Fire Accident: ದೇವರ ಆರತಿ ವೇಳೆ ನಡೀತು ಘನಘೋರ ಘಟನೆ! ಬೆಂಕಿ ಅವಘಡದಲ್ಲಿ 7 ಜನರಿಗೆ ಗಂಭೀರ ಗಾಯ
ಉತ್ತರ ಪ್ರದೇಶದ ವಾರಾಣಸಿ ಜಿಲ್ಲೆಯ ಆತ್ಮ ವೀರೇಶ್ವರ ಮಹಾದೇವ ದೇವಾಲಯದಲ್ಲಿ ಶನಿವಾರ ರಾತ್ರಿ ಆರತಿಯ ವೇಳೆ ಅಗ್ನಿ ಅವಘಡ(Fire Accident) ಸಂಭವಿಸಿದ್ದು, ಅವಘಡದಲ್ಲಿ ಅರ್ಚಕರು ಸೇರಿ ಏಳು ಜನರಿಗೆ ಸುಟ್ಟ ಗಾಯಗಳಾಗಿದ್ದು, ಗಾಯಾಳುಗಳು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಘಟನೆಯ ದೃಶ್ಯ

ವಾರಾಣಸಿ: ಉತ್ತರ ಪ್ರದೇಶದ (Uttar Pradesh) ವಾರಾಣಸಿ (Varanasi) ಜಿಲ್ಲೆಯ ಆತ್ಮ ವೀರೇಶ್ವರ ಮಹಾದೇವ ದೇವಾಲಯದಲ್ಲಿ ಶನಿವಾರ ರಾತ್ರಿ ಆರತಿಯ ವೇಳೆ ಅಗ್ನಿ ಅವಘಡ (Fire Accident) ಸಂಭವಿಸಿದ್ದು, ಅರ್ಚಕರನ್ನೂ ಸೇರಿ ಏಳು ಜನರಿಗೆ ಸುಟ್ಟ ಗಾಯಗಳಾಗಿವೆ. ಗಾಯಾಳುಗಳು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅವಘಡ ಸಂಭವಿಸಿದ್ದು, ಗಾಯಳುಗಳೆಲ್ಲ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಶ್ರಾವಣ ಪೂರ್ಣಿಮೆ ಸಂದರ್ಭದಲ್ಲಿ, ದೇವಾಲಯವನ್ನು ಹತ್ತಿಯಿಂದ ಅಲಂಕರಿಸಲಾಗಿತ್ತು. ಈ ದುರ್ಘಟನೆ ಸಂಭವಿಸಲು ಹತ್ತಿಯೇ ಕಾರಣ ಇರಬಹುದೇ ಎಂದು ಶಂಕಿಸಲಾಗಿದೆ. ಮೊದಲು ದೇವಾಲಯದ ಆವರಣದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ದೇವರಿಗೆ ಆರತಿ ಆಗುವ ಸಮಯದಲ್ಲಿ ಈ ಅವಘಡ ನಡೆದಿದೆ. ಇನ್ನು ಆ ದೇವಸ್ಥಾನ ಕಿರಿದಾದ ರಸ್ತೆಯಲ್ಲಿದ್ದು, ಅಗ್ನಿಶಾಮಕ ದಳದ ವಾಹನಗಳು ಮತ್ತು ಆಂಬುಲೆನ್ಸ್‌ಗಳು ನಿಗದಿತ ಸಮಯಕ್ಕೆ ಸ್ಥಳಕ್ಕೆ ಬರಲು ಸಾಧ್ಯವಾಗದೇ ಕಾರಣ ಗಾಯಾಳುಗಳಿಗೆ ಚಿಕಿತ್ಸೆ ನೀಡುವಲ್ಲಿ ತಡವಾಗಿದೆ. ಬಳಿಕ ಪೊಲೀಸರು ಮತ್ತು ಸ್ಥಳೀಯರ ಸಹಾಯದಿಂದ ಗಾಯಗೊಂಡವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಕೃಷ್ಣ, ಸತ್ಯಂ ಪಾಂಡೆ, ಪ್ರಿನ್ಸ್ ಪಾಂಡೆ, ದೇವ್ ನಾರಾಯಣ ಪಾಂಡೆ, ವೈಕುಂಠನಾಥ್ ಮಿಶ್ರಾ, ಸಂಧ್ಯಾ ಮಿಶ್ರಾ, ಮತ್ತು ಶಿವಾನಾ ಮಿಶ್ರಾ ಎಂಬುವವರು ಅವಘಡದಲ್ಲಿ ಗಾಯಗೊಂಡಿದ್ದು, ಐದು ಜನರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಉತ್ತರ ಪ್ರದೇಶದ ಆಯುಷ್ ರಾಜ್ಯ ಸಚಿವ ಡಾ. ದಯಾಶಂಕರ್ ಮಿಶ್ರಾ ಕಬೀರ್‌ಚೌರಾ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಈ ಸುದ್ದಿಯನ್ನು ಓದಿ: Viral News: ಬಿಜೆಪಿ ಸಂಸದ ನಾಪತ್ತೆ ; ವಿದ್ಯಾರ್ಥಿ ನಾಯಕನಿಂದ ಪೊಲೀಸರಿಗೆ ದೂರು
ಈ ದುರಂತವು ದೇವಾಲಯಗಳಲ್ಲಿ ಸುರಕ್ಷತಾ ಕ್ರಮಗಳ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿ ಹಿಡಿದಿದ್ದು, ಅಲಂಕಾರಕ್ಕೆ ಬಳಸಿದ ಹತ್ತಿಯಂತಹ ಸುಲಭವಾಗಿ ಬೆಂಕಿ ತಗುಲುವ ವಸ್ತುಗಳ ಬಗ್ಗೆ ಎಚ್ಚರಿಕೆಯಿಂದಿರಬೇಕಾದ ಅಗತ್ಯವನ್ನು ಈ ಘಟನೆ ಒತ್ತಿಹೇಳಿದೆ. ಪೊಲೀಸರು ಘಟನೆಯ ಬಗ್ಗೆ ತನಿಖೆಯನ್ನು ಆರಂಭಿಸಿದ್ದಾರೆ. ಬೆಂಕಿ ದುರಂತದ ಖಚಿತ ಕಾರಣ ತಿಳಿಯಲುಪರಿಶೀಲನೆ ನಡೆಯುತ್ತಿದೆ.
ಇನ್ನು ಈ ಇದೇ ವಾರಾಣಸಿಯ ಕ್ಯಾಂಟ್ ರೈಲು ನಿಲ್ದಾಣದ ಪಾರ್ಕಿಂಗ್ ಸ್ಟ್ಯಾಂಡ್ನಲ್ಲಿ ಬೆಂಕಿ ಅವಘಡ ಸಂಭವಿಸಿ, 150ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಸುಟ್ಟು ಭಸ್ಮವಾಗಿತ್ತು. ಸದ್ಯ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ. ಪ್ಲಾಟ್‌ಫಾರ್ಮ್ ಒಂದರ ಪಾರ್ಕಿಂಗ್ ಸ್ಟ್ಯಾಂಡ್ ಬಳಿ ಬೆಂಕಿ ಕಾಣಿಸಿಕೊಂಡು, ಬೆಂಕಿಯಿಂದಾಗಿ ಸಾಕಷ್ಟು ಹಾನಿಯಾಗಿದೆ.