ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದೆಹಲಿ ಬಾಂಬ್‌ ಸ್ಫೋಟದ ಒಂದೊಂದೇ ರಹಸ್ಯ ಬೆಳಕಿಗೆ; ಬಾಂಬರ್‌ ಹರಿಯಾಣದ ನುಹ್‌ನ ಬಾಡಿಗೆ ಮನೆಯಲ್ಲಿದ್ದ ವಿಚಾರ ಬಯಲು

Delhi Blast: ನವೆಂಬರ್‌ 10ರಂದು ದೆಹಲಿಯ ಕೆಂಪು ಕೋಟೆ ಸಮೀಪ ಕಾರು ಸ್ಫೋಟಗೊಂಡ ಘಟನೆಗೆ ಸಂಬಂಧಿಸಿದಂತೆ ಒಂದೊಂದೇ ವಿಚಾರ ಬೆಳಕಿಗೆ ಬರುತ್ತಿದೆ. ದೆಹಲಿ ಸ್ಫೋಟಕ್ಕೂ ಕೆಲವೇ ದಿನಗಳ ಮುನ್ನ ಬಾಂಬರ್‌ ಡಾ. ಉಮರ್‌ ಮೊಹಮ್ಮದ್‌ ಹರಿಯಾಣದ ನುಹ್‌ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಎನ್ನುವುದು ತನಿಖೆ ವೇಳೆ ಗೊತ್ತಾಗಿದೆ.

ಬಾಂಬ್‌ ಸ್ಫೋಟ ನಡೆದ ದೆಹಲಿಯ ಕೆಂಪು ಕೋಟೆ ಸಮೀಪದ ಪಾರ್ಕಿಗ್‌ ಏರಿಯಾ. ಒಳಚಿತ್ರದಲ್ಲಿ ಡಾ. ಉಮರ್‌ ಮೊಹಮ್ಮದ್‌.

ದೆಹಲಿ, ನ. 16: ನವೆಂಬರ್‌ 10ರಂದು ದೆಹಲಿಯ ಕೆಂಪು ಕೋಟೆ ಸಮೀಪ ಕಾರು ಸ್ಫೋಟಗೊಂಡು (Delhi Blast) 13 ಮಂದಿ ಬಲಿಯಾಗಿರುವ ಘಟನೆಯ ಆಘಾತದಿಂದ ದೇಶ ಇನ್ನೂ ಹೊರ ಬಂದಿಲ್ಲ. ಜಮ್ಮು ಕಾಶ್ಮೀರ ಮೂಲದ ವೈದ್ಯ, ಜೈಶೆ-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಡಾ. ಉಮರ್‌ ಮೊಹಮ್ಮದ್‌ ಹ್ಯುಂಡೈ ಐ20 ಕಾರನ್ನು ಚಲಾಯಿಸಿಕೊಂಡು ಹೋಗಿ ಮೆಟ್ರೋ ನಿಲ್ದಾಣದ ಬಳಿ ‍ಸ್ಫೋಟಿಸಿದ್ದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಘಟನೆಯ ಕುರಿತಾದ ಒಂದೊಂದೇ ಅಂಶಗಳು ಬೆಳಕಿಗೆ ಬರುತ್ತಿವೆ. ದೆಹಲಿ ಸ್ಫೋಟಕ್ಕೂ ಕೆಲವೇ ದಿನಗಳ ಮುನ್ನ ಡಾ. ಉಮರ್‌ ಮೊಹಮ್ಮದ್‌ ಹರಿಯಾಣದ ನುಹ್‌ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಎನ್ನುವುದು ತನಿಖೆ ವೇಳೆ ಗೊತ್ತಾಗಿದೆ.

ದೆಹಲಿ ಪೊಲೀಸರು ಕಳೆದ 5 ದಿನಗಳಿಂದ ನುಹ್‌ ಪ್ರದೇಶದಲ್ಲಿ ಶೋಧ ನಡೆಸುತ್ತಿದ್ದು, ಹಿದಾಯತ್ ಕಾಲೋನಿಯ ಹೊರಗೆ ಒಂದು ತಂಡ ಬೀಡುಬಿಟ್ಟಿದೆ. ನವೆಂಬರ್ 10ರಂದು ಸ್ಫೋಟ ನಡೆಸುವ ಮೊದಲು ಉಮರ್‌ ಈ ಕಾಲೋನಿಯ ಬಾಡಿಗೆ ರೂಮ್‌ನಲ್ಲಿ ಸುಮಾರು 10 ದಿನಗಳ ಕಾಲ ಇದ್ದ ಎಂದು ತಿಳಿದುಬಂದಿದೆ.

