ರಾಂಚಿ: ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ ನಕ್ಸಲರ ವಿರುದ್ಧ ಕಾರ್ಯಾಚರಣೆ ನಡೆದಿದೆ. ಈ ವೇಳೆ ಭದ್ರತಾ ಪಡೆಗಳು ಹಾಗೂ ಮಾವೋವಾದಿಗಳಿಗೆ ಭಾರೀ ಗುಂಡಿನ ದಾಳಿ ನಡೆದಿದೆ. ಗುಂಡಿನ ಚಕಮಕಿಯಲ್ಲಿ ಮೂವರು ನಕ್ಸಲರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಕ್ಸಲರ ಚಟುವಟಿಕೆಯ ಕೇಂದ್ರವಾದ ಘಾಗ್ರಾ ಪ್ರದೇಶದಲ್ಲಿ ಈ ಎನ್‌ಕೌಂಟರ್ ನಡೆದಿದೆ. ಅಧಿಕಾರಿಗಳ ಪ್ರಕಾರ, ಹತ್ಯೆಗೀಡಾದ ದಂಗೆಕೋರರು ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ವಿಭಜನೆಯಾದ ಜಾರ್ಖಂಡ್ ಜನ ಮುಕ್ತಿ ಪರಿಷತ್ (ಜೆಜೆಎಂಪಿ) ಸದಸ್ಯರಾಗಿದ್ದರು.
ಜಾರ್ಖಂಡ್ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಕಾರ್ಯಾಚರಣೆ) ಮೈಕೆಲ್ ಎಸ್ ರಾಜ್, ಶೋಧ ಕಾರ್ಯಾಚರಣೆಗಳು ಮುಗಿದ ನಂತರ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲಾಗುವುದು ಎಂದು ಹೇಳಿದರು. ಈ ಪ್ರದೇಶದಲ್ಲಿ ಸಶಸ್ತ್ರ ಬಂಡುಕೋರರ ಚಲನವಲನದ ಬಗ್ಗೆ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಜಾರ್ಖಂಡ್ ಪೊಲೀಸರು ಮತ್ತು ಸಿಆರ್‌ಪಿಎಫ್ ಸಿಬ್ಬಂದಿ ಸೇರಿದಂತೆ ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಸದ್ಯ ಕಾರ್ಯಾಚರಣೆ ನಡೆಯುತ್ತಿದೆ.
ಹತ್ತು ದಿನಗಳ ಹಿಂದೆ ಬೊಕಾರೊ ಜಿಲ್ಲೆಯಲ್ಲಿ ಜುಲೈ 16 ರಂದು, ಗೋಮಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಬಿರ್ಹೋರ್ಡೆರಾ ಅರಣ್ಯದಲ್ಲಿ ನಡೆದ ಕಾರ್ಯಾಚರಣೆಯಲ್ಲಿ, ತಲೆಗೆ ₹5 ಲಕ್ಷ ಬಹುಮಾನ ಘೋಷಿಸಲಾಗಿದ್ದ ಮಾವೋವಾದಿಯನ್ನು ಹೊಡೆದುರುಳಿಸಲಾಗಿತ್ತು. ಇತ್ತೀಚಿನ ತಿಂಗಳುಗಳಲ್ಲಿ, ಜಾರ್ಖಂಡ್ ಪೊಲೀಸರು ಮತ್ತು ಕೇಂದ್ರ ಅರೆಸೈನಿಕ ಪಡೆಗಳು ರಾಜ್ಯಾದ್ಯಂತ ನಕ್ಸಲ್ ವಿರೋಧಿ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿವೆ. ಲಾತೇಹಾರ್, ಲೋಹರ್ದಾಗ, ಗುಮ್ಲಾ ಮತ್ತು ಚತ್ರ ಅರಣ್ಯ ಜಿಲ್ಲೆಗಳು ಆಗಾಗ್ಗೆ ಹಿಂಸಾತ್ಮಕ ಎನ್ಕೌಂಟರ್‌ಗಳ ರಂಗಭೂಮಿಗಳಾಗಿವೆ. ಅನೇಕ ಕಾರ್ಯಾಚರಣೆಗಳಲ್ಲಿ, ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ಛತ್ತೀಸ್‌ಗಢದಲ್ಲಿ 2026ರ ಮಾರ್ಚ್ ವೇಳೆಗೆ ನಕ್ಸಲಿಸಂ ಅನ್ನು ಬೇರು ಸಮೇತ ನಿರ್ನಾಮ ಮಾಡುವ ಸರ್ಕಾರದ ಆಶಯದೊಂದಿಗೆ ಭದ್ರತಾ ಪಡೆ ಬಸ್ತಾರ್ ಪ್ರದೇಶದಲ್ಲಿನ ದಟ್ಟ ಅರಣ್ಯದಲ್ಲಿ ಅಡಗಿರುವ ನಕ್ಸಲರ ಹುಡುಕಾಟಕ್ಕೆ ತೀವ್ರ ಶೋಧ ನಡೆಸಿದೆ. ಮಳೆಗಾಲವಾದರೂ ನಕ್ಸಲರ ಶೋಧ ಕಾರ್ಯವನ್ನು ನಿಲ್ಲಿಸುವುದಿಲ್ಲ ಎಂದು ಇತ್ತೀಚಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಿದ್ದರು. ಅದರಂತೆ ಮಳೆಯ ನಡುವೆಯೂ ತುಂಬಿ ಹರಿಯುತ್ತಿರುವ ನದಿಗಳಲ್ಲಿ ದಾಟಿ ನಕ್ಸಲರ ಹುಡುಕಾಟ ನಡೆಸುತ್ತಿದ್ದಾರೆ. ಮಳೆಗಾಲದಲ್ಲೂ ನಕ್ಸಲ್‌ರ ಶೋಧ ಕಾರ್ಯಾಚರಣೆಗಳು ಮುಂದುವರೆದಿವೆ.
ಈ ಸುದ್ದಿಯನ್ನೂ ಓದಿ: Anti Naxal Operation: ತಲೆಗೆ 45ಲಕ್ಷ ರೂ. ಇನಾಮು ಹೊಂದಿದ್ದ ನಕ್ಸಲ್ ಕಮಾಂಡರ್ ಎನ್‌ಕೌಂಟರ್
ಸಿಆರ್‌ಪಿಎಫ್ ಪಡೆಗಳು ಹಲವಾರು ದಿನಗಳ ಕಾಲ ಕಾಡಿನಲ್ಲಿಯೇ ಇರುವ ಹಿನ್ನೆಲೆ ಅವರಿಗೆ ಮಲೇರಿಯಾದಂತಹ ಸೋಂಕಿನ ಅಪಾಯ ಹೆಚ್ಚು. ಈ ಹಿನ್ನೆಲೆ ಭದ್ರತಾ ಪಡೆಗಾಗಿ ವಿಶೇಷ ಆರೋಗ್ಯದ ಕಿಟ್ಗಳನ್ನು ಒದಗಿಸಲಾಗಿದೆ. ಇದರಿಂದ ಅವರಿಗೆ ಕಾಡಿನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡುವ ಜೊತೆಗೆ ಆರೋಗ್ಯದ ಸುರಕ್ಷತೆ ಕಾಪಾಡಬಹುದು. ಶೋಧ ಕಾರ್ಯದಿಂದ ಹಿಂದಿರುಗಿದ ಭದ್ರತಾ ಪಡೆಯ ಯೋಧರ ಆರೋಗ್ಯ ಪರಿಶೀಲನೆ ಅವರಿಗೆ ಸಾಕಷ್ಟು ವಿಶ್ರಾಂತಿ ಕೂಡ ನೀಡುತ್ತಿರುವ ಹಿನ್ನೆಲೆ ಅವರಿಗೆ ಆರೋಗ್ಯ ಸಮಸ್ಯೆ ಕಂಡು ಬಂದಿಲ್ಲ. ಹಾಗೇ ಕಾರ್ಯಾಚರಣೆ ಅಡೆತಡೆ ಇಲ್ಲದೆ ಸಾಗಿದೆ ಎಂದು ದಂತೇವಾಡ ಎಸ್ಪಿ ಗೌರವ್ ರೈ ಮಾಹಿತಿ ನೀಡಿದ್ದಾರೆ.