ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

War Injury Pension: 1971ರ ಯುದ್ಧದಲ್ಲಿ ದೃಷ್ಟಿ ಕಳೆದುಕೊಂಡಿದ್ದ ಸೈನಿಕ- 44 ವರ್ಷಗಳ ಹೋರಾಟದ ನಂತರ ಸಿಕ್ತು ಪಿಂಚಣಿ

1971ರ ಯುದ್ಧದಲ್ಲಿ ದೃಷ್ಟಿ ಕಳೆದುಕೊಂಡಿದ್ದ ಸೈನಿಕನೊಬ್ಬ ಪಿಂಚಣಿಗಾಗಿ 44 ವರ್ಷಗಳ ಕಾಲ ಹೋರಾಟ ಮಾಡಿರುವ ಪ್ರಸಂಗ ಪಂಜಾಬ್ ನಲ್ಲಿ ನಡೆದಿದೆ. ಕಡೆಗೂ ಅವರ ಈ ಹೋರಾಟಕ್ಕೆ ಫಲ ಸಿಕ್ಕಿದೆ. ಇದೀಗ ನ್ಯಾಯಾಲಯವು ಅವರ ಪಿಂಚಣಿ ಹಕ್ಕನ್ನು ಎತ್ತಿ ಹಿಡಿದಿದೆ. ಅವರ ವಿಧವೆಗೆ ಇದನ್ನು ಒಪ್ಪಿಸಲು ಆದೇಶಿಸಿದೆ.

ಹರಿಯಾಣ: ಬರೋಬ್ಬರಿ 44 ವರ್ಷಗಳ ಹೋರಾಟದ ಅನಂತರ ಸೈನಿಕನೊಬ್ಬನಿಗೆ (soldier Sham Singh) ಪಿಂಚಣಿ ಸೌಲಭ್ಯವನ್ನು (War Injury Pension) ನೀಡಲು ನ್ಯಾಯಾಲಯ (Punjab and Haryana High Court) ಆದೇಶಿಸಿದೆ. 1971ರ ಯುದ್ಧದಲ್ಲಿ ದೃಷ್ಟಿ ಕಳೆದುಕೊಂಡಿದ್ದ ಸೈನಿಕ ಶ್ಯಾಮ್ ಸಿಂಗ್ ಅವರ ಪಿಂಚಣಿ ಹಕ್ಕನ್ನು ಎತ್ತಿಹಿಡಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, ಸರ್ಕಾರದ ವಿಳಂಬಕ್ಕೆ ಬೇಸರ ವ್ಯಕ್ತಪಡಿಸಿ ಶ್ಯಾಮ್ ಸಿಂಗ್ ಅವರ ವಿಧವೆ ಕರ್ನೈಲ್ ಕೌರ್ ಅವರಿಗೆ ಇದರ ಪ್ರಯೋಜನಗಳನ್ನು ಒದಗಿಸುವಂತೆ ಆದೇಶಿಸಿತ್ತು. 1971ರ ಇಂಡೋ- ಪಾಕ್ ಯುದ್ಧದ ಸಮಯದಲ್ಲಿ ತೀವ್ರ ಗಾಯಗೊಂಡ ಶ್ಯಾಮ್ ಸಿಂಗ್ ದೃಷ್ಟಿ ಕಳೆದುಕೊಂಡಿದ್ದರು.

ಮಾಜಿ ಸೈನಿಕರ ಹಕ್ಕುಗಳನ್ನು ಎತ್ತಿಹಿಡಿದ ನ್ಯಾಯಾಲಯ ಸಂಘರ್ಷದ ಸಮಯದಲ್ಲಿ ದೃಷ್ಟಿ ಕಳೆದುಕೊಂಡ ಸೈನಿಕ ಶಾಮ್ ಸಿಂಗ್ ಅವರು ಪಿಂಚಣಿಗೆ ಅರ್ಹರು ಎಂದು ತೀರ್ಪು ನೀಡಿದೆ. ಈಗಾಗಲೇ ಸಿಂಗ್ ಅವರ ಹಕ್ಕು ವಿಳಂಬವಾಗಿದೆ ಎನ್ನುವ ಕೇಂದ್ರದ ನಿಲುವನ್ನು ವಜಾಗೊಳಿಸಿದ ನ್ಯಾಯಾಲಯ, ರಾಷ್ಟ್ರ ರಕ್ಷಣೆಗಾಗಿ ತಮ್ಮ ಆರೋಗ್ಯವನ್ನು ತ್ಯಾಗ ಮಾಡಿದವರಿಗೆ ಇದು ಅನ್ಯಾಯ ಎಂದು ಹೇಳಿದೆ.

