Shihan Hussaini: ಜಯಲಲಿತಾ ಅಧಿಕಾರಕ್ಕೆ ಬರಲೆಂದು 2015ರಲ್ಲಿ ಶಿಲುಬೆಗೇರಿ ಸುದ್ದಿಯಾಗಿದ್ದ ನಟ ಇನ್ನಿಲ್ಲ
Shihan Hussaini:2015ರಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕೆಂಬ ಉದ್ದೇಶದಿಂದ ಕೈ-ಕಾಲುಗಳಿಗೆ ಮೊಳೆ ಹೊಡೆದುಕೊಂಡು ಶಿಲುಬೆಗೇರಿ ಭಾರೀ ಸುದ್ದಿಯಾಗಿದ್ದ ನಟ ಶಿಹಾನ್ ಹುಸೈನಿ ವಿಧಿವಶರಾಗಿದ್ದಾರೆ. ಅವರಿಗೆ 60ವರ್ಷ ವಯಸ್ಸಾಗಿದ್ದು, ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಇಂದು ಆರೋಗ್ಯದಲ್ಲಿ ತೀವ್ರ ಏರುಪೇರಾಗಿ ಕೊನೆಯುಸಿರೆಳೆದಿದ್ದಾರೆ.


ಚೆನ್ನೈ: ನಟನೆ, ಕರಾಟೆ, ಬಿಲ್ವಿದ್ಯೆ ಹಾಗೂ ಹಲವಾರು ಸ್ಟಂಟ್‌ಗಳ ಮೂಲಕ ಭಾರೀ ಜನಪ್ರಿಯರಾಗಿದ್ದ ನಟ ಶಿಹಾನ್ ಹುಸೇನಿ(Shihan Hussaini) ಇಂದು ಕೊನೆಯುಸಿರೆಳೆದಿದ್ದಾರೆ. ಅವರಿಗೆ 60ವರ್ಷ ವಯಸ್ಸಾಗಿತ್ತು. ಇಂದು ಮುಂಜಾನೆ ಅವರು ಚೆನ್ನೈನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಹೂ ಎಂದೇ ಖ್ಯಾತಿ ಪಡೆದಿದ್ದ ಹುಸೇನಿ ಅವರು ಹಲವು ವರ್ಷಗಳಿಂದ ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಕಳೆದ ಕೆಲವು ತಿಂಗಳಿಂದ ಹುಸೇನಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕ್ಯಾನ್ಸರ್ ಜರ್ನಿ ಬಗ್ಗೆ ಪೋಸ್ಟ್ ಮಾಡುತ್ತಾ ಆಕ್ಟಿವ್ ಆಗಿದ್ದರು. ಇನ್ನು ಹುಸೈನಿ ಅವರ ಪಾರ್ಥೀವ ಶರೀರವನ್ನು ಚೆನ್ನೈನ ಬೆಸೆಂಟ್ ನಗರದಲ್ಲಿರುವ ನಿವಾಸದಲ್ಲಿ ಅಂತಿಮದರ್ಶನಕ್ಕೆ ಇಡಲಾಗಿತ್ತು. ಬಳಿಕ ಇಂದು ಸಂಜೆ 4 ಗಂಟೆಗೆ ರಾಯಪೆಟ್ಟಾ ಅಮೀರುನಿಸಾ ಸ್ಮಶಾನದಲ್ಲಿ ಅಂತಿಮ ವಿಧಿವಿಧಾನ ನೆರವೇರಿಸಲಾಯಿತು.
ಹುಸೇನಿ ಅವರು ತಮಿಳುನಾಡಿನ ಬಿಲ್ಲುಗಾರಿಕೆ ಸಂಘದ ಸ್ಥಾಪಕ ಮತ್ತು ಅದರ ಹಾಲಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಹೀಗಾಗಿ ಅಂತಿಮ ದರ್ಶನಕ್ಕೆ ಆಗಮಿಸುವ ಎಲ್ಲಾ ಬಿಲ್ವಿದ್ಯಾ ಪರಿಣತರಿಗೆ, ವಿದ್ಯಾರ್ಥಿಗಳಿಗೆ ತಮ್ಮ ಸಮವಸ್ತ್ರದಲ್ಲೇ ಬರಬೇಕೆಂದು ಕುಟುಂಬವು ಮನವಿ ಮಾಡಿತ್ತು. ತಮ್ಮ ಸಾವಿಗೆ ಕೆಲವು ದಿನಗಳ ಮೊದಲು, ಹುಸೇನಿ ಅವರು ಹೆಚ್ಚಿನ ವೈದ್ಯಕೀಯ ಸಂಶೋಧನೆಗಾಗಿ ತಮ್ಮ ದೇಹವನ್ನು ದಾನ ಮಾಡಲು ನಿರ್ಧರಿಸಿದ್ದರು.
ತಮಿಳುನಾಡು ಆರ್ಚರಿ ಸಂಘ (ಟಿಎಎಟಿ) ವಕ್ತಾರ ಅಶ್ವಿನ್ ಕುಮಾರ್ ಅಯ್ಯರ್ ಸಂತಾಪ ಸೂಚಿಸಿದ್ದು, ಹುಸೇನಿ ಅಗಲಿಕೆ ಭರಿಸಲಾರದ ನಷ್ಟ. ತಮಿಳುನಾಡಿನಲ್ಲಿ ಬಿಲ್ಲುಗಾರಿಕೆಯ ಸ್ಥಾಪನೆ ಮತ್ತು ಬೆಳವಣಿಗೆಗೆ ಅವರು ಪ್ರೇರಕ ಶಕ್ತಿ. ತಮ್ಮ ನಿರಂತರ ಪ್ರಯತ್ನಗಳ ಮೂಲಕ, ಅವರು ಬಿಲ್ಲುಗಾರಿಕೆಗೆ ಒಂದು ಮಹತ್ವದ ಸ್ಥಾನವನ್ನು ತಂದುಕೊಟ್ಟಿದ್ದಾರೆ. ಅವರ ಸಾಧನೆಗೆ ಎಂದಿಗೂ ಚಿರಸ್ಥಾಯಿ ಎಂದು ಭಾವುಕರಾದರು.
