ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mann ki Baat: ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಸಂತೋಷದ ದೀಪ ಬೆಳಗಲಾಗಿದೆ: ಮನ್ ಕಿ ಬಾತ್‌ನಲ್ಲಿ ಮೋದಿ

Modi in Mann Ki Baat: ಆಕಾಶವಾಣಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶದ ಜನತೆಗೆ ಛಠ್ ಹಬ್ಬದ ಶುಭಾಶಯ ಕೋರಿದ ಪ್ರಧಾನಿ ನರೇಂದ್ರ ಮೋದಿ, ಅಪರೇಷನ್ ಸಿಂದೂರ್, ಮಾವೋವಾದಿಗಳ ವಿರುದ್ದದ ಕಾರ್ಯಾಚರಣೆ, ಸರೋವರಗಳಿಗೆ ಹೊಸ ಜೀವ ನೀಡುವ ಅಭಿಯಾನ, ಒಡಿಶಾದ ಕೊರಾಪುಟ್ ಕಾಫಿ ಸೇರಿದಂತೆ ಇನ್ನು ಹಲವು ವಿಷಯಗಳ ಕುರಿತು ಮಾತನಾಡಿದರು.

ನವದೆಹಲಿ: ಆಪರೇಷನ್ ಸಿಂದೂರ್ (Operation Sindoor) ಪ್ರತಿಯೊಬ್ಬ ಭಾರತೀಯ ಹೆಮ್ಮೆ ಪಡುವಂತೆ ಮಾಡಿದೆ. ಮಾವೋವಾದಿಗಳ ಪ್ರಭಾವಕ್ಕೆ ಒಳಗಾಗಿದ್ದ ಪ್ರದೇಶಗಳಲ್ಲಿ ಸಂತೋಷದ ದೀಪಗಳನ್ನು ಬೆಳಗಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Modi) ಹೇಳಿದರು. ಆಕಾಶವಾಣಿಯ ಮನ್ ಕಿ ಬಾತ್ (Mann Ki Baat) ಕಾರ್ಯಕ್ರಮದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು ಬಿಹಾರ, ಜಾರ್ಖಂಡ್ ಮತ್ತು ಪೂರ್ವಾಂಚಲ್ ಜನರಿಗೆ ಛಠ್ (Chhath) ಹಬ್ಬದ ಶುಭಾಶಯ ಕೋರಿದರು. ಛಠ್ ಮಹಾಪರ್ವವು ಸಂಸ್ಕೃತಿ, ಪ್ರಕೃತಿ ಮತ್ತು ಸಮಾಜದ ಆಳವಾದ ಏಕತೆಯ ಪ್ರತಿಬಿಂಬವಾಗಿದೆ ಎಂದರು.

ದೇಶವೀಗ ಹಬ್ಬದ ಉತ್ಸಾಹದಲ್ಲಿ ಮುಳುಗಿದೆ. ಭಕ್ತಿ, ವಾತ್ಸಲ್ಯ ಮತ್ತು ಸಂಪ್ರದಾಯದ ಸಂಗಮಕ್ಕೆ ಸಾಕ್ಷಿಯಾಗಿದೆ. ಈ ಸಂದರ್ಭದಲ್ಲಿ ಮಹಿಳೆಯರ ಉಪವಾಸ ಸಮರ್ಪಣೆ ಮತ್ತು ಭಕ್ತಿಯ ಪ್ರತೀಕ ಮತ್ತು ಅದು ಸ್ಪೂರ್ತಿದಾಯಕವಾಗಿದೆ. ಭಾರತದ ಸಾಮಾಜಿಕ ಏಕತೆಗೆ ಅತ್ಯಂತ ಸುಂದರ ಉದಾಹರಣೆ ಎಂದರೆ ಛಠ್ ಘಾಟ್‌ಗಳಲ್ಲಿ ಸಮಾಜದ ಪ್ರತಿಯೊಂದು ವರ್ಗವೂ ಒಟ್ಟಾಗಿ ಸೇರುವುದಾಗಿದೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: Vote Chori: ಆಳಂದ ಮತಗಳವು ಕೇಸ್‌ನಲ್ಲಿ ಬಿಗ್ ಅಪ್‌ಡೇಟ್‌; ಆರೋಪಿಗಳಿಂದ 75 ಮೊಬೈಲ್ ನಂಬರ್​ ದುರ್ಬಳಕೆ!

