ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Waqf Board: ವಕ್ಫ್ ಬೋರ್ಡ್‌ಗೆ ಬರೋಬ್ಬರಿ 27 ಕೋಟಿ ರೂ ಪಂಗನಾಮ; ವ್ಯಕ್ತಿ ವಿರುದ್ಧ ನೋಟಿಸ್‌ ಜಾರಿ

ಮಧ್ಯಪ್ರದೇಶ ವಕ್ಫ್ ಮಂಡಳಿಯು ವಕ್ಫ್ ಆಸ್ತಿಗಳ ಅಕ್ರಮ ನಿವಾಸಿಯ ವಿರುದ್ಧ ಇತಿಹಾಸದಲ್ಲಿಯೇ ಮೊದಲ ಬಾರಿಗೆ 27 ಕೋಟಿ ರೂ.ಗಳ ವಸೂಲಾತಿ ನೋಟಿಸ್ ಜಾರಿ ಮಾಡಿದೆ. ಇದಾರ ಯತೀಂ ಖಾನಾದ ಮ್ಯಾನೇಜರ್ ಶಾಹಿದ್ ಅಲಿ ಖಾನ್ ಎಂಬಾತನಿಗೆ ಈ ನೋಟೀಸ್‌ ಜಾರಿ ಮಾಡಲಾಗಿದೆ.

ವಕ್ಫ್ ಬೋರ್ಡ್‌ಗೆ ಬರೋಬ್ಬರಿ 27 ಕೋಟಿ ರೂ ಪಂಗನಾಮ!

Vishakha Bhat Vishakha Bhat Jul 29, 2025 12:29 PM

ಭೋಪಾಲ್‌: ಮಧ್ಯಪ್ರದೇಶ ವಕ್ಫ್ ಮಂಡಳಿಯು ವಕ್ಫ್ ಆಸ್ತಿಯನ್ನು (Waqf Board) ಅಕ್ರಮವಾಗಿ ಬಳಸಿಕೊಳ್ಳುತ್ತಿದ್ದ ವ್ಯಕ್ತಿಯ ವಿರುದ್ಧ ಇತಿಹಾಸದಲ್ಲಿಯೇ ಮೊದಲ ಬಾರಿಗೆ 27 ಕೋಟಿ ರೂ.ಗಳ ವಸೂಲಾತಿ ನೋಟಿಸ್ ಜಾರಿ ಮಾಡಿದೆ. ಇದಾರ ಯತೀಂ ಖಾನಾದ ಮ್ಯಾನೇಜರ್ ಶಾಹಿದ್ ಅಲಿ ಖಾನ್ ಎಂಬಾತನಿಗೆ ಈ ನೋಟೀಸ್‌ ಜಾರಿ ಮಾಡಲಾಗಿದೆ. ಈತ ವಕ್ಫ್ ಮಂಡಳಿಯ ಆಸ್ತಿಯನ್ನು ತನ್ನದೇ ಎಂದು ಸುಳ್ಳು ಹೇಳಿಕೊಂಡು ಬಾಡಿಗೆಗೆ ನೀಡಿದ್ದ ಎಂದು ತಿಳಿದು ಬಂದಿದೆ. ಖಾನ್ 200 ಅಂಗಡಿಗಳನ್ನು ಬಾಡಿಗೆಗೆ ನೀಡುವ ಮೂಲಕ 24.85 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದಾನೆ ಎಂಬ ಆರೋಪ ಕೇಳಿ ಬಂದ ಬಳಿಕ ಈ ನೋಟಿಸ್‌ ಜಾರಿ ಮಾಡಲಾಗಿದೆ.

ವಕ್ಫ್ ಮಂಡಳಿಯ ಪ್ರಕಾರ, ವಶಪಡಿಸಿಕೊಂಡ ಮೊತ್ತವನ್ನು ಬಡ ಮುಸ್ಲಿಂ ಅನಾಥರ ಕಲ್ಯಾಣ ಮತ್ತು ಶಿಕ್ಷಣಕ್ಕಾಗಿ ಬಳಸಲಾಗುತ್ತದೆ ಎಂದು ಹೇಳಿದೆ. ವಕ್ಫ್ ಆಸ್ತಿಗಳ ದುರುಪಯೋಗವನ್ನು ತಡೆಗಟ್ಟಲು ಮಂಡಳಿಯು ನಡೆಸುತ್ತಿರುವ ನಿರಂತರ ಪ್ರಯತ್ನಗಳ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಅಕ್ರಮ ಎಸಗಿದ ಇನ್ನೂ ಹಲವರಿಗೆ ನೋಟಿಸ್‌ ನೀಡಲಾಗುವುದು ಎಂದು ವಕ್ಫ್‌ ತಿಳಿಸಿದೆ.