ಹರಿಯಾಣದ ನುಹ್‌ ಪ್ರದೇಶದಲ್ಲಿ ಪೊಲೀಸರಿಂದ ಪರಿಶೀಲನೆ:



ಬ್ಲಾಸ್ಟ್‌ ನಡೆದ ದಿನದಂದು ಉಮರ್‌ ಮೊಹಮ್ಮದ್ ತನ್ನ ರೂಮ್‌ನಿಂದ ಐ20 ಕಾರಿನಲ್ಲಿ ಸ್ಫೋಟಕಗಳನ್ನು ತುಂಬಿ ಹೊರಟಿದ್ದ ಎಂದು ಮೂಲಗಳು ತಿಳಿಸಿವೆ. ನುಹ್‌ನಲ್ಲಿರುವ ಡೈಗ್ನೋಸ್ಟಿಕ್ಸ್‌ ಸೆಂಟರ್‌ನಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾ ಆತನ ಕಾರು ಕಾಲೋನಿಗೆ ಪ್ರವೇಶಿಸುವುದನ್ನು ಸೆರೆ ಹಿಡಿದಿದೆ. ಆದಾಗ್ಯೂ ಕಾರು ಕಾಲೋನಿಯಿಂದ ಯಾವಾಗ ಹೊರಟಿತು ಎಂಬುದು ಇನ್ನೂ ತಿಳಿದುಬಂದಿಲ್ಲ.

ಈ ಸುದ್ದಿಯನ್ನೂ ಓದಿ: Delhi Blast: ನಾಲ್ವರು ಉಗ್ರ ವೈದ್ಯರ ವೈದ್ಯಕೀಯ ನೋಂದಣಿ ರದ್ದು; NMC ಮಹತ್ವದ ಆದೇಶ

ದೆಹಲಿ-ಅಲ್ವಾರ್ ರಸ್ತೆಯಲ್ಲಿರುವ ಮೊಹಮ್ಮದ್ ತಂಗಿದ್ದ ಮನೆ, ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಷಿಯನ್ ಆಗಿರುವ ಶೋಯೆಬ್‌ನ ಅತ್ತಿಗೆಯ ಒಡೆತನದಲ್ಲಿದೆ. ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಶಂಕಿತ ಭಯೋತ್ಪಾದಕರಿಗೆ ವಸತಿ ವ್ಯವಸ್ಥೆ ಮಾಡಿದ್ದ ಶೋಯೆಬ್ ಈಗ ಪೊಲೀಸ್ ಕಸ್ಟಡಿಯಲ್ಲಿದ್ದಾನೆ.

ನೆರೆಹೊರೆಯವರಿಗಾಗಲಿ ಅಥವಾ ನೂಹ್‌ನಲ್ಲಿ ನಿಯೋಜಿಸಲಾದ ಗುಪ್ತಚರ ಘಟಕಕ್ಕಾಗಲಿ ಉಮರ್‌ ಆ ಮನೆಯಲ್ಲಿ ವಾಸಿಸುತ್ತಿನೆ ಎಂಬ ಬಗ್ಗೆ ತಿಳಿದಿರಲಿಲ್ಲ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಸ್ಫೋಟಕ್ಕೆ ಸಂಬಂಧಿಸಿದಂತೆ ಉಮರ್‌ ಕಾರ್ಯ ನಿರ್ವಹಿಸುತ್ತಿದ್ದ ಫರಿದಾಬಾದ್‌ನ ಅಲ್‌ ಫಲಾಹ್‌ ವಿವಿಯ ಸಹೋದ್ಯೋಗಿಗಳಾದ ಡಾ. ಶಹೀನ್ ಸಹೀದ್‌, ಡಾ. ಮುಜಮ್ಮಿಲ್ ಶಕೀಲ್ ಮತ್ತು ಡಾ. ಆದಿಲ್ ರಾಥರ್‌ನನ್ನು ಈಗಾಗಲೇ ಬಂಧಿಸಲಾಗಿದೆ. ಇವರು ದೇಶಾದ್ಯಂತ ಸರಣಿ ಸ್ಫೋಟವನ್ನು ನಡೆಸಲು ಸಂಚು ರೂಪಿಸಿದ್ದರೆ ಎನ್ನುವುದನ್ನು ನಿರ್ಧರಿಸಲು ತನಿಖೆ ನಡೆಸಲಾಗುತ್ತಿದೆ.

ದೇಶದಿಂದ ಪಲಾಯನ ಮಾಡುವ ಯೋಜನೆ

ಈ ವೈಟ್‌ ಕಾಲರ್‌ ಭಯೋತ್ಪಾದಕರು ವಾಸಿಸುತ್ತಿದ್ದ ಬಾಡಿಗೆ ಮನೆಗಳಿಂದ ಪೊಲೀಸರು ಸುಮಾರು 3,000 ಕೆಜಿ ಸ್ಫೋಟಕಗಳು ಮತ್ತು ಬಾಂಬ್ ತಯಾರಿಸುವ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಶಹೀದ್‌ ಕಾರಿನಲ್ಲಿ ಒಂದು ರೈಫಲ್ ಮತ್ತು ಮದ್ದುಗುಂಡುಗಳು ಪತ್ತೆಯಾಗಿದ್ದು ಆಕೆಯ ವಿಚಾರಣೆಯೂ ತೀವ್ರಗೊಂಡಿದೆ. ಆಕೆ ದೇಶದಿಂದ ಪಲಾಯನ ಮಾಡುವ ಬಗ್ಗೆ ಸಂಚು ರೂಪಿಸಿದ್ದಳು ಎನ್ನಲಾಗಿದೆ.