ಮನ್ ಕಿ ಬಾತ್ ನ ಪ್ರಮುಖ ಅಂಶಗಳು

  1. ನಾಗರಿಕರಿಗೆ ಪತ್ರ ಬರೆದಿರುವುದನ್ನು ನೆನಪಿಸಿಕೊಂಡ ಮೋದಿ ಇದಕ್ಕೆ ಪ್ರತಿಯಾಗಿ ಹಲವಾರು ನಾಗರಿಕರು ತಮಗೆ ಪತ್ರ ಬರೆದಿದ್ದಾರೆ ಎಂದು ತಿಳಿಸಿದರು.
  2. ಜಿಎಸ್ಟಿ ಬಚತ್ ಉತ್ಸವದ ಬಗ್ಗೆ ಜನರಲ್ಲಿ ಉತ್ಸಾಹವಿದೆ ಎಂದು ಅವರು, ಹಬ್ಬದ ಸಮಯದಲ್ಲಿ ಸ್ಥಳೀಯ ವಸ್ತುಗಳ ಖರೀದಿ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದರು.
  3. ಸ್ವಚ್ಛತಾ ಅಭಿಯಾನದ ಕುರಿತು ದೇಶದ ವಿವಿಧ ನಗರಗಳ ಸ್ಪೂರ್ತಿದಾಯಕ ಕಥೆಗಳನ್ನು ಹಂಚಿಕೊಂಡ ಮೋದಿ, ಅಂಬಿಕಾಪುರ ಮುನ್ಸಿಪಲ್ ಕಾರ್ಪೊರೇಷನ್ ನಡೆಸುವ ಛತ್ತೀಸ್‌ಗಢದ ಅಂಬಿಕಾಪುರದಲ್ಲಿ ಕಸದ ಕೆಫೆಗಳನ್ನು ನಡೆಸಲಾಗುತ್ತಿದೆ. ಇಲ್ಲಿ ಜನರು ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಬದಲಾಗಿ ಪೂರ್ಣ ಊಟವನ್ನು ಪಡೆಯುತ್ತಾರೆ ಎಂದು ತಿಳಿಸಿದರು.
  4. ಸರೋವರಗಳಿಗೆ ಹೊಸ ಜೀವ ನೀಡುವ ಅಭಿಯಾನವನ್ನು ಪ್ರಾರಂಭಿಸಿರುವ ಬೆಂಗಳೂರಿನ ಕಪಿಲ್ ಶರ್ಮಾ ಬಗ್ಗೆ ಉಲ್ಲೇಖಿಸಿದ ಮೋದಿ, ಜನರ ದೃಢನಿಶ್ಚಯವಿದ್ದಾಗ ಬದಲಾವಣೆ ಖಂಡಿತ ಸಂಭವಿಸುತ್ತದೆ ಎಂಬುದನ್ನು ಇದು ತೋರಿಸಿದೆ ಎಂದು ಹೇಳಿದರು.
  5. ಮ್ಯಾಂಗ್ರೋವ್‌ಗಳ ಮಹತ್ವದ ಬಗ್ಗೆ ಮಾತನಾಡಿದ ಅವರು, ಗುಜರಾತ್‌ನ ಅರಣ್ಯ ಇಲಾಖೆಯು ಮ್ಯಾಂಗ್ರೋವ್‌ಗಳಿಗಾಗಿ ವಿಶೇಷ ಅಭಿಯಾನವನ್ನು ನಡೆಸುತ್ತಿದೆ. ಐದು ವರ್ಷಗಳ ಹಿಂದೆ ಅಹಮದಾಬಾದ್ ಬಳಿಯ ಧೋಲೇರಾ ಬಳಿ ಮ್ಯಾಂಗ್ರೋವ್‌ಗಳನ್ನು ನೆಡಲು ಪ್ರಾರಂಭಿಸಿದ್ದು, ಇಂದು, ಈ ಮ್ಯಾಂಗ್ರೋವ್‌ಗಳು ಧೋಲೇರಾ ಕರಾವಳಿಯಲ್ಲಿ ಮೂರೂವರೆ ಸಾವಿರ ಹೆಕ್ಟೇರ್‌ಗಳಲ್ಲಿ ಹರಡಿಕೊಂಡಿವೆ. ಇದರ ಪರಿಣಾಮವಾಗಿ ಡಾಲ್ಫಿನ್‌ಗಳು, ಇತರ ಜಲಚರಗಳ ಸಂಖ್ಯೆಯೂ ಹೆಚ್ಚಾಗಿದೆ ಎಂದರು.
