ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Yatri Doctor: ಜ್ಯೋತಿ ಮಲ್ಹೋತ್ರಾ ಬಂಧನದ ಬಳಿಕ ಯಾತ್ರಿ ಡಾಕ್ಟರ್ ನವಂಕೂರ್ ಚೌಧರಿ ಮೇಲೆಯೂ ಅನುಮಾನ; ಯಾರಿವನು? ಏನಿವನ ಹಿನ್ನೆಲೆ?

ಎಂಬಿಬಿಎಸ್ ವೈದ್ಯ ನವಂಕುರ್ ಚೌಧರಿ ಯುಟ್ಯೂಬ್‌ನಲ್ಲಿ ಯಾತ್ರಿ ಡಾಕ್ಟರ್ ಎಂದೇ ಜನಪ್ರಿಯ. ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸಿದ ಆರೋಪದಲ್ಲಿ ಯುಟ್ಯೂಬರ್‌ ಜ್ಯೋತಿ ಮಲ್ಹೋತ್ರಾನನ್ನು ಬಂಧಿಸಿದ ನಂತರ ತನ್ನ ವಿರುದ್ಧದ ಬೇಹುಗಾರಿಕೆ ಆರೋಪಗಳನ್ನು ನವಂಕುರ್ ಚೌಧರಿ ಸಂಪೂರ್ಣವಾಗಿ ತಿರಸ್ಕರಿಸಿದ್ದಾನೆ.

ನವಂಕುರ್ ಚೌಧರಿ

ನವದೆಹಲಿ: ಎಂಬಿಬಿಎಸ್ ವೈದ್ಯ, ಯುಟ್ಯೂಬರ್ (YouTuber) ನವಂಕುರ್ ಚೌಧರಿ (Navankur Chaudhary) ಯಾತ್ರಿ ಡಾಕ್ಟರ್ (Yatri Doctor) ಎಂದೇ ಜನಪ್ರಿಯ. ಪಾಕಿಸ್ತಾನದ ಪರ ಬೇಹುಗಾರಿಕೆ ಮಾಡಿದ ಆರೋಪದಲ್ಲಿ ಜ್ಯೋತಿ ಮಲ್ಹೋತ್ರಾ (Jyoti Malhotra)ನನ್ನು ಬಂಧಿಸಿದ ನಂತರ ತನ್ನ ವಿರುದ್ಧದ ಬೇಹುಗಾರಿಕೆ ಆರೋಪಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾನೆ. ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೊದಲ್ಲಿ ಚೌಧರಿ ಈ ಆರೋಪಗಳನ್ನು ಆಧಾರರಹಿತ ಎಂದು ಕರೆದಿದ್ದು, ತಮ್ಮ ವಿರುದ್ಧ ಹಬ್ಬಿಸಲಾಗುತ್ತಿರುವ ಕಥನವನ್ನು ನಕಲಿ ಎಂದು ವಿವರಿಸಿದ್ದಾನೆ.

ಯಾತ್ರಿ ಡಾಕ್ಟರ್ ನವಂಕುರ್ ಚೌಧರಿ ಯಾರು?

ಹರಿಯಾಣದ ರೋಹ್ಟಕ್‌ನಲ್ಲಿ 1996ರ ಮಾರ್ಚ್ 2ರಂದು ಜನಿಸಿದ ನವಂಕುರ್ ಚೌಧರಿ, 2015ರಲ್ಲಿ ಮದ್ರಾಸ್ ಮೆಡಿಕಲ್ ಕಾಲೇಜಿನಿಂದ ಎಂಬಿಬಿಎಸ್ ಪದವಿ ಪಡೆದ ರಿಜಿಸ್ಟರ್ಡ್ ವೈದ್ಯ. ರೋಹ್ಟಕ್‌ನಲ್ಲಿ ಶಾಲಾ ಶಿಕ್ಷಣ ಮುಗಿಸಿದ ನಂತರ ವೈದ್ಯಕೀಯ ವೃತ್ತಿಯನ್ನು ಆಯ್ದುಕೊಂಡ ಈತ ಪ್ರಸ್ತುತ ದೆಹಲಿಯಲ್ಲಿ ವಾಸಿಸುತ್ತಿದ್ದಾನೆ ಎಂದು ಲಿಂಕ್ಡ್‌ಇನ್ ಪ್ರೊಫೈಲ್ ತಿಳಿಸಿದೆ.

2017ರಲ್ಲಿ ವೈದ್ಯಕೀಯ ವೃತ್ತಿಯನ್ನು ತೊರೆದು, ತನ್ನ ಪ್ರಯಾಣದ ಅನುಭವವನ್ನು ವಿವರಿಸಲು ಯಾತ್ರಿ ಡಾಕ್ಟರ್ ಎಂಬ ಯುಟ್ಯೂಬ್ ಚಾನೆಲ್ ಆರಂಭಿಸಿದ. ಇಂದು ಈ ಚಾನೆಲ್‌ ಸುಮಾರು 20 ಲಕ್ಷ ಸಬ್‌ಸ್ಕ್ರೈಬರ್ಸ್, ಇನ್‌ಸ್ಟಾಗ್ರಾಮ್‌ನಲ್ಲಿ 6.5 ಲಕ್ಷಕ್ಕೂ ಅಧಿಕ ಫಾಲೋವರ್‌ಗಳನ್ನು ಹೊಂದಿದೆ. ಆತನ ವಿಡಿಯೊ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದ್ದು, ಭಾರತದಲ್ಲಿ ಜನಪ್ರಿಯನಾಗಿದ್ದಾನೆ. ಇದುವರೆಗೆ ಆತ 144 ದೇಶಗಳಿಗೆ ಭೇಟಿ ನೀಡಿದ್ದಾನೆ ಮತ್ತು ತನ್ನ ಯಾತ್ರೆಯ ಅನುಭವಗಳನ್ನು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳುತ್ತಿದ್ದಾನೆ.

