ನವದೆಹಲಿ: ಭಾರತವು (India) ಪಾಕಿಸ್ತಾನದ ವಿಮಾನಗಳಿಗೆ (Pakistani Flights) ತನ್ನ ವಾಯುಪ್ರದೇಶವನ್ನು (Airspace) ಸೆಪ್ಟೆಂಬರ್ 24ರವರೆಗೆ ಮುಚ್ಚುವ ಆದೇಶವನ್ನು ವಿಸ್ತರಿಸಿದೆ. ಇದಕ್ಕೆ ಕೆಲವೇ ದಿನಗಳ ಮೊದಲು ಪಾಕಿಸ್ತಾನ ಕೂಡ ಭಾರತೀಯ ವಿಮಾನಗಳಿಗೆ (Indian Flights) ತನ್ನ ವಾಯುಪ್ರದೇಶವನ್ನು ಸೆಪ್ಟೆಂಬರ್ 24ರವರೆಗೆ ಮುಚ್ಚುವ ಆದೇಶ ಹೊರಡಿಸಿತ್ತು. ಎರಡೂ ರಾಷ್ಟ್ರಗಳು ಈ ವಾಯುಪ್ರದೇಶ ಮುಚ್ಚುವುದನ್ನು ವಿಸ್ತರಿಸಿರುವ ‘ನೋಟಿಸ್ ಟು ಏರ್‌ಮೆನ್’ (ನೋಟಾಮ್) ಅಧಿಸೂಚನೆಗಳನ್ನು ಬಿಡುಗಡೆ ಮಾಡಿವೆ. ನೋಟಾಮ್ ಎಂಬುದು ವಿಮಾನ ಕಾರ್ಯಾಚರಣೆಯಲ್ಲಿ ತೊಡಗಿರುವ ಸಿಬ್ಬಂದಿಗೆ ಅಗತ್ಯವಾದ ಮಾಹಿತಿಯನ್ನು ಒಳಗೊಂಡಿರುವ ಅಧಿಕೃತ ಸೂಚನೆಯಾಗಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏಪ್ರಿಲ್ 22ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟ ನಂತರ, ಭಾರತವು ಏಪ್ರಿಲ್ 30ರಿಂದ ಪಾಕಿಸ್ತಾನದ ವಿಮಾನ ಸಂಸ್ಥೆಗಳಿಂದ ನಿರ್ವಹಿಸಲ್ಪಡುವ, ಒಡೆತನದ ಅಥವಾ ಗುತ್ತಿಗೆಗೆ ಪಡೆದ ವಿಮಾನಗಳು ಸೇರಿದಂತೆ ಸೈನಿಕ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿತು. ಆಗಸ್ಟ್ 22ರಂದು ಜಾರಿಗೊಳಿಸಿದ ನೋಟಾಮ್ ಪ್ರಕಾರ, ಸೆಪ್ಟೆಂಬರ್ 23ರ ರಾತ್ರಿ 11:59ರವರೆಗೆ (ಯುಟಿಸಿ ಸಮಯದಲ್ಲಿ, ಸೆಪ್ಟೆಂಬರ್ 24 ಬೆಳಗ್ಗೆ 5:30) ಪಾಕಿಸ್ತಾನದ ವಿಮಾನಗಳಿಗೆ ಭಾರತದ ವಾಯುಪ್ರದೇಶ ಲಭ್ಯವಿರುವುದಿಲ್ಲ. ಪಾಕಿಸ್ತಾನವು ಆಗಸ್ಟ್ 20ರಂದು ಭಾರತೀಯ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚುವ ನೋಟಾಮ್ ಜಾರಿಗೊಳಿಸಿತು.
ಈ ಸುದ್ದಿಯನ್ನು ಓದಿ: Viral Video: ಅವಲಕ್ಕಿ ಚಿತ್ನಾನ್ನಕ್ಕೆ 500 ರೂ.! ನಟ ಗೋವಿಂದ ಪತ್ನಿಯ ಪ್ರತಿಕ್ರಿಯೆ ಹೀಗಿತ್ತು
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ಪಾಕಿಸ್ತಾನದ ವಿರುದ್ಧ ಹಲವು ಕ್ರಮಗಳನ್ನು ಕೈಗೊಂಡಿತು. ಈ ಕ್ರಮಗಳಲ್ಲಿ ವಾಯುಪ್ರದೇಶ ಮುಚ್ಚುವುದು ಕೂಡ ಒಂದಾಗಿದೆ. ಆರಂಭದಲ್ಲಿ ಈ ನಿಷೇಧವು ಮೇ 24ರವರೆಗೆ ಇತ್ತು. ಆದರೆ ಪ್ರತಿ ತಿಂಗಳು ಇದನ್ನು ವಿಸ್ತರಿಸಲಾಗುತ್ತಿದೆ. ಇದಲ್ಲದೆ ಇಂಡಸ್ ಜಲ ಒಪ್ಪಂದವನ್ನೂ ತಾತ್ಕಾಲಿಕವಾಗಿ ರದ್ದುಗೊಳಿಸುವುದು, ಅಟ್ಟಾರಿ ಚೆಕ್‌ಪೋಸ್ಟ್ ಅನ್ನು ಕೂಡ ಬಂದ್ ಮಾಡಲಾಗಿದೆ.
ಎರಡೂ ದೇಶಗಳ ಹೈಕಮಿಷನ್‌ಗಳ ಸಿಬ್ಬಂದಿಯ ಸಂಖ್ಯೆಯನ್ನು ಕಡಿಮೆ ಮಾಡಿದ್ದು ಜತೆಗೆ, ಪಾಕಿಸ್ತಾನದಿಂದ ನೇರ ಮತ್ತು ಪರೋಕ್ಷ ಆಮದುಗಳ ಮೇಲೆ ನಿಷೇಧ ಹೇರಲಾಗಿದೆ. ಬಂದರು, ಸಾಗರಿಕೆ ಮತ್ತು ಜಲಮಾರ್ಗ ಸಚಿವಾಲಯವು ಪಾಕಿಸ್ತಾನದ ಧ್ವಜ ಹೊಂದಿದ ಹಡಗುಗಳಿಗೆ ಭಾರತದ ಬಂದರುಗಳಿಗೆ ಪ್ರವೇಶ ನಿಷೇಧಿಸಿದ್ದು, ಭಾರತದ ಧ್ವಜದ ಹಡಗುಗಳು ಪಾಕಿಸ್ತಾನದ ಬಂದರುಗಳಿಗೆ ಭೇಟಿ ನೀಡುವುದನ್ನು ನಿಷೇಧಿಸಿದೆ.