ನವದೆಹಲಿ: ಕಾಂಗ್ರೆಸ್ ಸಂಸದ ಪಿ. ಚಿದಂಬರಂ (P. Chidambaram) ಅವರ ತಮಿಳುನಾಡಿನಲ್ಲಿ (Tamil Nadu) 6.5 ಲಕ್ಷ ವಲಸೆ ಕಾರ್ಮಿಕರನ್ನು (Migrant workers) ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂಬ ಆರೋಪವನ್ನು "ತಪ್ಪು ಮತ್ತು ಆಧಾರರಹಿತ" ಎಂದು ಭಾರತದ ಚುನಾವಣಾ ಆಯೋಗ (Election Commission of India) ತಳ್ಳಿಹಾಕಿದೆ. ಚಿದಂಬರಂ ಚುನಾವಣಾ ಆಯೋಗದ ವಿಶೇಷ ಮತದಾರರ ಪರಿಷ್ಕರಣೆ ಕಾರ್ಯಕ್ರಮ(SIR)ವನ್ನು ಟೀಕಿಸಿ, ಬಿಹಾರದಿಂದ 65 ಲಕ್ಷ ಜನರನ್ನು "ಶಾಶ್ವತವಾಗಿ ವಲಸೆ ಹೋಗಿರುವವರು" ಎಂದು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಆರೋಪಿಸಿದ್ದರು.
ಚಿದಂಬರಂ ಅವರ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಚುನಾವಣಾ ಆಯೋಗ, "ರಾಜಕೀಯ ನಾಯಕರು ರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಎಸ್‌ಐಆರ್ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ತಪ್ಪು ಮಾಹಿತಿಯನ್ನು ಹರಡುವ ಅಗತ್ಯವಿಲ್ಲ" ಎಂದಿದೆ. ಈ ರೀತಿಯ ತಪ್ಪು ಮಾಹಿತಿಯನ್ನು ಮಾಧ್ಯಮಗಳಲ್ಲಿ ಉದ್ದೇಶಪೂರ್ವಕವಾಗಿ ಹರಡಲಾಗುತ್ತಿದೆ ಎಂದು ಆಯೋಗ ಆರೋಪಿಸಿದೆ. "ಬಿಹಾರದಿಂದ ಇತರ ರಾಜ್ಯಗಳಿಗೆ ಶಾಶ್ವತವಾಗಿ ವಲಸೆ ಹೋಗಿರುವ ಮತದಾರರ ನಿಖರ ಅಂಕಿಅಂಶವನ್ನು ಎಸ್‌ಐಆರ್ ಪೂರ್ಣಗೊಂಡ ನಂತರವೇ ತಿಳಿಯಲಾಗುವುದು" ಎಂದು ಆಯೋಗ ಸ್ಪಷ್ಟಪಡಿಸಿದೆ.
ಭಾರತದ ಸಂವಿಧಾನ ಮತ್ತು ಜನಪ್ರತಿನಿಧಿಗಳ ಕಾಯಿದೆ 1950ರ ಪ್ರಕಾರ, ಒಂದು ಕ್ಷೇತ್ರದಲ್ಲಿ ಸಾಮಾನ್ಯವಾಗಿ ನೆಲೆಸಿರುವ ಪ್ರತಿಯೊಬ್ಬ ವ್ಯಕ್ತಿಯು ಆ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಲು ಅರ್ಹನಾಗಿರುತ್ತಾನೆ. "ತಮಿಳುನಾಡಿನಲ್ಲಿ 6.5 ಲಕ್ಷ ಮತದಾರರ ನೋಂದಣಿಯ ಬಗ್ಗೆ ತಪ್ಪು ಅಂಕಿಅಂಶಗಳನ್ನು ಹರಡಲಾಗುತ್ತಿದೆ. ತಮಿಳುನಾಡಿನಲ್ಲಿ ಎಸ್‌ಐಆರ್ ಇನ್ನೂ ಆರಂಭವಾಗಿಲ್ಲ. ಆದ್ದರಿಂದ ಬಿಹಾರದ ಎಸ್‌ಐಆರ್ ಕಾರ್ಯಕ್ರಮವನ್ನು ತಮಿಳುನಾಡಿನ ಜತೆ ಹೋಲಿಸುವುದು ಅಸಂಗತ" ಎಂದು ಆಯೋಗ ತಿಳಿಸಿದೆ.
ಈ ಸುದ್ದಿಯನ್ನು ಓದಿ: Viral Video: ಮಹಿಳಾ ಪೊಲೀಸ್ ಮೇಲೆ ಸರ್ಪವನ್ನೆಸೆದ ಹಾವಾಡಿಗ; ವಿಡಿಯೊ ವೈರಲ್
ಚಿದಂಬರಂ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ, "ಬಿಹಾರದಲ್ಲಿ 65 ಲಕ್ಷ ಮತದಾರರ ಮತದಾನದ ಹಕ್ಕನ್ನು ಕಸಿದುಕೊಳ್ಳುವ ಎಸ್‌ಐಆರ್ ಕಾರ್ಯಕ್ರಮವು ಆತಂಕಕಾರಿ. ತಮಿಳುನಾಡಿನಲ್ಲಿ 6.5 ಲಕ್ಷ ವಲಸೆ ಕಾರ್ಮಿಕರನ್ನು ಮತದಾರರ ಪಟ್ಟಿಗೆ ಸೇರಿಸಿರುವುದು ಕಾನೂನುಬಾಹಿರ" ಎಂದು ಆರೋಪಿಸಿದ್ದಾರೆ. ವಲಸೆ ಕಾರ್ಮಿಕರು ತಮ್ಮ ರಾಜ್ಯದ ಚುನಾವಣೆಯಲ್ಲಿ ಮತ ಚಲಾಯಿಸಲು ಬಿಹಾರಕ್ಕೆ ಮರಳಬಹುದು ಎಂದ ಅವರು, "ವಲಸೆ ಕಾರ್ಮಿಕರಿಗೆ ಬಿಹಾರದಲ್ಲಿ ಶಾಶ್ವತ ವಾಸಸ್ಥಾನವಿದ್ದರೆ, ಅವರನ್ನು ತಮಿಳುನಾಡಿನಲ್ಲಿ ಹೇಗೆ 'ಶಾಶ್ವತ ವಲಸಿಗ' ಎಂದು ಪರಿಗಣಿಸಬಹುದು?" ಎಂದು ಕೇಳಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿಯ ಕಚೇರಿಯನ್ನು ಟ್ಯಾಗ್ ಮಾಡಿರುವ ಚಿದಂಬರಂ, ಚುನಾವಣಾ ಆಯೋಗವು ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ರಾಜ್ಯಗಳ ಚುನಾವಣಾ ಸ್ವರೂಪವನ್ನು ಬದಲಾಯಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಈ ದುರ್ಬಳಕೆಯನ್ನು ರಾಜಕೀಯವಾಗಿ ಮತ್ತು ಕಾನೂನಾತ್ಮಕವಾಗಿ ಎದುರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಆದರೆ ಆಯೋಗವು ತನ್ನ ಕಾರ್ಯವಿಧಾನವು ಸಂವಿಧಾನಬದ್ಧವಾಗಿದೆ ಎಂದು ಸಮರ್ಥಿಸಿಕೊಂಡಿದೆ. ತಪ್ಪು ಮಾಹಿತಿಯನ್ನು ತಡೆಯಲು ಕರೆ ನೀಡಿದೆ.