ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Karur Stampede: ತಮಿಳುನಾಡಿನಲ್ಲಿ ನಟ ವಿಜಯ್‌ ರಾಜಕೀಯ ರ‍್ಯಾಲಿ ವೇಳೆ ಕಾಲ್ತುಳಿತ; 30 ಮಂದಿ ಸಾವು

ತಮಿಳು ಸೂಪರ್‌ ಸ್ಟಾರ್‌ ವಿಜಯ್‌ ಪಾಲ್ಗೊಂಡ ರಾಜಕೀಯ ರ‍್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿದ್ದು ಕನಿಷ್ಠ 30 ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ತಮಿಳುನಾಡಿನ ಕರೂರಿನಲ್ಲಿ ಆಯೋಜಿಸಿದ್ದ ಮೆರವಣಿಗೆ ವೇಳೆ ಈ ದುರಂತ ಸಂಭವಿಸಿದ್ದು, ಮೃತರಲ್ಲಿ ಮೂವರು ಮಕ್ಕಳು ಮತ್ತು 7 ಮಂದಿ ವಯಸ್ಕರು ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಟ ವಿಜಯ್‌ ರಾಜಕೀಯ ರ‍್ಯಾಲಿ ವೇಳೆ ಕಾಲ್ತುಳಿತ; 20 ಮಂದಿ ಸಾವು

-

Ramesh B Ramesh B Sep 27, 2025 8:55 PM

ಚೆನ್ನೈ: ತಮಿಳು ಸೂಪರ್‌ ಸ್ಟಾರ್‌ ವಿಜಯ್‌ (Vijay) ಪಾಲ್ಗೊಂಡ ರಾಜಕೀಯ ರ‍್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿದ್ದು ಕನಿಷ್ಠ 30 ಮಂದಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ತಮಿಳುನಾಡಿನ ಕರೂರಿನಲ್ಲಿ ಆಯೋಜಿಸಿದ್ದ ಮೆರವಣಿಗೆ ವೇಳೆ ಈ ದುರಂತ ಸಂಭವಿಸಿದ್ದು, ಮೃತರಲ್ಲಿ ಮೂವರು ಮಕ್ಕಳು ಮತ್ತು 7 ಮಂದಿ ವಯಸ್ಕರು ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಜಯ್‌ ಹುಟ್ಟುಹಾಕಿರುವ ತಮಿಳಗ ವೆಟ್ರಿ ಕಳಗಂ (Tamilaga Vettri Kazhagam)ದ ಸಮಾವೇಶದಲ್ಲಿ ಈ ಘಟನೆ ನಡೆದಿದೆ. ವಿಜಯ್‌ಗಾಗಿ ಕಾರ್ಯಕರ್ತರು ಸುಮಾರು 6 ಗಂಟೆಗಳ ಕಾಲ ಕಾದು ಕುಳಿತಿದ್ದರು. ತಡವಾಗಿ ಅವರು ಆಗಮಿಸಿದ ವೇಳೆ ಕಾಲ್ತುಳಿತ ಸಂಭವಿಸಿತು ಎನ್ನಲಾಗಿದೆ. ಆಯೋಜಕರು ಸುಮಾರು 10 ಸಾವಿರ ಜನ ಸೇರುವುದಾಗಿ ತಿಳಿಸಿದ್ದರು. ಆದರ ಪ್ರವಾಹೋಪಾದಿಯಲ್ಲಿ ಜನ ಆಗಮಿಸಿದ್ದರಿಂದ ನೂಕುನುಗ್ಗಲು ಉಂಟಾಯಿತು ಎನ್ನಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ದುರಂತದ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ತನಿಖೆ ನಡೆಸುವಂತೆ ಆದೇಶ ಹೊರಡಿಸಿದ್ದಾರೆ. ಘಟನೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದು, ಅವರನ್ನು ಆಂಬ್ಯುಲೆನ್ಸ್‌ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.



ಘಟನೆ ವೇಳೆ ಸುಮಾರು 30,000 ಮಂದಿ ಸೇರಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆಡಳಿತ ರೂಢ ಡಿಎಂಕೆ ವಿಜಯ್‌ ಅವರನ್ನು ಬಂಧಿಸುವಂತೆ ಆಗ್ರಹಿಸಿದೆ. ತಮಿಳುನಾಡು ಆರೋಗ್ಯ ಸಚಿವ ಎಂ. ಸುಬ್ರಹ್ಮಣಿಯನ್‌ ಕರೂರ್‌ಗೆ ಧಾವಿಸಿದ್ದಾರೆ. ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಪರಿಸ್ಥಿತಿಯನ್ನು ಅವಲೋಕಿಸುವಂತೆ ಜಿಲ್ಲಾ ಕಾರ್ಯದರ್ಶಿ ವಿ. ಸೆಂಥಿಲ್‌ಬಾಲಾಜಿ ಅವರಿಗೆ ಸೂಚಿಸಿದೆ.



"ಕರೂರ್‌ನಿಂದ ಬರುತ್ತಿರುವ ಸುದ್ದಿ ಆತಂಕಕಾರಿಯಾಗಿದೆ. ಕಾಲ್ತುಳಿತದಿಂದಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಸಾರ್ವಜನಿಕರಿಗೆ ತಕ್ಷಣ ವೈದ್ಯಕೀಯ ಚಿಕಿತ್ಸೆ ನೀಡುವಂತೆ ನಾನು ಸೂಚಿಸಿದ್ದೇನೆ" ಎಂದು ಸ್ಟಾಲಿನ್ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಕರೂರಿನಲ್ಲಿ ಕಿಕ್ಕಿರಿದ ರ‍್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸುತ್ತಿದ್ದಂತೆ ವಿಜಯ್ ತಮ್ಮ ಭಾಷಣವನ್ನು ಹಠಾತ್ತನೆ ಕೊನೆಗೊಳಿಸಿದರು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.