ಈತ ಮಾಡಿರೋದು ಅಂತಿಂಥಾ ಸ್ಟಂಟ್ ಅಲ್ಲ
- ಕರಾಟೆ, ಬಿಲ್ಲಿಗಾರಿಕೆ, ನಟನೆ ಮಾತ್ರವಲ್ಲದೇ ಹುಸೇನಿ ಬೇರೆ ಬೇರೆ ರೀತಿಯ ಸ್ಟಂಟ್ ಮೂಲಕ ನಾಡಿನ ಗಮನ ಸೆಳೆದವರು. 2015 ರಲ್ಲಿ ಅಂದಿನ ಮುಖ್ಯಮಂತ್ರಿ ಜಯಲಲಿತಾ ಅವರಿಗಾಗಿ ಶಿಲುಬೇಗೇರಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಜಯಲಲಿತಾ ಮತ್ತೆ ಅಧಿಕಾರಕ್ಕೆ ಬರಲೆಂದು ಪ್ರಾರ್ಥಿಸಿ 300 ಕೆಜಿ ತೂಕದ ಮರದ ಶಿಲುಬೆಗೆ ತಮ್ಮ ಕೈ ಮತ್ತು ಕಾಲುಗಳನ್ನು ಮೊಳೆಯಿಂದ ಹೊಡೆಸಿಕೊಂಡಿದ್ದರು. ಇದು ಭಾರೀ ಸಂಚಲನವನ್ನೇ ಮೂಡಿಸಿತ್ತು.
- 2005 ರಲ್ಲಿ, ಅವರು ಶ್ರೀಮತಿ ಜಯಲಲಿತಾ ಅವರ 56 ನೇ ಹುಟ್ಟುಹಬ್ಬದಂದು ತಮ್ಮ ರಕ್ತವನ್ನು ಬಳಸಿ ಅವರ 56 ಭಾವಚಿತ್ರಗಳನ್ನು ಬಿಡಿಸಿದ್ದರು. ಈ ಕೃತ್ಯಗಳನ್ನು ಸ್ವತಃ ಜಯಲಲಿತಾ ಕೂಡ ಖಂಡಿಸಿದ್ದರು, ಅವರು ಅವುಗಳನ್ನು ಮಾಡದಂತೆ ಅವರಿಗೆ ಸಲಹೆ ನೀಡಿದ್ದರು.
- ಪೋಪ್ ಜಾನ್ ಪಾಲ್ II ರ 22 ಅಡಿ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದರು, ಭಾರತೀಯ ಮೂಲದ ಗಗನಯಾತ್ರಿ ಕಲ್ಪನಾ ಚಾವ್ಲಾ ಅವರ ಪ್ರತಿಮೆಗಳನ್ನು ಕೆತ್ತಿದರು.
- ಶ್ರೀಲಂಕಾದ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸೆ ಅವರ ಭಾವಚಿತ್ರವನ್ನು ಹಂದಿಯ ರಕ್ತದಿಂದ ಚಿತ್ರಿಸಿದರು.
- ಅವರ ಸಾಹಸ ಇಲ್ಲಿಗೆ ನಿಂತಿಲ್ಲ... ಬಲಗೈ ಮೇಲೆ 101 ಕಾರುಗಳನ್ನು ಚಲಾಯಿಸಿ ನಂತರ ಅದೇ ಕೈಯಲ್ಲಿ 5,000 ಟೈಲ್ಸ್ ಮತ್ತು 1,000 ಇಟ್ಟಿಗೆಗಳನ್ನು ಸತತವಾಗಿ ಒಡೆದಿದ್ದರು.
- ಒಮ್ಮೆ ವಿಷಪೂರಿತ ನಾಗರಹಾವು ಕಚ್ಚಿಸಿಕೊಂಡು ಬದುಕುಳಿದ್ದರು.
- ಮತ್ತೊಮ್ಮೆ 140 ಲೀಟರ್ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದರು.
- 1980 ರ ದಶಕದಲ್ಲಿ, ಹುಸೇನಿ ಅವರನ್ನು ಶ್ರೀಲಂಕಾದ ಭಯೋತ್ಪಾದಕ ಎಂದು ಸುಳ್ಳು ಆರೋಪದ ಮೇಲೆ ತಿಹಾರ್ ಜೈಲಿನಲ್ಲಿ 10 ದಿನಗಳ ಕಾಲ ಕಳೆಯುವಂತಾಗಿತ್ತು.
- ಹುಸೇನಿ 1986 ರಲ್ಲಿನಟ ಕಮಲ್ ಹಾಸನ್ ಅವರ 'ಪುನ್ನಗೈ ಮನ್ನನ್' ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಅವರು ಬ್ಲಡ್‌ಸ್ಟೋನ್, ಉನ್ನೈ ಸೊಲ್ಲಿ ಕುಟ್ರಮಿಲ್ಲೈ, ಬದ್ರಿ, ಕಾತುವಾಕುಲ ರೆಂಡು ಕಾದಲ್, ಚೆನ್ನೈ ಸಿಟಿ ಗ್ಯಾಂಗ್‌ಸ್ಟರ್ಸ್ ಮತ್ತು ವೇದನ್ ಮುಂತಾದ ಹಲವು ಚಲನಚಿತ್ರಗಳಲ್ಲಿ ನಟಿಸಿದರು.