PM Modi Rakhi Sister: 30 ವರ್ಷಗಳಿಂದ ಪ್ರಧಾನಿ ಮೋದಿಗೆ ರಾಖಿ ಕಳುಹಿಸುತ್ತಾರೆ ಪಾಕಿಸ್ತಾನದ ಈ ಸಹೋದರಿ
PM Narendra Modi: ಕಳೆದ ಮೂವತ್ತು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಾಕಿಸ್ತಾನ ಮೂಲದ ಓರ್ವ ಸಹೋದರಿ ರಕ್ಷಾ ಬಂಧನವನ್ನು ಕಳುಹಿಸುತ್ತಿದ್ದಾರೆ. ಅವರು ಯಾರು, ಯಾಕಾಗಿ ರಕ್ಷಾ ಬಂಧನ ಕಳುಹಿಸುತ್ತಾರೆ, ಮೋದಿಯವರಿಗೂ ಅವರಿಗೂ ಯಾವ ರೀತಿಯ ಸಂಬಂಧವಿದೆ ಎನ್ನುವ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.


ನವದೆಹಲಿ: ಪ್ರತಿ ವರ್ಷ ರಕ್ಷಾ ಬಂಧನ (Rakshabandhan) ಹಬ್ಬ ಸಮೀಪಿಸುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರಿಗೆ ಪಾಕಿಸ್ತಾನದ ಸಹೋದರಿಯಿಂದ ಒಂದು ರಾಖಿ (Rakhi) ಬರುತ್ತದೆ. ಇದು ಕಳೆದ ಮೂವತ್ತು ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಸಂಪ್ರದಾಯವಾಗಿದೆ. ಪಾಕಿಸ್ತಾನದ ಮೂಲದ ಸಹೋದರಿಯೊಬ್ಬರು ಪ್ರತಿ ವರ್ಷವೂ ಮೋದಿಯವರಿಗೆ ರಕ್ಷಾಬಂಧನವನ್ನು ಕಳುಹಿಸುತ್ತಿದ್ದಾರೆ. ಮೋದಿಯವರಿಗಾಗಿ ಅವರು ತಾವೇ ಸ್ವತಃ ಕೈಯಾರೆ ಮಾಡಿದ ರಕ್ಷಾಬಂಧನವನ್ನು ಕಳುಹಿಸಿಕೊಡುತ್ತಾರೆ. ಕಮರ್ ಮೊಹ್ಸಿನ್ ಶೇಖ್ (Qamar Mohsin Shaikh) ಎಂಬವರು ಪ್ರಧಾನಿ ಮೋದಿಯವರಿಗೆ ಪ್ರತಿ ವರ್ಷವೂ ಸಂಪ್ರದಾಯ ಎನ್ನುವಂತೆ ರಕ್ಷಾಬಂಧವನ್ನು ಕಳುಹಿಸಿಕೊಡುತ್ತಿದ್ದಾರೆ.
ಕಳೆದ 30 ವರ್ಷಗಳಿಂದ ಶೇಖ್ ಅವರು ತಾವೇ ಕೈಯಾರೆ ಮಾಡಿದ ರಾಖಿಯನ್ನು ಪ್ರಧಾನಿ ಮೋದಿಯವರಿಗೆ ಕಳುಹಿಸುತ್ತಿದ್ದು, ಈ ಮೂಲಕ ಪ್ರಧಾನಿಯವರೊಂದಿಗೆ ಪ್ರೀತಿಯ ಬಾಂಧವ್ಯವನ್ನು ಉಳಿಸಿಕೊಂಡಿದ್ದಾರೆ.
#WATCH | Ahmedabad, Gujarat | Qamar Mohsin Shaikh with her husband Mohsin Shaikh show the rakhi she will tie to PM Narendra Modi on Raksha Bandhan, being celebrated on August 9 this year.
— ANI (@ANI) August 6, 2025
Qamar, who was born in Karachi, Pakistan and has been living in Ahmedabad since her… pic.twitter.com/DhvHZFkGQb
ಪ್ರತಿ ವರ್ಷ ಶೇಖ್ ಅವರು ಹಲವಾರು ರಾಖಿಗಳನ್ನು ತಯಾರಿಸುತ್ತಾರೆ. ಪ್ರಧಾನ ಮಂತ್ರಿ ಮೋದಿಯವರಿಗಾಗಿ ಬಹಳ ಎಚ್ಚರಿಕೆಯಿಂದ ಅವುಗಳಲ್ಲಿ ಒಂದನ್ನು ಆಯ್ಕೆ ಮಾಡುತ್ತಾರೆ. ಈ ವರ್ಷ ಅವರು ಭಕ್ತಿ ಮತ್ತು ಸಂಪ್ರದಾಯದ ಸಂಕೇತವಾಗಿ ಪವಿತ್ರ 'ಓಂ' ಚಿಹ್ನೆಯನ್ನು ಬಳಸಿ ಮಾಡಿರುವ ರಾಖಿಯನ್ನು ವಿನ್ಯಾಸಗೊಳಿಸಿರುವುದಾಗಿ ತಿಳಿಸಿದ್ದಾರೆ.
ಯಾರು ಕಮರ್ ಮೊಹ್ಸಿನ್ ಶೇಖ್ ?
ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದ ಕಮರ್ ಅವರು ಮೊಹ್ಸಿನ್ ಶೇಖ್ ಅವರನ್ನು ಮದುವೆಯಾಗಿ ಭಾರತಕ್ಕೆ ಬಂದಿದ್ದು, ಬಳಿಕ ಅಹಮದಾಬಾದ್‌ನಲ್ಲಿ ವಾಸಿಸುತ್ತಿದ್ದಾರೆ. ನರೇಂದ್ರ ಮೋದಿಯವರು 2001ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗುವ ಮೊದಲಿನಿಂದಲೂ ಕಮರ್ ಅವರಿಗೆ ರಾಖಿ ಕಟ್ಟುತ್ತಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ದಲ್ಲಿ ಕಾರ್ಯಕರ್ತೆಯಾಗಿದ್ದ ಕಮರ್ ಮೊದಲ ಬಾರಿಗೆ ಮೋದಿಗೆ ರಾಖಿ ಕಟ್ಟಿದ್ದರು. ಬಳಿಕ ಅದನ್ನು ಸಂಪ್ರದಾಯವಾಗಿ ಮುಂದುವರಿಸಿಕೊಂಡು ಬಂದಿದ್ದಾರೆ. 1990ರಲ್ಲಿ ಆಗಿನ ಗುಜರಾತ್ ರಾಜ್ಯಪಾಲ ಡಾ. ಸ್ವರೂಪ್ ಸಿಂಗ್ ಅವರ ಪರಿಚಯದ ಮೂಲಕ ಇದನ್ನು ಔಪಚಾರಿಕಗೊಳಿಸಲಾಯಿತು.
ಪ್ರಧಾನಿ ಮೋದಿಯವರೊಂದಿಗಿನ ಮೊದಲ ಭೇಟಿಯನ್ನು ಈಗಲೂ ನೆನಪಿಸಿಕೊಳ್ಳುವ ಶೇಖ್, ಅವರು ಒಮ್ಮೆ ನನ್ನಲ್ಲಿ ಹೇಗಿದ್ದೀರಿ ಎಂದು ಕೇಳಿದ್ದರು. ಬಳಿಕ ಅದು ನಮ್ಮ ನಡುವೆ ಮೂರು ದಶಕಗಳಿಗೂ ಹೆಚ್ಚು ಕಾಲ ಇರುವ ಸಹೋದರ-ಸಹೋದರಿಯ ಬಾಂಧವ್ಯವನ್ನು ಹುಟ್ಟುಹಾಕಿತ್ತು. ಆ ಬಳಿಕ ನಾನು ಅವರಿಗೆ ಪ್ರತಿ ವರ್ಷ ರಾಖಿ ಕಟ್ಟಲು ಪ್ರಾರಂಭಿಸಿದೆ. ಮೋದಿ ಅವರು ಕೂಡ ನನ್ನನ್ನು ಸಹೋದರಿ ಎಂದು ಸ್ವೀಕರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಒಮ್ಮೆ ಅವರಿಗೆ ರಾಖಿ ಕಟ್ಟಿದಾಗ ಅವರು ಗುಜರಾತ್ ಮುಖ್ಯಮಂತ್ರಿಯಾಗಬೇಕೆಂದು ಪ್ರಾರ್ಥಿಸಿದ್ದೆ ಎಂದು ನೆನಪಿಸಿಕೊಳ್ಳುವ ಕಮರ್, ಸಂಘದಲ್ಲಿ ನಾನು ಕೆಲಸ ಮಾಡಿದ್ದೆ. ಅದು ಸಂತೋಷ ಕೊಟ್ಟಿತ್ತು ಎನ್ನುತ್ತಾರೆ.
ಇದನ್ನೂ ಓದಿ: Justice Varma Case: ಜಡ್ಜ್ ಮನೆಯಲ್ಲಿ ಕಂತೆ ಕಂತೆ ನೋಟು ಪ್ರಕರಣ; ಜಸ್ಟಿಸ್ ವರ್ಮಾಗೆ ನೋ ರಿಲೀಫ್
ಅವರು ಮುಖ್ಯಮಂತ್ರಿಯಾದ ಬಳಿಕ ಅವರಿಗೆ ರಾಖಿ ಕಟ್ಟಲು ನಾನು ಹೋದಾಗ, ನಿಮ್ಮ ಆಸೆ ಈಡೇರಿತು ಎಂದು ಹೇಳಿದ್ದರು. ಅದಕ್ಕೆ ನಾನು ಇನ್ನು ನೀವು ಪ್ರಧಾನಿಯಾಗಬೇಕು ಎಂದು ಹೇಳಿದೆ. ಈಗ ಅದು ಕೂಡ ಈಡೇರಿದೆ. ಬಳಿಕ ಅವರಿಗೆ ರಾಖಿ ಕಟ್ಟಿದಾಗ ಅವರು ಇಡೀ ಜಗತ್ತನ್ನು ಆಳಬೇಕೆಂದು ನಾನು ಪ್ರಾರ್ಥಿಸಿದೆ. ಈಗ ಭಾರತವು ಜಗತ್ತಿನಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದೆ. ಅದು ಅವರ ಕಠಿಣ ಪರಿಶ್ರಮದಿಂದಾಗಿ. ಇನ್ನು ನನ್ನ ಆಸೆ ಏನೂ ಇಲ್ಲ. ಈಗ ಅವರ ಎಲ್ಲಾ ಸಮಸ್ಯೆಗಳು ದೂರವಾಗಲಿ ಎಂದಷ್ಟೇ ಪ್ರಾರ್ಥಿಸುತ್ತೇನೆ ಎನ್ನುತ್ತಾರೆ ಕಮರ್ ಮೊಹ್ಸಿನ್ ಶೇಖ್