PM Narendra Modi Birthday: 75ರ ಹೊಸ್ತಿಲಲ್ಲಿ ನರೇಂದ್ರ ಮೋದಿ: ಸೈನಿಕರಿಗೆ ಟೀ ಮಾರಿದ ಹುಡುಗ ಈಗ ದಿನದಲ್ಲಿ ಎಷ್ಟು ಗಂಟೆ ನಿದ್ದೆ ಮಾಡ್ತಾರೆ?
ಈ ದೇಶ ಕಂಡ ವರ್ಚಸ್ವೀ ನಾಯಕ ನರೇಂದ್ರ ದಾಮೋದರದಾಸ್ ಮೋದಿ ಅವರಿಗೆ ಇಂದು ಅಂದರೆ 2025ರ ಸೆಪ್ಟೆಂಬರ್ 17ರಂದು 75ನೇ ವರ್ಷದ ಜನ್ಮದಿನ (PM Narendra Modi Birthday). ಈ ಹಿನ್ನೆಲೆಯಲ್ಲಿ ಅವರ ಬಗ್ಗೆ ನೀವು ತಿಳಿದಿರಬೇಕಾದ ಕೆಲವು ಕುತೂಹಲಕಾರಿ ಸಂಗತಿಗಳನ್ನು ನೋಡಿಕೊಂಡು ಬರೋಣ.

-

ಪ್ರಧಾನ ಮಂತ್ರಿ ನರೇಂದ್ರ ಮೋದಿ ಈ ದೇಶ ಕಂಡ ಮಹಾನ್ ನಾಯಕರಲ್ಲೊಬ್ಬರು. ಜವಾಹರಲಾಲ್ ನೆಹರೂ ನಂತರ ದೇಶ ಕಂಡ ಅತಿ ದೀರ್ಘ ಅವಧಿಯ ಪ್ರಧಾನಿ ಎಂದು ಖ್ಯಾತರಾದವರು. ಜಾಗತಿಕ ನಾಯಕರ ಜನಪ್ರಿಯತೆಯ ಪಟ್ಟಿಯಲ್ಲಿ ಅವರು ಯಾವಾಗಲೂ ಮುಂದೆ. ಅಪೂರ್ವ ವರ್ಚಸ್ಸು, ಅಪ್ರತಿಮ ವಾಗ್‌ವೈಖರಿ, ದೇಶದಲ್ಲಿ ಕಾಂಗ್ರೆಸ್ಸೇತರ ಪಕ್ಷವೊಂದಕ್ಕೆ ಭಾರಿ ಬಹುಮತ ತಂದುಕೊಟ್ಟ ಪ್ರಭಾವಿ ನಾಯಕತ್ವ, ಭಾರತೀಯ ಸೈನ್ಯದ ಸ್ವಾಭಿಮಾನ ಹೆಚ್ಚಿಸಿದ ವರ್ಚಸ್ವಿ- ಹೀಗೆ ಗುಣಗಳನ್ನು ಪಟ್ಟಿ ಮಾಡುತ್ತಾ ಹೋಗಬಹುದು. ಅವರಿಗೆ ಇಂದು ಅಂದರೆ 2025ರ ಸೆಪ್ಟೆಂಬರ್ 17ರಂದು 75 ವರ್ಷದ ಜನ್ಮದಿನ (PM Narendra Modi Birthday). ಈ ಹಿನ್ನೆಲೆಯಲ್ಲಿ ನರೇಂದ್ರ ದಾಮೋದರದಾಸ್ ಮೋದಿ ಅವರ ಬಗ್ಗೆ ನೀವು ತಿಳಿದಿರಬೇಕಾದ ಕೆಲವು ಕುತೂಹಲಕಾರಿ ಸಂಗತಿಗಳನ್ನು ನೋಡಿಕೊಂಡು ಬರೋಣ.
