ಮುಂಬೈ: ಬಾಲಾಪರಾಧಿ ಗೃಹದಿಂದ (Juvenile home) ಆರು ಬಾಲಕಿಯರು ನಾಪತ್ತೆಯಾಗಿರುವ (Missing Case) ಘಟನೆ ಮಹಾರಾಷ್ಟ್ರದ (Maharastra) ಥಾಣೆ ಜಿಲ್ಲೆಯ (Thane district) ಉಲ್ಹಾಸ್‌ನಗರ ಪಟ್ಟಣದಲ್ಲಿ ನಡೆದಿದೆ. ಇಲ್ಲಿನ ಬಾಲಕಿಯರ ಗೃಹದಿಂದ ಬುಧವಾರ ಮಧ್ಯಾಹ್ನ ಆರು ಬಾಲಕಿಯರು ತಪ್ಪಿಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿ ಇಬ್ಬರನ್ನು ಪತ್ತೆಹಚ್ಚಿದ್ದಾರೆ. ಉಳಿದ ನಾಲ್ವರು ನಾಪತ್ತೆಯಾಗಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂಬೈ ಸೇರಿದಂತೆ ಥಾಣೆ ಜಿಲ್ಲೆಯ ವಿವಿಧ ಪ್ರದೇಶಗಳಿಂದ ಬಂದಿರುವ ಬಾಲಕಿಯರು ಮೀರಾ ಭಯಂದರ್‌ನಲ್ಲಿರುವ ವಸತಿ ಗೃಹದ ಆಶ್ರಯ ಪಡೆದಿದ್ದು, ಇಲ್ಲಿಂದಲೇ ನಾಪತ್ತೆಯಾಗಿದ್ದಾರೆ. ಪ್ರವೇಶ ದ್ವಾರವನ್ನು ಕಾಯುವ ಭದ್ರತಾ ಸಿಬ್ಬಂದಿ ಊಟಕ್ಕೆ ಹೋದಾಗ ಅವರು ವಸತಿ ಗೃಹದಿಂದ ತಪ್ಪಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಕ್ಷಣವೇ ಹಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಉಪ ಪೊಲೀಸ್ ಆಯುಕ್ತ ಸಚಿನ್ ಗೋರ್ ನೇತೃತ್ವದಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ. ಮೀರಾ ಭಯಂದರ್‌ನಲ್ಲಿರುವ ಮನೆಗಳಿಗೆ ತೆರಳಿದ್ದ ಇಬ್ಬರನ್ನು ಪೊಲೀಸ್ ಸಿಬ್ಬಂದಿ ಪತ್ತೆಹಚ್ಚಿ ಮತ್ತೆ ಬಾಲಗೃಹಕ್ಕೆ ಕರೆತಂದು ಸೇರಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ ಬಾಲಕಿಯರು ಇಲ್ಲಿ ಉಳಿಯಲು ಇಷ್ಟವಿಲ್ಲ ಎಂದಿದ್ದಾರೆ ಎನ್ನಲಾಗಿದೆ. ಉಳಿದ ನಾಲ್ವರು ಅಪ್ರಾಪ್ತ ವಯಸ್ಕರನ್ನು ಪತ್ತೆಹಚ್ಚಲು ಪ್ರಯತ್ನಗಳನ್ನು ಮುಂದುವರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: PM Modi: ಜಪಾನ್‌ನಲ್ಲಿ ಪ್ರಧಾನಿಗೆ ವಿಶೇಷ ಬೋಧಿಧರ್ಮ ಗೊಂಬೆ ಗಿಫ್ಟ್! ಯಾರಿವರು ಗೊತ್ತೇ?
ಬಾಲಗೃಹದ ಅಧಿಕಾರಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಆಗಸ್ಟ್ 28ರಂದು ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 137 (1) ರ ಅಡಿಯಲ್ಲಿ ಅಪಹರಣ ಪ್ರಕರಣವನ್ನು ದಾಖಲಿಸಲಾಗಿದೆ.