರೆ. ಯೂಟ್ಯೂಬರ್ ಎಲ್ವಿಶ್ ಯಾದವ್ ಆಗ ಮನೆಯಲ್ಲಿ ಇರಲಿಲ್ಲ. ಕುಟುಂಬ ಸದಸ್ಯರು ಮಾತ್ರ ಇದ್ದರು. ಯಾರಿಗೂ ಯಾವುದೇ ಗಾಯವಾಗಿಲ್ಲ.
ದಾಳಿಯ ಹೊಣೆಯನ್ನು ಹಿಮಾಂಶು ಭಾವು ಗ್ಯಾಂಗ್ ಹೊತ್ತುಕೊಂಡಿದ್ದು, ಮೂವರು ದರೋಡೆಕೋರರಾದ ನೀರಜ್, ರಿಟೋಲಿಯಾ ಮತ್ತು ಇಂದರ್ಜಿತ್ ಇದನ್ನು ಮಾಡಿರುವುದಾಗಿ ಹೇಳಿದೆ. ಯೂಟ್ಯೂಬರ್ ಜೂಜಾಟವನ್ನು ಉತ್ತೇಜಿಸುತ್ತಿರುವುದರಿಂದ ಈ ದಾಳಿ ನಡೆಸಲಾಗಿದೆ. ಎಲ್ವಿಶ್ ಯಾದವ್ ಬೆಟ್ಟಿಂಗ್ ಅನ್ನು ಉತ್ತೇಜಿಸಿ ಅನೇಕ ಮನೆಗಳನ್ನು ಹಾಳು ಮಾಡಿದ್ದಾರೆ. ಈ ದಾಳಿಯ ಮೂಲಕ ಬೆಟ್ಟಿಂಗ್ ಅನ್ನು ಉತ್ತೇಜಿಸುವ ಎಲ್ಲರಿಗೂ ಎಚ್ಚರಿಕೆ ನೀಡುತ್ತಿದ್ದೇವೆ. ಯಾವುದೇ ಸಮಯದಲ್ಲಿ ಕರೆ ಅಥವಾ ಗುಂಡಿಗೆ ಸಿದ್ಧರಾಗಿರಿ ಎಂದು ಗ್ಯಾಂಗ್ ತಿಳಿಸಿದೆ.
ಯಾರು ಈ ದರೋಡೆಕೋರರು?
ಹರಿಯಾಣದ ಪಲ್ವಾಲ್ ನಿವಾಸಿಯಾಗಿರುವ ನೀರಜ್ ಫರೀದ್‌ಪುರಿಯಾ ವಿರುದ್ಧ 25ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಿವೆ. ಈತ ಯುಎಸ್‌ನಲ್ಲಿ ವಾಸವಾಗಿದ್ದಾನೆ. 2015ರಲ್ಲಿ ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಈತನಿಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ 2019ರಲ್ಲಿ ಜಾಮೀನು ನೀಡಿತ್ತು.
2019ರಲ್ಲಿ ಫರಿದಾಬಾದ್‌ನಲ್ಲಿ ನಡೆದ ಕಾಂಗ್ರೆಸ್ ರಾಜ್ಯ ವಕ್ತಾರ ವಿಕಾಸ್ ಚೌಧರಿ ಹತ್ಯೆಯಲ್ಲಿ ನೀರಜ್ ಫರೀದ್‌ಪುರಿಯಾ ಹೆಸರು ಕೇಳಿಬಂದಿತ್ತು. ಬಳಿಕ ಆತ ದುಬೈ ಮೂಲಕ ಕೆನಡಾಕ್ಕೆ ಪಲಾಯನ ಮಾಡಿದ್ದಾನೆ. ಕೆನಡಾದಲ್ಲಿ ಬಂಬಿಹಾ ಗ್ಯಾಂಗ್‌ನ ಕಮಾಂಡ್ ಆದ ನೀರಜ್ ಬಳಿಕ ಅಮೆರಿಕಕ್ಕೆ ಹೋಗಿ ಹಿಮಾಂಶು ಭೌ ಗ್ಯಾಂಗ್‌ನೊಂದಿಗೆ ಸೇರಿಕೊಂಡನು.
ಪೋರ್ಚುಗಲ್ ಮೂಲದ ದರೋಡೆಕೋರ ಭೌ ರಿಟೋಲಿಯಾ ಅಲಿಯಾಸ್ ಹಿಮಾಂಶು ಭೌ ಮೂಲತಃ ಹರಿಯಾಣದ ರೋಹ್ಟಕ್‌ನಲ್ಲಿರುವ ರಿಟೋಲಿ ಗ್ರಾಮದವನು ಎನ್ನಲಾಗುತ್ತದೆ. ಈತ ಹರಿಯಾಣವಿ ಗಾಯಕ- ರ‍್ಯಾಪರ್ ರಾಹುಲ್ ಯಾದವ್ ಅಲಿಯಾಸ್ ಫಜಿಲ್‌ಪುರಿಯಾ ಮೇಲೆ ನಡೆದ ದಾಳಿಯ ಆರೋಪಿಯಾಗಿದ್ದಾನೆ.
ಇದನ್ನು ಓದಿ: BY Vijayendra: ಧರ್ಮಸ್ಥಳ ವಿಚಾರದಲ್ಲಿ ಮಧ್ಯಂತರ ವರದಿಯಿಂದ ಗೊಂದಲಕ್ಕೆ ತೆರೆ : ವಿಜಯೇಂದ್ರ
ದರೋಡೆಕೋರನಾಗಿರುವ ರಾವ್ ಇಂದರ್ಜಿತ್ ಯಾದವ್ ಮೂಲತಃ ಹರಿಯಾಣದವನಾಗಿದ್ದು, ಅಮೆರಿಕದಲ್ಲಿ ವಾಸವಾಗಿದ್ದಾನೆ. ರೋಹ್ಟಕ್‌ನಲ್ಲಿ ಹಣಕಾಸುದಾರನೊಬ್ಬನ ಹತ್ಯೆಯ ಹಿಂದೆ ಇಂದರ್ಜಿತ್ ಕೈವಾಡವಿರುವ ಆರೋಪವೂ ಇದೆ.