  6. ಕೋರಿ ಕ್ರೀಕ್‌ನಲ್ಲಿ ಮ್ಯಾಂಗ್ರೋವ್ ಕಲಿಕಾ ಕೇಂದ್ರವನ್ನು ಸಹ ಸ್ಥಾಪಿಸಲಾಗಿದೆ. ಜನರು ವಾಸಿಸುವಲ್ಲೆಲ್ಲಾ ಮರಗಳನ್ನು ನೆಡಬೇಕು ಮತ್ತು 'ಏಕ್ ಪೆಡ್ ಮಾ ಕೆ ನಾಮ್' ಅಭಿಯಾನವನ್ನು ಮತ್ತಷ್ಟು ಪ್ರಚಾರ ಮಾಡಬೇಕು ಎಂದು ಮೋದಿ ಮನ್ ಕಿ ಬಾತ್ ನಲ್ಲಿ ಒತ್ತಾಯಿಸಿದ್ದಾರೆ.
  7. ಭಾರತೀಯ ತಳಿಗಳ ನಾಯಿಗಳನ್ನು ದತ್ತು ತೆಗೆದುಕೊಳ್ಳುವ ಭದ್ರತಾ ಸಂಸ್ಥೆಗಳ ಕಾರ್ಯವನ್ನು ಶ್ಲಾಘಿಸಿದ ಮೋದಿ, ಬಿಎಸ್‌ಎಫ್ ಮತ್ತು ಸಿಆರ್‌ಪಿಎಫ್ ತಮ್ಮ ತುಕಡಿಯಲ್ಲಿ ಭಾರತೀಯ ತಳಿಯ ನಾಯಿಗಳ ಸಂಖ್ಯೆಯನ್ನು ಹೆಚ್ಚಿಸಿವೆ ಎಂದರು.
  8. ಕಳೆದ ವರ್ಷ ಲಕ್ನೋದಲ್ಲಿ ನಡೆದ ಅಖಿಲ ಭಾರತ ಪೊಲೀಸ್ ಕರ್ತವ್ಯ ಸಭೆಯಲ್ಲಿ ರಿಯಾ ಎಂಬ ಹೆಸರಿನ ನಾಯಿಯನ್ನು ನೆನಪಿಸಿಕೊಂಡ ಮೋದಿ, ರಿಯಾ ಬಿಎಸ್‌ಎಫ್‌ನಿಂದ ತರಬೇತಿ ಪಡೆದ ಮುಧೋಳ ಹೌಂಡ್. ರಿಯಾ ಮೊದಲ ಬಹುಮಾನವನ್ನು ಗೆದ್ದಿತ್ತು. ಬಿಎಸ್ಎಫ್ ತನ್ನ ನಾಯಿಗಳಿಗೆ ವಿದೇಶಿ ಹೆಸರುಗಳ ಬದಲಿಗೆ ಭಾರತೀಯ ಹೆಸರುಗಳನ್ನು ಇಡುವ ಸಂಪ್ರದಾಯವನ್ನು ಈಗ ಪ್ರಾರಂಭಿಸಿದೆ ಎಂದು ಅವರು ತಿಳಿಸಿದರು.
  9. ಸ್ಥಳೀಯ ನಾಯಿಗಳು ಅದ್ಭುತ ಧೈರ್ಯವನ್ನು ಪ್ರದರ್ಶಿಸಿವೆ ಎಂದ ಮೋದಿ, ಕಳೆದ ವರ್ಷ ಛತ್ತೀಸ್‌ಗಢದ ಮಾವೋವಾದಿ ಪೀಡಿತ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ ಸಿಆರ್‌ಪಿಎಫ್‌ನ ಸ್ಥಳೀಯ ನಾಯಿ ಎಂಟು ಕಿಲೋಗ್ರಾಂಗಳಷ್ಟು ಸ್ಫೋಟಕಗಳನ್ನು ಪತ್ತೆ ಮಾಡಿತು ಎಂದರು.
  10. ಅಕ್ಟೋಬರ್ 31ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮ ದಿನವನ್ನು ಆಚರಿಸಲಾಗುವುದು. ಈ ಸಂದರ್ಭದಲ್ಲಿ ಗುಜರಾತ್‌ನ ಏಕ್ತಾ ನಗರದಲ್ಲಿರುವ 'ಏಕತಾ ಪ್ರತಿಮೆ' ಬಳಿ ವಿಶೇಷ ಸಮಾರಂಭಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು.
  11. ಸರ್ದಾರ್ ಪಟೇಲ್ ಭಾರತದ ಅಧಿಕಾರಶಾಹಿ ಚೌಕಟ್ಟಿಗೆ ಬಲವಾದ ಅಡಿಪಾಯ ಹಾಕಿದರು. ಅಕ್ಟೋಬರ್ 31 ರಂದು ದೇಶಾದ್ಯಂತ ಆಯೋಜಿಸಲಾಗಿರುವ ಏಕತಾ ಓಟದಲ್ಲಿ ಎಲ್ಲರೂ ಭಾಗವಹಿಸುವಂತೆ ಅವರು ಕರೆ ನೀಡಿದರು.
  12. ಒಡಿಶಾದ ಕೊರಾಪುಟ್ ಕಾಫಿಯ ಬಗ್ಗೆ ಮಾತನಾಡಿದ ಮೋದಿ, ಕೊರಾಪುಟ್ ಕಾಫಿ ಅದ್ಭುತ ರುಚಿಯನ್ನು ಹೊಂದಿದೆ. ಕೊರಾಪುಟ್‌ನಲ್ಲಿ ತಮ್ಮ ಉದ್ಯೋಗಗಳನ್ನು ತೊರೆದು ಯಶಸ್ವಿಯಾಗಿ ಕಾಫಿ ಬೆಳೆಯುತ್ತಿರುವ ಜನರಿದ್ದಾರೆ. ಕೊರಾಪುಟ್ ಕಾಫಿಯನ್ನು ಒಡಿಶಾದ ಹೆಮ್ಮೆ ಎಂದರು.
  13. ಭಾರತೀಯ ಕಾಫಿ ಪ್ರಪಂಚದಾದ್ಯಂತ ಜನಪ್ರಿಯವಾಗುತ್ತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದ ಮೋದಿ, ಈಶಾನ್ಯ ಭಾಗವು ಕಾಫಿ ಕೃಷಿಯಲ್ಲಿ ಪ್ರಗತಿ ಸಾಧಿಸುತ್ತಿದೆ. ಇದು ವಿಶ್ವಾದ್ಯಂತ ಭಾರತೀಯ ಕಾಫಿಯ ಗುರುತನ್ನು ಮತ್ತಷ್ಟು ಬಲಪಡಿಸುತ್ತಿದೆ ಎಂದು ತಿಳಿಸಿದರು.
