ದೆಹಲಿ, ಅ. 23: ಈ ವರ್ಷದ ಮೇ ಆರಂಭದಲ್ಲಿ ಪಾಕಿಸ್ತಾನ ಪೋಷಿತ ಭಯೋತ್ಪಾದಕರ ವಿರುದ್ಧ ಆಪರೇಷನ್ ಸಿಂದೂರ್ ಕಾರ್ಯಾಚರಣೆ ನಡೆಸುವ ಮೂಲಕ ಭಾರತೀಯ ಸೇನೆ ತನ್ನ ಸಾಮರ್ಥ್ಯವನ್ನು ಜಗತ್ತಿನ ಮುಂದೆ ತೆರೆದಿಟ್ಟಿತು. 3 ಸೇನೆಗಳಾದ ನೌಕಾ ಪಡೆ, ವಾಯು ಪಡೆ ಮತ್ತು ಭೂ ಸೇನೆ ಸೇರಿ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿತು. ಇದೀಗ ಭಾರತವು ಈ 3 ಸಶಸ್ತ್ರ ಪಡೆಗಳ ಬಲವನ್ನು ಹೆಚ್ಚಿಸಲು 79,000 ಕೋಟಿ ರೂ. ಮೌಲ್ಯದ ಮಿಲಿಟರಿ ಹಾರ್ಡ್‌ವೇರ್ ಖರೀದಿಸಲು ಮುಂದಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅಧ್ಯಕ್ಷತೆಯಲ್ಲಿ ಗುರುವಾರ (ಅಕ್ಟೋಬರ್ 23) ಸಭೆ ನಡೆಸಿ ಸೇನೆಯ ಹಲವು ಶಾಪಿಂಗ್ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು.
ಈ ಉನ್ನತ ಮಟ್ಟದ ಸಭೆಯಲ್ಲಿ ಯಾವ ಪಡೆಗೆ, ಯಾವೆಲ್ಲ ಸೌಲಭ್ಯ ಖರೀದಿಸಲು ಅನುಮೋದನೆ ನೀಡಲಾಗಿದೆ ಎನ್ನುವ ವಿವರ ಇಲ್ಲಿದೆ:
ರಕ್ಷಣಾ ಸಚಿವಾಲಯದ ಎಕ್ಸ್ ಪೋಸ್ಟ್:
ಈ ಸುದ್ದಿಯನ್ನೂ ಓದಿ: Rajnath Singh: ಪಾಕಿಸ್ತಾನದ ಪ್ರತಿ ಇಂಚನ್ನೂ ತಲುಪಲಿದೆ ಬ್ರಹ್ಮೋಸ್: ಶತ್ರು ರಾಷ್ಟ್ರಕ್ಕೆ ರಾಜನಾಥ್ ಸಿಂಗ್ ಖಡಕ್ ಎಚ್ಚರಿಕೆ
ಭೂ ಸೇನೆ
Mk-II NAMIS ಎಂದು ಕರೆಯಲ್ಪಡುವ ನಾಗ್ ಕ್ಷಿಪಣಿ ಖರೀದಿಸುವ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ. ನೆಲ-ಆಧಾರಿತ ಮೊಬೈಲ್ ELINT ವ್ಯವಸ್ಥೆGBMES ಮತ್ತು ಅವುಗಳ ಮೇಲೆ ಅಳವಡಿಸುವ ಕ್ರೇನ್‌ಗಳನ್ನು ಹೊಂದಿರುವ ಹೈ-ಮೊಬಿಲಿಟಿ ವಾಹನ ಖರೀದಿಗೂ ಸರ್ಕಾರ ಮುಂದಾಗಿದೆ ಎಂದು ಪ್ರಕಟಣೆ ತಿಳಿಸಿದೆ. NAMIS ಶತ್ರು ಯುದ್ಧ ವಾಹನಗಳು ಮತ್ತು ಬಂಕರ್‌ಗಳನ್ನು ನಾಶ ಮಾಡುವ ಸೈನ್ಯದ ಸಾಮರ್ಥ್ಯವನ್ನು ಸುಧಾರಿಸುತ್ತದೆ. GBMES ಯುದ್ಧತಂತ್ರದ ಮಾಹಿತಿ ಸಂಗ್ರಹಿಸುತ್ತದೆ. ಹೈ-ಮೊಬಿಲಿಟಿ ವಾಹನಗಳು ವೈವಿಧ್ಯ ಭೂ ಪ್ರದೇಶಗಳಲ್ಲಿ ಪಡೆಗಳಿಗೆ ಲಾಜಿಸ್ಟಿಕ್ಸ್ ಸೌಲಭ್ಯ ಒದಗಿಸಲು ನೆರವಾಗುತ್ತವೆ.