ಈ ಕುರಿತು ಆದೇಶ ನೀಡಿರುವ ನ್ಯಾಯಮೂರ್ತಿ ಹರ್ಸಿಮ್ರಾನ್ ಸಿಂಗ್ ಸೇಥಿ ಮತ್ತು ನ್ಯಾಯಮೂರ್ತಿ ವಿಕಾಸ್ ಸೂರಿ ಅವರ ಪೀಠವು, ದೇಶವನ್ನು ರಕ್ಷಿಸುವಾಗ ತಮ್ಮ ಜೀವ ಮತ್ತು ಆರೋಗ್ಯವನ್ನು ಪಣಕ್ಕಿಟ್ಟ ಸೈನಿಕರಿಗೆ ಸರ್ಕಾರವೇ ಮುಂದೆ ಬಂದು ಪ್ರಯೋಜನಗಳನ್ನು ನೀಡಬೇಕು ಎಂದು ಹೇಳಿದೆ.

1971ರಲ್ಲಿ ಶ್ಯಾಮ್ ಸಿಂಗ್ ಅವರಿಗೆ ಏನಾಗಿತ್ತು?

1971ರ ಇಂಡೋ- ಪಾಕ್ ಯುದ್ಧದ ಸಮಯದಲ್ಲಿ ಪಾಕಿಸ್ತಾನಿ ಬಾಂಬ್ ಸ್ಫೋಟಗೊಂಡು ಶ್ಯಾಮ್ ಸಿಂಗ್ ಅವರು ಶಾಶ್ವತವಾಗಿ ದೃಷ್ಟಿ ಕಳೆದುಕೊಂಡರು. ಇದರಿಂದಾಗಿ ಅವರನ್ನು ೧973ರಲ್ಲಿ ಸೈನ್ಯದಿಂದ ಬಿಡುಗಡೆ ಮಾಡಲಾಯಿತು. ಚಿಕ್ಕ ವಯಸ್ಸಿನಲ್ಲಿಯೇ ಅಂಗವಿಕಲರಾಗಿದ್ದ ಸಿಂಗ್, ಜೀವನದುದ್ದಕ್ಕೂ ಕಷ್ಟದಲ್ಲೇ ಬದುಕಿದರು. ಅವರಿಗೆ ಯಾವುದೇ ಬೆಂಬಲವೂ ಸಿಗಲಿಲ್ಲ.

ಯುದ್ಧದಲ್ಲಿ ಗಾಯಗೊಂಡಿದ್ದರೂ ಸೇನೆಯನ್ನು ತೊರೆದ ಅನಂತರ ಸಿಂಗ್‌ ಅವರಿಗೆ ಪಿಂಚಣಿಯ ಪ್ರಯೋಜನವನ್ನು ನಿರಾಕರಿಸಲಾಯಿತು. ಅವರು ನಿವೃತ್ತರಾದ 44 ವರ್ಷಗಳ ಅನಂತರ ಪಿಂಚಣಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ಕೇಂದ್ರ ಸರ್ಕಾರ ವಾದಿಸಿ ಇದನ್ನು ನಿರಾಕರಿಸಿತು. ಬಳಿಕ ಇದರ ವಿಚಾರಣೆ ನಡೆಸಿದ ನ್ಯಾಯಾಲಯ ಈ ನಿಲುವನ್ನು ಸ್ವೀಕಾರಾರ್ಹವಲ್ಲ ಎಂದು ಹೇಳಿದೆ.