ಸೈನಿಕರಿಗೆ ಟೀ ಮಾರಿದ ಹುಡುಗ
ಉತ್ತರ ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ವಡ್ನಗರ್ ಹೆಸರಿನ ಪುಟ್ಟ ಪಟ್ಟಣದಲ್ಲಿ ನರೇಂದ್ರ ಮೋದಿ 17ನೇ ಸೆಪ್ಟೆಂಬರ್ 1950ರಲ್ಲಿ ಜನಿಸಿದರು. ಆಗಿನ್ನೂ ಭಾರತವು ಸ್ವಾತಂತ್ರ್ಯ ಪಡೆದು ಮೂರು ವರ್ಷಗಳಾಗಿದ್ದವು. ಮೋದಿ ಬಾಲಕರಾಗಿದ್ದಾಗ ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಅಷ್ಟೇನೂ ಉತ್ತಮವಾಗಿರಲಿಲ್ಲ. 12X40 ಅಡಿ ವಿಸ್ತೀರ್ಣದ ಪುಟ್ಟ ಮನೆಯಲ್ಲಿ ಕುಟುಂಬ ವಾಸಿಸುತ್ತಿತ್ತು. ಸ್ಥಳೀಯ ರೈಲ್ವೆ ನಿಲ್ದಾಣದಲ್ಲಿ ಇಟ್ಟುಕೊಂಡಿದ್ದ ಟೀ ಅಂಗಡಿಯಿಂದ ಮೋದಿ ಅವರ ತಂದೆ ಕುಟುಂಬ ಪೊರೆಯುತ್ತಿದ್ದರು. ಚಿಕ್ಕಂದಿನಲ್ಲಿಯೇ ಮೋದಿ ಅವರೂ ಟೀ ಅಂಗಡಿ ನಿರ್ವಹಿಸಲು ತಂದೆಗೆ ನೆರವಾಗುತ್ತಿದ್ದರು.
ಬಾಲಕ ನರೇಂದ್ರ ಮೋದಿ ಅವರಿಗೆ ಬಾಲ್ಯದಿಂದಲೂ ದೇಶ ಸೇವೆ ಮಾಡಬೇಕು ಎಂಬ ಕನಸು ಅಗಾಧವಾಗಿತ್ತು. ಇದೇ ಕಾರಣಕ್ಕೆ ಅವರು ಚಿಕ್ಕವರಿದ್ದಾಗಲೇ ಸೇನೆ ಸೇರಬೇಕು ಎಂದು ಕನಸು ಕಂಡಿದ್ದರು. ಅದಕ್ಕಾಗಿ ಜಾಮ್ ನಗರದ ಸೈನಿಕ ಶಾಲೆಗೆ ಸೇನೆ ಶಾಲೆ ಸೇರಬೇಕು ಎಂದು ನಿರ್ಧರಿಸಿದ್ದರು. ಆದರೆ, ಅವರ ಕುಟುಂಬದ ಆರ್ಥಿಕ ಪರಿಸ್ಥಿತಿ ಅದಕ್ಕೆ ಅವಕಾಶ ನೀಡಲಿಲ್ಲ. ಆದರೆ ಸೇನೆಗೆ ಸೇರಬೇಕು ಎಂಬ ಅವರ ಕನಸು ಮಾತ್ರ ಹಾಗೇ ಇತ್ತು. ತಮ್ಮ ಹರೆಯದಲ್ಲಿ ಅಂದರೆ 1965ರಲ್ಲಿ ಭಾರತ ಪಾಕಿಸ್ತಾನ ಯುದ್ದ ಸಂದರ್ಭದಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸೈನಿಕರಿಗೆ ಅವರು ಟೀ ಸರಬರಾಜು ಮಾಡುತ್ತಿದ್ದರು. ಹೀಗೆ ಸೇನೆ ಸೇರುವ ಕನಸು ನಸಸಾಗದಿದ್ದರೂ, ಪ್ರತಿ ವರ್ಷ ದೀಪಾವಳಿಯನ್ನು ಸೈನಿಕರ ಜೊತೆಯಲ್ಲಿ ಆಚರಿಸುವ ಮೂಲಕ ಸಂಭ್ರಮಿಸುತ್ತಾರೆ ಮೋದಿ.
ಈಜುವುದು ಬಹಳ ಪ್ರೀತಿ
ಮೋದಿ ಅವರು ತಮ್ಮ ಓದು ಮತ್ತು ಪಠ್ಯೇತರ ಚಟುವಟಿಕೆಗಳ ನಡುವೆ ಸಮತೋಲನ ಸಾಧಿಸುತ್ತಾ ಕುಟುಂಬಕ್ಕೂ ನೆರವಾಗುತ್ತಿದ್ದರು. ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಚರ್ಚಾಸ್ಪರ್ಧೆ ಮತ್ತು ಓದಿನಲ್ಲಿ ಮೋದಿ ಮುಂದಿದ್ದರು. ಶಾಲೆಯ ಗ್ರಂಥಾಲಯದಲ್ಲಿ ಗಂಟೆಗಟ್ಟಲೆ ಓದಿನಲ್ಲಿ ಮುಳುಗುತ್ತಿದ್ದರು. ಈಜುವುದು ಎಂದರೆ ಮೋದಿ ಅವರಿಗೆ ಅತ್ಯಂತ ಪ್ರೀತಿ. ಸ್ನೇಹಿತರ ಜೊತೆಗೂಡಿ ಹಿಂದೂ-ಮುಸ್ಲಿಮ್ ಹಬ್ಬಗಳನ್ನು ಸಂಭ್ರಮದಿಂದ ಆಚರಿಸುತ್ತಿದ್ದರು. ಬಾಲ್ಯದಿಂದ ಸಮಾಜ ಸೇವೆಯಲ್ಲಿ ಮೋದಿ ಮುಂದು. ತಾಪಿ ನದಿಯಲ್ಲಿ ಪ್ರವಾಹ ಬಂದು ಜನಜೀವನ ಅಸ್ತವ್ಯಸ್ತಗೊಂಡಾಗ ಮೋದಿ ಅವರಿಗೆ 9 ವರ್ಷ. ಗೆಳೆಯರ ಜೊತೆಗೂಡಿ ಆಹಾರ ವಿತರಣೆ ಕೇಂದ್ರ ಆರಂಭಿಸಿ ಪರಿಹಾರ ಕಾರ್ಯಗಳಲ್ಲಿ ಕೈಜೋಡಿಸಿದರು.
