ನವದೆಹಲಿ: ಕೇಂದ್ರ ಸರ್ಕಾರ ಗೋಣಿ ಚೀಲಗಳ ಬಳಕೆ ಶುಲ್ಕವನ್ನು ಶೇ.40ರಷ್ಟು ಹೆಚ್ಚಿಸಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ತಿಳಿಸಿದ್ದಾರೆ. ಬಳಸಿದ ಗೋಣಿ ಚೀಲಕ್ಕೆ ಇದ್ದ ₹7.32 ಶುಲ್ಕವನ್ನು ಇದೀಗ ₹10.22ಕ್ಕೆ ಹೆಚ್ಚಿಸಲಾಗಿದೆ. ಸರ್ಕಾರದ ಈ ಕ್ರಮದಿಂದ ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆರ್ಥಿಕವಾಗಿ ನೆರವಾಗಲಿದೆ ಎಂದು ಹೇಳಿದ್ದಾರೆ. ಗನ್ನಿ ಬ್ಯಾಗ್ ಬಳಕೆ ಶುಲ್ಕ ಹೆಚ್ಚಳದಿಂದ ಆಹಾರ ಧಾನ್ಯ ಸಂಗ್ರಹಣೆ ಮತ್ತು ವಿತರಣೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಕಾರ ಬಲಪಡಿಸುವುದರ ಜತೆಗೆ ಸುಸ್ಥಿರ ಪ್ಯಾಕೇಜಿಂಗ್ ಪದ್ಧತಿ ಅನುಸರಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ.
FCI ಸದಸ್ಯರಿರುವ ಸಮಿತಿ ರಚನೆ
ಕೇಂದ್ರ ಸರ್ಕಾರ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಗನ್ನಿ ಬ್ಯಾಗ್ ಶುಲ್ಕ ಪರಿಷ್ಕರಣೆಗೆ ಕೋರಿಕೆಗಳನ್ನು ಸ್ವೀಕರಿಸಿತು. ಕೇಜಿಂಗ್ ಶುಲ್ಕಗಳ ಸಮಗ್ರ ಪರಿಶೀಲನೆಗಾಗಿ ರಾಜ್ಯ ಸರ್ಕಾರಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಭಾರತೀಯ ಆಹಾರ ನಿಗಮ (FCI) ದ ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಲಾಗಿತ್ತು. ಆಂಧ್ರಪ್ರದೇಶ, ಪಂಜಾಬ್, ಮಧ್ಯಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ ಮತ್ತು ಹರಿಯಾಣ ರಾಜ್ಯ ಸರ್ಕಾರಗಳ ಸಲಹೆ ಹಾಗೂ ಸಮಿತಿ ಶಿಫಾರಸ್ಸು ಮೇರೆಗೆ ಶುಲ್ಕ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ | PM Svanidhi Scheme: ಬೀದಿ ಬದಿ ವ್ಯಾಪಾರಿಗಳಿಗೆ ಗುಡ್ ನ್ಯೂಸ್: ʼಪಿಎಂ ಸ್ವನಿಧಿʼ ಯೋಜನೆ ಮತ್ತೈದು ವರ್ಷ ವಿಸ್ತರಣೆ
ಪ್ರಸ್ತುತದಲ್ಲಿ ₹7.32 ರಿಂದ ₹10.22ಕ್ಕೆ ವೆಚ್ಚ ಪರಿಷ್ಕರಿಸಿದ್ದು, ಬಳಸಿದ ಗನ್ನಿ ಚೀಲಗಳ ಬಳಕೆ ಶುಲ್ಕವನ್ನು ಕೆಎಂಎಸ್ 2017-18 ರಿಂದ ಕೆಎಂಎಸ್ 2024-25ರವರೆಗೆ ಹೊಸ ಗನ್ನಿ ಚೀಲಗಳ ಬೆಲೆಯಲ್ಲಿನ ಹೆಚ್ಚಳಕ್ಕೆ ಅನುಗುಣವಾಗಿ ಹೆಚ್ಚಿಸಲಾಗಿದೆ. ಪರಿಷ್ಕೃತ ದರ ಕೆಎಂಎಸ್ 2025-26 ರಿಂದ ಅನ್ವಯಿಸುತ್ತದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.