ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

I Love Mohammad: ಬೆಳಗಾವಿಯಲ್ಲಿ ʼಐ ಲವ್‌ ಮೊಹಮ್ಮದ್ʼ‌ ಘೋಷಣೆ, ಕಲ್ಲು ತೂರಾಟ, ಜಟಾಪಟಿ

Belagavi: ಬೆಳಗಾವಿಯ ಖಡಕ್‌ ಗಲ್ಲಿಯಲ್ಲಿ ಶುಕ್ರವಾರ ನಡೆದ ಉರುಸ್ ಮೆರವಣಿಗೆ ಹಿಂದೂ-ಮುಸ್ಲಿಮರ ನಡುವೆ ಜಟಾಪಟಿಗೆ ಕಾರಣವಾಗಿದೆ. ಆಗ ಕೆಲ ಯುವಕರು ‘ಐ ಲವ್ ಮೊಹಮ್ಮದ್’ ಎಂಬ ಘೋಷಣೆ ಕೂಗುತ್ತಾ ತೆರಳಿದ್ದಾರೆ. ಇದಕ್ಕೆ ಹಿಂದೂಗಳು ಆಕ್ಷೇಪಿಸಿದ್ದಾರೆ. ಇದಾದ ಕೆಲಹೊತ್ತಿನಲ್ಲೇ ಅನ್ಯಕೋಮಿನ ಯುವಕರು ಹಿಂದೂಗಳ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.

ಬೆಳಗಾವಿಯಲ್ಲಿ ʼಐ ಲವ್‌ ಮೊಹಮ್ಮದ್ʼ‌ ಘೋಷಣೆ, ಕಲ್ಲು ತೂರಾಟ, ಜಟಾಪಟಿ

-

ಹರೀಶ್‌ ಕೇರ ಹರೀಶ್‌ ಕೇರ Oct 4, 2025 7:23 AM

ಬೆಳಗಾವಿ: 'ಐ ಲವ್‌ ಮೊಹಮ್ಮದ್‌ʼ (I Love Mohammad) ಘೋಷಣೆ ಕರ್ನಾಟಕದ ಬೆಳಗಾವಿಯಲ್ಲೂ (Belagavi news) ಕಿಚ್ಚು ಹಬ್ಬಿಸಿದೆ. ಬೆಳಗಾವಿಯ (Belagavi) ಖಡೇಬಜಾರ್‌ನ ಖಡಕ್‌ ಗಲ್ಲಿಯಲ್ಲಿ ಶುಕ್ರವಾರ ರಾತ್ರಿ ಇದರ ಕಾರಣದಿಂದ ಉದ್ವಿಗ್ನತೆ ಸೃಷ್ಟಿಯಾಗಿದೆ. ಅನುಮತಿ ಇಲ್ಲದೆ ನಡೆಸಿದ ಮೆರವಣಿಗೆ ಹಾಗೂ ʼಐ ಲವ್‌ ಮೊಹಮ್ಮದ್‌ʼ ಘೋಷಣೆಗಳ ಪರಿಣಾಮ ಬೆಳಗಾವಿಯಲ್ಲಿ ಕೋಮು ಉದ್ವಿಗ್ನತೆ ಉಂಟಾಗಿದ್ದು, ಕಲ್ಲು ತೂರಾಟ (Stone pelting) ಸಂಭವಿಸಿದೆ.

ಬೆಳಗಾವಿಇಯ ಖಡಕ್‌ ಗಲ್ಲಿಯಲ್ಲಿ ಶುಕ್ರವಾರ ನಡೆದ ಉರುಸ್ ಮೆರವಣಿಗೆ ಹಿಂದೂ-ಮುಸ್ಲಿಮರ ನಡುವೆ ಜಟಾಪಟಿಗೆ ಕಾರಣವಾಗಿದೆ. ಪ್ರತಿವರ್ಷದಂತೆ ಈ ವರ್ಷವೂ ಮಾಬುಸುಬಾನಿ ದರ್ಗಾ ಉರುಸ್ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಬೆಳಗಾವಿಯ ಖಡಕ್‌ ಗಲ್ಲಿ ಮೂಲಕ ಮೆರವಣಿಗೆ ಸಾಗಿದೆ. ಆಗ ಕೆಲ ಯುವಕರು ‘ಐ ಲವ್ ಮೊಹಮ್ಮದ್’ ಎಂಬ ಘೋಷಣೆ ಕೂಗುತ್ತಾ ತೆರಳಿದ್ದಾರೆ. ಇದು ಸ್ಥಳೀಯ ಹಿಂದೂಗಳನ್ನು ಕೆರಳಿಸಿದ್ದು ಇದಕ್ಕೆ ಆಕ್ಷೇಪಿಸಿದ್ದಾರೆ. ಇದಾದ ಕೆಲಹೊತ್ತಿನಲ್ಲೇ ಅನ್ಯಕೋಮಿನ ಯುವಕರು ಹಿಂದೂಗಳ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ತಲ್ವಾರ್ ಪ್ರದರ್ಶಿಸಿ ಗೂಂಡಾವರ್ತನೆ ತೋರಿದ ಆರೋಪ ಕೇಳಿಬಂದಿದೆ.