ಆಧ್ಯಾತ್ಮದ ಹಸಿವು
ಸಣ್ಣವಯಸ್ಸಿನಿಂದಲೇ ಸ್ವಾಮಿ ವಿವೇಕಾನಂದರ ಬಗ್ಗೆ ಹೆಚ್ಚು ಆಕರ್ಷಣೆಯನ್ನು ಮೋದಿ ಹೊಂದಿದ್ದರು. ವಿವೇಕಾನಂದರ ಕೃತಿಗಳಿಂದ ಪ್ರೇರಣೆ ಪಡೆದು ಅಧ್ಯಾತ್ಮದತ್ತ ಒಲವು ಬೆಳೆಸಿಕೊಂಡರು. ಇದೇ ಕಾರಣದಿಂದ ಜ್ಞಾನೋದಯ ಪಡೆಯಲು ತಪಸ್ಸಿನ ಜೀವನ ನಡೆಸಲು ಮುಂದಾದರು. ಇದಕ್ಕಾಗಿ ಉಪ್ಪು, ಮೆಣಸಿನಕಾಯಿ, ಎಣ್ಣೆ, ಬೆಲ್ಲ ತ್ಯಜಿಸಿ ಆಧಾತ್ಮಿಕ ಜೀವನ ನಡೆಸಲು ನಿರ್ಧರಿಸಿದರು. 17ನೇ ವಯಸ್ಸಿನಲ್ಲಿದ್ದಾಗ ದೇಶ ಸಂಚಾರದ ಇಚ್ಛೆಯನ್ನು ಮನೆಯವರ ಎದುರು ವ್ಯಕ್ತಪಡಿಸಿದರು. ಮನೆಯವರಿಗೆ ಇದರಿಂದ ಆಘಾತವಾದರೂ ಕೊನೆಗೆ ಒಪ್ಪಿಕೊಳ್ಳಲೇಬೇಕಾಯಿತು. ಮೋದಿ ಗುಜರಾತ್ನಿಂದ ಪಶ್ಚಿಮ ಬಂಗಾಳಕ್ಕೆ ತೆರಳಿ ರಾಮಕೃಷ್ಣ ಆಶ್ರಮ ಮತ್ತು ಈಶಾನ್ಯ ಭಾರತದ ಹಲವೆಡೆ ಸಂಚರಿಸಿದರು. ನಂತರ ಅಲ್ಲಿಂದ ಹಿಮಾಲಯದತ್ತ ಪ್ರಯಣಿಸಿದರು. ಎರಡು ವರ್ಷಗಳ ಕಾಲ ಹೀಗೆ ಸಂಚಾರ ಮಾಡಿದರು. ಈಗಲೂ ಕೇದಾರನಾಥಕ್ಕೆ ಹೋದರೆ ಅಲ್ಲಿನ ಗುಹೆಯಲ್ಲಿ ಅವರು ಧ್ಯಾನ ಹಾಗೂ ಮೌನದ ಸಾಧನೆ ಮಾಡುತ್ತಾರೆ.