ಹೊಸ ನಿಯಮ

ಸುಪ್ರೀಂ ಕೋರ್ಟ್‌ನಲ್ಲಿ ವಕ್ಫ್‌ ತಿದ್ದುಪಡಿ ಕಾಯಿದೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿರುವಾಗಲೇ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ದೇಶಾದ್ಯಂತ ಇರುವ ಲಕ್ಷಾಂತರ ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆ ತರಲು ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಕಳೆದ ತಿಂಗಳು ಚಾಲನೆ ನೀಡಲಾಗಿದ್ದ 'ಕೇಂದ್ರೀಯ ವಕ್ಫ್ ಪೋರ್ಟಲ್'ನಲ್ಲಿ ವಕ್ಫ್ ಆಸ್ತಿಗಳ ವಿವರಗಳನ್ನು ಅಪ್‌ಲೋಡ್ ಮಾಡುವ ಕುರಿತು ಕೇಂದ್ರ ಸರ್ಕಾರ ವಿವರವಾದ ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಕೇಂದ್ರ ಸರ್ಕಾರ ವಕ್ಫ್‌ ಬೋರ್ಡ್‌ ವಿಚಾರದಲ್ಲಿ ಗಮನಾರ್ಹ ಬದಲಾವಣೆ ತರುತ್ತಿದ್ದು, ಏಕೀಕೃತ ವಕ್ಫ್ ನಿರ್ವಹಣಾ ಸಬಲೀಕರಣ, ದಕ್ಷತೆ ಮತ್ತು ಅಭಿವೃದ್ಧಿ ನಿಯಮಗಳು 2025ಅನ್ನು ಅಧಿಸೂಚನೆ ಮೂಲಕ ಜಾರಿಗೊಳಿಸಲಾಗಿದೆ.

ಹೊಸ ನಿಯಮಗಳ ಪ್ರಕಾರ, 2025ರ ಏಪ್ರಿಲ್ 8ಕ್ಕೂ ಮೊದಲು ಅಸ್ತಿತ್ವದಲ್ಲಿದ್ದ ಎಲ್ಲಾ ವಕ್ಫ್ ಆಸ್ತಿಗಳ ಉಸ್ತುವಾರಿ ಹೊತ್ತಿರುವ 'ಮುತವಲ್ಲಿ'ಗಳು ಅಂದ್ರೇ ಆ ಆಸ್ತಿಗಳನ್ನು ನೋಡಿಕೊಳ್ಳುವವರು ಕಡ್ಡಾಯವಾಗಿ ಒಂದಿಷ್ಟು ವಿವರಗಳನ್ನು ವಕ್ಫ್‌ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಬೇಕಿದೆ. ಪ್ರಮುಖವಾಗಿ ಆಸ್ತಿಯ ವಿವರ ಅಂದ್ರೇ ವಕ್ಫ್ ಆಸ್ತಿಯ ಗಡಿಗಳು, ಅದನ್ನು ಯಾವ ರೀತಿ ಸದ್ಯ ಬಳಸಲಾಗುತ್ತಿದೆ. ಅಂದ್ರೇ ಕೃಷಿಗೋ, ವಾಣಿಜ್ಯಕ್ಕೋ, ವಸತಿಗೋ ಎಂಬುದನ್ನು ಅಪ್‌ಡೇಟ್‌ ಮಾಡಬೇಕಿದೆ. ಅದರ ಜೊತೆ ಅದನ್ನು ಯಾರು ಬಳಸುತ್ತಿದ್ದಾರೆ ಅಥವಾ ಅಲ್ಲಿ ಯಾರು ವಾಸವಾಗಿದ್ದಾರೆ ಎಂಬ ಮಾಹಿತಿಯನ್ನು ಅಪ್‌ಲೋಡ್‌ ಮಾಡಬೇಕಿದೆ.

ಈ ಸುದ್ದಿಯನ್ನೂ ಓದಿ: Supreme Court: "ನ್ಯಾಯಾಲಯಗಳು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ...": ವಕ್ಫ್ ಕಾನೂನಿನ ಬಗ್ಗೆ ಮುಖ್ಯ ನ್ಯಾಯಮೂರ್ತಿಗಳು ಹೇಳಿದ್ದೇನು?

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಪ್ರಕಾರ, ಭಾರತದಲ್ಲಿ 9 ಲಕ್ಷಕ್ಕೂ ಹೆಚ್ಚು ವಕ್ಫ್ ಆಸ್ತಿಗಳಿವೆ. ತಿದ್ದುಪಡಿ ಮಾಡಿದ ಕಾನೂನಿನ ಪ್ರಕಾರ, ಅಸ್ತಿತ್ವದಲ್ಲಿರುವ ಎಲ್ಲಾ ಆಸ್ತಿಗಳ ವಿವರಗಳನ್ನು ಆರು ತಿಂಗಳ ನಿಗದಿತ ಸಮಯದೊಳಗೆ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲೇಬೇಕು. ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತಿದ್ದು, ಒಂದು ವೇಳೆ ಮುತವಲ್ಲಿಯು ಡೆಡ್‌ಲೈನ್‌ ಒಳಗಡೆ ಪೋರ್ಟಾಲ್‌ಗೆ ಮಾಹಿತಿ ನೀಡಲು ವಿಫಲವಾದರೆ, ಡೆಡ್‌ಲೈನ್‌ ವಿಸ್ತರಣೆಗೆ ನೇರವಾಗಿ ನ್ಯಾಯಮಂಡಳಿಗೆ ಮೊರೆ ಹೋಗಬೇಕಾಗುತ್ತದೆ.