ಪ್ರತಿ ವರ್ಷ ಜಾಲ್ಗಾರ ಗಲ್ಲಿ ಮತ್ತು ಶನಿವಾರ ಕೂಟ ಗಲ್ಲಿ ಮೂಲಕ ದರ್ಗಾಕ್ಕೆ ಉರುಸ್ ಮೆರವಣಿಗೆ ಹೋಗುತ್ತಿತ್ತು. ಆದರೆ, ಈ ಬಾರಿ ಪೊಲೀಸರ ಅನುಮತಿ ಇಲ್ಲದಿದ್ದರೂ ಮರಾಠಿ ಸಮುದಾಯದವರೇ ಹೆಚ್ಚಿರುವ ಖಡಕ್ ಗಲ್ಲಿಯಲ್ಲಿ ಉರುಸ್ ಮೆರವಣಿಗೆ ಸಾಗಿದೆ. ಇದೇ ಸ್ಥಳೀಯ ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಘಟನಾ ಸ್ಥಳಕ್ಕೆ ಪೊಲೀಸ್ ಕಮಿಷನರ್ ಭೂಷಣ್ ಬೊರಸೆ, ಡಿಸಿಪಿ ನಾರಾಯಣ ಭರಮನಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಲ್ಲುತೂರಾಟ ಮಾಡಿದವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಸದ್ಯ ಬೆಳಗಾವಿಯ ಖಡಕ್‌ ಗಲ್ಲಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಮುಂಜಾಗ್ರತಾ ಕ್ರಮವಾಗಿ ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದೆ.

ದಾವಣಗೆರೆಯಲ್ಲೂ ಸಂಘರ್ಷಕ್ಕೆ ಕಾರಣವಾಗಿದ್ದ ‘ಐ ಲವ್ ಮೊಹಮ್ಮದ್’!

ಕೆಲವು ದಿನಗಳ ಹಿಂದಷ್ಟೇ ದಾವಣಗೆರೆಯ ಕಾರ್ಲ್ ಮಾರ್ಕ್ಸ್ ನಗರದಲ್ಲಿ ಕೂಡ ‘ಐ ಲವ್ ಮೊಹಮ್ಮದ್’ ಫ್ಲೆಕ್ಸ್ ಹಾಕಿದ್ದ ವಿಚಾರ ಹಿಂದೂ-ಮುಸ್ಲಿಮರ ನಡುವೆ ಸಂಘರ್ಷಕ್ಕೆ ಕಾರಣವಾಗಿತ್ತು. ಕಲ್ಲು ತೂರಾಟ ಕೂಡ ನಡೆದಿತ್ತು. ‘ಐ ಲವ್ ಮೊಹಮ್ಮದ್’ ಎಂಬ ಬರಹವುಳ್ಳ ಫ್ಲೆಕ್ಸ್ ಹಾಕಿದ್ದನ್ನು ಹರಿದು ಹಾಕಲಾಗಿದೆ ಎಂದು ಕಿಡಿಗೇಡಿಗಳು ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹರಿಯಬಿಟ್ಟಿದ್ದರಿಂದ ಸಂಘರ್ಷ ಆರಂಭವಾಗಿತ್ತು.

ಒಟ್ಟಾರೆಯಾಗಿ, ಉತ್ತರ ಪ್ರದೇಶದ ಕಾನ್ಪುರದಲ್ಲಿ ಶುರುವಾಗಿ, ದೇಶದ ವಿವಿಧೆಡೆಗೆ ಹಬ್ಬಿರುವ ‘ಐ ಲವ್ ಮೊಹಮ್ಮದ್’ ಫ್ಲೆಕ್ಸ್, ಘೋಷಣೆ ಅಭಿಯಾನ ಇದೀಗ ಕರ್ನಾಟಕಕ್ಕೆ ತಲೆನೋವು ತಂದೊಡ್ಡಿದೆ.

ಇದನ್ನೂ ಓದಿ: I Love Muhammad Row: ‘ಐ ಲವ್ ಮುಹಮ್ಮದ್' ವಿವಾದದ ನಡುವೆಯೇ ಯೋಗಿ ಆದಿತ್ಯನಾಥ್, ಐ ಲವ್ ಬುಲ್ಡೋಜರ್ ಪೋಸ್ಟರ್‌ಗಳು ಪ್ರತ್ಯಕ್ಷ