ತಾಯಿಯ ಭಾವನಾತ್ಮಕ ನಂಟು
ನರೇಂದ್ರ ಮೋದಿ ಅವರ ತಾಯಿ ಹಿರಾಬೆನ್ ಮೋದಿ, ತಂದೆ ದಾಮೋದರ್ದಾಸ್ ಮೋದಿ. ಮೂರು ಸೋದರರು ಇಬ್ಬರು ಸೋದರಿಯರಿದ್ದ ಕುಟುಂಬ ಅವರದು. ಪ್ರಧಾನಿ ಮೋದಿ ದಿನಕ್ಕೆ 18 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಅವರು ಈ ಸ್ಫೂರ್ತಿಯನ್ನು ತಮ್ಮ ತಾಯಿ ಹೀರಾಬೆನ್ ಅವರಿಂದಲೇ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ. ʼಆಕೆ ಅನಕ್ಷರಸ್ಥೆ. ಆದರೆ ನನ್ನ ತಂದೆ ದಾಮೋದರ್ ಅವರಿಗೆ ಧಾರ್ಮಿಕ ಪುಸ್ತಕಗಳನ್ನು ನೀಡುತ್ತಿದ್ದರು. ಅವರು ಶಿವರಾತ್ರಿ ಮತ್ತು ಶ್ರಾವಣ ಮಾಸದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದರು. ಅಮ್ಮ ದಿನಕ್ಕೆ 2 ಬಾರಿ ಬಾವಿಯಿಂದ ನೀರು ತುಂಬಿಸುತ್ತಿದ್ದಳು. ಮನೆಯ ಖರ್ಚಿಗೆಂದು ತಮ್ಮ ತಾಯಿ ಕೆಲವು ಮನೆಗಳಿಗೆ ತೆರಳಿ ಪಾತ್ರೆ ತೊಳೆಯುತ್ತಿದ್ದರು. ಹೆಚ್ಚುವರಿ ಸಂಪಾದಿಸಲು, ಅವರು ಚರಕದಿಂದ ಹಿಡಿದು ನೂಲುತ್ತಿದ್ದರು. ನೀರಿನ ಒಂದು ಹನಿಯನ್ನೂ ವ್ಯರ್ಥ ಮಾಡುತ್ತಿರಲಿಲ್ಲ ಎಂದು ಮೋದಿ ತಮ್ಮ ತಾಯಿಯ ಬಗ್ಗೆ ಭಾವುಕವಾಗಿ ಹೇಳಿಕೊಳ್ಳುತ್ತಾರೆ.
ಎಮರ್ಜೆನ್ಸಿ ವಿರುದ್ಧ ಹೋರಾಟ
ಮುಂದೆ ಮೋದಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾದರು. 1972-73ರ ಅವರಧಿಯಲ್ಲಿ ಪ್ರಚಾರಕರಾಗಿ ಗುಜರಾತ್ ಉದ್ದಗಲಕ್ಕೂ ಓಡಾಡಿದರು. ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿದ್ದ ಮೋದಿ, ಬದ್ಧತೆ ಮತ್ತು ಕಠಿಣ ಪರಿಶ್ರಮದಿಂದ ಒಂದೊಂದೇ ಹಂತಗಳನ್ನು ಮೇಲೇರಿದರು. ಆಗ ಭ್ರಷ್ಟಾಚಾರ ಮತ್ತು ಸ್ವಜನಪಕ್ಷದ ಕಾರಣದಿಂದ ಕಾಂಗ್ರೆಸ್ನ ಜನಪ್ರಿಯತೆ ಕುಸಿಯುತ್ತಿತ್ತು. 1973ರ ಡಿಸೆಂಬರ್ ತಿಂಗಳಲ್ಲಿ ಬೆಲೆ ಏರಿಕೆ ವಿರುದ್ಧ ಗುಜರಾತ್‌ನ ಮೊರ್ಬಿ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನಾ ಮೆರವಣಿಗೆ ನವನಿರ್ಮಾಣ ಚಳವಳಿಯಾಗಿ ಯುವ ಆಂದೋಲನದ ರೂಪ ಪಡೆಯಿತು. ಚಳವಳಿಯ ಸಂಘಟನೆಯಲ್ಲಿ ಮೋದಿ ಪ್ರಮುಖ ಪಾತ್ರ ನಿರ್ವಹಿಸಿದರು. ಭ್ರಷ್ಟಾಚಾರದ ವಿರುದ್ಧದ ದನಿ ಎನಿಸಿದ್ದ ಜಯಪ್ರಕಾಶ್ ನಾರಾಯಣ್ ಸಹ ಚಳವಳಿಯಲ್ಲಿ ಪಾಲ್ಗೊಂಡರು. ಅವರನ್ನು ಭೇಟಿಯಾದರು. 1975ರ ಜೂನ್ 25ರಂದು ಇಂದಿರಾ ಗಾಂಧಿ ತುರ್ತುಪರಿಸ್ಥಿತಿ ಹೇರಿದಾಗ, ಅವರ ಸರ್ವಾಧಿಕಾರದ ಆಡಳಿತದ ವಿರುದ್ಧ ಪ್ರತಿಪಕ್ಷಗಳ ಹೋರಾಟ, ಚಳವಳಿ ಆರಂಭವಾಯಿತು. ಮೋದಿ ಅದರಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಆಡ್ವಾಣಿ, ಜಾರ್ಜ್ ಫರ್ನಾಂಡಿಸ್, ಮೊರಾರ್ಜಿ ದೇಸಾಯಿ ಸೇರಿದಂತೆ ಹಲವು ಪ್ರಮುಖ ನಾಯಕರನ್ನು ಆಗ ಬಂಧಿಸಲಾಯಿತು. ಆಗ ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ಮೋದಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.
