ಲಖನೌ, ಅ. 25: ಕೆಲವು ತಿಂಗಳ ಹಿಂದೆ ಆರಂಭವಾದ ʼಐ ಲವ್ ಮುಹಮ್ಮದ್ʼ (I Love Muhammad) ಅಭಿಯಾನದ ಹಾವಳಿ ಈಗಲೂ ಮುಂದುವರಿದೆ. ಉತ್ತರ ಪ್ರದೇಶದ ಆಲಿಗಢದ (Aligarh) 2 ಗ್ರಾಮಗಳಾದ ಬುಲಕ್‌ಗಢಿ ಮತ್ತು ಭಗವಾನ್‌ಪುರದ ಹಲವು ಹಿಂದೂ ದೇವಾಲಯಗಳ ಗೋಡೆಗಳ ಮೇಲೆ ಸ್ಪ್ರೇ ಪೇಂಟ್‌ನಲ್ಲಿ ʼಐ ಲವ್ ಮುಹಮ್ಮದ್ʼ ಎಂದು ಘೋಷಣೆ ಬರೆಯಲಾಗಿದ್ದು, ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ ಘೋಷಣೆಗಳನ್ನು ಅಳಿಸಿದ್ದು, ಸ್ಥಳದಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ.
ʼʼಶುಕ್ರವಾರ ತಡರಾತ್ರಿ ಅಥವಾ ಶನಿವಾರ ಮುಂಜಾನೆ 'ಐ ಲವ್ ಮುಹಮ್ಮದ್' ಬರಹ ಪ್ರತ್ಯಕ್ಷವಾಗಿದೆ. ಬುಲಕ್‌ಗಢಿ ಮತ್ತು ಭಗವಾನ್‌ಪುರ ಗ್ರಾಮಗಳ ಸ್ಥಳೀಯರು ಎಚ್ಚರಗೊಂಡು ನೋಡಿದಾಗ 4 ದೇವಾಲಯದ ಗೋಡೆಗಳ ಮೇಲೆ ಘೋಷಣೆಗಳನ್ನು ಬರೆದಿರುವುದನ್ನು ಗಮನಿಸಿದರು. ಬಳಿಕ ಜನರು ದೇವಾಲಯಗಳ ಬಳಿ ಗುಂಪುಗೂಡಿದರುʼʼ ಎಂದು ಅಲಿಗಢದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ನೀರಜ್ ಕುಮಾರ್ ಜದೌನ್ ತಿಳಿಸಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಣಕ್ಕೆ ಮುಂದಾದರು.
ಅಲಿಗಢ ಪೊಲೀಸರ ಎಕ್ಸ್ ಪೋಸ್ಟ್:
ಈ ಸುದ್ದಿಯನ್ನೂ ಓದಿ: I Love Muhammad Controversy: 50 ವರ್ಷಗಳ ಹಿಂದೆ ಹುಟ್ಟಿಕೊಂಡ ಲೋಗೋ 'ಐ ಲವ್ ಮುಹಮ್ಮದ್' ಪೋಸ್ಟರ್‌ಗಳಿಗೆ ಸ್ಫೂರ್ತಿಯಾಗಿದ್ದು ಹೇಗೆ?
ಈ ಕೃತ್ಯವನ್ನು ಕೋಮು ಸಾಮರಸ್ಯವನ್ನು ಕೆರಳಿಸುವ ಮತ್ತು ಕದಡುವ ಉದ್ದೇಶಪೂರ್ವಕ ಪ್ರಯತ್ನ ಎಂದು ವಿವರಿಸಿದ ಅವರು, ಶಾಂತವಾಗಿ ವರ್ತಿಸುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು. ಅಲಿಗಢ ಎಸ್‌ಎಸ್‌ಪಿ ಜದೌನ್ ಗಲಭೆ ಪೀಡಿತ ಸ್ಥಳಗಳನ್ನು ಪರಿಶೀಲಿಸಿದರು.
"ಎಲ್ಲ ಅಂಶಗಳ ಬಗ್ಗೆಯೂ ಸಮಗ್ರ ತನಿಖೆ ನಡೆಸಲಾಗುತ್ತಿದೆ. ಈ ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಲಿದ್ದೇವೆ. ಘಟನೆಯಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆದೇಶ ಹೊರಡಿಸಲಾಗಿದೆ. ಸದ್ಯ ಸ್ಥಳದಲ್ಲಿ ಶಾಂತಿ ನೆಲೆಸಿದೆ. ಯಾವುದೇ ಅಹಿತಕರ ಘಟನೆ ನಡೆದಿಲ್ಲ" ಎಂದು ಅಲಿಗಢ ಪೊಲೀಸರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸುವ್ಯವಸ್ಥೆ ಕಾಪಾಡಲು ಆಕ್ಷೇಪಾರ್ಹ ಬರಹಗಳನ್ನು ಅಳಿಸಿಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿಂದೆ ನಡೆದಿದ್ದ ವಿವಾದವು ಈ ಘಟನೆಗೆ ಕಾರಣವಾಗಿರಬಹುದು ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ತನಿಖೆ ಕೈಗೆತ್ತಿಕೊಳ್ಳಲಾಗಿದೆ.
ಸ್ಥಳೀಯರು ಮತ್ತು ಹಿಂದುಪರ ಸಂಘಟನೆಗಳ ಮುಖಂಡರು ಈ ಕೃತ್ಯವನ್ನು ಬಲವಾಗಿ ಖಂಡಿಸಿದ್ದಾರೆ. 'ಐ ಲವ್ ಮುಹಮ್ಮದ್' ಅಭಿಯಾನ ಇತ್ತೀಚೆಗೆ ಉತ್ತರ ಪ್ರದೇಶದ ಬರೇಲಿ, ಕಾನ್ಪುರ, ಮೊರಾದಾಬಾದ್ ಮತ್ತು ಫರೂಕಾಬಾದ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕಾಣಿಸಿಕೊಂಡಿದ್ದು, ಸೆಪ್ಟೆಂಬರ್‌ನಿಂದ ಉದ್ವಿಗ್ನತೆಗೆ ಕಾರಣವಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದಾರೆ. ಈ ವಿಷಯದಲ್ಲಿ ಪೊಲೀಸ್ ದೂರು ದಾಖಲಿಸಿದ ಕರ್ಣಿ ಸೇನೆಯ ಅಖಿಲ ಭಾರತ ಉಪಾಧ್ಯಕ್ಷ ಜ್ಞಾನೇಂದ್ರ ಸಿಂಗ್ ಚೌಹಾಣ್, ಸ್ಥಳೀಯ ಪೊಲೀಸರ ವಿರುದ್ಧ ನಿರ್ಲಕ್ಷ್ಯದ ಆರೋಪ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿ ಈಗಾಗಲೇ ಮುಸ್ತಕೀಮ್, ಗುಲ್ ಮೊಹಮ್ಮದ್, ಸುಲೈಮಾನ್, ಸೋನು, ಅಲ್ಲಾಬಕ್ಷ್, ಹಮೀದ್ ಮತ್ತು ಯೂಸುಫ್ ಎಂದು ಗುರುತಿಸಲಾದ 8 ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಲಾಗುತ್ತಿದೆ.