ಬೆಂಗಳೂರು: ಪಹಲ್ಗಾಂ ಉಗ್ರ ದಾಳಿಯನ್ನು (Pahalgam attack) ಸಂಘಟಿಸಿದ್ದ ಭಯೋತ್ಪಾದಕ ಸಂಘಟನೆ ಅಲ್ ಖೈದಾ (Al Qaeda) ಜೊತೆಗೆ ಸಂಬಂಧ ಹೊಂದಿದ್ದ, ಅಲ್ ಖೈದಾದ ಮಾಸ್ಟರ್ ಮೈಂಡ್ ಆಗಿದ್ದ ಬೆಂಗಳೂರಿನ ಮಹಿಳೆಯನ್ನು (Terrorist in bengaluru) ಗುಜರಾತ್ ಎಟಿಎಸ್ (Gujarat ATS) ಪೊಲೀಸ್ ತಂಡ ಬಂಧಿಸಿದೆ. ಮಹಿಳೆಯ ಹೆಸರು ಶಮಾ ಪರ್ವೀನ್ ಎಂದು ತಿಳಿದುಬಂದಿದೆ. ಈಕೆ 30 ವರ್ಷದ ಮಹಿಳೆಯಾಗಿದ್ದು, ಗುಪ್ತಚರ ಮಾಹಿತಿಯ ಆಧಾರದ ಮೇಲೆ ಬೆಂಗಳೂರಿನಿಂದ ಈಕೆಯನ್ನು ಬಂಧಿಸಲಾಗಿದೆ ಎಂದು ಗುಜರಾತ್ ಎಟಿಎಸ್ ಡಿಐಜಿ ಸುನಿಲ್ ಜೋಶಿ ಮಾಹಿತಿ ನೀಡಿದ್ದಾರೆ.
ಜಾರ್ಖಂಡ್ ಮೂಲದ ಶಮಾ ಪರ್ವಿನ್ ಬೆಂಗಳೂರಿನಲ್ಲಿ ನೆಲೆಸಿದ್ದಳು. 3 ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದ ಈಕೆ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಸಹೋದರನ ಮನೆಯಲ್ಲಿ ನೆಲೆಸಿದ್ದಳು. ಅಲ್ ಖೈದಾ ಉಗ್ರ ಸಂಘಟನೆ ಬಲಗೊಳಿಸಲು ಕೆಲಸ ಮಾಡುತ್ತಿದ್ದ ಈಕೆ ಹೊಸ ಕಾರ್ಯಕರ್ತರನ್ನು ಸಂಘಟನೆಗೆ ರಿಕ್ರ್ಯೂಟ್ ಮಾಡುತ್ತಿದ್ದಳು. ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಈಕೆಯನ್ನು ಬಂಧಿಸಲಾಗಿದೆ. ಈಕೆಯ ಮನೆಯಲ್ಲಿದ್ದ ಲ್ಯಾಪ್ ಟಾಪ್ ಹಾಗೂ ಮೊಬೈಲ್ ಕೂಡ ಜಪ್ತಿ ಮಾಡಲಾಗಿದೆ.
ಗುಜರಾತ್ ಎಟಿಎಸ್ ತಿಳಿಸಿರುವ ಪ್ರಕಾರ ಈ ಶಮಾ ಪರ್ವೀನ್ ಭಾರತದಲ್ಲಿ ಅಲ್ ಖೈದಾದ ಮಾಸ್ಟರ್ ಮೈಂಡ್ ಆಗಿದ್ದಳು. ಆಕೆ ಬೆಂಗಳೂರಿನಿಂದ ಕಾರ್ಯ ನಿರ್ವಹಿಸುತ್ತಿದ್ದಳು. ಕಳೆದ ವಾರ ಪೊಲೀಸರು ಅಲ್ ಖೈದಾದ 3 ಭಯೋತ್ಪಾದಕರನ್ನು ಸೆರೆಹಿಡಿದಿದ್ದರು. ವಿಚಾರಣೆಯ ಸಮಯದಲ್ಲಿ ಪೊಲೀಸರಿಗೆ ಶಮಾ ಪರ್ವೀನ್ ಬಗ್ಗೆ ತಿಳಿದುಬಂದಿತ್ತು. ಕೂಡಲೇ ಆಕೆಯನ್ನು ಹಿಡಿಯಲು ವ್ಯೂಹ ರಚಿಸಿ ಪೊಲೀಸರು ಆಕೆಯನ್ನು ಬೆಂಗಳೂರಿನಲ್ಲಿಯೇ ಬಂಧಿಸಿದ್ದಾರೆ.
ಆಪರೇಷನ್ ಸಿಂಧೂರ್ ನಂತರ, ಎಲ್ಲಾ ಭದ್ರತಾ ಸಂಸ್ಥೆಗಳು ದೇಶದ ವಿವಿಧ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಯೋತ್ಪಾದಕ ಸಂಘಟನೆಗಳ ಸದಸ್ಯರನ್ನು ಹುಡುಕಿ ಹುಡುಕಿ ಬಲೆಗೆ ಕೆಡವಿಕೊಳ್ಳುತ್ತಿವೆ. ಪಹಲ್ಗಾಂ ದಾಳಿಗೆ ಸಂಬಂಧಿಸಿ ಮೂವರು ಭಯೋತ್ಪಾದಕರ ಬಂಧನದ ನಂತರ, ಪೊಲೀಸರಿಗೆ ಮತ್ತೊಂದು ದೊಡ್ಡ ಯಶಸ್ಸು ಸಿಕ್ಕಿದೆ.
ಇದನ್ನೂ ಓದಿ: Pahalgam Terror Attack: ಪಹಲ್ಗಾಂನಲ್ಲಿ ದಾಳಿ ನಡೆಸಿದ ಉಗ್ರ ಶೇಖ್ ಸಜಾದ್ ಗುಲ್‌ನ ಬೆಂಗಳೂರು ಲಿಂಕ್!