ಗುಜರಾತ್‌ನಲ್ಲಿ ಮೋದಿ ಅಲೆ
1987ರ ನಂತರ ಮೋದಿ ಅಲೆ ಗುಜರಾತ್‌ನಲ್ಲಿ ಬೀಸಲಾರಂಭಿಸಿತು. ಬಿಜೆಪಿ ಗುಜರಾತ್ ಘಟಕದ ಮಹಾಪ್ರಧಾನ ಕಾರ್ಯದರ್ಶಿಯಾಗಿ ದುಡಿದ ಅವರು ಅಹಮದಾಬಾದ್ ನಗರಾಡಳಿತ ಸಂಸ್ಥೆ ಚುನಾವಣೆಯಲ್ಲಿ ಪಕ್ಷವನ್ನ ಗೆಲ್ಲಿಸಿದರು. ಮೋದಿ ಬಿಜೆಪಿಯಲ್ಲಿ ಒಂದೊಂದೇ ಹಂತ ಮೇಲೇರುತ್ತ ರಾಷ್ಟ್ರೀಯ ಕಾರ್ಯದರ್ಶಿಯಾಗಿ ದೆಹಲಿಗೆ ಹೋದರು. 1998ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂತು. 2001ರಲ್ಲಿ ಪಕ್ಷದ ಹಿರಿಯರು ಸೂಚಿಸಿದಂತೆ ಮೋದಿ ಮುಖ್ಯಮಂತ್ರಿಯಾದರು. ಅಧಿಕಾರದ ಕನಸು ಕಾಣದ ವ್ಯಕ್ತಿ ಗುಜರಾತ್‌ನ ಅತಿ ಜನಪ್ರಿಯ ಮುಖ್ಯಮಂತ್ರಿ ಆದದ್ದು ಹೀಗೆ.
ಗೋಧ್ರಾದಲ್ಲಿ ಕೋಮುಗಲಭೆಗಳ ನಂತರ ನಂತರ ಮೋದಿ ವಿರುದ್ಧ ವ್ಯಾಪಕ ಅಪಪ್ರಚಾರಗಳು ನಡೆದವು. ಡಿಸೆಂಬರ್ 2002ರಲ್ಲಿ ವಿಧಾನಸಭೆಯನ್ನು ಅವಧಿಗೆ ಮೊದಲೇ ವಿಸರ್ಜಿಸಿ ಚುನಾವಣೆಗೆ ಹೋದರು. ಮೋದಿಯವರನ್ನು ಜನ ಭರವಸೆಯಿಟ್ಟು ಹೆಚ್ಚಿನ ಸ್ಥಾನ ನೀಡಿ ಗೆಲ್ಲಿಸಿದರು. 2002ರಿಂದ 2007ರವರೆಗೆ ಮೋದಿ ಉತ್ತಮ ಆಡಳಿತ ನೀಡಿದರು. 2007ರಲ್ಲಿ ಮೋದಿ ವಿರುದ್ಧ ಕಾಂಗ್ರೆಸ್ ‘ಸಾವಿನ ವ್ಯಾಪಾರಿ’ ಎಂಬ ಅಪಪ್ರಚಾರ ನಡೆಸಿತು. ಆದರೂ ಗುಜರಾತ್‌ನ ಜನತೆ ಮತ್ತೊಮ್ಮೆ ಬಿಜೆಪಿ ಹಾಗೂ ಮೋದಿಯವರನ್ನು ಅಧಿಕಾರಕ್ಕೆ ತಂದರು.