ನೌಕಾ ಪಡೆ
ನೌಕಾ ಪಡೆಯ ಶಾಪಿಂಗ್ ಪಟ್ಟಿಯಲ್ಲಿ ಲ್ಯಾಂಡಿಂಗ್ ಪ್ಲಾಟ್‌ಫಾರ್ಮ್ ಡಾಕ್‌ಗಳು (LPD), 30 ಎಂಎಂ ನೇವಲ್ ಸರ್ಫೇಸ್ ಗನ್, ಸುಧಾರಿತ ಹಗುರವಾದ ಟಾರ್ಪಿಡೊ, ಎಲೆಕ್ಟ್ರೋ-ಆಪ್ಟಿಕಲ್ ಇನ್ಫ್ರಾರೆಡ್ ಸರ್ಚ್ ಮತ್ತು ಟ್ರ್ಯಾಕ್ ಸಿಸ್ಟಮ್ ಹಾಗೂ 76 ಎಂಎಂ ಸೂಪರ್ ರ‍್ಯಾಪಿಡ್ ಗನ್ ಮೌಂಟ್‌ಗಾಗಿ ಸ್ಮಾರ್ಟ್ ಮದ್ದುಗುಂಡುಗಳು ಸೇರಿವೆ.
ಭಾರತೀಯ ನೌಕಾ ಪಡೆಯು ಸೇನೆ ಮತ್ತು ವಾಯು ಪಡೆಯೊಂದಿಗೆ ಸೇರಿ ಜಂಟಿ ದಾಳಿ ಕಾರ್ಯಾಚರಣೆ ನಡೆಸಲು ಲ್ಯಾಂಡಿಂಗ್ ಪ್ಲಾಟ್‌ಫಾರ್ಮ್ ಡಾಕ್‌ಗಳು ಉಪಯುಕ್ತ. ಈ ಪ್ಲಾಟ್‌ಫಾರ್ಮ್‌ಗಳನ್ನು ವಿಪತ್ತು ನಿರ್ವಹಣೆಗೂ ನಿಯೋಜಿಸಬಹುದು. ಸುಧಾರಿತ, ಹಗುರ ಟಾರ್ಪಿಡೊ ಡಿಆರ್‌ಡಿಒದ ನೌಕಾ ವಿಜ್ಞಾನ ಮತ್ತು ತಾಂತ್ರಿಕ ಪ್ರಯೋಗಾಲಯವು ಅಭಿವೃದ್ಧಿಪಡಿಸಿದ ಸ್ವದೇಶಿ ರಕ್ಷಣಾ ವ್ಯವಸ್ಥೆಯಾಗಿದ್ದು, ಇದನ್ನು ಸಾಂಪ್ರದಾಯಿಕ, ಪರಮಾಣು ಮತ್ತು ಸಣ್ಣ ಜಲಾಂತರ್ಗಾಮಿ ನೌಕೆಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಬಳಸಬಹುದು.
ವಾಯು ಪಡೆ
ವಾಯುಪಡೆಗಾಗಿ ದೀರ್ಘ ಶ್ರೇಣಿಯ ಗುರಿ ಸ್ಯಾಚುರೇಶನ್/ನಾಶ ವ್ಯವಸ್ಥೆ (CLRTS/DS) ಮತ್ತು ಇತರ ಪ್ರಸ್ತಾಪಗಳನ್ನು ಅನುಮೋದಿಸಲಾಗಿದೆ. ಈ ವ್ಯವಸ್ಥೆಯು ಮಿಷನ್ ಪ್ರದೇಶದಲ್ಲಿ ವಿಮಾನಗಳು ಟೇಕ್-ಆಫ್, ಲ್ಯಾಂಡ್, ನ್ಯಾವಿಗೇಟ್, ಪತ್ತೆ ಮತ್ತು ಪೇಲೋಡ್ ಅನ್ನು ತಲುಪಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿಕೆ ತಿಳಿಸಿದೆ.