ಇಸ್ಲಾಮಾಬಾದ್: ಪಾಕಿಸ್ತಾನ ಪ್ರವಾಹದಿಂದ ಕಂಗೆಟ್ಟು ಹೋಗಿದೆ. ಇದೀಗ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ಪಾಕಿಸ್ತಾನದ ರಕ್ಷಣಾ ಸಚಿವ (Defence Minister) ಖವಾಜಾ ಆಸಿಫ್ ಹೇಳಿಕೆಯೊಂದು ಭಾರೀ ವೈರಲ್ ಆಗಿದ್ದು, ಜನರು ಅವರನ್ನು ಟೀಕಿಸುತ್ತಿದ್ದಾರೆ. ತಗ್ಗು ಪ್ರದೇಶಗಳಲ್ಲಿ ವಾಸಿಸುವ ಪಾಕಿಸ್ತಾನಿಗಳು ಪ್ರವಾಹದ ನೀರನ್ನು ಚರಂಡಿಗಳಿಗೆ ಬಿಡುವ ಬದಲು ಪಾತ್ರೆಗಳಲ್ಲಿ "ಶೇಖರಿಸಿಡಬೇಕು ಎಂದು ಅವರು ಹಾಸ್ಯಾಸ್ಪದವಾಗಿ ಹೇಳಿಕೆ ನೀಡಿದ್ದಾರೆ. ಜನರು ಪ್ರವಾಹಕ್ಕೆ ಗಾಬರಿಯಾಗಬಾರದು ಅದನ್ನು ಆಶೀರ್ವಾದವೆಂದು ಸ್ವೀಕರಿಸಬೇಕು ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಾದ್ಯಂತ ದಾಖಲೆಯ ಮಾನ್ಸೂನ್ ಮಳೆಯು ವಿನಾಶಕಾರಿ ಪ್ರವಾಹವನ್ನು ಉಂಟುಮಾಡಿದ್ದರಿಂದ 2.4 ಲಕ್ಷಕ್ಕೂ ಅಧಿಕ ಮಂದಿ ಮನೆಗಳನ್ನು ಕಳೆದುಕೊಂಡು ಬೀದಿಪಾಲಾಗಿದ್ದಾರೆ. ಸಾವಿರಕ್ಕೂ ಹೆಚ್ಚು ಗ್ರಾಮಗಳು ಮುಳುಗಿವೆ. ಪಾಕಿಸ್ತಾನದ ದುನ್ಯಾ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಆಸಿಫ್, "ಪ್ರವಾಹದಂತಹ ಪರಿಸ್ಥಿತಿಯ ವಿರುದ್ಧ ಪ್ರತಿಭಟಿಸುತ್ತಿರುವ ಜನರು ಪ್ರವಾಹದ ನೀರನ್ನು ಮನೆಗೆ ತೆಗೆದುಕೊಂಡು ಹೋಗಬೇಕು ಎಂದು ಹೇಳಿದ್ದಾರೆ.
ಜನರು ಈ ನೀರನ್ನು ತಮ್ಮ ಮನೆಗಳಲ್ಲಿ, ಟಬ್‌ಗಳು ಮತ್ತು ಪಾತ್ರೆಗಳಲ್ಲಿ ಸಂಗ್ರಹಿಸಬೇಕು. ನಾವು ಈ ನೀರನ್ನು ಆಶೀರ್ವಾದದ ರೂಪದಲ್ಲಿ ನೋಡಬೇಕು ಮತ್ತು ಆದ್ದರಿಂದ ಅದನ್ನು ಸಂಗ್ರಹಿಸಬೇಕು ಎಂದು ಅವರು ಸಲಹೆಯನ್ನು ನೀಡಿದ್ದಾರೆ. ಬೃಹತ್ ಯೋಜನೆಗಳಿಗಾಗಿ 10-15 ವರ್ಷ ಕಾಯುವ ಬದಲು, ತ್ವರಿತವಾಗಿ ಪೂರ್ಣಗೊಳ್ಳಬಹುದಾದ ಸಣ್ಣ ಅಣೆಕಟ್ಟುಗಳನ್ನು ಪಾಕಿಸ್ತಾನ ನಿರ್ಮಿಸಬೇಕೆಂದು ಆಸಿಫ್ ಸಲಹೆ ನೀಡಿದರು. "ನಾವು ನೀರನ್ನು ಚರಂಡಿಗೆ ಬಿಡುತ್ತಿದ್ದೇವೆ. ನಾವು ಅದನ್ನು ಸಂಗ್ರಹಿಸಬೇಕು" ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್‌ಡಿಎಂಎ) ಅಂಕಿಅಂಶಗಳ ಪ್ರಕಾರ, ಜೂನ್ 26 ರಿಂದ ಆಗಸ್ಟ್ 31 ರವರೆಗೆ, ಪ್ರವಾಹದಿಂದಾಗಿ 854 ಪಾಕಿಸ್ತಾನಿಗಳು ಸಾವನ್ನಪ್ಪಿದ್ದಾರೆ ಮತ್ತು 1,100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಚೆನಾಬ್ ನದಿಯಿಂದ ಏರುತ್ತಿರುವ ನೀರು ಮಂಗಳವಾರ ಪಂಜಾಬ್‌ನ ಮುಲ್ತಾನ್ ಜಿಲ್ಲೆಯನ್ನು ತಲುಪುವ ಸಾಧ್ಯತೆಯಿದೆ, ಇದು ರಾವಿ ನದಿಯ ಒಳಹರಿವಿನೊಂದಿಗೆ ವಿಲೀನಗೊಳ್ಳುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಏತನ್ಮಧ್ಯೆ, ಪಂಜಾಬ್‌ನ ಪಂಜ್ನಾಡ್ ನದಿಯಲ್ಲಿ ನೀರಿನ ಮಟ್ಟವು ಸೆಪ್ಟೆಂಬರ್ 5 ರಂದು ಗರಿಷ್ಠ ಮಟ್ಟವನ್ನು ತಲುಪುವ ನಿರೀಕ್ಷೆಯಿದೆ.
ಈ ಸುದ್ದಿಯನ್ನೂ ಓದಿ: Flood: ಪಾಕಿಸ್ತಾನದಲ್ಲಿ ವರುಣಾರ್ಭಟ; ಪ್ರವಾಹದಿಂದ 850 ಕ್ಕೂ ಅಧಿಕ ಸಾವು
ಪಂಜಾಬ್‌ನಾದ್ಯಂತ ಇನ್ನೂ ಎರಡು ದಿನಗಳ ಕಾಲ ಮುಂಗಾರು ಮಳೆ ಸುರಿಯುವ ಸಾಧ್ಯತೆ ಇದ್ದು, ಪರಿಹಾರ ಕಾರ್ಯಾಚರಣೆಗೆ ಅಡ್ಡಿಯಾಗಬಹುದು ಮತ್ತು ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಪಾಕಿಸ್ತಾನದಾದ್ಯಂತ ಕೃಷಿಭೂಮಿಗಳು ಜಲಾವೃತಗೊಂಡಿರುವುದು ಮತ್ತು ಕೊಯ್ಲಿಗೆ ಸಿದ್ಧವಾಗಿರುವ ಬೆಳೆಗಳು ನಾಶವಾಗುತ್ತಿರುವುದು ದೇಶದಲ್ಲಿ ಆಹಾರ ಬಿಕ್ಕಟ್ಟು ಮತ್ತು ಹಣದುಬ್ಬರದ ಕಳವಳವನ್ನು ಉಂಟುಮಾಡಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.