ಜನಮೆಚ್ಚಿದ ಪ್ರಧಾನಿ ಅಭ್ಯರ್ಥಿ
ನರೇಂದ್ರ ಮೋದಿ ಅವರ ನಾಯಕತ್ವ, ಅಭಿವೃದ್ಧಿ ರಾಜಕಾರಣ, ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದ ವರ್ಚಸ್ಸು ಇವುಗಳನ್ನೆಲ್ಲ ಗಮನಿಸಿ ಭಾರತೀಯ ಜನತಾ ಪಕ್ಷವು 2014ರ ಲೋಕಸಭೆ ಚುನಾವಣೆಗೆ ಮೊದಲು ಮೋದಿ ಅವರನ್ನು ಎನ್ಡಿಎ ಮೈತ್ರಿಕೂಟದ ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಘೋಷಿಸಿತು. ಗುಜರಾತ್‌ನ ಅಭಿವೃದ್ಧಿ ರಾಜಕಾರಣದ ಶಕೆ ಹಾಗೂ ಭಯೋತ್ಪಾದನೆ- ಮತಾಂಧತೆಗಳ ಮುಂದೆ ಸೋಲೊಪ್ಪದ ಸ್ವಾಭಿಮಾನದ ನಿಲುವು ಅವರಿಗೆ ದೊಡ್ಡ ಮಟ್ಟದ ಗೆಲುವು ತಂದಿತ್ತಿತು. ಜನರ ಮನಗೆದ್ದ ನರೇಂದ್ರ ಮೋದಿ 2014ರಲ್ಲಿ ದೇಶದ ಪ್ರಧಾನಿಯಾದರು. ಅವರ ಆಡಳಿತ ವೈಖರಿಗೆ ಮೆಚ್ಚುಗೆ ಸೂಚಿಸಿದ ಜನತೆ 2019ರಲ್ಲಿ ಮತ್ತೊಮ್ಮೆ ಹಾಗೂ 2024ರಲ್ಲಿ ಮಗದೊಮ್ಮೆ ಪ್ರಧಾನಿಯಾಗುವ ಅವಕಾಶ ನೀಡಿದರು.
ಎರಡನೇ ಅತಿ ಸುದೀರ್ಘ ಅವಧಿಯ ಪ್ರಧಾನಿ
ದೇಶದಲ್ಲಿ ಅತಿ ದೀರ್ಘ ಕಾಲ ಪ್ರಧಾನಿಯಾಗಿದ್ದ ದಾಖಲೆ ಮೊದಲ ಪ್ರಧಾನಿ ಜವಾಹರಲಾಲ ನೆಹರೂ ಅವರ ಹೆಸರಿನಲ್ಲಿ ಇದೆ. ಅವರು ಮೂರು ಅವಧಿ ಪೂರ್ತಿಯಾಗಿ ಪ್ರಧಾನಿಯಾಗಿದ್ದರು. ಎರಡನೇ ಸ್ಥಾನದಲ್ಲಿ ಇಂದಿರಾ ಗಾಂಧಿ ಇದ್ದರು. 1966ರ ಜ.24ರಿಂದ 1977ರ ಮಾ.24ರವರೆಗೆ ಇಂದಿರಾ ಗಾಂಧಿ ನಿರಂತರವಾಗಿ ಪ್ರಧಾನಿ ಹುದ್ದೆಯಲ್ಲಿದ್ದರು. 2025ರ ಜುಲೈ 25ರಂದು ಇಂದಿರಾ ಅವರ ದಾಖಲೆಯನ್ನು ಮೋದಿ ಮುರಿದು, ಅತಿ ದೀರ್ಘಕಾಲ ಸೇವೆ ಸಲ್ಲಿಸಿದ ಭಾರತದ ಎರಡನೇ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ದೇಶದ ಸ್ವಾತಂತ್ರ್ಯೋದಯದ ನಂತರ ಜನಿಸಿದ ಮೊದಲ ಪ್ರಧಾನಿ ಮತ್ತು ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಕಾಂಗ್ರೆಸ್ಸೇತರ ಪ್ರಧಾನಿ ಎಂಬ ಹೆಗ್ಗಳಿಕೆಗಳೂ ಅವರಿಗೆ ಇವೆ. ಎರಡು ಪೂರ್ಣ ಅವಧಿಗಳನ್ನು ಪೂರ್ಣಗೊಳಿಸಿದ ಏಕೈಕ ಕಾಂಗ್ರೆಸ್ಸೇತರ ನಾಯಕನೂ ಅವರೇ. ಭಾರತದ ಎಲ್ಲಾ ಪ್ರಧಾನಿಗಳು ಮತ್ತು ಮುಖ್ಯಮಂತ್ರಿಗಳಲ್ಲಿ, ಪಕ್ಷದ ನಾಯಕರಾಗಿ ಸತತ 6 ಚುನಾವಣೆಗಳನ್ನು ಗೆದ್ದ ಏಕೈಕ ನಾಯಕ ಎಂಬ ದಾಖಲೆಯೂ ಅವರ ಹೆಸರಿನಲ್ಲಿದೆ.
ಮಲಗುವುದು ಮೂರುವರೆ ಗಂಟೆ ಮಾತ್ರ!
