ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Cloudburst: ಡೆಹ್ರಾಡೂನ್‌ನಲ್ಲಿ ಮೇಘಸ್ಫೋಟದಿಂದ ದಿಢೀರ್ ಪ್ರವಾಹ; ಇಬ್ಬರು ನಾಪತ್ತೆ

ಉತ್ತರಾಖಂಡದ (Uttarakhand) ಡೆಹ್ರಾಡೂನ್‌ನ ಹೊರವಲಯದಲ್ಲಿ ಮಂಗಳವಾರ ಭಾರಿ ಮೇಘಸ್ಫೋಟ ಸಂಭವಿಸಿದೆ. ತಮ್ಸಾ ನದಿ ಉಕ್ಕಿ ಹರಿಯುತ್ತಿದೆ. ಭಾರತೀಯ ಹವಾಮಾನ ಇಲಾಖೆಯು ಡೆಹ್ರಾಡೂನ್ ಮತ್ತು ತೆಹ್ರಿ ಗರ್ವಾಲ್‌ಗೆ ಬೆಳಿಗ್ಗೆ 9 ಗಂಟೆಯವರೆಗೆ ರೆಡ್ ಅಲರ್ಟ್ ನೀಡಿದೆ.

ಡೆಹ್ರಾಡೂನ್‌ನಲ್ಲಿ ಮೇಘಸ್ಫೋಟದಿಂದ ದಿಢೀರ್ ಪ್ರವಾಹ

-

Vishakha Bhat Vishakha Bhat Sep 16, 2025 8:47 AM

ಡೆಹ್ರಾಡೂನ್‌: ಉತ್ತರಾಖಂಡದ ಡೆಹ್ರಾಡೂನ್‌ನ ಹೊರವಲಯದಲ್ಲಿ (Cloudburst) ಮಂಗಳವಾರ ಭಾರಿ ಮೇಘಸ್ಫೋಟ ಸಂಭವಿಸಿದೆ. ತಮ್ಸಾ ನದಿ ಉಕ್ಕಿ ಹರಿಯುತ್ತಿದೆ. ಭಾರತೀಯ ಹವಾಮಾನ ಇಲಾಖೆಯು ಡೆಹ್ರಾಡೂನ್ ಮತ್ತು ತೆಹ್ರಿ ಗರ್ವಾಲ್‌ಗೆ ಬೆಳಿಗ್ಗೆ 9 ಗಂಟೆಯವರೆಗೆ ರೆಡ್ ಅಲರ್ಟ್ ನೀಡಿದೆ. ಭಾರೀ ಮಳೆಯ ನಂತರ ತಪಕೇಶ್ವರ ಮಹಾದೇವ ದೇವಾಲಯವು ಜಲಾವೃತಗೊಂಡಿದೆ. ಪ್ರವಾಹದಿಂದಾಗಿ ಮನೆ, ರಸ್ತೆ ಸೇರಿದಂತೆ ಹಲವು ಭೂ ಪ್ರದೇಶಗಳು ಕೊಚ್ಚಿ ಹೋಗಿವೆ. ಇಬ್ಬರು ಜನರು ಇಲ್ಲಿಯವರೆಗೆ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ. ಎಸ್‌ಡಿಆರ್‌ಎಫ್ ಮತ್ತು ಎನ್‌ಡಿಆರ್‌ಎಫ್ ತಂಡಗಳು ರಕ್ಷಣಾ ಕಾರ್ಯಾಚರಣೆಗೆ ಧಾವಿಸಿವೆ.

ರೆಡ್ ಅಲರ್ಟ್ ಅಡಿಯಲ್ಲಿ, ಡೆಹ್ರಾಡೂನ್‌ನಲ್ಲಿ ಗಂಟೆಗೆ 15 ಮಿ.ಮೀ.ಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ, ಜೊತೆಗೆ ಗುಡುಗು ಸಹಿತ ಗಂಟೆಗೆ 62-87 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಬಿಲಾಸ್‌ಪುರ ಜಿಲ್ಲೆಯ ನಮ್ಹೋಲ್‌ನಲ್ಲಿ ಮೇಘ ಸ್ಫೋಟದಿಂದ ಉಂಟಾದ ಹಠಾತ್ ಪ್ರವಾಹದಿಂದಾಗಿ ಕನಿಷ್ಠ 10 ವಾಹನಗಳು ಅವಶೇಷಗಳ ಅಡಿಯಲ್ಲಿ ಹೂತುಹೋಗಿವೆ ಮತ್ತು ಬೆಳೆಗಳು ಹಾನಿಗೊಳಗಾಗಿವೆ. ಆಗಸ್ಟ್‌ನಲ್ಲಿ, ಖೀರ್ ಗಂಗಾ ನದಿಯಲ್ಲಿ ಭಾರಿ ಮೇಘಸ್ಫೋಟದಿಂದ ಉಂಟಾದ ಹಠಾತ್ ಪ್ರವಾಹದಿಂದ ಹಲವಾರು ಜನರು ಸಾವನ್ನಪ್ಪಿದ್ದರು.



ಇತ್ತೀಚೆಗೆ, ಕೆಲವು ದಿನಗಳ ಹಿಂದೆ, ಆಗಸ್ಟ್ 5 ರಂದು ಉತ್ತರಕಾಶಿಯ ಧರಾಲಿ ಪ್ರದೇಶದಲ್ಲಿ ತೀವ್ರ ಮೇಘಸ್ಫೋಟ ಸಂಭವಿಸಿತ್ತು. ಉತ್ತರಕಾಶಿಯ ಹಠಾತ್ ಪ್ರವಾಹದಲ್ಲಿ ಧರಾಲಿ ಗ್ರಾಮದ ಹೊಟೇಲ್‌ಗಳು ಮತ್ತು ಮನೆಗಳು ಕೆಲವೇ ನಿಮಿಷಗಳಲ್ಲಿ ನಾಶವಾದವು. ಹಠಾತ್ ಪ್ರವಾಹ ಸೈನಿಕರು ಸೇರಿದಂತೆ ಹಲವು ಜನರನ್ನು ಬಲಿ ತೆಗೆದುಕೊಂಡಿತ್ತು. ಹರ್ಸಿಲ್ ಸಮೀಪದ ಧರಾಲಿ ಗ್ರಾಮಕ್ಕೆ ಗ್ರಾಮವೇ ಕೊಚ್ಚಿ ಹೋಗಿದೆ. ಮನೆ, ಹೊಟೇಲ್, ಅಂಗಡಿಗಳು ಕೆಸರಿನಲ್ಲಿ ಹೂತಿದ್ದು, ರಸ್ತೆಗಳ ಸಂಪರ್ಕ ಕಡಿತಕೊಂಡಿತ್ತು.

ಈ ಸುದ್ದಿಯನ್ನೂ ಓದಿ: Cloudburst: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಮೇಘಸ್ಫೋಟ; ಭಾರೀ ನಾಶ, ಹಲವರು ನಾಪತ್ತೆ ಶಂಕೆ

2013ರ ಉತ್ತರಾಖಂಡ ಪ್ರವಾಹವು 5000ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತ್ತು ಮತ್ತು 2000ಕ್ಕೂ ಹೆಚ್ಚು ಮನೆಗಳನ್ನು ಹಾನಿಗೊಳಿಸಿತ್ತು. 2021ರಲ್ಲಿ ಚಮೋಲಿ ಪ್ರವಾಹದಿಂದ 200ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಉತ್ತರಾಖಂಡದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರು ಭೂಕುಸಿತ ಮತ್ತು ಪ್ರವಾಹಕ್ಕೆ ಗುರಿಯಾಗುವ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ.