ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಮುಂದಿನ ತಿಂಗಳು ವಿಶ್ವಸಂಸ್ಥೆಯ ಸಾಮಾನ್ಯ ಸಭೆ (ಯುಎನ್‌ಜಿಎ) ಗಾಗಿ ಅಮೆರಿಕಕ್ಕೆ ಭೇಟಿ ನೀಡುವ ಸಾಧ್ಯತೆ ಇದ್ದು, ವ್ಯಾಪಾರ ಸಂಬಂಧಗಳಲ್ಲಿನ ಕುಸಿತದ ನಡುವೆಯೂ ವ್ಯಾಪಾರದ ಸಮಸ್ಯೆಗಳನ್ನು ಬಗೆಹರಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಸಭೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಟ್ರಂಪ್ ಜೊತೆಗೆ, ಪ್ರಧಾನಿ ಮೋದಿ ಉಕ್ರೇನಿಯನ್ ಅಧ್ಯಕ್ಷ ಝೆಲೆನ್ಸ್ಕಿ ಸೇರಿದಂತೆ ವಿದೇಶಿ ನಾಯಕರೊಂದಿಗೆ ಉನ್ನತ ಮಟ್ಟದ ಸಭೆಗಳನ್ನು ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಯುಎನ್‌ಜಿಎ ಶೃಂಗಸಭೆ ಸೆಪ್ಟೆಂಬರ್‌ನಲ್ಲಿ ನ್ಯೂಯಾರ್ಕ್ ನಗರದಲ್ಲಿ ನಡೆಯಲಿದೆ.
ಈ ವರ್ಷದ ಫೆಬ್ರವರಿಯಲ್ಲಿ ಪ್ರಧಾನಿ ಮೋದಿ ಶ್ವೇತಭವನಕ್ಕೆ ಭೇಟಿ ನೀಡಿದ್ದರು. ನಂತರ ಏಳು ತಿಂಗಳಲ್ಲಿ ಉಭಯ ನಾಯಕರ ಎರಡನೇ ಭೇಟಿ ಇದಾಗಲಿದೆ. ಟ್ರಂಪ್ ಅವರ ಮೊದಲ ಅವಧಿಯಲ್ಲಿ ಇಬ್ಬರೂ ನಾಯಕರು ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದರು. ಮೋದಿ ನನ್ನ ಸ್ನೇಹಿತ ಎಂದು ಟ್ರಂಪ್ ಹೇಳಿಯು ಕೂಡ, ಭಾರತದ ಮೇಲೆ 50% ಸುಂಕ ವಿಧಿಸಿದ್ದಾರೆ.
ವ್ಯಾಪಾರ, ಸುಂಕ, ರಷ್ಯಾದ ತೈಲದ ಖರೀದಿ
ಭಾರತ ಹಾಗೂ ಅಮೆರಿಕದ ನಡುವೆ ತೆರಿಗೆ ಯುದ್ಧ ನಡೆಯುತ್ತಿದೆ. ಈ ಸಮಯದಲ್ಲಿ ಮೋದಿ ಭೇಟಿ ಮಹತ್ವದ್ದಾಗಿದೆ. ವ್ಯಾಪಾರ ಒಪ್ಪಂದದ ಬಿಕ್ಕಟ್ಟಿನ ನಡುವೆ, ಡೊನಾಲ್ಡ್ ಟ್ರಂಪ್ ಭಾರತದ ಮೇಲೆ 25% ಸುಂಕವನ್ನು ವಿಧಿಸಿದರಲ್ಲದೇ ನಂತರ ರಷ್ಯಾದಿಂದ ತೈಲ ಖರೀದಿಯನ್ನು ಮುಂದುವರಿಸಿದ್ದಕ್ಕಾಗಿ ಹೆಚ್ಚುವರಿ 25% ಸುಂಕ ವಿಧಿಸುವ ಮೂಲಕ ಒಟ್ಟು ಸುಂಕವನ್ನು 50% ರಷ್ಟು ಸುಂಕವನ್ನು ಹೇರಿದ್ದಾರೆ. ಭಾರತೀಯ ಉತ್ಪನ್ನಗಳ ಮೇಲಿನ ಟ್ರಂಪ್ ಅವರ 50% ಸುಂಕಗಳಲ್ಲಿ ಅರ್ಧದಷ್ಟು ಆಗಸ್ಟ್ 7 ರಿಂದ ಜಾರಿಗೆ ಬಂದರೆ, ಉಳಿದವು ಆಗಸ್ಟ್ 27 ರಿಂದ ಜಾರಿಗೆ ಬರಲಿವೆ. ಆ ಗಡುವಿನ ಮೊದಲು, ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳಲು ತೀವ್ರ ಮಾತುಕತೆಗಳಲ್ಲಿ ತೊಡಗಿವೆ.
ರಷ್ಯಾದಿಂದ ಆಮದಾಗುತ್ತಿರುವ ತೈಲವನ್ನು ನಿಲ್ಲಿಸಲು ಟ್ರಂಪ್ ಒತ್ತಡ ಹೇರಿದ್ದಾರೆ. ಆದರೆ ಏಕಾಏಕಿ ತೈಲ ಒಪ್ಪಂದವನ್ನು ಮುರಿದರೆ ಭಾರತಕ್ಕೆ ನಷ್ಟ. ಭಾರತವು ಇತರ ದೇಶಗಳಿಂದ ದುಬಾರಿ ಬೆಲೆಗೆ ತೈಲವನ್ನು ಖರೀದಿ ಮಾಡಬೇಕಾಗುತ್ತದೆ. ಇದರಿಂದ ತೈಲದ ಬೆಲೆಯಲ್ಲಿ ಗಣನೀಯವಾಗಿ ಹೆಚ್ಚಳ ಕಂಡು ಬರಲಿದೆ ಎನ್ನುತ್ತಾರೆ ಆರ್ಥಿಕ ತಜ್ಞರು. ಭಾರತ ಕೇವಲ ಪ್ರಮುಖ ತೈಲ ಆಮದುದಾರ ರಾಷ್ಟ್ರವಲ್ಲ. ಇದು ಸಂಸ್ಕರಣಾ ಶಕ್ತಿ ಕೇಂದ್ರವಾಗಿದೆ. ಖರೀದಿಸುವ ರಷ್ಯಾದ ಕಚ್ಚಾ ತೈಲದ ಒಂದು ಭಾಗವನ್ನು ಪೆಟ್ರೋಲ್, ಡೀಸೆಲ್ ಮತ್ತು ಜೆಟ್ ಇಂಧನವಾಗಿ ಪರಿವರ್ತಿಸಿ ಏಷ್ಯಾ, ಆಫ್ರಿಕಾ ಮತ್ತು ಯುರೋಪ್‌ಗೆ ರಫ್ತು ಮಾಡಲಾಗುತ್ತದೆ.
ಈ ಸುದ್ದಿಯನ್ನೂ ಓದಿ: Dr Vijay Darda Column: ಟ್ರಂಪ್ ಏಕೆ ಭಾರತದ ಮೇಲೆ ಅಷ್ಟೊಂದು ಸಿಟ್ಟಾಗಿದ್ದಾರೆ ?
ಭಾರತವು ರಷ್ಯಾದಿಂದ ಕಚ್ಚಾ ತೈಲವನ್ನು 2022 ರಿಂದ ಆಮದು ಮಾಡಿಕೊಳ್ಳುತ್ತಿದೆ. ಉಕ್ರೇನ್ ರಷ್ಯಾ ಯುದ್ಧ ಆರಂಭವಾದಾಗ, ಪಾಶ್ಚಿಮಾತ್ಯ ದೇಶಗಳು ರಷ್ಯಾ ಮೇಲೆ ನಿರ್ಬಂಧ ಹೇರಿದ್ದವು. ಆ ಸಮಯದಲ್ಲಿ ಭಾರತ ರಷ್ಯಾದಿಂದ ತೈಲ ಖರೀದಿಗೆ ಆರಂಭಿಸಿತ್ತು.