75ನೇಯ ವಯಸ್ಸಿನಲ್ಲಿಯೂ ಮೋದಿ ತಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಮೊದಲಿನಂತೆಯೇ ಸದೃಢವಾಗಿಟ್ಟುಕೊಂಡಿದ್ದಾರೆ. ಈ ವಯಸ್ಸಿನಲ್ಲಿಯೂ ಕೂಡ ಮೋದಿ ಮಲಗುವುದು ಕೇವಲ ಮೂರೂವರೆ ಗಂಟೆಗಳು ಮಾತ್ರ. ಮೋದಿಯವರ ಬೆಳಗು ಆರಂಭವಾಗುವುದೇ ಯೋಗಾಭ್ಯಾಸದಿಂದ. ನಿತ್ಯ ಬೆಳಗ್ಗೆ ತಪ್ಪದೇ ಯೋಗ ಮಾಡುತ್ತಾರೆ. ಅವರನ್ನು ಅವರು ಫಿಟ್ ಆಗಿಟ್ಟುಕೊಳ್ಳಲು ವಜ್ರಾಸನ, ಸೇತುಬಂಧಾಸನ, ಭುಜಂಗಾಸನ ಮತ್ತು ಉತ್ಥಾನಪದಾಸನವನ್ನು ನಿತ್ಯ ಮಾಡುತ್ತಾರೆ. ಬೆಳಗ್ಗೆ 9 ಗಂಟೆಗೆ ಮಿತವಾದ ಉಪಹಾರ ಮಾಡುತ್ತಾರೆ. ಸಂಜೆ ಆರು ಗಂಟೆಯ ನಂತರ ಅವರು ಯಾವುದೇ ಆಹಾರವನ್ನು ಸೇವಿಸುವುದಿಲ್ಲ. ಅತ್ಯಂತ ಹಿತಮಿತವಾದ ಹಾಗೂ ಸಮತೋಲನ ಆಹಾರದ ಪದ್ಧತಿಯನ್ನು ಮೋದಿ ಬಹಳ ವರ್ಷದಿಂದ ತಮ್ಮದಾಗಿಸಿಕೊಂಡಿದ್ದಾರೆ. ಫಿಟ್ ಇಂಡಿಯಾ ಕಾರ್ಯಕ್ರಮದಲ್ಲಿ ಮೋದಿಯವರೇ ಹೇಳಿಕೊಂಡಂತೆ ಅವರಿಗೆ ನುಗ್ಗೆಕಾಯಿ ಪರಾಟ ಅಂದ್ರೆ ತುಂಬಾ ಇಷ್ಟ. ಇದರಲ್ಲಿ ಬಹಳ ಪೋಷಕಾಂಶಗಳು ಇರುತ್ತವೆ, ಹೀಗಾಗಿ ನಾನು ವಾರದಲ್ಲಿ ಎರಡು ಬಾರಿಯಾದ್ರೂ ನುಗ್ಗೆಕಾಯಿ ಸೊಪ್ಪಿನ ಪರಾಟ ತಿನ್ನುತ್ತೇನೆ ಎಂದು ಮೋದಿ ಹೇಳಿಕೊಂಡಿದ್ದಾರೆ. ಕಡಿಮೆ ನಿದ್ರೆ, ಹೆಚ್ಚು ಕೆಲಸ, ಯೋಗ, ಹೆಚ್ಚು ನಡಿಗೆ, ಸಮತೋಲಿತ ಆಹಾರ ಇದು ಮೋದಿಯವರು ಅಳವಡಿಸಿಕೊಂಡ ಜೀವನ ಶೈಲಿ. ಹೀಗಾಗಿಯೇ ಈಗಲೂ ಯುವಚೈತನ್ಯವನ್ನು ಹೊಂದಿದ್ದಾರೆ ಎನ್ನುತ್ತಾರೆ ಅವರನ್ನು ಹತ್ತಿರದಿಂದ ಬಲ್ಲವರು.