ದೇಶವನ್ನು ರಕ್ಷಿಸುವಾಗ ದೃಷ್ಟಿ ಕಳೆದುಕೊಂಡ ಸೈನಿಕ ಅರ್ಜಿ ಸಲ್ಲಿಸಬೇಕೆಂದು ನಿರೀಕ್ಷಿಸುವುದೇ ತಪ್ಪು ಎಂದಿರುವ ನ್ಯಾಯಾಧೀಶರು, ಸಿಂಗ್ ಅವರ ಗಾಯವು ಮಿಲಿಟರಿ ಸೇವೆಯ ನೇರ ಪರಿಣಾಮವಾಗಿದೆ ಮತ್ತು ಅದನ್ನು ಪ್ರತ್ಯೇಕವಾಗಿ ಪರಿಗಣಿಸಲಾಗುವುದಿಲ್ಲ ಎಂದು ಹೇಳಿದರು. ಸರ್ಕಾರವು ಅವರಿಗೆ ಮುಂದೆ ನಿಂತು ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದಿರುವ ಪೀಠವು, ಹಾಗೆ ಮಾಡಲು ವಿಫಲವಾದರೆ ಸೈನಿಕರ ತ್ಯಾಗಕ್ಕೆ ಬೆಲೆ ಇಲ್ಲದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿತು.

ಇದಕ್ಕೂ ಮೊದಲು 2023ರಲ್ಲಿ ಸಶಸ್ತ್ರ ಪಡೆಗಳ ನ್ಯಾಯಮಂಡಳಿ (AFT) ಚಂಡೀಗಢ ಪೀಠವು ಶ್ಯಾಮ್ ಸಿಂಗ್ ಅವರಿಗೆ 1973 ರಿಂದ 1975 ರವರೆಗಿನ ಅವಧಿಯ ಪಿಂಚಣಿಯನ್ನು ನೀಡಬೇಕೆಂದು ನಿರ್ದೇಶಿಸಿತ್ತು. ಅನಂತರ 2021 ರಲ್ಲಿ ಅವರು ಜೀವಿತಾವಧಿಯ ನಿಯಮಿತ ಸೇವಾ ಪಿಂಚಣಿಯನ್ನು ಪಡೆಯಬೇಕಾಗಿತ್ತು. ಅದು ಅವರ ಮರಣದ ಅನಂತರ ಅವರ ಪತ್ನಿ ಕರ್ನೈಲ್ ಕೌರ್ ಅವರಿಗೆ ಸೇರುತ್ತದೆ ಎಂದು ಪರಿಗಣಿಸಿ ಆದೇಶಿಸಿತ್ತು. ಕೇಂದ್ರವು ಈ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಇದೀಗ ಹೈಕೋರ್ಟ್ ಸಶಸ್ತ್ರ ಪಡೆಗಳ ನ್ಯಾಯಮಂಡಳಿ ಆದೇಶವನ್ನು ಎತ್ತಿ ಹಿಡಿದಿದೆ.

ಇದನ್ನೂ ಓದಿ: ವಿರಾಟ್‌ ಕೊಹ್ಲಿಯನ್ನು ಕೈ ಬಿಟ್ಟು ಟಾಪ್‌ 5 ಕ್ರಿಕೆಟಿಗರನ್ನು ಆರಿಸಿದ ಎಬಿ ಡಿ ವಿಲಿಯರ್ಸ್‌!

ಈ ಮೂಲಕ ಶ್ಯಾಮ್ ಸಿಂಗ್ ಅವರ ಕುಟುಂಬವು ಸುಮಾರು ಅರ್ಧ ಶತಮಾನದ ಕಾಲ ಪಿಂಚಣಿಗಾಗಿ ನಡೆಸಿದ ಹೋರಾಟಕ್ಕೆ ಪ್ರತಿಫಲ ಸಿಕ್ಕಂತಾಗಿದೆ. ಒಬ್ಬ ಸೈನಿಕನಿಗೆ ಸಿಗಬೇಕಾದ ಪ್ರಯೋಜನಗಳ ಬಗ್ಗೆ ತಿಳಿದಿಲ್ಲದಿದ್ದರೆ ಔಪಚಾರಿಕ ಅರ್ಜಿಯಿಲ್ಲದೆಯೂ ಸಹ ಆ ಹಕ್ಕುಗಳನ್ನು ತಲುಪಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳುವುದು ಸರ್ಕಾರದ ಜವಾಬ್ದಾರಿ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ವಿದ್ಯಾ ಇರ್ವತ್ತೂರು

View all posts by this author