Narendra Modi: ಪ್ರಧಾನಿ ಮೋದಿಯವರ 75ನೇ ಹುಟ್ಟುಹಬ್ಬ: ಇಲ್ಲಿವೆ ಅಪರೂಪದ ಫೋಟೋಗಳು
ಪ್ರಧಾನಿ ನರೇಂದ್ರ ಮೋದಿ (Prime Minister Modi) ಅವರು ಇಂದು 75ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಇವರ ಹುಟ್ಟುಹಬ್ಬದ ಸಂಭ್ರಮಾಚರಣೆ ಇದೀಗ ದೇಶಾದ್ಯಂತ ಆರಂಭವಾಗಿದೆ. ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಈ ಸಂದರ್ಭದಲ್ಲಿ ಅವರ ಕೆಲವು ಅಪರೂಪದ ಚಿತ್ರಗಳು ಇಲ್ಲಿವೆ.

-


ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 17ರಂದು ಅಂದರೆ ಇಂದು ತಮ್ಮ 75ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಈಗಾಗಲೇ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳ ಮಹಾಪುರಾವೇ ಹರಿದುಬರುತ್ತಿದೆ. 17ನೇ ವಯಸ್ಸಿಗೆ ಮನೆ ತೊರೆದ ಇವರು ಬಳಿಕ ದೇಶಾದ್ಯಂತ ಸಂಚರಿಸಲು ಪ್ರಾರಂಭಿಸಿದರು. ಬಳಿಕ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸೇರಿದರು.

ವಿಶ್ವದ ಜನಪ್ರಿಯ ನಾಯಕರಲ್ಲಿ ಒಬ್ಬರಾಗಿರುವ ಪ್ರಧಾನಿ ನರೇಂದ್ರ ಮೋದಿ 1950ರ ಸೆಪ್ಟೆಂಬರ್ 17ರಂದು ಗುಜರಾತ್ನ ಸಣ್ಣ ಪಟ್ಟಣವಾದ ವಡ್ನಗರದಲ್ಲಿ ಜನಿಸಿದರು. ಇವರ ತಂದೆ ದಾಮೋದರದಾಸ್ ಮುಲ್ಚಂದ್ ಮೋದಿ. ಇವರು ವಡ್ನಗರ ರೈಲ್ವೆ ನಿಲ್ದಾಣದ ಬಳಿ ಚಹಾ ಅಂಗಡಿಯನ್ನು ನಡೆಸುತ್ತಿದ್ದರು. ತಾಯಿ ಹೀರಾಬೆನ್ ಗೃಹಿಣಿಯಾಗಿದ್ದರು. ಪ್ರಧಾನಿ ಮೋದಿ ಅವರಿಗೆ ಸೋಮ, ಅಮೃತ್, ಪ್ರಹ್ಲಾದ್ ಮತ್ತು ಪಂಕಜ್ ಎಂಬ ನಾಲ್ವರು ಸಹೋದರರು ಮತ್ತು ವಸಂತಿಬೆನ್ ಎಂಬ ಒಬ್ಬ ಸಹೋದರಿ ಇದ್ದಾರೆ.

ಮೋದಿ ಅವರು ಬಾಲ್ಯದಿಂದಲೂ ಹೆಚ್ಚು ಶ್ರಮಿಕರಾಗಿದ್ದರು. ಹಲವು ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದರು. ಪುಸ್ತಕಗಳನ್ನು ಓದುವ ಆಸಕ್ತಿ ಬೆಳೆಸಿಕೊಂಡಿದ್ದರು. ಸ್ಥಳೀಯ ಗ್ರಂಥಾಲಯದಲ್ಲಿ ಅವರು ಹಲವು ಗಂಟೆಗಳ ಕಾಲ ಓದುತ್ತಿದ್ದರು, ಅವರಿಗೆ ಈಜು ಇಷ್ಟವಾಗುತ್ತಿತ್ತು ಎನ್ನುತ್ತಾರೆ ಅವರ ಬಾಲ್ಯದ ಸ್ನೇಹಿತರು.

ಮೋದಿ ಮತ್ತು ಅವರ ಸ್ನೇಹಿತರು ಒಂಬತ್ತನೇ ವಯಸ್ಸಿನಲ್ಲಿ ತಾಪಿ ನದಿಯಲ್ಲಿನ ಪ್ರವಾಹದಿಂದ ಹಾನಿಗೊಳಗಾದವರಿಗೆ ಆಹಾರ ಮಳಿಗೆಯನ್ನು ಪ್ರಾರಂಭಿಸಿ ಪರಿಹಾರ ಹಣವನ್ನು ಸಂಗ್ರಹಿಸಿ ದಾನ ಮಾಡಿದರು. ಪಾಕಿಸ್ತಾನದೊಂದಿಗಿನ ಯುದ್ಧದ ಸಂದರ್ಭದಲ್ಲಿ ಗಡಿಯತ್ತ ಹೋಗಿ ಸೈನಿಕರಿಗೆ ಚಹಾ ನೀಡುತ್ತಿದ್ದರು.

17ನೇ ವಯಸ್ಸಿಗೆ ಮನೆ ಬಿಟ್ಟ ಮೋದಿ, ಬಳಿಕ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ವನ್ನು ಸೇರಿದರು. ಆರ್ಎಸ್ಎಸ್ನಲ್ಲಿ ದಿನ ಬೆಳಗ್ಗೆ 5 ಗಂಟೆಯಿಂದ ತಡರಾತ್ರಿವರೆಗೂ ಸಂಘದ ಚಟುವಟಿಕೆಗಳಲ್ಲಿ ಅವರು ಭಾಗಿಯಾಗಿರುತ್ತಿದ್ದರು. ಸಣ್ಣ ವಯಸ್ಸಿನಲ್ಲೇ ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ಸೇರಿಕೊಂಡರು.

ಸ್ವಾಮಿ ವಿವೇಕಾನಂದರ ಆಲೋಚನೆಗಳಿಂದ ಪ್ರಭಾವಿತರಾಗಿದ್ದ ಮೋದಿ ಅವರು ವಿವೇಕಾನಂದರಿಂದ ಸ್ಫೂರ್ತಿ ಪಡೆದು ಆಧ್ಯಾತ್ಮಿಕ ಮತ್ತು ಸೇವಾ ಆಧಾರಿತ ದೃಷ್ಟಿಕೋನವನ್ನು ಬೆಳೆಸಿಕೊಂಡರು. 1968 ರಲ್ಲಿ ಜಶೋದಾಬೆನ್ ಅವರನ್ನು ವಿವಾಹವಾದರೂ ಅವರಿಗೆ ಮಕ್ಕಳಿಲ್ಲ. ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.

1985ರಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದ ಪ್ರಧಾನಿ ಮೋದಿ, 2001 ರಿಂದ 2014 ರವರೆಗೆ ನಾಲ್ಕು ಅವಧಿಗೆ ಗುಜರಾತ್ ಮುಖ್ಯಮಂತ್ರಿಯಾದರು. ಬಳಿಕ 2014ರಿಂದ ಅವರು ದೇಶದ ಪ್ರಧಾನಿಯಾಗಿದ್ದಾರೆ. ಇದೀಗ ಅವರು ಸತತ ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.