  14. ಭಾರತದ ರಾಷ್ಟ್ರೀಯ ಗೀತೆ 'ವಂದೇ ಮಾತರಂ' ಬಗ್ಗೆಯೂ ಪ್ರಸ್ತಾಪಿಸಿದ ಪ್ರಧಾನಿ, ವಂದೇ ಮಾತರಂ ಅನ್ನು 19ನೇ ಶತಮಾನದಲ್ಲಿ ಬರೆಯಲಾಗಿದೆ. ಆದರೆ ಅದರ ಆತ್ಮವು ಸಾವಿರಾರು ವರ್ಷಗಳಷ್ಟು ಹಳೆಯದಾದ ಭಾರತದ ಅಮರ ಪ್ರಜ್ಞೆಯೊಂದಿಗೆ ಸಂಪರ್ಕ ಹೊಂದಿದೆ. ನವೆಂಬರ್ 7 ರಂದು ದೇಶವು ವಂದೇ ಮಾತರಂನ 150 ನೇ ವರ್ಷವನ್ನು ಆಚರಿಸುತ್ತಿದೆ. ಇದನ್ನು 150 ವರ್ಷಗಳ ಹಿಂದೆ ರಚಿಸಲಾಗಿದ್ದು, 1896 ರಲ್ಲಿ ಗುರುದೇವ್ ರವೀಂದ್ರನಾಥ ಟ್ಯಾಗೋರ್ ಇದನ್ನು ಮೊದಲ ಬಾರಿಗೆ ಹಾಡಿದರು ಎಂದು ನೆನಪಿಸಿಕೊಂಡರು.
  15. ವಂದೇ ಮಾತರಂ ಅನ್ನು ಹೆಚ್ಚು ಜನಪ್ರಿಯಗೊಳಿಸಲು # ವಂದೇ ಮಾತರಂ 150 ಸಲಹೆಗಳನ್ನು ಕಳುಹಿಸಿ ಎಂದ ಅವರು ಸಂಸ್ಕೃತದ ಕುರಿತಾಗಿ ಮಾತನಾಡಿದರು. ಒಂದು ಕಾಲದಲ್ಲಿ ಸಂವಹನ ಭಾಷೆಯಾಗಿದ್ದ ಸಂಸ್ಕೃತಕ್ಕೆ ಸಾಮಾಜಿಕ ಮಾಧ್ಯಮದ ಜಗತ್ತು ಹೊಸ ಜೀವ ತುಂಬುತ್ತಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ ಯಶ್ ಸಾಳುಂಕೆ, ಕಮಲಾ ಮತ್ತು ಜಾನ್ಹವಿ, ಭವೇಶ್ ಭೀಮನಾಥನಿ ಅವರ ಸಾಧನೆಗಳ ಕುರಿತು ಮಾತನಾಡಿದರು.
  16. ಕೇವಲ 40 ವರ್ಷಗಳ ಕಾಲ ಬದುಕಿದ್ದ ಕೊಮರಾಮ್ ಭೀಮ್ ಅಸಂಖ್ಯಾತ ಜನರ ಹೃದಯದಲ್ಲಿ ವಿಶೇಷವಾಗಿ ಬುಡಕಟ್ಟು ಸಮುದಾಯದ ಮೇಲೆ ಅಳಿಸಲಾಗದ ಛಾಪು ಬೀರಿದ್ದಾರೆ. ಅಕ್ಟೋಬರ್ 22ರಂದು ಅವರ ಜನ್ಮ ದಿನವಾಗಿದೆ ಎಂದ ಮೋದಿ, ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರನ ಬಗ್ಗೆ ಸಾಕಷ್ಟು ತಿಳಿದುಕೊಳ್ಳಿ ಎಂದು ಯುವಜನರನ್ನು ಒತ್ತಾಯಿಸಿದ್ದಾರೆ.
  17. ನವಂಬರ್ 15 ರಂದು ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮ ದಿನವಾಗಿದೆ. ಈ ದಿನವನ್ನು ಜನಜಾತೀಯ ಗೌರವ್ ದಿವಸ್ ಆಗಿ ಆಚರಿಸಲಾಗುವುದು. ದೇಶದ ಸ್ವಾತಂತ್ರ್ಯ ಮತ್ತು ಬುಡಕಟ್ಟು ಸಮುದಾಯದ ಹಕ್ಕುಗಳಿಗಾಗಿ ಅವರು ಮಾಡಿದ ಕಾರ್ಯಗಳು ಅದ್ವಿತೀಯವಾಗಿದೆ. ಅವರ ಬಗ್ಗೆಯೂ ಎಲ್ಲರೂ ತಿಳಿದುಕೊಳ್ಳಬೇಕಿದೆ ಎಂದರು.

ವಿದ್ಯಾ ಇರ್ವತ್ತೂರು

View all posts by this author