ಯಾತ್ರಿ ಡಾಕ್ಟರ್ ಸುದ್ದಿಯಲ್ಲಿರೋದು ಯಾಕೆ?

ನವಂಕುರ್ ಚೌಧರಿ ಪಾಕಿಸ್ತಾನ ಹೈಕಮಿಷನ್‌ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಹಳೆಯ ವಿಡಿಯೊ ವೈರಲ್‌ ಆಗಿತ್ತು. ಅಲ್ಲದೆ ಆತ ಬಿಎಸ್‌ಎಫ್ ಯೋಧರನ್ನು ಟೀಕಿಸಿದ್ದ ಆರೋಪವೂ ಇದೆ.
ಜತೆಗೆ ಭಾರತದ ತಪ್ಪಾದ ನಕ್ಷೆಯನ್ನು ಪ್ರದರ್ಶಿಸಿದ್ದ. ಚೌಧರಿ ಸ್ಪಷ್ಟನೆ ನೀಡಿ, "ನಾನು ಪಾಕಿಸ್ತಾನಕ್ಕೆ ಕೇವಲ ಒಂದು ಬಾರಿ ಮಾತ್ರ ಭೇಟಿ ನೀಡಿದ್ದೇನೆ" ಎಂದಿದ್ದಾನೆ. ಇದು ತನ್ನ 197 ದೇಶಗಳಿಗೆ ಭೇಟಿ ನೀಡುವ ಗುರಿಯ ಭಾಗವಾಗಿತ್ತು ಎಂದು ವಿವರಿಸಿದ್ದಾನೆ.

ಈ ಸುದ್ದಿಯನ್ನು ಓದಿ: YouTuber Jyoti Malhotra: ಬಗೆದಷ್ಟು ಬಯಲಾಗುತ್ತಿದೆ ದೇಶದ್ರೋಹಿಯ ಕತೆ; ಪಹಲ್ಗಾಮ್ ದಾಳಿಗೂ ಮುನ್ನ ಪಾಕಿಸ್ತಾನ, ಚೀನಾಕ್ಕೆ ತೆರಳಿದ್ದ ಜ್ಯೋತಿ ಮಲ್ಹೋತ್ರಾ

ಪಾಕಿಸ್ತಾನದ ಗೂಢಚಾರರಿಗೆ ಸೂಕ್ಷ್ಮ ಸೈನಿಕ ಮಾಹಿತಿಯನ್ನು ಒದಗಿಸಿದ ಆರೋಪದ ಮೇಲೆ ಬಂಧಿತಳಾದ ಜ್ಯೋತಿ ಮಲ್ಹೋತ್ರಾ ಜತೆಗಿನ ಸಂಪರ್ಕದ ಬಗ್ಗೆ ಮಾತನಾಡಿದ ಚೌಧರಿ, "ಅವರು ನನ್ನ ಅಭಿಮಾನಿಯಾಗಿ ನನ್ನನ್ನು ಸಂಪರ್ಕಿಸಿದ್ದರು. ಅದಕ್ಕಿಂತ ಮೊದಲು ನನಗೆ ಅವರ ಬಗ್ಗೆ ಗೊತ್ತೇ ಇರಲಿಲ್ಲ. ನಾವು ಕೇವಲ ಯುಟ್ಯೂಬ್ ಬಗ್ಗೆ ಸ್ವಲ್ಪ ಹೊತ್ತು ಮಾತನಾಡಿದ್ದೇವೆ" ಎಂದಿದ್ದಾರೆ.

ಹರಿಯಾಣದವಳಾದ ಆದ ಜ್ಯೋತಿ ಮಲ್ಹೋತ್ರಾ ಟ್ರಾವೆಲ್ ವಿತ್ ಜೊ ಎಂಬ ಯುಟ್ಯೂಬ್ ಚಾನೆಲ್ ನಡೆಸುತ್ತಿದ್ದು, ಕಳೆದ ವಾರ ಬಂಧನಕ್ಕೊಳಗಾಗಿದ್ದಾಳೆ. ಆಕೆ ಪಾಕಿಸ್ತಾನ ಹೈಕಮಿಷನ್‌ನ ಅಧಿಕಾರಿಯೊಂದಿಗೆ ಸಂಪರ್ಕದಲ್ಲಿದ್ದಳು ಮತ್ತು ಕನಿಷ್ಠ ಎರಡು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

"ನನ್ನ ಕುಟುಂಬದ ಹಲವು ಸದಸ್ಯರು ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದಾರೆ" ಎಂದು ತನ್ನ ದೇಶಭಕ್ತಿಯ ಬಗ್ಗೆ ಹೇಳಿಕೊಂಡಿದ್ದಾನೆ. "ನಾನು ಯಾವುದೇ ತನಿಖೆಗೆ ಒಳಗಾಗಿಲ್ಲ. ಯಾವುದೇ ಸಂಸ್ಥೆಗೆ ಅಗತ್ಯವಿದ್ದರೆ ಸಂಪೂರ್ಣ ಸಹಕಾರ ನೀಡಲು ಸಿದ್ಧ" ಎಂದು ಹೇಳಿದ್ದಾನೆ. "ನಕಲಿ ಕಥನಗಳ ಆಧಾರದ ಮೇಲೆ ತೀರ್ಮಾನಕ್ಕೆ ಬರಬೇಡಿ" ಎಂದು ತಮ್ಮ ಫಾಲೋವರ್ಸ್‌ಗೆ ಮನವಿ ಮಾಡಿದ್ದಾನೆ.