ನವದೆಹಲಿ: ಪ್ರತಿಷ್ಠಿತ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (JNU-Jawaharlal Nehru University) 2025–26ನೇ ಸಾಲಿನ ವಿದ್ಯಾರ್ಥಿ ಸಂಘಕ್ಕೆ ನವೆಂಬರ್ 4ರಂದು ಮತದಾನ ನಡೆಯಲಿದ್ದು, ನವೆಂಬರ್ 6ರಂದು ಫಲಿತಾಂಶ ಪ್ರಕಟಿಸಲಾಗುವುದು ಎಂದು ಚುನಾವಣಾ ಸಮಿತಿಯು ಗುರುವಾರ ತಿಳಿಸಿದೆ. ಅಕ್ಟೋಬರ್ 24ರಿಂದ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದ್ದು, ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ಮತದಾರರ ಪ್ರಾಥಮಿಕ ಪಟ್ಟಿ ಪ್ರದರ್ಶನ ಮತ್ತು ತಿದ್ದುಪಡಿ ಪ್ರಕ್ರಿಯೆ ನಡೆಯಲಿದೆ.
ಅಕ್ಟೋಬರ್ 25ರಂದು ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ನಾಮಪತ್ರ ಅರ್ಜಿಗಳನ್ನು ವಿತರಿಸಲಾಗುವುದು ಮತ್ತು ಅಕ್ಟೋಬರ್ 27ರೊಳಗಾಗಿ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಸಲ್ಲಿಸಬೇಕು. ಪರಿಶೀಲನೆ ಬಳಿಕ ಅಕ್ಟೋಬರ್ 28ರಂದು ಬೆಳಗ್ಗೆ 10ಕ್ಕೆ ಮಾನ್ಯ ನಾಮಪತ್ರಗಳ ಪಟ್ಟಿಯನ್ನು ಪ್ರಕಟಿಸಲಾಗುವುದು. ಅದೇ ದಿನ ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ನಾಮಪತ್ರ ಹಿಂಪಡೆಯಲು ಅವಕಾಶ ನೀಡಲಾಗಿದೆ. ಅಂತಿಮ ಅಭ್ಯರ್ಥಿಗಳ ಪಟ್ಟಿ ಸಂಜೆ 7 ಗಂಟೆಗೆ ಪ್ರಕಟವಾಗಲಿದ್ದು, ರಾತ್ರಿ 8ಕ್ಕೆ ಪತ್ರಿಕಾಗೋಷ್ಠಿ ಮತ್ತು ಪ್ರಚಾರ ಸ್ಥಳ ಹಂಚಿಕೆ ಕಾರ್ಯ ನಡೆಯಲಿದೆ.
ಪ್ರಚಾರ ಅವಧಿಯಲ್ಲಿ ಪ್ರತ್ಯೇಕ ಶಾಲಾ ಸಾಮಾನ್ಯ ಸಭೆಗಳು (GBMs) ಅಕ್ಟೋಬರ್ 29ರಿಂದ 31ರವರೆಗೆ ಹಾಗೂ ವಿಶ್ವವಿದ್ಯಾಲಯದ ಸಾಮಾನ್ಯ ಸಭೆ (UGBM) ನವೆಂಬರ್ 1ರಂದು ನಡೆಯಲಿದೆ. ಬಹುನಿರೀಕ್ಷಿತ ಅಧ್ಯಕ್ಷೀಯ ಚರ್ಚೆ ನವೆಂಬರ್ 2ರಂದು ನಡೆಯಲಿದೆ.
ಈ ಸುದ್ದಿಯನ್ನೂ ಓದಿ; Viral News: ಮದ್ಯ ಇಲ್ಲ, ಮಾಂಸ ಇಲ್ಲ; ಕುಟುಂಬವೊಂದರ ವಿವಾಹ ಆಮಂತ್ರಣ ಪತ್ರಿಕೆಯಲ್ಲಿತ್ತು ಈ ವಿವರ
ನವೆಂಬರ್ 3 “ಪ್ರಚಾರ ನಿಷೇಧ ದಿನ” ಘೋಷಣೆ
ನವೆಂಬರ್ 4ರಂದು ಮತದಾನ ಎರಡು ಅವಧಿಗಳಲ್ಲಿ(ಬೆಳಗ್ಗೆ 9ರಿಂದ ಮಧ್ಯಾಹ್ನ 1 ಮತ್ತು ಮಧ್ಯಾಹ್ನ 2:30ರಿಂದ ಸಂಜೆ 5:30) ನಡೆಯಲಿದೆ. ಮತ ಎಣಿಕೆ ರಾತ್ರಿ 9 ಗಂಟೆಗೆ ಆರಂಭವಾಗಲಿದೆ ಮತ್ತು ಅಂತಿಮ ಫಲಿತಾಂಶಗಳನ್ನು ನವೆಂಬರ್ 6ರಂದು ಪ್ರಕಟಿಸಲಾಗುವುದು ಎಂದು ಚುನಾವಣಾ ಸಮಿತಿ ಅಧ್ಯಕ್ಷ ರವಿ ಕಾಂತ್ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಇದೇ ತಿಂಗಳ ಆರಂಭದಲ್ಲಿ ವಿಶ್ವವಿದ್ಯಾಲಯವು ಚುನಾವಣಾ ಪ್ರಕ್ರಿಯೆ ಸುಗಮವಾಗಿ ನಡೆಯಲು ಮತ್ತು ಯಾವುದೇ ದೂರುಗಳನ್ನು ಪರಿಷ್ಕರಿಸಲು ದೂರು ಪರಿಹಾರ ಕೋಶವನ್ನು ರಚಿಸಲಾಗಿದೆ. ಕಳೆದ ವರ್ಷ, ನಾಲ್ಕು ಪ್ರಮುಖ ಸ್ಥಾನಗಳಲ್ಲಿ ಮೂರನ್ನು ಎಡಪಂಥೀಯ ವಿದ್ಯಾರ್ಥಿ ಸಂಘಟನೆ ಗೆದ್ದಿದ್ದರೆ, ಎಬಿವಿಪಿ (ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್) ಒಕ್ಕೂಟ ಕಾರ್ಯದರ್ಶಿ ಹುದ್ದೆಯನ್ನು ತನ್ನದಾಗಿಸಿಕೊಂಡಿತ್ತು. ಇದು ಸುಮಾರು ಒಂದು ದಶಕದ ಬಳಿಕ ಎಬಿವಿಪಿಯ ಮೊದಲ ಜಯವಾಗಿತ್ತು.