ಕೊಡುಗೆಗಳ ಹರಾಜು
ಪ್ರಧಾನಿ ನರೇಂದ್ರ ಮೋದಿ ತಮ್ಮ ಹುಟ್ಟುಹಬ್ಬದಂದು ಅವರು ವಿವಿಧ ಸಂದರ್ಭದಲ್ಲಿ ಸ್ವೀಕರಿಸಿರುವ ಉಡುಗೊರೆಗಳನ್ನು ಹರಾಜು ಹಾಕುತ್ತಾರೆ. ದೇಶದ ಪ್ರಧಾನ ಮಂತ್ರಿ ಅಂದ ಮೇಲೆ ದುಬಾರಿ ಉಡುಗೊರೆಗಳು ಅವರಿಗೆ ಬರುವುದು ಸಹಜ. ಆದರೆ ಯಾವುದನ್ನೂ ಅವರು ತಮ್ಮ ಸ್ವಂತಕ್ಕೆ ಇಟ್ಟುಕೊಳ್ಳುವುದೇ ಇಲ್ಲ. ಅವರು ತಮಗೆ ಬಂದ ಹಲವು ಸ್ಮರಣಿಕೆಗಳನ್ನು ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌ಗೆ ನೀಡಿದ್ದಾರೆ. ಉಡುಗೊರೆಗಳ ಬೆಲೆ ಕನಿಷ್ಠ 600 ರೂಪಾಯಿಯಿಂದ ಆರಂಭವಾಗಿ 8.26 ಲಕ್ಷ ರೂಪಾಯಿ ವರೆಗೆ ಇದೆ. ಹರಾಜಿನಿಂದ ಬಂದ ಹಣವನ್ನು ಗಂಗಾ ನದಿಯನ್ನು ಸ್ವಚ್ಛಗೊಳಿಸುವ ಉದ್ದೇಶಕ್ಕೆ ಮೋದಿ ಈ ಹಿಂದೆ ನೀಡಿದ್ದಾರೆ. ಹೀಗೆ ಮೋದಿಯವರು ಪ್ರತಿವರ್ಷವೂ ತಮಗೆ ಸಿಗುವ ಎಲ್ಲಾ ಸ್ಮರಣಿಕೆಗಳನ್ನು ಹರಾಜು ಹಾಕಿ ಬಂದ ಹಣವನ್ನು ಸಮಾಜಸೇವಾ ಕಾರ್ಯಕ್ಕೆ ನೀಡುತ್ತಾರೆ. ಅವರು ಮುಖ್ಯಮಂತ್ರಿಯಾದ ದಿನದಿಂದಲೂ ಅದನ್ನು ಮಾಡಿಕೊಂಡು ಬರುತ್ತಿದ್ದಾರೆ.
ಜನಪ್ರಿಯ ಪ್ರಧಾನಿ
ವಿಶ್ವದ ಜನಪ್ರಿಯ ನಾಯಕರಲ್ಲಿ ಒಬ್ಬರು ಮೋದಿ. ಭಾರತದಲ್ಲಿ ಮಾತ್ರವಲ್ಲದೆ ಇತರ ಹಲವು ದೇಶಗಳ ನಾಯಕರಿಗೆ ಹೋಲಿಸಿದರೂ ಮೋದಿಯವರ ಜನಪ್ರಿಯತೆ ಹೆಚ್ಚಾಗಿದೆ. ಜುಲೈ ತಿಂಗಳಲ್ಲಿ ಬಿಡುಗಡೆಯಾದ ನಾಯಕರ ರೇಟಿಂಗ್ ಪಟ್ಟಿಯಲ್ಲಿ ನರೇಂದ್ರ ಮೋದಿ ಅಗ್ರಸ್ಥಾನದಲ್ಲಿದ್ದಾರೆ. ಕಳೆದ 11 ವರ್ಷಗಳಿಂದ ಅವರ ಜನಪ್ರಿಯತೆಯ ರ್ಯಾಂಕಿಂಗ್ ಅಬಾಧಿತವಾಗಿದೆ. ಗಲ್ಫ್ ದೇಶಗಳಲ್ಲಿಯೂ ಅವರು ಜನಪ್ರಿಯ ವ್ಯಕ್ತಿ. ಹಲವಾರು ಅರಬ್ ದೇಶಗಳು ಅವರಿಗೆ ತಮ್ಮ ದೇಶದ ಅತ್ಯುನ್ನತ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ.
ಅತಿ ಹೆಚ್ಚು ವಿದೇಶ ಪ್ರವಾಸ
ನರೇಂದ್ರ ಮೋದಿ ಅವರು ಅತಿ ಹೆಚ್ಚು ಬಾರಿ ವಿದೇಶ ಪ್ರವಾಸ ಮಾಡಿದ ಪ್ರಧಾನಿ ಅನಿಸಿಕೊಂಡಿದ್ದಾರೆ. ಅವರು 78 ದೇಶಗಳಿಗೆ 92 ಬಾರಿ ಪ್ರವಾಸ ಕೈಗೊಂಡಿದ್ದಾರೆ. 2014ರಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅವರು ಭೇಟಿ ನೀಡಿದ ಮೊದಲ ದೇಶ, ನಮ್ಮ ಪಕ್ಕದ ಪುಟ್ಟ ದೇಶವಾದ ಭೂತಾನ್.
ಇದನ್ನೂ ಓದಿ: PM Narendra Modi: 103 ನಿಮಿಷ ಸುದೀರ್ಘ ಭಾಷಣ; ಮತ್ತೆ ದಾಖಲೆ ಬರೆದ ಪಿಎಂ ಮೋದಿ